ಪ್ರೀತಿ ಅಂದ್ರೇನು? ಒಂದ್ಸಲ ಸುಮ್ಮನೆ ಯಾರನ್ನಾದರೂ ಕೇಳಿ ನೋಡಿ. ಎಂತಹಾ ದೊಡ್ ಮನುಷ್ಯ ಆದರೂ ತಡಬಡಾಯಿಸದಿದ್ದರೆ ಕೇಳಿ. ಒಂಚೂರು ಸಾವರಿಸಿಕೊಂಡು ‘‘ಪ್ರೀತಿ ಅಂದರೆ ಅದೊಂದು ಅನುಭೂತಿ, ಪ್ರಪಂಚದ ಸಂಕಷ್ಟಗಳನ್ನೆಲ್ಲ ಮರೆಸುವ ಶಕ್ತಿ ಇರೋ ಅದ್ಭುತ, ಪ್ರೀತಿ ಡಿವೈನ್’’ ಹೀಗೇ ಏನೇನೋ ಹೇಳಲು ಪ್ರಯತ್ನ ಪಟ್ಟರೂ ಕಡೆಗೆ ‘ಪ್ರೀತಿ ಅಂದರೆ ಪ್ರೀತಿ ಅಷ್ಟೇ.. ಅದನ್ನು ವಿವರಿಸೋದು ಹೆಂಗೆ’ ಅಂದಾರು.. ‘‘ನಮ್ಮ ಹುಡುಗರು ಹಾಳಾಗಿ ಹೋಗಿದ್ದಾರೆ ಪ್ರೀತಿ ಅಂತೆ, ಪ್ರೇಮ ಅಂತೆ. ಮಾಡಕ್ ಕೆಲಸ ಇಲ್ಲ. ಚೆನ್ನಾಗಿರೋ ಹುಡುಗಿ ಕಂಡ ಕೂಡಲೇ ಲವ್ವು ಅಂದ್ಕೋತವೆ. ಲವ್ ಅಟ್ ಫಸ್ಟ್ ಸೈಟ್ ಅಂತೆ. ಕಾಲೇಜಿಗೆ ಓದೋಕೆ ಹೋಗ್ರೋ ಅಂದ್ರೆ ಅದೊಂದು ಬಿಟ್ಟು ಇನ್ನೆಲ್ಲಾ ಮಾಡ್ತಾರೆ. ಕೊನೆಗೆ ಓದೂ ಇಲ್ಲ, ಹುಡುಗಿನೂ ಸಿಗಲ್ಲ. ಪ್ರೀತಿ ಅಂತ ಹಾಳಾಗಿ ಹೋಗ್ತಾರೆ. ನಿಜವಾದ ಪ್ರೀತಿ ಹಂಗಿರಲ್ಲ, ಎಲ್ಲ ಓದಿ ತಮ್ಮ ಕಾಲ ಮೇಲೆ ತಾವು ಅಚ್ಚುಕಟ್ಟಾಗಿ ನಿಂತುಕೊಂಡ ಮೇಲೆ ಮದುವೆಯಾಗಿ ಪ್ರೀತಿ ಮಾಡಿದ್ರೆ ಬೇಡ ಅಂತಾರೆಯೇ ಯಾರಾದ್ರೂ? ಪರಸ್ಪರ ಅರ್ಥ ಮಾಡ್ಕೊಂಡು ಒಟ್ಟಿಗೆ ಬಾಳಿದಾಗಲೇ ನಿಜವಾದ ಪ್ರೀತಿ ಹುಟ್ಟದು ಅಂತ ಇವಕ್ಕೆ ಅರ್ಥ ಮಾಡ್ಸೋರ್ಯಾರು?’’ ಬೀದಿಗೊಬ್ಬ ಹೀಗೆ ಗೊಣಗುವ ಹಿರಿಯರನ್ನು ನೀವು ಕಾಣದಿದ್ದರೆ ಪ್ರೀತಿ ಮಾಡುವ ಹುಡುಗರಿಗೇ ಅವಮಾನ.
‘‘ತಮ್ಮನ್ನು ಒಬ್ರು ಕಟ್ಟಿಕೊಂಡವರು ಇದಾರೆ ಅಂತಲೇ ನೆನಪಿರಲ್ಲ. ಇವರಿಗೆಲ್ಲ ಪ್ರೀತಿ ಅನ್ನೋ ಪದವೇ ಗೊತ್ತಿಲ್ಲ ಅನ್ಸುತ್ತೆ. ಯಾವಾಗ ನೋಡಿದ್ರೂ ಇವರಾಯಿತು ಇವರ ಕೆಲಸಗಳಾಯಿತು. ಒಂದಿನ ಅಮ್ಮನಿಗೆ ಇವರು ಮಲ್ಲಿಗೆ ಹೂವು ತಂದು ಕೊಟ್ಟಿದ್ದು ನೋಡಿಲ್ಲ. ನಮ್ಮಮ್ಮನಿಗೋ ಗಂಡ ಅಂದ್ರೆ ಪ್ರೀತಿಸಬೇಕಾದವರು ಅನ್ನೋ ಪ್ರಜ್ಞೆಯೇ ಇಲ್ಲ. ಇವರು ಅಡಿಗೆ ಮಾಡೋ ಕುಕ್. ಅವರು ಹೊರಗೆ ದುಡಿಯೋ ಬ್ಯಾಂಕ್.. ಅಷ್ಟೇ. ನಾನು ಮಾತ್ರ ಹಂಗಿರೋಲ್ಲ. ಮುಂದೆ ಗಂಡ ಹೆಂಡತಿ ಅಂದ್ರೆ ಹೀಗೆ ಪ್ರೀತಿಯಿಂದ ಬದುಕ್ತಾರಾ ಅಂತ ಮೂಗಿನ ಮೇಲೆ ಬೆರಳಿಟ್ಕೊಂಡು ನೋಡಬೇಕು ಹಂಗೆ ಬದುಕಿ ತೋರಿಸ್ತೀನಿ. ಅದೂ ಒಂದು ಬದುಕಾ’’ ಹೀಗೆ ಒಂದ್ಕಾಲದಲ್ಲಿ ಹುಡುಗಾಟದಲ್ಲಿ ಹೇಳ್ತಿದ್ದವರು ಈಗ ಮಲ್ಲಿಗೆ ಹೂವಿನ ಪರಿಮಳವನ್ನೂ ಮರೆತ ಅಪ್ಪ ಅಮ್ಮಂದಿರಾಗಿದ್ದಾರೆ, ಹೂವಿನ ಹೆಸರುಗಳನ್ನೇ ಮರೆತಂತೆ ಬದುಕುತ್ತಿದ್ದಾರೆ.
ಹದಿ ಹರೆಯದ ಹುಡುಗ ಹುಡುಗಿಯನ್ನು ನೋಡಿ ಮೂಡುತ್ತಿರುವ ಮೀಸೆ ಸವರಿಕೊಂಡರೆ ಅದು ಪ್ರೀತಿಯಲ್ಲ ಅಂತ ಅಂದ್ಕೊಳ್ಳೋದು ಯಾಕೆ? ಅವನ ನೋಟಕ್ಕೆ ಪುಳಕಗೊಳ್ಳುವ ಹುಡುಗಿಯ ಕೆನ್ನೆಯ ಕೆಂಪು ಸುಳ್ಳೇ? ಅವಳಿಗಾಗಿ ಕಷ್ಟಪಟ್ಟು ಇಡೀ ವರ್ಷದ ಪಾಕೆಟ್ ಮನಿ ಉಳಿಸಿ ತಂದು ಕೊಡುವ ಟೆಡ್ಡಿಯನ್ನು ಅಷ್ಟೇ ಜೋಪಾನ ಮಾಡುವ ಅವಳ ನಡೆ ಎಷ್ಟು ಸುಳ್ಳು? ಎಷ್ಟು ಸತ್ಯ? ಅವಳು ಹೇಳಿದಳೆಂದು ಕೂತು ಓದುವ ಅವನು, ಅವನ ಕೈಹಿಡಿವ ಹೊಂಗನಸಲ್ಲಿ ಕೆಂಪೇರುತ್ತಲೇ ಓದುವ ಅವಳು. ಮುಂದಿನ ಭವಿಷ್ಯದ ಹಾದಿಯನ್ನು ನೆನೆನೆನೆದು ಕನಸುವ ರೀತಿ ಸುಳ್ಳಾ?
ಮನೆಯ ಮಿಕ್ಸಿ ಹಾಳಾಗಿರುವುದು ಗಮನಿಸಿ ಉಳಿತಾಯದ ಹಣದಲ್ಲಿ ಮಿಕ್ಸಿ ತಂದು ಪತ್ನಿಯ ಕೈಲಿಡುವ ಗಂಡನ ಜೋಬಲ್ಲಿ ಮಲ್ಲಿಗೆಗೆ ಹಣವಿಲ್ಲದಿರಬಹುದು. ಅವಳಿಗೆ ಕಷ್ಟವಾಗಬಾರದು ಎಂಬ ಅಕ್ಕರೆಯ ಭಾವವೇ ಮಲ್ಲಿಗೆಗಿಂತ ಪರಿಮಳ. ಮಿಕ್ಸಿ ಹಾಳಾಗಿದ್ದರೂ ಅವರಿಗೆ ಕಷ್ಟ ಎಂಬ ಭಾವದಲ್ಲಿ ಇದ್ದುದನ್ನೇ ಸುಧಾರಿಸಿಕೊಂಡು ಕಷ್ಟಗಳನ್ನು ಹೇಳದೆ ನಿಭಾಯಿಸುವ ಅವಳು ಮಾತುಮಾತಿಗೂ ಐ ಲವ್ ಯು ಹೇಳದಿದ್ದರೂ ಪ್ರತಿ ನಡೆಯಲ್ಲೂ ತೋರುವ ಕಾಳಜಿಯೇ ಸಾಕು. ‘‘ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು’’ ಎಂದ ಬೇಂದ್ರೆ ಮೂಲದ್ರವ್ಯ ಪ್ರೀತಿಯೇ ಎಂದರು. ‘‘ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ ಹೊನ್ನ ಚಂದಿರ ನೀಲಿ ತಾರೆಗೆ ಹೊಂದಲಾರದ ಹೋಲಿಕೆ’’ ಎಂದವರು ಕೆ.ಎಸ್.ನ. ‘‘ಕೈ ಹಿಡ್ದೊಳ್ ಪುಟ್ನಂಜಿ ನಗ್ನಗ್ತಾ ಉಪ್ಗಂಜಿ ಕೊಟ್ರಾಯಿತು ರತ್ನನ್ ಪ್ರಪಂಚ’’ ಅಂದವರು ರಾಜರತ್ನಂ. ಇವರೆಲ್ಲಾ ಎಂತಹ ಪರಿಸ್ಥಿತಿಯಲ್ಲೂ ಪ್ರೀತಿಯಿಂದಲೇ ಬದುಕನ್ನು ಹಸನಾಗಿಸಿಕೊಂಡವರು.
ಇದನ್ನೂ ಓದಿ: ಶಾಪಿಂಗ್, ಸಿನಿಮಾ, ಗಿಫ್ಟ್ ಏನೂ ಬೇಡ.. ಪ್ರೀತಿ ಕೊಡು ಸಾಕು
ನಾವು ಕಾಣದ ಮತ್ತೊಬ್ಬರ ಬದುಕಿನಲ್ಲಿ ಪ್ರೀತಿಯಿಲ್ಲ ಅಂದುಕೊಳ್ಳದಿರಲಿ ಯಾರೂ. ಪ್ರೀತಿ ಎನ್ನುವುದು ಐ ಲವ್ ಯು ಎಂಬ ಮಾತಿನಲ್ಲಿಯೂ ಇದೆ. ಆ ಮಾತಿನ ಹಂಗಿಲ್ಲದೆಯೂ ಇದೆ. ಪ್ರೀತಿಗೆ ಬೇಕಿರುವುದು ಪರಸ್ಪರ ಹೊಣೆಗಾರಿಕೆ. ಹೊಣೆಗಾರಿಕೆಯಿಲ್ಲದ ಪ್ರೀತಿ ಬರೀ ಮಾತು ಮಾತು ಮಾತು ಅಷ್ಟೇ. ಹರೆಯದ ಮಕ್ಕಳ ಭಾವವನ್ನೂ ಗೌರವಿಸಿ. ಅವರ ಪ್ರೀತಿಗೆ ಇರಬೇಕಾದ ಜವಾಬ್ದಾರಿಯನ್ನು ನೆನಪಿಸಿ, ದೊಡ್ಡವರ ಪ್ರೀತಿಯ ರೀತಿಯನ್ನು ಕಾಣುವ ಕಣ್ಣಿರಲಿ. ಅದರದೇ ಬೇರೆ ಮುಖ ಎಂಬ ಅರಿವೂ ಇರಲಿ. ಪ್ರೀತಿ ಬದುಕಾಗಲಿ.