ಕೋಲಾರ ತಾಲೂಕಿನ ನರಸಾಪುರದಲ್ಲಿ 4 ತಿಂಗಳ ಹಿಂದೆ ಪ್ರಾರಂಭವಾದ ವಿಸ್ಟಾನ್ ಇನ್ಫೋಕಾಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಮೊನ್ನೆ ನಡೆದ ಹಿಂಸಾಚಾರದಿಂದಾಗಿ ಆ ಕಂಪನಿಗೆ ₹ 437 ಕೋಟಿ ರೂಪಾಯಿ ನಷ್ಟವಾಗಿದೆ. ಸದ್ಯಕ್ಕೆ ಕಂಪನಿಯನ್ನು ಮುಚ್ಚಿದ್ದು, ಅಲ್ಲಿನ ಕೆಲಸಗಾರರ ಸ್ಥಿತಿ ಈಗ ನೆಗಡಿಯೆಂದು ಮೂಗು ಕೊಯ್ದುಕೊಂಡ ಹಾಗೆ ಆಗಿದೆ. ಈ ಕಡೆ ಕೆಲಸವೂ ಇಲ್ಲ, ಆ ಕಡೆ ಸಂಬಳವೂ ಇಲ್ಲ ಎನ್ನುವಂತಾಗಿದೆ.
ಸುಮಾರು 6 ಎಜೆನ್ಸಿಗಳು ಗುತ್ತಿಗೆ ರೂಪದಲ್ಲಿ ನೌಕರರನ್ನು ನೇಮಕ ಮಾಡಿಕೊಂಡಿದ್ದವು. ಆದರೆ 4 ತಿಂಗಳಿನಿಂದ ಸಂಬಳ ನೀಡಿರಲಿಲ್ಲ. ಈ ವಿಷಯವನ್ನು ಹಲವು ಬಾರಿ ಬಾರಿ ಕಂಪನಿಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಕಾರ್ಖಾನೆಯಲ್ಲಿ ಕಾರ್ಮಿಕರು ದಾಂದಲೆ ನಡೆಸಿದರು.
ಕಾರ್ಮಿಕರ ಸಮಸ್ಯೆಯ ಬಗ್ಗೆ ಸೋಮವಾರ ಟಿವಿ9 ಡಿಜಿಟಲ್ ಫೇಸ್ಬುಕ್ ಲೈವ್ ಸಂವಾದ ನಡೆಸಿತು. ಎಫ್ಕೆಸಿಸಿಐ ಮಾಜಿ ಅಧ್ಯಕ್ಷ ಜಿ.ಆರ್.ಬಂಗೇರ, ಕಾರ್ಮಿಕ ಸಂಘಟನೆಗಳ ನಾಯಕ ಡಾ.ಕೆ.ಪ್ರಕಾಶ್, ಎಐಸಿಸಿಟಿಯು ಕಾರ್ಯದರ್ಶಿ ಕ್ಲೀಫ್ಟನ್ ಡ್ರೋಜಾರಿಯೋ ಸಂವಾದದಲ್ಲಿ ಪಾಲ್ಗೊಂಡರು. ಟಿವಿ9 ಆ್ಯಂಕರ್ ಮಾಲ್ತೇಶ್ ಸಂವಾದ ನಿರ್ವಹಿಸಿದರು.
‘ಯಾವುದೇ ಸಮಸ್ಯೆ ಇದ್ದರೂ ಅದನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವುದು ಸೂಕ್ತ. ಈ ರೀತಿಯ ಆಸ್ತಿ ನಷ್ಟ ಹಿಂದೆ ಸಂಭವಿಸಿರಲಿಲ್ಲ. ಯಾವುದೇ ಕಂಪನಿಗೆ ಸೇರಿಸಿಕೊಳ್ಳುವ ಮೊದಲು ಸೂಕ್ತ ತರಬೇತಿಯನ್ನು ನೀಡಬೇಕು. ಮಾನಸಿಕವಾಗಿ ಸದೃಢವಾಗಿರುವಂತೆ ನೋಡಿಕೊಳ್ಳಬೇಕು. ಸರ್ಕಾರ ಈ ವಿಚಾರದಲ್ಲಿ ಮುಂದೆ ಬಂದು ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಎಫ್ಕೆಸಿಸಿಐ ಮಾಜಿ ಅಧ್ಯಕ್ಷ ಜೆ.ಆರ್. ಬಂಗೇರ ಹೇಳಿದರು.
‘ಈ ರೀತಿಯ ಘಟನೆ ನಡೆಯಬಾರದಿತ್ತು. ಸರ್ಕಾರದ ಪರಿಸ್ಥಿತಿ ಹೇಗಾಗಿದೆ ಎಂದರೆ ವಿದೇಶಿ ಬಂಡವಾಳದ ನೆಲೆಗಟ್ಟಿನಲ್ಲಿ ಏನು ಬೇಕಾದರು ಮಾಡಬಹುದು ಎನ್ನುವ ಪರಿಕಲ್ಪನೆಗೆ ಬಂದು ತಲುಪಿದೆ. ಈ ಕಾರಣಕ್ಕೆ ಈ ರೀತಿಯ ಘಟನೆ ನಡೆದಿದೆ. ನಿರಂತರವಾಗಿ ಉದ್ಯೋಗದಲ್ಲಿ ತೊಡಗಿರುವ ಅವರನ್ನು ಗುತ್ತಿಗೆ ಕಾರ್ಮಿಕರನ್ನಾಗಿ ನೇಮಕ ಮಾಡಿದೆ ದೊಡ್ಡ ಅಪರಾಧ. ವಿಸ್ಟಾನ್ ಕಂಪನಿ 12 ಗಂಟೆ ಕೆಲಸ ಮಾಡಿಸುತ್ತಿದೆ. ವಾರ ಪೂರ್ತಿ ಇದೇ ರೀತಿಯ ಕಾರ್ಯ ನಡೆಯುತ್ತಿದೆ. ಇದು ಕಾನೂನಾತ್ಮಕವಾಗಿ ವಿರುದ್ಧ. ಊಟ ತಿಂಡಿಗೂ ಕೂಡ ನೂರಾರು ಸಮಸ್ಯೆಗಳು ಈ ಕಂಪನಿಯಲ್ಲಿದೆ’ ಎಂದು ಕಾರ್ಮಿಕ ನಾಯಕ ಡಾ.ಕೆ.ಪ್ರಕಾಶ್ ಪ್ರತಿಕ್ರಿಯಿಸಿದರು.
‘ತಂದೆ–ತಾಯಿಗಳ ಕಷ್ಟವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸಕ್ಕೆ ಸೇರಿದ ಯುವ ಪೀಳಿಗೆಯು ತೀರಿಸಿಕೊಂಡಿರುವ ಪ್ರತಿಕಾರ ಇದು. ಒಂದು ತಿಂಗಳ ಸಂಬಳ ಇಲ್ಲ ಎಂದರೆ ಊಟಕ್ಕೆ ಇಲ್ಲದ ಸ್ಥಿತಿ ಅವರಲ್ಲಿ ಇದೆ. ಇದರ ಬಗ್ಗೆ ಸರ್ಕಾರ ಮೊದಲು ಗಮನ ಹರಿಸಬೇಕು. ಸರ್ಕಾರದ ಈ ರೀತಿಯ ನಿರ್ಲಕ್ಷ್ಯ ಭಾರಿ ಬೇಸರದ ಸಂಗತಿ’ ಎಂದು ಎಐಸಿಸಿಟಿಯು ಕಾರ್ಯದರ್ಶಿ ಕ್ಲೀಫ್ಟನ್ ಡ್ರೋಜಾರಿಯೋ ನುಡಿದರು.
Published On - 10:17 pm, Mon, 14 December 20