ಮೈದುಂಬಿಕೊಂಡ ವರದಾ ನದಿಯಲ್ಲಿ ಮೀಯಲು ಬಂದ ಜನ ಸಾಗರ..
ವರದಾ ನದಿಯಲ್ಲಿ ಭರಪೂರ ನೀರು ಇರುವುದರಿಂದ ಸುತ್ತಮುತ್ತಲಿನ ಗ್ರಾಮಗಳ ಜನರ ಮೊಗದಲ್ಲಿ ಮಂದಹಾಸ ಮೂಡಿದೆ. ಅಕ್ಕಪಕ್ಕದ ಜಮೀನುಗಳ ರೈತರ ಜಮೀನಿಗೆ, ಹಲವು ಗ್ರಾಮಗಳ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಿದೆ.
ಹಾವೇರಿ: ಜುಳುಜುಳು ಹರಿಯುವ ನೀರಿನ ನಿನಾದ. ಸುತ್ತಮುತ್ತಲಿನ ಗಿಡಗಳಲ್ಲಿ ಹಕ್ಕಿಗಳ ಚಿಲಿಪಿಲಿ. ಮೈದುಂಬಿದ ವರದೆಗೆ ಮೈಯೊಡ್ಡಿ ಈಜಾಡುವ ಯುವಕರು. ಇದು ಹಾವೇರಿ ತಾಲೂಕಿನ ವರದಾ ನದಿಯ ಬಳಿ ಈಗ ಕಂಡುಬರುತ್ತಿರುವ ಸುಂದರ ಚಿತ್ರಣ.
ಈಗ ವರದಾ ನದಿಯ ಬ್ಯಾರೇಜ್ ಗೇಟ್ಗಳನ್ನು ಹಾಕಿರುವುದರಿಂದ ನದಿಯಲ್ಲಿ ಭರಪೂರ ನೀರು ತುಂಬಿಕೊಂಡಿದೆ. ತುಂಬಿ ತುಳುಕುತ್ತಿರುವ ನೀರು ನದಿಯ ಸುತ್ತಲೂ ಸುಂದರ ಹಸಿರು ವಾತಾವರಣವನ್ನು ಸೃಷ್ಟಿಸಿದೆ. ಈ ಸೊಬಗನ್ನು ಸವಿಯಲೆಂದೇ ಆಗಮಿಸುವ ಜನ ಪ್ರಕೃತಿಯ ಒಡಲಿನಲ್ಲಿ ನಲಿದಾಡಿ ಸಮಯ ಕಳೆಯುತ್ತಿದ್ದಾರೆ.
ಸದ್ಯ ಬ್ಯಾರೇಜ್ ಗೇಟ್ ಹಾಕಿ ನೀರು ನಿಲ್ಲಿಸಿರುವುದರಿಂದ ನೀರಿನ ಹರಿವಿಲ್ಲದೇ ನದಿ ಕೊಳದಂತಾಗಿದೆ. ನೀರಿನ ಸೆಳೆತ ಇಲ್ಲದಿರುವುದರಿಂದ ಅಪಾಯವೂ ಕಡಿಮೆ. ಈ ಕಾರಣದಿಂದಲೇ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಈಜುಪಟುಗಳು ನದಿಗೆ ಜಿಗಿದು ಸಖತ್ ಮಜಾ ಮಾಡುತ್ತಿದ್ದಾರೆ.
ಹಾವೇರಿ ತಾಲೂಕಿನ ಕರ್ಜಗಿ, ಹೊಸರಿತ್ತಿ, ನಾಗನೂರು ಮತ್ತು ಸವಣೂರು ತಾಲೂಕಿನ ಕಳಸೂರು ಗ್ರಾಮದ ಬಳಿ ಇರುವ ಬ್ಯಾರೇಜ್ಗಳಿಗೆ ಆಗಮಿಸುವ ಜನರ ಸಂಖ್ಯೆ ಹೆಚ್ಚಾಗಿದೆ. ವರದಾ ನದಿಯ ಸೌಂದರ್ಯ ಸವಿಯಲು ಕುಟುಂಬಸಮೇತರಾಗಿ ಬಂದು ಪ್ರಕೃತಿಯ ಸೊಬಗನ್ನು ಸವಿದು, ಮಕ್ಕಳ ಜೊತೆ ನೀರಾಟ ಆಡಿ, ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಡುತ್ತಿದ್ದಾರೆ.
ವರದಾ ನದಿ ತುಂಬಿದಾಗ ಅದನ್ನು ನೋಡುವುದೇ ಒಂದು ಹಬ್ಬ. ಇಡೀ ದಿನ ಕೆಲಸದ ಜಂಜಾಟದಲ್ಲಿ ಇರುವ ಜನರು ನದಿಯ ಬಳಿ ಒಮ್ಮೆ ನಡೆದಾಡಿ ಹೋದರೆ ಸಾಕು ಎಂತಹ ಸಮಸ್ಯೆಗಳೂ ಮರೆತು ಹೋಗುತ್ತವೆ. ಪ್ರಕೃತಿಯ ಮಡಿಲಿನಲ್ಲಿ ಕಾಲ ಕಳೆಯುವಾಗ ಸಿಗುವ ಆನಂದ ಅಪರಿಮಿತವಾದದ್ದು. ಹೀಗಾಗಿಯೇ ಬಹಳಷ್ಟು ಜನರು ಆಗಮಿಸುತ್ತಾರೆ ಎನ್ನುವುದು ಕರ್ಜಗಿ ಗ್ರಾಮಸ್ಥರಾದ ಸದಾಶಿವ ಹೂಗಾರ ಮತ್ತು ಪ್ರಸನ್ನ ಸಜ್ಜನಶೆಟ್ಟರ ಅವರ ಅಭಿಪ್ರಾಯ.
ನದಿಯಲ್ಲಿ ಭರಪೂರ ನೀರು ಇರುವುದರಿಂದ ಸುತ್ತಮುತ್ತಲಿನ ಗ್ರಾಮಗಳ ಜನರ ಮೊಗದಲ್ಲಿ ಮಂದಹಾಸ ಮೂಡಿದೆ. ಅಕ್ಕಪಕ್ಕದ ಜಮೀನುಗಳ ರೈತರ ಜಮೀನಿಗೆ ಯಥೇಚ್ಛ ನೀರು ಸಿಗುತ್ತಿದೆ. ಇನ್ನೊಂದೆಡೆ ಹಲವು ಗ್ರಾಮಗಳ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಿದೆ. ಹೀಗಾಗಿ ನದಿಯಲ್ಲಿ ನೀರು ತುಂಬಿಕೊಂಡಿರುವುದು ಸುತ್ತಮುತ್ತಲಿನ ಗ್ರಾಮಗಳ ಜನರ ಮೊಗದಲ್ಲಿ ಸಂತಸ ಮೂಡಿಸಿದೆ. -ಪ್ರಭುಗೌಡ ಎನ್.ಪಾಟೀಲ
ಧುಮ್ಮಿಕ್ಕಿ ಹರಿಯುತ್ತಿದೆ ವರವಿ ಕೊಳ್ಳ.. ಅಪಾಯವಿದ್ರೂ ಪ್ರವಾಸಿಗರು ಫುಲ್ ಎಂಜಾಯ್