ದಶಾವತಾರಿ ಮಹಾವಿಷ್ಣುವಿನ ಎಲ್ಲಾ ಅವತಾರಗಳಿಗಿಂತ ಶ್ರೀರಾಮನ ಅವತಾರ ಅತ್ಯಂತ ಪ್ರಾಮುಖ್ಯತೆ ಹೊಂದಿದೆ. ಯಾಕಂದ್ರೆ ರಾಮಚಂದ್ರ ತೋರಿದ ಆದರ್ಶ ಜೀವನ ತುಂಬಾ ಜನರಿಗೆ ಸ್ಫೂರ್ತಿಯಾಗಿದೆ. ಶ್ರೀರಾಮಚಂದ್ರ ಭಕ್ತಪ್ರಿಯ. ನಂಬಿದ ಭಕ್ತರಿಗೆ ಸದಾ ಒಳಿತು ಮಾಡ್ತಾನೆ ಅನ್ನೋ ನಂಬಿಕೆ ಅವನ ಭಕ್ತರದ್ದು. ಹೀಗಾಗೇ ನಾವಿವತ್ತು ರಾಮನನ್ನು ಒಲಿಸಿಕೊಳ್ಳೋಕೆ ಒಂದು ಸರಳ ಉಪಾಯವನ್ನು ನಿಮಗೆ ಹೇಳಿಕೊಡ್ತೀವಿ. ಅದೇನು ಅಂದ್ರೆ ರಾಮಕೋಟಿ.
ಏನಿದು ರಾಮಕೋಟಿ ಅಂತೀರಾ? ಶ್ರೀರಾಮಚಂದ್ರನ ಹೆಸರನ್ನು ಒಂದು ಕೋಟಿ ಬಾರಿ ಬರೆಯೋದೇ ರಾಮಕೋಟಿ. ಶ್ರದ್ಧೆ, ಭಕ್ತಿ ಇರುವವರು ಯಾರಾದರೂ ಶ್ರೀರಾಮ ಕೋಟಿಯನ್ನು ಬರೆಯಬಹುದು. ಆದ್ರೆ ರಾಮ ಕೋಟಿಯನ್ನು ಬರೆಯುವಾಗ ಕೆಲವು ಮುಖ್ಯ ನಿಯಮಗಳನ್ನು ಪಾಲಿಸಬೇಕು ಅಂತಾ ನಮ್ಮ ಶಾಸ್ತ್ರಗಳು ಹೇಳುತ್ತವೆ. ಹಾಗಾದ್ರೆ ಬನ್ನಿ ರಾಮ ಕೋಟಿ ಬರೆಯೋಕೆ ಇರೋ ಆ ನಿಯಮಗಳೇನು ಅನ್ನೋದನ್ನು ಈಗ ಇಲ್ಲಿ ತಿಳಿಯಿರಿ.
ರಾಮಕೋಟಿ ಬರೆಯಲು ಇರುವ ನಿಮಯಮಗಳು
-ರಾಮ ಕೋಟಿಯನ್ನು ಬರೆಯಲು ಒಂದು ಒಳ್ಳೆಯ ಬಿಳಿಯ ಪುಸ್ತಕ ಮತ್ತು ಹಸಿರು ಬಣ್ಣದ ಲೇಖನಿಯನ್ನು ಸಿದ್ಧ ಮಾಡಿಕೊಳ್ಳಬೇಕು.
-ಒಂದು ಒಳ್ಳೆಯ ಶುಭ ಮುಹೂರ್ತದಲ್ಲಿ ಪುಸ್ತಕ ಹಾಗೂ ಪೆನ್ನಿಗೆ ಅರಿಶಿನ, ಕುಂಕುಮವನ್ನು ಹಚ್ಚಿ. ದೇವರ ಸನ್ನಿಧಿಯಲ್ಲಿಡಿ.
-ಪುಸ್ತಕ ಹಾಗೂ ಪೆನ್ನಿನ ಮೇಲೆ ಹೂವುಗಳನ್ನು ಹಾಕಿ. ಶ್ರೀರಾಮ ಅಷ್ಟೋತ್ತರ ಶತನಾಮಾವಳಿಯಿಂದ ಪೂಜಿಸಿ. ನಂತರ ನಮಸ್ಕಾರ ಮಾಡಿಕೊಂಡು ರಾಮಕೋಟಿಯನ್ನು ಬರೆಯೋಕೆ ಪ್ರಾರಂಭಿಸಿ.
-ಪುರ್ನವಸು ನಕ್ಷತ್ರದ ದಿನ ರಾಮಕೋಟಿ ಬರೆಯುವುದನ್ನು ಪ್ರಾರಂಭ ಮಾಡಿ. ಅದೇ ನಕ್ಷತ್ರದಲ್ಲಿ ಮುಗಿಸಿದರೆ ತುಂಬಾ ಒಳ್ಳೆಯದು.
-ರಾಮ ಕೋಟಿಯನ್ನು ಬರೆಯುವಾಗ ಇತರೆ ಆಲೋಚನೆಯನ್ನು ಇಟ್ಟುಕೊಳ್ಳದೇ ರಾಮನನ್ನೇ ಸ್ಮರಿಸುತ್ತಾ ನಿರ್ಮಲ ಮನಸ್ಸಿನಿಂದ ರಾಮಕೋಟಿ ಬರೆಯಬೇಕು.
-ಬೇರೆಯವರ ಜೊತೆ ಮಾತನಾಡದೇ ರಾಮಕೋಟಿ ಬರೆಯಬೇಕು.
-ರಾಮ ಕೋಟಿಯನ್ನು ಬರೆಯುವಾಗ ಪದ್ಮಾಸನ ಹಾಕಿ ಕುಳಿತುಕೊಂಡು ಬರೆಯಬೇಕು. ಯಾವುದೇ ಪರಿಸ್ಥಿತಿಯಲ್ಲಿಯೂ ಸಹ ರಾಮ ಕೋಟಿಯನ್ನು ಮಲಗಿ ಬರೆಯಬಾರದು.
-ಸ್ನಾನ ಮಾಡಿ, ಮಡಿ ವಸ್ತ್ರವನ್ನು ಧರಿಸಿ ಮಾತ್ರವೇ ರಾಮ ಕೋಟಿಯನ್ನು ಬರೆಯಬೇಕು.
-ರಾಮ ಕೋಟಿಯನ್ನು ಬರೆಯುವ ಪುಸ್ತಕದಲ್ಲಿ ರಾಮನಾಮ ಮಾತ್ರ ಇರಬೇಕು. ಬೇರೆ ಯಾವ ಅಕ್ಷರಗಳು ಇರಬಾರದು.
-ಗರ್ಭಿಣಿಯರು, ತಿಂಗಳ ರಜೆಯಲ್ಲಿರುವ ಸ್ತ್ರೀಯರು ರಾಮಕೋಟಿ ಬರೆಯಬಾರದು.
-ಮನೆಯಲ್ಲಿ ಯಾವುದೇ ಸೂತಕ ಇದ್ದರೆ ಆ ಸಮಯದಲ್ಲಿ ರಾಮಕೋಟಿಯನ್ನು ಬರೆಯಬಾರದು.
ಹೀಗೆ ಒಂದೇ ಪದವನ್ನು ಅನೇಕ ಬಾರಿ ಬರೆಯುವುದರಿಂದ ಏಕಾಗ್ರತೆ ಶಕ್ತಿ ಹೆಚ್ಚಾಗುತ್ತೆ. ಸಹನೆ, ತಾಳ್ಮೆಯ ಗುಣ ಹೆಚ್ಚಾಗುತ್ತೆ. ಮನಸ್ಸಿಗೆ ಪ್ರಶಾಂತತೆ ದೊರೆಯುತ್ತೆ. ನಮ್ಮ ದೇಹದಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಿ ನಾವು ಅಂದುಕೊಂಡ ಕೆಲಸಗಳಲ್ಲಿ ವಿಜಯ ಸಿಗುತ್ತೆ ಅನ್ನೋ ನಂಬಿಕೆ ಇದೆ. ಇನ್ನು ರಾಮಕೋಟಿ ಬರೆಯುವುದು ಪೂರ್ಣವಾದ ನಂತರ ರಾಮಕೋಟಿ ಪುಸ್ತಕದ ಮೇಲೆ ಅರಿಶಿನದ ಬಟ್ಟೆಯನ್ನು ಹೊದಿಸಿ. ನಂತರ ಅದನ್ನು ರಾಮನ ಪುಣ್ಯಕ್ಷೇತ್ರಗಳಿಗೆ ಸಮರ್ಪಿಸಬೇಕು. ಹೀಗೆ ಮಾಡೋದ್ರಿಂದ ನಮ್ಮ ಜೀವನ ಪಾವನವಾಗುತ್ತೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ: ಮುಸ್ಲಿಂ ಆದರೂ ರಾಮನ ಭಕ್ತ, ರಾಮ ಕೋಟಿ ಬರೆದು ಸರ್ವಧರ್ಮ ಸಮನ್ವಯ ಸಾರುತಿರುವ ಶಿಕ್ಷಕ