Women’s Day Special : ತಾಯಿಯಂತಹ ರೂಮ್‌ಮೇಟ್ ದೊರೆತಾಗ…

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 08, 2022 | 7:30 AM

ಅಕ್ಕ-ತಂಗಿಯರಿಲ್ಲದ ನನಗೆ ಅವರಂತೂ ನೆಚ್ಚಿನ ಅಕ್ಕರಾಗಿ ಬಿಟ್ಟಿದ್ದರು. ಒಂದೇ ರೂಮಿನಲ್ಲಿ ಇರುತ್ತಿದ್ದ ಕಾರಣದಿಂದಲೋ ಏನೋ ನಮ್ಮಲ್ಲಿ ಯಾವುದೇ ರೀತಿಯ ಮುಚ್ಚು-ಮರೆ ಇರುತ್ತಿರಲಿಲ್ಲ.

Women’s Day Special : ತಾಯಿಯಂತಹ ರೂಮ್‌ಮೇಟ್ ದೊರೆತಾಗ...
ಸಾಂದರ್ಭಿಕ ಚಿತ್ರ
Follow us on

ಪ್ರತಿಯೊಬ್ಬರ ಜೀವನದಲ್ಲಿಯೂ ಸ್ಪೂರ್ತಿಯಾಗಿ ಒಬ್ಬ ಮಹಿಳೆ ಇದ್ದೇ ಇರುತ್ತಾಳೆ. ಹಲವರಿಗೆ ಅದು ತಾಯಿಯಾಗಿರುತ್ತಾರೆ, ಇನ್ನು ಕೆಲವರಿಗೆ ಹೆಂಡತಿ, ಅಕ್ಕ, ತಂಗಿಯಾಗಿರುತ್ತಾರೆ. ಆದರೆ ನನ್ನ ಜೀವನದಲ್ಲಿ ಮಾತ್ರ ವಿಶೇಷ ಎಂದರೆ ನನಗೆ ಇವತ್ತಿಗೂ ಸ್ಪೂರ್ತಿಯಾಗಿರುವ ಮಹಿಳೆ ಎಂದರೆ ಅದು ನನ್ನ ರೂಮ್‌ಮೇಟ್. ಮೂರು ವರ್ಷದ ಹಿಂದೆ ನನ್ನ ಓದಿಗಾಗಿ ನಾನು ಮೈಸೂರನ್ನು ಆಯ್ಕೆ ಮಾಡಿಕೊಂಡಿದ್ದೆ. ಪುಟ್ಟ ಹಳ್ಳಿಯಿಂದ ಹೋದ ನನಗೆ ಮೈಸೂರು ಮಹಾನದಿಯಂತೆ ಗೋಚರವಾಗಿತ್ತು. ಇನ್ನು ಈ ಮಹಾನದಿಯಲ್ಲಿ ನನಗೆ ಸುಲಭವಾಗಿ ಈಜಲು ಕಲಿಸಿ, ಸರಿಯಾದ ದಡಕ್ಕೆ ತಲುಪಿಸುವ ಹೊಣೆಗಾರಿಕೆಯನ್ನು ಅತ್ಯಂತ ಪ್ರೀತಿಯಿಂದ ನೆರವೇರಿಸಿಕೊಟ್ಟವರು ಧನ್ಯತಾ. ಹೆಸರೇ ಹೇಳುವಂತೆ ಸದಾ ಧನ್ಯತಾ ಭಾವದೊಂದಿಗೆ ಎಲ್ಲರನ್ನೂ ತನ್ನೆಡೆಗೆ ಸೆಳೆಯುತ್ತಿದ್ದರು.

ಅಕ್ಕ-ತಂಗಿಯರಿಲ್ಲದ ನನಗೆ ಅವರಂತೂ ನೆಚ್ಚಿನ ಅಕ್ಕರಾಗಿ ಬಿಟ್ಟಿದ್ದರು. ಒಂದೇ ರೂಮಿನಲ್ಲಿ ಇರುತ್ತಿದ್ದ ಕಾರಣದಿಂದಲೋ ಏನೋ ನಮ್ಮಲ್ಲಿ ಯಾವುದೇ ರೀತಿಯ ಮುಚ್ಚು-ಮರೆ ಇರುತ್ತಿರಲಿಲ್ಲ. ಎಲ್ಲವನ್ನು ಅವರಲ್ಲಿ ಹೇಳಿಕೊಳ್ಳುತ್ತಿದ್ದೆ.ಓದಿನ ವಿಷಯದಲ್ಲಿಯೂ ಹಾಗೆ, ಅವರಂತೂ ಸದಾ ತಾನು ಬಂದ ಉದ್ದೇಶ ಏನು ಎನ್ನುವುದನ್ನು ಮರೆತ ದಿನವೇ ಇಲ್ಲ. ಯಾವಾಗಲೂ ಒಂದಲ್ಲಾ ಒಂದು ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಿದ್ದರು. ಸಮಯವನ್ನು ಎಂದಿಗೂ ಹಾಳುಮಾಡುತ್ತಿರಲಿಲ್ಲ. ಕೇವಲ ಪಠ್ಯದ ಓದಿಗೆ ಮಾತ್ರ ಸೀಮಿತವಾಗದೇ ಅದರಿಂದಾಚೆಗೂ ಪಠ್ಯೇತರದಲ್ಲಿನ ಅವರ ಆಸಕ್ತಿ ನನ್ನನ್ನು ಬೆರಗುಗೊಳಿಸುತ್ತಿತ್ತು. ನನ್ನ ಜೀವನದಲ್ಲಿ ನಾನಾಗಿಯೇ ಕಷ್ಟವನ್ನು ಎಳೆದುಕೊಂಡು ಭಯ, ದುಃಖ, ಚಿಂತೆ ಇವುಗಳಿಂದ ಮನಸ್ಸನ್ನು ಗೊಂದಲದ ಗೂಡಾಗಿಸಿಕೊಂಡಿದ್ದೆ.

ಊಟ-ತಿಂಡಿ, ಓದು, ನಿದ್ದೆ ಯಾವುದು ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ನನ್ನನ್ನು, ಒಂದು ತಾಯಿ ತನ್ನ ಪುಟ್ಟ ಮಗುವಿಗೆ ಹೇಗೆ ಪ್ರೀತಿಯ ತುತ್ತನ್ನಿಡುತ್ತಾಳೋ ಹಾಗೆ ತುತ್ತಿಟ್ಟವರು ಅವರು. ಆಗಿದ್ದೆಲ್ಲ ಆಗಿ ಹೋಯಿತು. ಜೀವನವೆಂದರೆ ಸುಖ-ದುಃಖಗಳ ಮಿಶ್ರಣ, ಎಲ್ಲವನ್ನು ಎದುರಿಸಿ ಬದುಕುವುದೇ ನಿಜವಾದ ಜೀವನ ಎಂದು ತಿದ್ದಿ ಬುದ್ಧಿ ಹೇಳಿದ ನನ್ನ ಗುರು ಅವರು. ಜವಾಬ್ದಾರಿ, ಪ್ರಬುದ್ಧತೆ, ತಿಳುವಳಿಕೆ ಹೀಗೆ ಎಲ್ಲದರಲ್ಲಿಯೂ ಮಾದರಿಯಾಗಿರುವ ಧನ್ಯತಾ ನಾನು ನಿಮ್ಮ ಪ್ರೀತಿಗೆ ಧನ್ಯಳು. ತಾಯಿಯ ಮಮತೆ, ತಂದೆಯ ರಕ್ಷಣೆ ಎಲ್ಲವನ್ನೂ ಮೂರು ವರ್ಷಗಳಲ್ಲಿ ತೋರಿಸಿ ನೂರು ವರ್ಷಗಳಿಗಾಗುವಷ್ಟು ಸ್ಪೂರ್ತಿಯನ್ನು ನೀಡಿರುವ ನಿಮಗೆ ಈ ಮಹಿಳಾದಿನದಂದು ಸಲಾಮ್

ಭಾರತಿ ಹೆಗಡೆ
ಶಿರಸಿ