Bird Photography : ಹೃದಯ ಶಸ್ತ್ರ ಚಿಕಿತ್ಸಕನಾದ ನಾನೂ ಕೂಡ ನನ್ನ ಹೃದಯದ ಬಡಿತದ ಕಡೆ ಗಮನ ಕೊಡಲೇಬೇಕಾಗುತ್ತದೆ. ಸಾಕಷ್ಟು ಸಲ ರೋಗಿಗೆ ಶಸ್ತ್ರಚಿಕಿತ್ಸೆ ಮಾಡುವಾಗ ನನ್ನೊಳಗನ್ನು ತಡವಿ ಒತ್ತಡ ಸೃಷ್ಟಿಮಾಡುತ್ತಿರುತ್ತದೆ. ಆಗ ಅದು ನನ್ನ ಅರಿವಿಗೆ ಬರುತ್ತಿದ್ದಂತೆ ಅದರಿಂದ ಹೊರಬರಲು ನನ್ನ ಮನಸ್ಸಿಗೆ ನಾನೇ ಸೂಚನೆ ಕೊಟ್ಟುಕೊಳ್ಳಲು ಪ್ರಾರಂಭಿಸುತ್ತೇನೆ. ಸಮಾಧಾನ, ಇದು ಈ ಕ್ಷಣದ ಒತ್ತಡ ಮಾತ್ರ. ಇದರಿಂದ ಹೊರಬರಲೇಬೇಕು ಅಂತೆಲ್ಲ. ಬಹುಶಃ ಇದು ನಮ್ಮನ್ನು ನಾವು ಸೂಕ್ಷ್ಮವಾಗಿ ಗಮನಿಸಿಕೊಳ್ಳುವ ಅಭ್ಯಾಸವಿರುವ ಎಲ್ಲರಿಗೂ ಅನುಭವಕ್ಕೆ ಬಂದಿರುತ್ತದೆ. ನಮ್ಮ ಮನಸ್ಸು ಭಾರವಾಗುವುದು ಹೇಗೆ ಗೊತ್ತಾಗುತ್ತದೆಯೋ ಮನಸ್ಸು ಹಗೂರವಾಗುವುದೂ ನಮ್ಮ ಅರಿವಿಗೆ ಬರುತ್ತಾ ಹೋಗುತ್ತದೆ. ಇದರ ಮಧ್ಯೆ ನಮ್ಮ ದೇಹದಲ್ಲಿ ಏರುಪೇರಾಗದಂತೆ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮದೇ. ಈ ಭಾರ ಮತ್ತು ಹಗೂರದ ಮಧ್ಯೆ ಉಸಿರಾಟಕ್ಕಾಗಿ ಏನಾದರೊಂದು ಸಾಧನ ಬೇಕಲ್ಲ? ಇತ್ತೀಚಿನ ಎರಡು ವರ್ಷಗಳಲ್ಲಿ ನನ್ನನ್ನು ಆವರಿಸಿಕೊಂಡಿರುವುದು ಕುಳಿತ ಹಕ್ಕಿಗಳನ್ನು ಸೆರೆಹಿಡಿಯುವ ಧ್ಯಾನವಲ್ಲ, ಹಾರುತ್ತ ಸವಾಲೆಸೆಯುವಂಥ ಹಕ್ಕಿಗಳ ಚಲನಾಲೋಕ.
ಡಾ. ನಿಸರ್ಗ, ಹೃದಯ ಶಸ್ತ್ರಚಿಕಿತ್ಸಕ, ಕಿಮ್ಸ್, ಹೈದರಾಬಾದ್
ನಿರಂತರವಾಗಿ ಶಸ್ತ್ರಚಿಕಿತ್ಸೆಯ ಕೊಠಡಿಯಲ್ಲಿ ಮುಳುಗಿ ಹೋಗುವ ನನಗೆ ಕೊವಿಡ್ ಸಮಯದಲ್ಲಿ ಸ್ವಲ್ಪ ಸಮಯ ಸಿಕ್ಕಿತು ಎನ್ನಬಹುದು. ಆಗ ಕ್ಯಾಮೆರಾ ತೆಗೆದುಕೊಂಡು ಸಂಜೆಯೋ ಬೆಳಗ್ಗೆಯೋ ಸುತ್ತಾಡತೊಡಗಿದೆ. ಅದೆಷ್ಟು ಹೊಸಬಗೆಯ ವಿಷಯ, ವಿಚಾರಗಳಿಗೆ ನಿಸರ್ಗದಲ್ಲಿ ಎನ್ನಿಸತೊಡಗಿತು. ಬಹುಶಃ ನಾನೇ ಕಣ್ಣುಮುಚ್ಚಿಕೊಂಡಿದ್ದೆನೇನೋ. ಸಾಕಷ್ಟು ಪ್ರಾಣಿಗಳ ಹೆಸರುಗಳು ಗೊತ್ತು. ಅವುಗಳ ಚಲನವಲನವೂ. ಆದರೆ ಪುಟ್ಟಹಕ್ಕಿಗಳ ಪ್ರಭೇದ, ಅವುಗಳ ಮನಸ್ಥಿತಿ, ಜೀವನಗತಿ, ಸ್ವಭಾವ ಅದೆಲ್ಲ ನಮಗೆ ಎಷ್ಟು ಗೊತ್ತಿರಲಿಕ್ಕೆ ಸಾಧ್ಯ? ಈ ಕುತೂಹಲವೇ ನನ್ನನ್ನು ಮೌನವಾಗಿ ಕಾಯುವಂತೆ ಮಾಡಲು ಕಲಿಸಿತು. ಗಂಟೆಗಟ್ಟಲೆ ಕಾಯ್ದು ನೂರಾರು ಕ್ಲಿಕ್ ಮಾಡಿದಾಗ ದಕ್ಕುತ್ತಿದ್ದದ್ದು ಒಂದೋ ಎರಡು ಫೋಟೋ. ನೀವು ಯಾವುದಕ್ಕಾದರೂ ಕುತೂಹಲದಿಂದ ಒಮ್ಮೆ ತೆರೆದುಕೊಂಡರೆ ಸಾಕು. ಅದು ತಾನಾಗಿಯೇ ಆಹ್ವಾನಿಸಲು ಶುರು ಮಾಡುತ್ತದೆ. ಅದನ್ನು ಅನುಭವಿಸಬೇಕು. ಅದು ತೋರುವ ದಾರಿಗೆ ತೆರೆದುಕೊಳ್ಳುತ್ತಾ ಹೋಗಬೇಕು. ಆಗಲೇ ಸೌಂದರ್ಯ ಪ್ರಜ್ಞೆ ಅರಿವಾಗುವುದು.
ಹೇಗೆ ಚಿತ್ರಕಾರ, ಶಿಲ್ಪಕಾರ ಕೃತಿ ರಚಿಸುತ್ತಾನೋ ಹಾಗೆ ನೀವು ತೆಗೆದ ಫೋಟೋ ನಿಮ್ಮ ಕಲಾಕೃತಿ. ಈ ಕಲಾಕೃತಿ ಮೂಡಬೇಕಾದರೆ ನೀವು ಜಗತ್ತಿನ ಎಲ್ಲಾ ಜಂಜಗಳಿಂದ ಮುಕ್ತವಾಗಿರುತ್ತೀರಿ. ನಿಮ್ಮ ಉಸಿರಿನ ಲಯ ನಿಮಗೇ ಕೇಳಿಸುವಷ್ಟರ ಮಟ್ಟಿಗೆ ನಿಮ್ಮೊಳಗೆ ಶಾಂತತೆ ಆವರಿಸಿಕೊಂಡಿರುತ್ತದೆ. ಆಗ ಖಂಡಿತ ನಿಮ್ಮ ಆರೋಗ್ಯ, ಆಯುಷ್ಯ ಗಟ್ಟಿಯಾಗಿರುತ್ತದೆ. ಯಂತ್ರಗಳೊಂದಿಗಿರುವ ನಾವು ಪ್ರಕೃತಿ ಜೊತೆಗಿರುವುದನ್ನು ರೂಢಿಸಿಕೊಂಡರಷ್ಟೇ ಉಳಿವು. ಈತನಕ ಎರಡು ವರ್ಷಗಳಲ್ಲಿ ಸುಮಾರು 460 ಹಕ್ಕಿಗಳ ಫೋಟೋಗ್ರಫಿ ಮಾಡಿದ್ದೇನೆ. ನನಗೆ ಯಾವಾಗಲೂ ಸವಾಲಿನ ಕೆಲಸ ಇಷ್ಟ. ಸ್ಟಿಲ್ ಫೋಟೋಗ್ರಫಿಗಿಂತ ಚಲನೆಯುಳ್ಳ ವಸ್ತುವನ್ನು ಹಿಡಿದಿಡುವುದಿದೆಯಲ್ಲ? ಮೈಕ್ರೋ ಸೆಕೆಂಡ್ ವೇಗದಲ್ಲಿರುವುದನ್ನು ‘ನಿಲ್ಲಿಸುವ’ ಜಾಗೃತಾವಸ್ಥೆ ಇದೆಯಲ್ಲ? ಮತ್ತದರ ಹಾವಭಾವ, ಭಂಗಿಯನ್ನು ಹಿಡಿದಿಡುವುದಿದೆಯಲ್ಲ? ಅದೆಲ್ಲವನ್ನೂ ಕ್ಯಾಮೆರಾದಲ್ಲಿ ಹಿಡಿಯಲು ಬಹಳ ಕಾಯುತ್ತೇನೆ. ಈ ಕಾಯುವಿಕೆಯ ಸುಖವೇ ನನಗಿಷ್ಟ. ಬೆಳಗ್ಗೆಯೋ ಸಂಜೆಯೋ ಹೀಗೆ ಹಕ್ಕಿಗಳ ಲೋಕದಲ್ಲಿ ವಿಹರಿಸಿದರೆ ನನ್ನ ಹೃದಯ ನನ್ನ ಮಾತು ಕೇಳುತ್ತದೆ ಎಂದು ನಂಬಿಕೆಯೊಂದಿಗೆ ಸಾಗುತ್ತಿದ್ದೇನೆ.
Published On - 3:54 pm, Tue, 17 May 22