World Hypertension Day 2022 : ನಿಮ್ಮಲ್ಲಿರುವುದು ಕೆಟ್ಟ ಒತ್ತಡವೋ ಒಳ್ಳೆಯ ಒತ್ತಡವೋ? ಗುರುತಿಸಿಕೊಳ್ಳಿ

TV9 Digital Desk

| Edited By: ಶ್ರೀದೇವಿ ಕಳಸದ

Updated on:May 17, 2022 | 12:33 PM

Youth and Hypertension : ಇಂದು ದುಡಿಯುವ ವರ್ಗ ಅಧಿಕ ರಕ್ತದೊತ್ತಡದ ಪರಿಣಾಮಗಳಿಗೆ ಬಲಿಯಾಗುತ್ತಿದೆ. 35ರಿಂದ 40 ವರ್ಷದೊಳಗಿನ ಯುವಸಮೂಹ ಅಪಾಯದಲ್ಲಿದೆ. ಜೀವನಶೈಲಿಯಲ್ಲಿ ಬದಲಾವಣೆ ತಂದುಕೊಂಡರೆ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯ.

World Hypertension Day 2022 : ನಿಮ್ಮಲ್ಲಿರುವುದು ಕೆಟ್ಟ ಒತ್ತಡವೋ ಒಳ್ಳೆಯ ಒತ್ತಡವೋ? ಗುರುತಿಸಿಕೊಳ್ಳಿ
ಸಾಂದರ್ಭಿಕ ಚಿತ್ರ

Hypertension : ಭಾರತದಲ್ಲಿ ನಾಲ್ವರಲ್ಲಿ ಒಬ್ಬ ಯುವಕ ಅಥವಾ ಯುವತಿ ಅಧಿಕ ರಕ್ತದೊತ್ತಡಕ್ಕೆ ಒಳಗಾಗುತ್ತಿದ್ದು, ಕೇವಲ ಶೇ. 10 ರಷ್ಟು ರೋಗಿಗಳ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ ಎಂದು ಇಂಡಿಯಾ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ ಇತ್ತೀಚೆಗೆ ವರದಿ ಮಾಡಿದೆ. ಪ್ರಾಥಮಿಕ ಹಂತದಲ್ಲಿ ರಾಜ್ಯವಾರು ಗಮನಿಸಿದಾಗ ಮಹಾರಾಷ್ಟ್ರ ಶೇ. 27, ಕೇರಳ ಶೇ. 22.6, ಮಧ್ಯಪ್ರದೇಶ ಶೇ. 18.7, ತೆಲಂಗಾಣ ಶೇ. 18.6, ಪಂಜಾಬ್ ಶೇ. 14.2 ರೋಗಿಗಳು ಅಧಿಕ ರಕ್ತದೊತ್ತಡಕ್ಕೆ ಒಳಗಾಗಿದ್ದು ಶೇ. 5 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಡಿಸೆಂಬರ್ 2020 ರವರೆಗೆ 4,505 ವಿವಿಧ ಆರೋಗ್ಯ ಸೌಲಭ್ಯಗಳನ್ನು ನಿರೀಕ್ಷಿಸಿ ನೋಂದಾಯಿಸಲ್ಪಟ್ಟವರ ಸಂಖ್ಯೆ ಒಂದು ಮಿಲಿಯನ್. ಮಾರ್ಚ್ 2021 – ಏಪ್ರಿಲ್ 2022ರ ಅವಧಿಯಲ್ಲಿ 7,40,000 ರೋಗಿಗಳು ಆರೈಕೆಗೆ ಒಳಪಟ್ಟಿದ್ದಾರೆ.  ಅವರಲ್ಲಿ ಶೇ. 47ರಷ್ಟು ರೋಗಿಗಳು ಅಧಿಕ ರಕ್ತದೊತ್ತಡ, ಶೇ. 23 ರೋಗಿಗಳು ಅನಿಯಂತ್ರಿತ ರಕ್ತದೊತ್ತಡಕ್ಕೆ ಒಳಗಾಗಿದ್ದುದು ಕಂಡುಬಂದಿದೆ. ಆದರೆ ಇವರಲ್ಲಿ ಸಾಕಷ್ಟು ರೋಗಿಗಳು ಚಿಕಿತ್ಸೆಯನ್ನು ಮುಂದುವರಿಸಿಲ್ಲ ಎನ್ನುವ ಅಂಶವೂ ಪತ್ತೆಯಾಗಿದೆ. ರಕ್ತದೊತ್ತಡದ ನಿರ್ವಹಣೆಯ ಬಗ್ಗೆ ಗಮನವಹಿಸಿದಲ್ಲಿ, ಹೃದಯರಕ್ತನಾಳದ ಕಾಯಿಲೆಯಿಂದ ಅರ್ಧ ಮಿಲಿಯನ್ ಸಾವುಗಳನ್ನು ತಡೆಯಬಹುದು ಎಂದು ಸಂಶೋಧನಾ ತಂಡ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಧಿಕ ರಕ್ತದೊತ್ತಡವನ್ನು ಬೇಗ ಪತ್ತೆಹಚ್ಚದಿದ್ದರೆ ಅಥವಾ ಅಸಮರ್ಪಕವಾಗಿ ಚಿಕಿತ್ಸೆ ನೀಡಿದರೆ, ಹೃದಯಾಘಾತ ಮತ್ತು ವೈಫಲ್ಯ, ಮಿದುಳಿನ ಪಾರ್ಶ್ವವಾಯು, ಮೂತ್ರಪಿಂಡದ ಕಾಯಿಲೆ, ಬುದ್ಧಿಮಾಂದ್ಯತೆ, ಅಂಧತ್ವ ಉಂಟಾಗುತ್ತದೆ. ಆದ್ದರಿಂದ ಅಧಿಕ ರಕ್ತದೊತ್ತಡವನ್ನು ಮೊದಲೇ ಪತ್ತೆಹಚ್ಚಲು ಮತ್ತು ಅಪಾಯಕಾರಿ ಅಂಶಗಳನ್ನು ನಿರ್ಣಯಿಸಲು, ನಿರಂತರ ದೀರ್ಘಕಾಲೀನ ಆರೈಕೆಯನ್ನು ಒದಗಿಸಲು ಪ್ರಾಥಮಿಕ ಆರೈಕೆ ವ್ಯವಸ್ಥೆಗಳ ಸಾಮರ್ಥ್ಯವನ್ನು ಸುಧಾರಿಸುವುದು ಇಂದಿನ ತುರ್ತು.

ಪುಣೆಯ ಸಶಸ್ತ್ರ ವೈದ್ಯಕೀಯ ಕಾಲೇಜಿನ ಡಾ. ಸುದರ್ಶನ ನಾಯಕ್, ‘ಇತ್ತೀಚಿನ ಐದು ವರ್ಷಗಳಲ್ಲಿ 35ರಿಂದ 40ರೊಳಗಿನ ಯುವಜನತೆ ಅಧಿಕ ರಕ್ತದೊತ್ತಡಕ್ಕೆ ಒಳಗಾಗುತ್ತಿದ್ದಾರೆ. ಈ ಮೊದಲು ಇದು 45ರ ಮೇಲ್ಪಟ್ಟವರಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಒತ್ತಡದ ಜೀವನಶೈಲಿ, ಸಾಮಾಜಿಕ ಸ್ವರೂಪಗಳಲ್ಲಿ ಉಂಟಾದ ಏರುಪೇರುಗಳಿಂದಾಗಿ ಚಿಕ್ಕವಯಸ್ಸಿನವರಲ್ಲಿಯೇ ಇದು ಹೆಚ್ಚು ಪರಿಣಾಮ ಬೀರುತ್ತಿದೆ. ಆದ್ದರಿಂದ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಕಡ್ಡಾಯ. ಏಕೆಂದರೆ ಅಧಿಕ ರಕ್ತದೊತ್ತಡಕ್ಕೆ ಪ್ರಾಥಮಿಕ ಹಂತದ ಗುಣಲಕ್ಷಣಗಳು ಅಷ್ಟಾಗಿ ಕಂಡುಬಾರದು. ಕೊನೆಯ ಹಂತ ಎಂದರೆ, ಈ ವಯೋಮಾನದವರು ಆಸ್ಪತ್ರೆಗೆ ಬರುವಾಗ ತೀವ್ರ ಎದೆನೋವು, ಪಾರ್ಶವಾಯು, ಬ್ರೇನ್ ಹ್ಯಾಮರೇಜ್​ನಿಂದ ಪ್ರಜ್ಞೆ ಕಳೆದುಕೊಂಡೇ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ವಿಶೇಷವಾಗಿ ದುಡಿಯುವ ವರ್ಗದಲ್ಲಿ ಇದು ಹೆಚ್ಚಿಗೆ ಕಂಡುಬರುತ್ತಿದೆ.

ಇದನ್ನೂ ಓದಿ

‘ಕಚೇರಿಗಳಲ್ಲಿ ಗುಂಪು ಚಟುವಟಿಕೆ, ಪ್ರಕೃತಿ ಶಿಬಿರ, ಯೋಗ ಕಾರ್ಯಾಗಾರದಂಥ ಚಟುವಟಿಕೆಗಳಲ್ಲಿ ಉದ್ಯೋಗಿಗಳನ್ನು ಕಡ್ಡಾಯವಾಗಿ ಒಳಪಡಿಸಬೇಕು. ಯಾರಿಂದಲೂ ಎಂಟುಗಂಟೆಗಳ ಅವಧಿಯ ನಂತರ ಕೆಲಸದಲ್ಲಿ ತೊಡಗಿಸಿಕೊಳ್ಳಬಾರದು. ಮೆದುಳಿಗೂ ದೇಹಕ್ಕೂ ಮನಸಿಗೂ ವಿಶ್ರಾಂತಿ ಅಗತ್ಯ. ಅದಕ್ಕಾಗಿ ಒಳ್ಳೆಯ ಒತ್ತಡ ಯಾವುದು, ಕೆಟ್ಟ ಒತ್ತಡ ಯಾವುದು ಎಂಬುದನ್ನು ನಾವು ನಮ್ಮಷ್ಟಕ್ಕೆ ನಾವು ಗುರುತಿಸಿಕೊಳ್ಳುವುದನ್ನು ಕಲಿಯಬೇಕು. ಯಾವ ಕೆಲಸವನ್ನೂ ಒತ್ತಡವಿಲ್ಲದೆ ಪೂರ್ಣಪ್ರಮಾಣದಲ್ಲಿ ಫಲ ನಿರೀಕ್ಷಿಸಲಾಗದು. ಆದರೆ ಆ ಅವಧಿಯಲ್ಲಿ ಉಂಟಾಗುವ ಒತ್ತಡ ಆ ಕ್ಷಣಕ್ಕಷ್ಟೇ ಸೀಮಿತವಾಗಿದ್ದರೆ ಅದು ‘ಒಳ್ಳೆಯ ಒತ್ತಡ-Good Stress. ಅಕಸ್ಮಾತ್ ಆ ಒತ್ತಡ ಕೆಲಸದ ಅವಧಿ ಮುಗಿದ ನಂತರವೂ ಮುಂದುವರಿದರೆ, ಅದು ‘ಕೆಟ್ಟ ಒತ್ತಡ-Bad Stress. ಆದ್ದರಿಂದ ಕಚೇರಿಯ ಕೆಲಸದ ನಂತರ ಸಂತೋಷ ಮತ್ತು ಆಹ್ಲಾದ ನೀಡುವ ಯಾವುದೇ ಮಾನಸಿಕ ಮತ್ತು ದೈಹಿಕ ಚಟುವಟಿಕೆಗಳಲ್ಲಿ ತೊಡಗಿದಾಗ ನಮ್ಮ ದೇಹದಲ್ಲಿ ಎಂಡಾರ್ಫಿನ್ಸ್ ಗ್ರಂಥಿಗಳು ಬಿಡುಗಡೆಗೊಳ್ಳುತ್ತವೆ. ಹಾಗಾಗಿ ಕೆಲಸ ಮಾಡುವಾಗ momentary stress ಇದ್ದರೆ ಅದು ಒಳ್ಳೆಯದು. ಆ್ಯಡ್ರಿನಲ್ ಗ್ರಂಥಿಗಳ ಸ್ರವಿಕೆ ನಮ್ಮನ್ನು ಉತ್ಸಾಹದಲ್ಲಿಡುತ್ತದೆ’ ಎನ್ನುತ್ತಾರೆ.

ಕೆಲಸ ಮುಗಿದ ನಂತರವೂ ಉಂಟಾದ ಕೆಟ್ಟ ಒತ್ತಡದಿಂದಲೇ ನಿತ್ಯಚಟುವಟಿಕೆಗಳಲ್ಲಿ ಏರುಪೇರಾಗುತ್ತದೆ. ನಿದ್ರಾಹೀನತೆ, ಕೌಟುಂಬಿಕ ಮನಸ್ತಾಪ, ಚಟಗಳಿಗೆ ಅಧೀನ, ವರ್ತನೆಯಲ್ಲಿ ಸಮಸ್ಯೆಗಳು ತಲೆದೋರುತ್ತವೆ. ಆದ್ದರಿಂದ ನಾವು ಮಾಡುವ ಕೆಲಸದ ಆಯ್ಕೆ ನಮ್ಮ ವ್ಯಕ್ತಿತ್ವಕ್ಕೆ ಸರಿಹೊಂದುತ್ತದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. ನಮ್ಮ ಆಸಕ್ತಿ, ಕೌಶಲಗಳನ್ನು ಗುರುತಿಸಿಕೊಂಡು ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಲು ಕಚೇರಿಯ ಮುಖ್ಯಸ್ಥರೊಂದಿಗೆ ಮಾತನಾಡಬೇಕು. ಕಚೇರಿಯ ಮುಖ್ಯಸ್ಥರು ಉದ್ಯೋಗಿಗಳೊಂದಿಗೆ ಆಪ್ತಸಂವಾದದಲ್ಲಿ ತೊಡಗಿಕೊಂಡು ವಾತಾವರಣವನ್ನು ಒತ್ತಡಮುಕ್ತವಾಗಿ ಇಡುವಲ್ಲಿ ರಚನಾತ್ಮಕವಾಗಿ ಯೋಚಿಸಿ ಕಾರ್ಯಪ್ರವೃತ್ತವಾಗಿರಬೇಕು. ಇದರಿಂದ ಒಟ್ಟಾರೆ ಪರಸ್ಪರ ಕಾರ್ಯಕ್ಷಮತೆಯೂ ಹೆಚ್ಚುತ್ತದೆ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada