World Sparrow Day 2021: ಅಮ್ಮ ಒಣಗಿಸಲಿಡುತ್ತಿದ್ದ ಧಾನ್ಯಗಳಿಗೆ ನಾನೇ ಕಾವಲುಗಾರ! ಗುಬ್ಬಚ್ಚಿಗಳು ಅದೆಷ್ಟು ಶಪಿಸುತ್ತಿದ್ದವೋ ನನ್ನ!!

|

Updated on: Mar 20, 2023 | 1:50 PM

world sparrow day 2021: ಅಮ್ಮನ ಕಣ್ತಪ್ಪಿಸಿ ಗೆಳೆಯರೊಂದಿಗೆ ಆಡಲು ಹೋಗುತ್ತಿದೆ. ಆಟವೆಲ್ಲಾ ಮುಗಿದ ಬಳಿಕ ಮನೆಗೆ ವಾಪಾಸ್ಸಾಗುತ್ತಿದ್ದ ನನಗೆ ಗುಬ್ಬಚ್ಚಿಗಳು ಒಳ್ಳೆಯ ಬಹುಮಾನವನ್ನೇ ಉಳಿಸಿ ಹೋಗಿರುತ್ತಿದ್ದವು.

World Sparrow Day 2021: ಅಮ್ಮ ಒಣಗಿಸಲಿಡುತ್ತಿದ್ದ ಧಾನ್ಯಗಳಿಗೆ ನಾನೇ ಕಾವಲುಗಾರ! ಗುಬ್ಬಚ್ಚಿಗಳು ಅದೆಷ್ಟು ಶಪಿಸುತ್ತಿದ್ದವೋ ನನ್ನ!!
ವಿಶ್ವ ಗುಬ್ಬಚ್ಚಿ ದಿನ
Follow us on

ಇಂದು ವಿಶ್ವ ಗುಬ್ಬಚ್ಚಿ ದಿನ.. ಕಣ್ಮರೆಯಾಗುತ್ತಿರುವ ಈ ಗುಬ್ಬಚ್ಚಿಗಳನ್ನು ರಕ್ಷಣೆ ಮಾಡುವ ಸಲುವಾಗಿ ಪ್ರತಿ ವರ್ಷ ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ವಿಶ್ವ ಗುಬ್ಬಚ್ಚಿ ದಿನವು ಭಾರತದ ನೇಚರ್ ಫಾರೆವರ್ ಸೊಸೈಟಿ ಇಕೋ-ಸಿಸ್ ಆಕ್ಷನ್ ಫೌಂಡೇಶನ್ (ಫ್ರಾನ್ಸ್) ಮತ್ತು ಪ್ರಪಂಚದಾದ್ಯಂತದ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಸಹಯೋಗದೊಂದಿಗೆ ಪ್ರತಿವರ್ಷ ಮಾರ್ಚ್ 20ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತದೆ. 2010ರಿಂದ ವಿಶ್ವದ ವಿವಿಧ ದೇಶಗಳಲ್ಲಿ ಈ ಆಚರಣೆ ಪ್ರಾರಂಭವಾಯಿತು. ಪ್ರಕೃತಿ ಸಂರಕ್ಷಣೆಯ ಅಂತರರಾಷ್ಟ್ರೀಯ ಸಂಘಟನೆಯ (ಐಯುಸಿಎನ್) ವರದಿಯ ಪ್ರಕಾರ, 25 ವರ್ಷಗಳಲ್ಲಿ ಗುಬ್ಬಿಗಳ ಸಂತತಿಯು ಶೇ.71ರಷ್ಟು ಕುಸಿದಿದೆ.

ಗುಬ್ಬಚ್ಚಿಗಳೊಂದಿಗೆ ನನ್ನ ಬಾಲ್ಯದ ಒಡನಾಟ..

ಚಿಕ್ಕಂದಿನಲ್ಲಿ ಬೆಳಗಾಗುವುದರೊಳಗೆ ನನ್ನಿಂದ ಸಾವಿರ ಬಾರಿ ಶಪಿಸಿಕೊಳ್ಳುತ್ತಿದ್ದವರ ಸಾಲಿನಲ್ಲಿ ಈ ಗುಬ್ಬಚ್ಚಿಗಳು ಮೊದಲಿನವುಗಳಾಗಿರುತ್ತಿದ್ದವು. ಸೂರ್ಯ ಉದಯಿಸುವುದರೊಳಗೆ ತಮ್ಮ ಪಟಾಲಂ ಕಟ್ಟಿಕೊಂಡು ಚೀರಲು ಪ್ರಾರಂಭಿಸುತ್ತಿದ್ದ ಗುಬ್ಬಚ್ಚಿಗಳಿಗೆ ನಾನು ಮಲಗಿರುವುದು ಅರಿವಾಗುವುದಾದರು ಹೇಗೆ. ಅದರಲ್ಲೂ ರಜಾ ದಿನಗಳಲ್ಲಂತೂ ಬೆಳಿಗ್ಗೆ 10 ಗಂಟೆವರೆಗೆ ಮಲಗಬೇಕೆಂಬ ನನ್ನ ಹೆಬ್ಬಯಕೆಗೆ ಬೆಂಕಿಯಿಡುತ್ತಿದ್ದ ಗುಬ್ಬಚ್ಚಿಗಳನ್ನ ನಾನು ಅದೆಷ್ಟೂ ನಿಂದಿಸಿದ್ದೇನೊ ಆ ದೇವರೆ ಬಲ್ಲ. ಒಂದು ವೇಳೆ ಈ ಗುಬ್ಬಿಗಳಿಗೆ ಏನಾದರೂ ಮನುಷ್ಯನ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಸಾಮಥ್ರ್ಯವಿದಿದ್ದರೆ ಬಹುಶಃ ಅವುಗಳು ನನ್ನ ಮೇಲೆ ಯುದ್ಧವನ್ನೇ ಸಾರಿಬಿಡುತ್ತಿದ್ದವು. ಅಲ್ಲದೆ ರಜಾ ದಿನ ಗೆಳೆಯರೊಟ್ಟಿಗೆ ಸೇರಿ ಆಟ ಆಡಬೇಕೆಂಬ ನನ್ನ ಆಸೆಗೆ ಈ ಗುಬ್ಬಿಗಳೇ ವಿಲನ್​ ಆಗಿಬಿಡುತ್ತಿದ್ದವು.

ನಾನು ಕಾವಲಿದ್ದ ಆಸ್ಥಾನದ ಮೇಲೆ ದಾಳಿ ಇಡುತ್ತಿದ್ದವು..

ಮನೆಯಲ್ಲಿ ಬೆಳೆದಿದ್ದ ದವಸ ಧಾನ್ಯಗಳನ್ನು ಮನೆಯ ಅಂಗಳದಲ್ಲಿ ಒಣಗಲು ಇಡುತ್ತಿದ್ದ ಅಮ್ಮ, ಗುಬ್ಬಚ್ಚಿಗಳಿಂದ ಕಾಳುಗಳನ್ನು ರಕ್ಷಿಸಿಕೊಳ್ಳಲು ನನ್ನನ್ನು ಕಾವಲಿಗಿಡುತ್ತಿದ್ದರು. ನನ್ನ ಆಟಕ್ಕೆ ಬ್ರೇಕ್ ಹಾಕುತ್ತಿದ್ದ ಗುಬ್ಬಿಗಳನ್ನ ಕಂಡೊಡನೆ ನನ್ನಲ್ಲಿರುವ ಅಷ್ಟು ಶಕ್ತಿಯನ್ನು ಒಟ್ಟುಗೂಡಿಸಿ ಅವುಗಳತ್ತಾ ಕಲ್ಲು ಬೀರುತ್ತಿದೆ. ನನ್ನ ಆಕ್ರೋಶವನ್ನು ಗಣನೆಗೆ ತೆಗೆದುಕೊಳ್ಳದ ಈ ಗುಬ್ಬಿಗಳು ನನ್ನ ಗುರಿಯಿಂದ ಆರಾಮವಾಗಿ ತಪ್ಪಿಸಿಕೊಂಡು, ಸ್ವಲ್ಪ ಹೊತ್ತು ತಲೆಮರಿಸಿಕೊಂಡು ಮತ್ತೆ ನಾನು ಕಾವಲಿದ್ದ ಆಸ್ಥಾನದ ಮೇಲೆ ದಾಳಿ ಇಡುತ್ತಿದ್ದವು. ಕಾಯುವಷ್ಟು ಸಮಯ ಕಾದು, ಗುಬ್ಬಿಗಳೆದುರಿನ ಯುದ್ಧದಲ್ಲಿ ನಾನೇ ಸೋಲೊಪ್ಪಿಕೊಂಡು, ಅಮ್ಮನ ಕಣ್ತಪ್ಪಿಸಿ ಗೆಳೆಯರೊಂದಿಗೆ ಆಡಲು ಹೋಗುತ್ತಿದೆ. ಆಟವೆಲ್ಲಾ ಮುಗಿದ ಬಳಿಕ ಮನೆಗೆ ವಾಪಾಸ್ಸಾಗುತ್ತಿದ್ದ ನನಗೆ ಗುಬ್ಬಚ್ಚಿಗಳು ಒಳ್ಳೆಯ ಬಹುಮಾನವನ್ನೇ ಉಳಿಸಿ ಹೋಗಿರುತ್ತಿದ್ದವು. ಹೀಗೆ ನನ್ನ ಬಾಲ್ಯದಲ್ಲಿ ನನ್ನನ್ನ ಇನ್ನಿಲ್ಲದಂತೆ ಕಾಡಿದ ಗುಬ್ಬಚ್ಚಿಗಳು ಕಣ್ಮರೆಯಾಗುತ್ತಿರುವುದು ನಾವು ಪಕ್ಷಿ ಸಂಕುಲಕ್ಕೆ ಮಾಡಿದ ಅನ್ಯಾಯ ಎನ್ನುವುದಕ್ಕಿಂತ. ಬರುವ ಪೀಳಿಗೆಗೆ ನಾವೆಸಗಿದ ದ್ರೋಹ ಎಂಬುದು ನನ್ನ ವಾದವಾಗಿದೆ.

ಮನುಷ್ಯನಿಗೂ ಜೀವನ ಪಾಠವನ್ನು ಕಲಿಸುವಂತಿದೆ..

ಮನುಷ್ಯನ ಬದುಕಿನೊಂದಿಗೆ ತೀರ ಹತ್ತಿರದ ಅವಿನಾಭಾವ ಸಂಬಂಧ ಇಟ್ಟುಕೊಂಡಿರುವ ಜೀವಿಗಳಲ್ಲಿ ಗುಬ್ಬಚ್ಚಿಗಳಿಗೂ ಪ್ರಮುಖ ಸ್ಥಾನವಿದೆ. ದವಸ, ಧಾನ್ಯ, ಚಿಕ್ಕ ಚಿಕ್ಕ ಕೀಟಗಳನ್ನು ಹಿಡಿದು ತಿನ್ನುವ ಈ ಗುಬ್ಬಿಗಳಿಗೆ ಮನುಷ್ಯ ಬೆಳೆಯುವ ಬೆಳೆಯೇ ಆಹಾರದ ಪ್ರಮುಖ ಮೂಲವಾಗಿದೆ. ಮುಷ್ಟಿಯಲ್ಲಿಡುವಷ್ಟು ಗಾತ್ರದ ಈ ಗುಬ್ಬಚ್ಚಿಗಳು ತನ್ನ ಸಂಸಾರವನ್ನು ಜತನದಿಂದ ಕಾಯುತ್ತಿರುವುದು ಮನುಷ್ಯನಿಗೂ ಜೀವನ ಪಾಠವನ್ನು ಕಲಿಸುವಂತಿದೆ. ಕಾಂಕ್ರಿಟ್​ ಕಾಡುಗಳ ಹಾವಳಿಯಿಂದಾಗಿ ನಗರಗಳಲ್ಲಿ ಇವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಆದರೆ ಅಲ್ಲೊಂದು ಇಲ್ಲೊಂದು ಕಾಣುವ ಮರಗಳ ಮೇಲೆ ಕುಳಿತು ನಮ್ಮತ್ತ ಅವುಗಳು ಬೀರುವ ನಿಸ್ಸಹಾಯಕ ಮುಗ್ಧ ನೋಟ, ನಮ್ಮಗಳ ವಿನಾಶಕ್ಕೆ ಅವುಗಳು ನೀಡುತ್ತಿರುವ ಮುನ್ಸೂಚನೆಯೆಂದು ನನಗೆ ಬಾಸವಾಗುತ್ತದೆ.

ಗುಬ್ಬಿಗಳ ಕಣ್ಮರೆಗೆ ಕಾರಣವೆನಿರಬಹುದು..

ಗುಬ್ಬಿಗಳು ಮಾನವರ ನಿಕಟ ಸಂಬಂಧಿ. ಅವುಗಳಿಗೆ ಉಳಿದ ಪಕ್ಕಿಗಳಂತೆ ಸುರಕ್ಷಿತವಾಗಿ ಹಾಗೂ ಯಾವುದೇ ಅಪಾಯ ಬರದಂತೆ ಗೂಡು ಕಟ್ಟಿಕೊಳ್ಳುವ ಕರಕುಶಲತೆ ಅಷ್ಟಾಗಿ ದೊರೆತಿಲ್ಲ. ಒಂದು ಕಾಲದಲ್ಲಿ ಪಟ್ಟಣಗಳಲ್ಲಿ ಮಾತ್ರ ಕಾಂಕ್ರೀಟ್ ಕಟ್ಟಡಗಳ ನಿರ್ಮಾಣ ಸಾಮಾನ್ಯವಾಗಿತ್ತು. ಆದರೆ, ಇತ್ತೀಚೆಗೆ ಹಳ್ಳಿಗಳು ಸಹ ಪಟ್ಟಣ್ಣದ ಬಿನ್ನಾಣಕ್ಕೆ ಮಾರುಹೋಗಿದ್ದು, ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಮನೆಗಳ ಮಾದರಿಯಲ್ಲಿ ಮನೆಗಳನ್ನ ಕಟ್ಟಿಕೊಳ್ಳುತ್ತಿರುವುದು ಗುಬ್ಬಿಗಳ ನಾಶಕ್ಕೆ ಮೊದಲ ಕಾರಣವಾಗುತ್ತಿದೆ.

ಗುಬ್ಬಿಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು..

ಹಿಂದೆ ರೈತ ತಾನು ಬೆಳೆದ ಪಸಲನ್ನ ಹೊಲದಲ್ಲಿಯೇ ಒಕ್ಕಣೆ ಮಾಡಿ, ಅದರಲ್ಲಿನ ಕಸಕಡ್ಡಿಗಳನ್ನ ಬೇರ್ಪಡಿಸುತ್ತಿದ್ದ. ಈ ವೇಳೆ ರೈತನೊಂದಿಗೆ ಮೈ ಬಗ್ಗಿಸಿ ಕೆಲಸ ಮಾಡುವಂತೆ ವರ್ತಿಸುತ್ತಿದ್ದ ಗುಬ್ಬಿಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ರೈತ, ಸಾಂಪ್ರದಾಯಕ ಪದ್ಧತಿಗೆ ತೀಲಾಂಜಲಿ ಇಟ್ಟು ಯಂತ್ರಗಳ ಮೊರೆ ಹೋಗುತ್ತಿದ್ದಾನೆ. ಯಂತ್ರದ ಸಹಾಯದಿಂದ ಪೈರಿನಲ್ಲಿರುವ ಕಸಕಡ್ಡಿಗಳನ್ನು ಬೇರ್ಪಡಿಸಿ, ಪೈರು ಒಂದಿಷ್ಟು ಭೂಮಿಗೆ ಚೆಲ್ಲದಂತೆ ಚೀಲಗಳಿಗೆ ತುಂಬಿಸಿಕೊಂಡು ಸಂರಕ್ಷಿಸಲಾಗುತ್ತಿದೆ. ಇದರಿಂದ ಕೇವಲ ಗುಬ್ಬಚ್ಚಿಗಳಿಗೆ ಮಾತ್ರವಲ್ಲ, ಉಳಿದ ಪಕ್ಷಿಗಳಿಗೂ ಆಹಾರ ಸಿಗದಂತ್ತಾಗಿದೆ.

ಕೀಟ ನಾಶಕಗಳ ಬಳಕೆ..

ಇತ್ತೀಚಿನ ದಿನಗಳಲ್ಲಿ ಬೆಳೆಗಳಿಗೆ ಹೊಸ ಹೊಸ ರೋಗಗಳು ದಾಳಿಯಿಡುತ್ತಿವೆ ಇದರಿಂದ ರೋಸಿ ಹೋಗಿರುವ ರೈತ ಬದುಕಿಗೆ ಹಾನಿಕಾರಕವಾದ ಕೀಟ ನಾಶಕಗಳ ಮೊರೆ ಹೋಗಿದ್ದಾನೆ. ಇದರಿಂದ ಆ ಆಹಾರವನ್ನು ಸೇವಿಸುವ ನಮಗೂ ಅಪಾಯ ಎದುರಾಗುವುದಲ್ಲದೇ, ಕೀಟನಾಶಕ ಸಿಂಪಡಣೆಯಿಂದ ಪಕ್ಷಿಗಳಿಗೂ ಸರಿಯಾದ ಆಹಾರ ಸಿಗುತ್ತಿಲ್ಲ. ಕೀಟ ನಾಶಕ ಮಿಶ್ರಿತ ಪಸಲನ್ನ ಸೇವಿಸುವ ಪಕ್ಷಿಗಳು ಬೇಗನೇ ಸಾವಿಗಿಡಾಗುತ್ತಿರುವುದು ಇವುಗಳ ನಾಶಕ್ಕೆ ಪ್ರಮುಖ ಕಾರಣವಾಗಿದೆ. ಅಲ್ಲದೆ ಬದಲಾದ ಆಧುನಿಕ ಜೀವನ ಶೈಲಿಯಿಂದಲೂ, ಸೀಸ ಮಿಶ್ರಿತ ಪೆಟ್ರೋಲ್ ಬಳಕೆ, ಮೊಬೈಲ್ ಟವರ್​ಗಳಿಂದ ಹೊರಸೂಸುವ ವಿದ್ಯುತ್ ಕಾಂತೀಯ ಸೂಕ್ಷ್ಮ ತರಂಗಗಳಿಂದ ಮೊಟ್ಟೆಯಿಂದ ಮರಿಯಾಗುವ ಪ್ರಕ್ರಿಯೆಗೆ ತೊಂದರೆ, ಮಿತಿಮೀರಿದ ಶಬ್ದಮಾಲಿನ್ಯದಿಂದಾಗಿ ಸಹ ಗುಬ್ಬಿಗಳ ಸಂಖ್ಯೆ ಕ್ಷೀಣಿಸಲು ಕಾರಣವೆನ್ನಬಹುದು.

ನಮ್ಮ ಕೈನಲ್ಲಿದೆ ಗುಬ್ಬಚ್ಚಿಗಳ ಉಳಿವು- ಅಳಿವು..

ಗುಬ್ಬಿಗಳ ಸಂತತಿಯನ್ನು ಸಂರಕ್ಷಿಸುವ ಜವಾಬ್ದಾರಿ ಈಗ ಬುದ್ದಿ ಜೀವಿಗಳಾದ ನಮ್ಮ ಮೇಲಿದೆ. ಗುಬ್ಬಚ್ಚಿಗಳು ವಾಸಿಸಲು ಅನುಕೂಲವಾಗುವಂತೆ ಮನೆಯ ಸುತ್ತಮುತ್ತ ಮರಗಳನ್ನು ಬೆಳೆಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಬೆಳೆದಿರುವ ಗಿಡಗಳ ರೆಂಬೆಗಳಿಗೆ ನೀರು ತುಂಬಿದ ಮಡಿಕೆಗಳನ್ನು ನೇತು ಹಾಕುವುದು, ತಾರಸಿಗಳ ಮೇಲೆ ನೀರು ತುಂಬಿದ ಮಡಿಕೆಗಳನ್ನು ಇಡುವ ಮೂಲಕ ಬೇಸಿಗೆಯಲ್ಲಿ ಅವುಗಳಿಗೆ ದಣಿವಾರಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು. ಮೊಬೈಲ್​ ಟವರ್​​ಗಳ ತರಂಗಾಂತರಗಳಿಂದ ಗುಬ್ಬಿ ಸಂತಾನೋತ್ಪತ್ತಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಸರ್ಕಾರ ಈ ಬಗ್ಗೆ ಕೂಡಲೇ ಸೂಕ್ತ ಪರಿಹಾರಗಳನ್ನು ಕೈಗೊಳ್ಳಬೇಕಿದೆ. ಪ್ರತಿ ವನ್ಯಜೀವಿಗಳು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಮಳೆ ತರುವಲ್ಲಿ ಹಾಗೂ ಮಳೆ ನೀರು ಇಂಗಿಸಲು ಅರಣ್ಯಗಳು ಬಹುಮುಖ್ಯ. ಅರಣ್ಯ ವೃದ್ಧಿಯಲ್ಲಿ ಪಕ್ಷಿ ಸಂಕುಲ ಪ್ರಮುಖ ಪಾತ್ರ ವಹಿಸುತ್ತವೆ.

Published On - 3:04 pm, Sat, 20 March 21