ವರ್ಷಾಂತ್ಯ ವಿಶೇಷ 2020: ’ಓದಿನಂಗಳ‘ದಲ್ಲಿ ಅನುವಾದಕಿ ಪ್ರೊ. ಕೃಷ್ಣಾ ಮನವಳ್ಳಿ
'ಈ ಕಾದಂಬರಿಯು ಲೇಖಕಿಯ ವೈಯಕ್ತಿಕ ಬದುಕಿನ ಅನುಭವಗಳಿಂದ ಪ್ರೇರಿತವಾದದ್ದು. ಕೌಟುಂಬಿಕ ದೌರ್ಜನ್ಯದ ಭೀಕರ ಮತ್ತು ವಿವಿಧ ಸ್ಥರಗಳನ್ನು ತೆರೆದಿಡುತ್ತದೆ. ಒಟ್ಟಾರೆಯಾಗಿ ಮನಸ್ಸನ್ನು ಕಲಕುವ ಸಾಕಷ್ಟು ಘಟನೆಗಳು ಓದುಗರನ್ನು ಉದ್ವೇಗಕ್ಕೆ ಒಳಪಡಿಸುತ್ತವೆ.' ಪ್ರೊ. ಕೃಷ್ಣಾ ಮನವಳ್ಳಿ.

ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?
‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಅನುವಾದಕರು, ಕವಿಗಳು, ವಿವಿಧ ಕ್ಷೇತ್ರದ ಲೇಖಕರು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಅನುವಾದಕರಾದ ಪ್ರೊ. ಕೃಷ್ಣಾ ಮನವಳ್ಳಿ ಅವರ ಆಯ್ಕೆಗಳು ಇಲ್ಲಿವೆ.
ಕೃ: When You Hit Me ಲೇ: Meena Kandasamy ಪ್ರ: Europa Editions
ಕಂದಸಾಮಿಯವರ ಈ ಕೃತಿಯಲ್ಲಿ, ದೈಹಿಕ ಅತಿಕ್ರಮಣ, ಅತ್ಯಾಚಾರದ ಜೊತೆಗೆ ಒಬ್ಬ ಗಂಡ ತನ್ನ ಹೆಂಡತಿಯ ಬರವಣಿಗೆಯನ್ನು ಹತ್ತಿಕ್ಕಲು ಮಾಡುವ ಎಲ್ಲಾ ಪ್ರಯತ್ನಗಳ ಕ್ರೂರ ಹಾಗೂ ದಾರುಣ ಚಿತ್ರಣವಿದೆ. ಈ ಕಾದಂಬರಿ ಲೇಖಕಿಯ ವೈಯಕ್ತಿಕ ಬದುಕಿನ ಅನುಭವಗಳಿಂದ ಪ್ರೇರಿತವಾಗಿದ್ದು, ಕೌಟುಂಬಿಕ ದೌರ್ಜನ್ಯದ ಭೀಕರ ಹಾಗೂ ವಿವಿಧ ಸ್ಥರಗಳನ್ನು ತೆರೆದಿಡುತ್ತದೆ. ಮನಸ್ಸನ್ನು ಕಲಕುವ ಘಟನೆಗಳು ಓದುಗರನ್ನು ಉದ್ವೇಗಕ್ಕೆ ಒಳಪಡಿಸುತ್ತವೆ. ಇದು ಹರಿತವಾದ ಬರವಣಿಗೆಯೊಂದಿಗೆ ಸಾಗುವುದಲ್ಲದೆ ಓದಿನ ಗಾಢ ಅನುಭವವನ್ನೂ ನೀಡುತ್ತದೆ.
ಕೃ: The Girl Who Couldn’t Love ಲೇ: Shinie Antony ಪ್ರ: Speaking Tiger Books
ವಿಭಿನ್ನ ಮಾದರಿಯಲ್ಲಿ ಹೆಣೆದ ಈ ಕಾದಂಬರಿ ಒಂದೇ ಗುಕ್ಕಿಕೆ ಮುಗಿಯುತ್ತದೆ. ಮಧ್ಯಮ ವರ್ಗದ ಕುಟುಂಬದ ಒಳಗುಟ್ಟುಗಳು, ರಹಸ್ಯಗಳು ಹೊರಬೀಳುತ್ತಾ ಹೋದಂತೆ, ಕಾದಂಬರಿಯ ಕೇಂದ್ರಬಿಂದುವಾದ ಶಾಲಾ ಟೀಚರ್ನ ವ್ಯಕ್ತಿತ್ವ ಆಘಾತ ನೀಡುವ ರೀತಿಯಲ್ಲಿ ಬದಲಾಗುತ್ತಾ ಹೋಗುತ್ತದೆ ಈ ಕಥೆಯಲ್ಲಿ. ತನಗಿಂತ ಕಿರಿಯ ಯುವಕನೊಡನೆ ವಿಚಿತ್ರ ಸಂಬಂಧ ಬೆಳೆಸುವ ಈ ಹೆಣ್ಣಿನ ಮಾನಸಿಕ ತುಮುಲಗಳು, ಚಿಕ್ಕಂದಿನಲ್ಲಿ ಅನುಭವಿಸಿದ ನೋವು, ಏಕಾಂಗಿತನಗಳು ಅವಳಲ್ಲಿನ ಸುಪ್ತ ಕ್ರೌರ್ಯವನ್ನು ಹೊರತರುವ ರೀತಿ, ಬೆಚ್ಚಿ ಬೀಳಿಸುವ ಘಟನೆಗಳ ಸರಣಿ… ಇವೆಲ್ಲಾ ಈ ಕಾದಂಬರಿಯ ಅತ್ಯಂತ ವಿಶಿಷ್ಟ ಅಂಶಗಳು.
Published On - 3:12 pm, Wed, 30 December 20




