ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಕವಿ ನದೀಮ ಸನದಿ

|

Updated on: Dec 30, 2020 | 10:52 AM

'ನಾನು ಜಗದ್ಗುರು ಉಪಾಧಿಯನ್ನಿನ್ನು ಬಳಸುವುದಿಲ್ಲ, ಲಿಂಗಾಯತ ಮಠಗಳಿಗೆ ಜಂಗಮರೇ ಜಗದ್ಗುರುಗಳಾಗಬೇಕಿಲ್ಲ, ಅರ್ಹತೆ ಇದ್ದರೆ ಸಾಕು ಎಂಬಂತಹ ತಮ್ಮ ಅನಿಸಿಕೆಗಳನ್ನು ತರ್ಕಬದ್ಧವಾಗಿ ಮಂಡಿಸಿ ಯಾವ ಅಂಜಿಕೆ ಮುಲಾಜುಗಳಿಲ್ಲದೆ ಸ್ಪಷ್ಟ ನಿಲುವು ತಳೆಯುತ್ತಿದ್ದ ತೋಂಟದ ಜಗದ್ಗುರುಗಳೊಂದಿಗೆ ಚರ್ಚಿಸಿ ಬರೆದ ಲೇಖನಗಳು ಇಲ್ಲಿವೆ.‘ ಎನ್ನುತ್ತಾರೆ ಕವಿ ನದೀಮ್ ಸನದಿ.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಕವಿ ನದೀಮ ಸನದಿ
ಕವಿ ನದೀಮ್ ಸನದಿ
Follow us on

ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?

‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಲೇಖಕರು, ಕವಿಗಳು, ಕಲಾವಿದರು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಕವಿ ನದೀಮ ಸನದಿ ಅವರ ಆಯ್ಕೆಗಳು ಇಲ್ಲಿವೆ.

ಕೃ: ಚಿಕ್ಕಿ‌ ತೋರಸ್ತಾವ ಚಾಚಿ ಬೆರಳ (ಕವಿತೆಗಳ ಅನುವಾದ) 
ಕನ್ನಡಕ್ಕೆ – ಚಿದಂಬರ‌ ನರೇಂದ್ರ 
ಪ್ರ: ಸಂಕಥನ

ಕನ್ನಡಕ್ಕೆ ಅನುವಾಗಳು ಹೊಸದೇನಲ್ಲ. ಆದರೆ  ಅನುವಾದ ಅನುವಾದಕ್ಕಷ್ಟೇ ಸೀಮಿತವಾಗದೆ ನಮ್ಮ ಸ್ವಂತದೇ ಎನ್ನುವಷ್ಟು ಆಪ್ತವಾಗಿ ಮೂಡಿಬಂದರೆ ಆ ಭಾಷಾಂತರ ಓದುಗರ ಮನಸ್ಸನ್ನು ಸೂರೆಗೊಳ್ಳುತ್ತದೆ. ಕನ್ನಡದ ಇತ್ತೀಚಿನ ಅಂತಹ‌ ಸಫಲ ಅನುವಾದಗಳಲ್ಲಿ ಚಿದಂಬರ‌ ನರೇಂದ್ರರ ‘ಚಿಕ್ಕಿ‌ ತೋರಸ್ತಾವ ಚಾಚಿ‌ ಬೆರಳ’ ಕೂಡ ಒಂದು.

ಇಲ್ಲಿ ರೂಮಿ ಇದ್ದಾರೆ, ಗಿಬ್ರಾನ್‌ ಇದ್ದಾರೆ, ನೆರೂಡ, ಬ್ರೆಕ್ಟ್, ಬುಕೋವ್ ಸ್ಕಿ ಇದ್ದಾರೆ. ಟ್ಯಾಗೋರ್, ಗುಲ್ಜಾರ್, ಕೈಫಿ ಆಜ್ಮಿ, ಜಾವೇದ್ ಅಖ್ತರ್ ಇದ್ದಾರೆ. ಕಮಲಾ‌ ದಾಸ್, ಮೀನಾ ಕಂದಸ್ವಾಮಿ ಇದ್ದಾರೆ. ಇಲ್ಲಿರುವ ಎಲ್ಲ ಕವಿತೆಗಳು ವಿವಿಧ ಕಾಲಘಟ್ಟದಲ್ಲಿ ರಚಿತಗೊಂಡಿದ್ದರೂ ಇಂದಿಗೂ‌ ಪ್ರಸ್ತುತವೆನಿಸುವಂತಿವೆ. ಇದೇ ಕಾವ್ಯದ ಸಫಲತೆ‌‌ ಕೂಡ. ಈ ನಿಟ್ಟಿನಲ್ಲಿ ಕವಿಯು ಅನುವಾದಕ್ಕಾಗಿ ಆರಿಸಿಕೊಂಡಿರುವ ಕವಿತೆಗಳು ಅತ್ಯಂತ‌ ಸೂಕ್ತವಾಗಿವೆ ಹಾಗೂ ಓದುಗರನ್ನು ಒಂದೇ‌ ಉಸಿರಿಗೆ ಓದಿಸಿಕೊಳ್ಳುವ ಗುಣವನ್ನು ಹೊಂದಿವೆ.

ಜಗತ್ತಿನ‌‌ ಬೇರೆ ಬೇರೆ ಭಾಷೆಗಳ ಕವಿಗಳ ಕವಿತೆಗಳಿಗೆ ದೇಸಿ ಲಯ, ನುಡಿಗಟ್ಟು ಮತ್ತು ಉಪಮೇಯಗಳನ್ನು‌ ಬಳಸಿ ಆ ಕವಿತೆಗಳು ನಮ್ಮದೇ ಭಾಷೆಯ ಕವಿತೆಗಳು ಎನ್ನುವಷ್ಟು ಆಪ್ತವಾಗಿ ಚಿದಂಬರ‌ ನರೇಂದ್ರರು ಅನುವಾದಿಸಿದ್ದಾರೆ.

ಕೃ: ಬಂಡಾಯ ಜಗದ್ಗುರು ಜೊತೆಗೆ ಮಾತುಕತೆ
ಲೇ: ಸರಜೂ ಕಾಟ್ಕರ್
ಪ್ರ: ತೋಂಟದ ಸಿದ್ಧಲಿಂಗಸ್ವಾಮಿ ಸ್ವಾಮಿಗಳ ಸಾಹಿತ್ಯ ಪ್ರತಿಷ್ಠಾನ

ನಾನು ಜಗದ್ಗುರು ಉಪಾಧಿಯನ್ನಿನ್ನು ಬಳಸುವುದಿಲ್ಲ, ಲಿಂಗಾಯತ ಮಠಗಳಿಗೆ ಜಂಗಮರೇ ಜಗದ್ಗುರುಗಳಾಗಬೇಕಿಲ್ಲ, ಅರ್ಹತೆ ಇದ್ದರೆ ಸಾಕು ಎಂಬಂತಹ ತಮ್ಮ ಅನಿಸಿಕೆಗಳನ್ನು ತರ್ಕಬದ್ಧವಾಗಿ ಮಂಡಿಸಿ ಯಾವ ಅಂಜಿಕೆ ಮುಲಾಜುಗಳಿಲ್ಲದೆ ಸ್ಪಷ್ಟ ನಿಲುವು ತಳೆಯುತ್ತಿದ್ದ ತೋಂಟದ ಜಗದ್ಗುರುಗಳ ಕಾಯಕನಿಷ್ಠೆ, ಮಾನವಪ್ರೀತಿ, ಪುಸ್ತಕಪ್ರೀತಿ, ಆಧ್ಯಾತ್ಮದ ಹಸಿವು, ಅಭ್ಯಾಸದ ಒಲವುಗಳ ಕುರಿತು ವಿವಿಧ ಸಂದರ್ಭಗಳಲ್ಲಿ ನಡೆಸಿದ 17 ಸವಿಸ್ತಾರ ಚರ್ಚೆಗಳನ್ನು ಕವಿ‌ ಸರಜೂ ಕಾಟ್ಕರ್ ಅಕ್ಷರರೂಪಕ್ಕೆ ತಂದಿದ್ದಾರೆ. ಜಗದ್ಗುರುಗಳ ಜೊತೆಗಿನ ಅವರ ಒಡನಾಟದ ದಾಖಲೆಯಂತಿರುವ ಈ‌ ಸಂಕಲನ ಏಕಕಾಲಕ್ಕೆ ಸಾಹಿತ್ಯಿಕವೂ, ರಾಜಕೀಯವೂ, ಆಧ್ಯಾತ್ಮಿಕವೂ ಆಗಿ ಓದುಗರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.

ಸರಳವಾದ ಭಾಷೆಯಲ್ಲಿರುವ ಇಲ್ಲಿನ‌‌ ಬರೆಹಗಳು ಸಂದರ್ಶನಗಳಂತಿರದೆ ಇಬ್ಬರ ನಡುವೆ ನಡೆದ ಆಪ್ತ ಮಾತುಕತೆಗಳಂತಿವೆ. ಚರ್ಚೆಗಳನ್ನು ಓದುತ್ತಾ ಹೋದಂತೆ ತೋಂಟದ ಜಗದ್ಗುರುಗಳು ಎದುರೇ ಕೂತು ಮಾತಾಡಿದಂತೆ ಭಾಸವಾಗುತ್ತದೆ.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಲೇಖಕಿ ಡಾ. ದೀಪಾ ಫಡ್ಕೆ; ‘ಬಾಡಿಗೆ ಮನೆಗಳ ರಾಜಚರಿತ್ರೆ’ ಮತ್ತು ‘ಮಧ್ಯಘಟ್ಟ’

 

 

Published On - 5:03 pm, Tue, 29 December 20