ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?
‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿಯನ್ನು ಬರೆದುಕೊಟ್ಟಿದ್ದಾರೆ. ಕಥೆಗಾರ ಪ್ರಕಾಶ ನಾಯಕ ಅವರ ಆಯ್ಕೆಗಳು ಇಲ್ಲಿವೆ.
ಕೃ : ದಿ ಹಂಗ್ರಿ ಟೈಡ್
ಲೇ : ಅಮಿತಾವ್ ಘೋಷ್
ಪ್ರ : ಹಾರ್ಪರ್ ಕೊಲಿನ್ಸ್
ಇತಿಹಾಸ, ರಾಜಕೀಯ, ಜಾನಪದ, ಭೂಗೋಳಶಾಸ್ತ್ರ, ಜೀವಶಾಸ್ತ್ರ ಎಲ್ಲವನ್ನೂ ಮಾನವೀಯ ಸಂಬಂಧಗಳ ಜೊತೆಗಿಟ್ಟುನೋಡುವ ಕಾದಂಬರಿ, ನಿಸರ್ಗದ ವಿಕೋಪ ಜೊತೆಗೆ ಮಾನವನ ಸಾಹಸದ ಬದುಕನ್ನು ಚಿತ್ರಿಸಿದ ರೀತಿ ಮೆಚ್ಚುಗೆಯಾಯಿತು.
ಪಶ್ಚಿಮಬಂಗಾಲದಲ್ಲಿ 1978-79ರಲ್ಲಿ ನಡೆದ ಹೆಚ್ಚಾಗಿ ಕೇಳಿರದ ಮಾರಿಜಪಿ (Marichjhapi) ಹತ್ಯಾಕಾಂಡ, ಹಿಂದೂ-ಮುಸ್ಲಿಮ್ ಇಬ್ಬರಿಂದಲೂ ಪೂಜಿಸಲ್ಪಡುವ ಬೊನ್-ಬೀಬಿಯಾನೆ ವನದೇವಿಯ ದಂತಕತೆ ಕಾದಂಬರಿಯ ಆತ್ಮ. ಅತಿಮೌನಿ ಪೋಕೀರ್, ಭಾಷೆಯನ್ನೇ ಬಂಡವಾಳ ಮಾಡಿಕೊಂಡ ಕನಾಯ್ದತ್, ವಿನಾಶದ ಅಂಚಿನಲ್ಲಿರುವ Orcaella brevirostris ಡಾಲ್ಫಿನ್ ಹುಡುಕಲು ಬರುವ ಅಮೇರಿಕನ್ ಪಿಯಾಲಿರೊಯ್, ಜೀವನದ ವಾಸ್ತವದಲ್ಲಿ ಉಳಿದು ಜನಹಿತ ಸಾಧಿಸಬಯಸುವ ಮಾಶಿಮಾ, ಅವಳ ಕವಿಮನಸ್ಸಿನ ಕ್ರಾಂತಿಕಾರಿ ಮತ್ತು ಆದರ್ಶವಾದಿ ಗಂಡ. ವಿಭಿನ್ನ ಮತ್ತು ನೈಜ ಪಾತ್ರಗಳ ಸಾಲೇ ಈ ಕಾದಂಬರಿಯ ತುಂಬ ಇದೆ. ಮಾನವೀಯತೆ ಮತ್ತು ಪರಿಸರಗಳ, ಆದರ್ಶ ಮತ್ತು ವಾಸ್ತವಗಳ ನಡುವಿನ ತೊಳಲಾಟ ಕಾದಂಬರಿಯನ್ನು ಹಸಿರಾಗಿಸುತ್ತವೆ. ಬೆಂಗಾಲಿ ಹುಲಿ ಮತ್ತು ಮೊಸಳೆಗಳ ಜೊತೆಗೆ ಗುಟ್ಟು ಬಿಟ್ಟುಕೊಡದ ಸುಂದರಬನದ ನೈಸರ್ಗಿಕ ವಿಕೋಪದ ಚಿತ್ರಣ, ಇವೆಲ್ಲವುಗಳ ನಡುವೆ ಅರಳುವ, ಮುದುಡುವ ಮಾನವೀಯ ಸಂಬಂಧಗಳು ಈ ಕಾದಂಬರಿಯನ್ನು ಅಪರೂಪದ ಕಾದಂಬರಿಯನ್ನಾಗಿಸುತ್ತವೆ.
ಕೃತಿ : ತೇಜೋತುಂಗಭದ್ರ
ಲೇ : ವಸುಧೇಂದ್ರ
ಪ್ರ : ಛಂದ ಪ್ರಕಾಶನ
ಐತಿಹಾಸಿಕ ಕಾದಂಬರಿಗಳನ್ನು ಓದುವುದೆಂದರೆ ಟೈಮ್ ಟ್ರಾವೆಲ್ ಮಾಡಿದ ಹಾಗೆ. ಈಗಿನ ದೃಷ್ಟಿಕೋನದೊಡನೆ ಹಳೆಯ ಕಾಲದಲ್ಲಿ ಅಡ್ಡಾಡಿ ಬರುವ ಲಕ್ಷುರಿ. ಜನಸಾಮಾನ್ಯರ ಬದುಕನ್ನು ಹೆಚ್ಚಿನ ಅಜೆಂಡಾ ಇಲ್ಲದೆ ಪರಿಚಯಿಸುವ ಐತಿಹಾಸಿಕ ಕೃತಿಗಳು ಕನ್ನಡದಲ್ಲಿ ಅಷ್ಟಾಗಿ ಇಲ್ಲ. ಬಲವಂತದ ಮತಾಂತರಗಳು, ಆಚರಣೆಗಳು, ಆಳರಸರ ವೈಯಕ್ತಿಕ ತೆವಲಿಗೆ, ತಮ್ಮದೇ ಮಹತ್ವಾಕಾಂಕ್ಷೆಗೆ ತಲೆಯೊಡ್ಡುವ ವೀರರು, ಅವರ ಪ್ರೇಮಕತೆಗಳು ಅತಿವೈಭವೀಕರಣ-ತಿರಸ್ಕಾರಗಳ ಸೋಂಕಿಲ್ಲದೆ ಬಹು ಚೆನ್ನಾಗಿ ಚಿತ್ರಿತವಾಗಿವೆ. ಕೃಷ್ಣದೇವರಾಯ, ಪುರಂದರದಾಸರು ಹೆಚ್ಚಿನ ಆಡಂಬರವಿಲ್ಲದೆ ಬಹುಸಹಜವಾಗಿ ಬಂದು ಹೋಗುತ್ತಾರೆಯಾದರೂ, ಇದು ಆ ಯುಗಧರ್ಮದ ಜನಸಾಮಾನ್ಯರ ಜೀವನ ಪ್ರೇಮದಕಥೆ.
Published On - 6:31 pm, Mon, 28 December 20