Tv9 Facebook Live | ರೂಪಾ ಅವರದ್ದು ಹಸ್ತಕ್ಷೇಪ ಎಂದು ಹೇಳಲು ಸಾಧ್ಯವಿಲ್ಲ: ನಿವೃತ್ತ IAS ಅಧಿಕಾರಿ ಮದನ್ ಗೋಪಾಲ್
ನಿರ್ಭಯಾ ಫಂಡ್ ಟೆಂಡರ್ ವಿಚಾರದಲ್ಲಿ ಇಂದು ಟಿವಿ9 ಇಂದು ಫೇಸ್ಬುಕ್ ಲೈವ್ ಏರ್ಪಡಿಸಿತ್ತು. ಆ್ಯಂಕರ್ ಮಾಲ್ತೇಶ್ ಕಾರ್ಯಕ್ರಮದ ನಿರೂಪಣೆ ಮಾಡಿದರೆ, ಅತಿಥಿಗಳಾಗಿ ನಿವೃತ್ತ IAS ಅಧಿಕಾರಿ ಮದನ್ ಗೋಪಾಲ್, ನಿವೃತ್ತ IPS ಅಧಿಕಾರಿ ಡಾ. ಡಿ.ವಿ ಗುರು ಪ್ರಸಾದ್ ಹಾಗೂ ಆರ್ಟಿಐ ಕಾರ್ಯಕರ್ತ ಭೀಮಪ್ಪ ಗಡದ್ ಪಾಲ್ಗೊಂಡಿದ್ದರು.
ನಿರ್ಭಯಾ ಸೇಫ್ ಸಿಟಿ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎನ್ನುವ ವಿಚಾರದಲ್ಲಿ ಕಳೆದ ಕೆಲ ದಿನಗಳಿಂದ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಅಷ್ಟೇ ಅಲ್ಲ, ಗೃಹ ಕಾರ್ಯದರ್ಶಿ ಡಿ. ರೂಪಾ ಹಾಗೂ ಹೇಮಂತ್ ನಿಂಬಾಳ್ಕರ್ ವಿರುದ್ಧ ಪರಸ್ಪರ ಕೆಸರೆರೆಚಾಟ ನಡೆಯುತ್ತಿದೆ.
ನಿರ್ಭಯಾ ಸೇಫ್ ಸಿಟಿ ಟೆಂಡರ್ನಲ್ಲಿ ಗೋಲ್ಮಾಲ್ ನಡೆದಿದೆ. ಇದನ್ನು ತಡೆಯುವ ಕೆಲಸವನ್ನು ನಾನು ಮಾಡಿದ್ದೇನೆ ಎಂದಿದ್ದಾರೆ ರೂಪಾ. ಆದರೆ, ರೂಪಾ ಈ ಟೆಂಡರ್ನಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎನ್ನುವ ಆರೋಪವನ್ನು ಹೇಮಂತ್ ನಿಂಬಾಳ್ಕರ್ ಮಾಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿ ಟಿವಿ9 ಇಂದು ಫೇಸ್ಬುಕ್ ಲೈವ್ ಏರ್ಪಡಿಸಿತ್ತು. ಆ್ಯಂಕರ್ ಮಾಲ್ತೇಶ್ ಕಾರ್ಯಕ್ರಮದ ನಿರೂಪಣೆ ಮಾಡಿದರೆ, ಅತಿಥಿಗಳಾಗಿ ನಿವೃತ್ತ IAS ಅಧಿಕಾರಿ ಮದನ್ ಗೋಪಾಲ್, ನಿವೃತ್ತ IPS ಅಧಿಕಾರಿ ಡಾ. ಡಿ.ವಿ ಗುರು ಪ್ರಸಾದ್ ಹಾಗೂ ಆರ್ಟಿಐ ಕಾರ್ಯಕರ್ತ ಭೀಮಪ್ಪ ಗಡದ್ ಪಾಲ್ಗೊಂಡಿದ್ದರು.
ರೂಪಾ ಅವರದ್ದು ಹಸ್ತಕ್ಷೇಪವಲ್ಲ
ಗೃಹ ಕಾರ್ಯದರ್ಶಿ ಡಿ. ರೂಪಾ ಅವರು ಟೆಂಡರ್ ಕರಡು ಸಿದ್ಧಪಡಿಸುವ ಕಂಪೆನಿಗೆ ಕರೆ ಮಾಡಿ ಆ ಬಗ್ಗೆ ವಿಚಾರಿಸುವುದು ತಪ್ಪಲ್ಲ ಎನ್ನುವುದು ನನ್ನ ಅಭಿಪ್ರಾಯ ಎಂದು ನಿವೃತ್ತ IAS ಅಧಿಕಾರಿ ಮದನ್ ಗೋಪಾಲ್ ಮಾತು ಆರಂಭಿಸಿದರು.
ಇಡೀ ದೇಶದಲ್ಲಿ 8 ನಗರಗಳಲ್ಲಿ ಮಾತ್ರ ನಿರ್ಭಯಾ ಯೋಜನೆ ಜಾರಿಗೆ ಬರುತ್ತಿದೆ. ಅದರಲ್ಲಿ ಬೆಂಗಳೂರು ಕೂಡ ಇದೆ ಅನ್ನೋದು ಖುಷಿಯ ವಿಚಾರ. ಇಂಥ ಮುಖ್ಯ ಯೋಜನೆಯ ಟೆಂಡರ್ ಡ್ರಾಫ್ಟ್ ಆಗುವಾಗ ಅನುಮಾನ ಬಂದ ಬಗ್ಗೆ ಗೃಹ ಕಾರ್ಯದರ್ಶಿಯಾಗಿ ರೂಪಾ ಪತ್ರ ಬರೆದಿದ್ದು ತಪ್ಪಲ್ಲ. ಅವರು ತಪ್ಪನ್ನು ಕಂಡಾಗ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಆದರೆ, ಈ ವಿಚಾರದಲ್ಲಿ ಹೇಮಂತ್ ನಿಂಬಾಳ್ಕರ್ ಪತ್ರ ಬರೆದಿದ್ದು ಸರಿಯಲ್ಲ ಎಂದರು.
ಹೇಮಂತ್ ಟೆಂಡರ್ ಕಮಿಟಿ ಅಧ್ಯಕ್ಷರೇ ಆಗಬಾರದಿತ್ತು ಎಂದು ಮದನ್ ಅಭಿಪ್ರಾಯಪಟ್ಟಿದ್ದಾರೆ. ಐಎಂಎ ಹಗರಣದಲ್ಲಿ ಹೇಮಂತ್ ಹೆಸರು ಕೇಳಿ ಬಂದಿತ್ತು. ಅವರು ತಪ್ಪು ಮಾಡಿದ್ದಾರೋ ಅಥವಾ ಇಲ್ಲವೋ ಎಂಬುದು ತನಿಖೆಯಲ್ಲಿ ಸಾಬೀತಾಗಲಿದೆ. ಆದರೆ, ಈ ರೀತಿ ಆರೋಪ ಕೇಳಿ ಬಂದಾಗ, ಹೇಮಂತ್ ನಾನು ಈ ಟೆಂಡರ್ ಕಮಿಟಿ ಅಧ್ಯಕ್ಷ ಆಗುವುದಿಲ್ಲ ಎಂದು ಹೇಳಬೇಕಿತ್ತು. ಇಲ್ಲವೇ, ಸರ್ಕಾರವಾದರೂ ಆ ಬಗ್ಗೆ ಗಮನ ವಹಿಸಬೇಕಿತ್ತು ಎಂದರು.
ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು ಅಧಿಕಾರಿಗಳ ವಿರುದ್ಧ ಯಾವುದೇ ಆರೋಪ ಕೇಳಿ ಬಂದರೂ ಅದರ ತನಿಖೆ ನಡೆಯಲು ಸಾಕಷ್ಟು ವರ್ಷಗಳೇ ಕಳೆದು ಬಿಡುತ್ತವೆ. ಇದೇ ಕಾರಣಕ್ಕೆ ಅಧಿಕಾರಿಗಳಲ್ಲಿ ಭಯ ಇಲ್ಲ. ಇದಕ್ಕಾಗಿ ಪ್ರತ್ಯೇಕ ನ್ಯಾಯಾಲಯ ಸ್ಥಾಪನೆ ಆಗಬೇಕು. ಪ್ರತಿ ಪ್ರಕರಣದ ವಿಲೇವಾರಿಗೆ ಒಂದು ಸಮಯದ ಮಿತಿ ಕೂಡ ಇರಬೇಕು. ಇಬ್ಬರು ಅಧಿಕಾರಿಗಳ ಜಿದ್ದಾಜಿದ್ದಿನಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ನಿವೃತ್ತ IPS ಅಧಿಕಾರಿ ಡಾ. ಡಿ.ವಿ ಗುರು ಪ್ರಸಾದ್ ಹೇಳಿದರು.
ಸರ್ಕಾರದ ಮಟ್ಟದಲ್ಲಿ ಏನೇ ಅವ್ಯವಹಾರ ನಡೆದಿದ್ದರೆ ಅದನ್ನು ಪರಿಶೀಲನೆ ಮಾಡೋಕೆ ಬೇರೆ ಸಂಸ್ಥೆ ಇದೆ. ಆದರೆ, ಅಧಿಕಾರಿಗಳು ಹೀಗೆ ಸಾರ್ವಜನಿಕವಾಗಿ ಕಿತ್ತಾಡುವುದು ಸರಿಯಲ್ಲ. ಟೆಂಡರ್ ಪ್ರಕ್ರಿಯೆ ಆರಂಭವಾಗುವ ಮೊದಲೇ ಈ ಜಗಳ ಏಕೆ ನಡೆಯುತ್ತಿದೆ ಎಂದು ಜನರಿಗೆ ಪ್ರಶ್ನೆ ಮೂಡುತ್ತದೆ. ಅಲ್ಲದೆ, ಸರ್ಕಾರದ ಉದ್ದೇಶದ ಬಗ್ಗೆ ಅನುಮಾನ ಬರುತ್ತದೆ ಎಂದು ಗುರು ಪ್ರಸಾದ್ ಅಭಿಪ್ರಾಯಪಟ್ಟರು.
ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿದೆ. ಈ ಬಗ್ಗೆ ಅನುಮಾನ ಇದ್ದರೆ ಆರ್ಟಿಐ ಅಡಿ ಪ್ರಶ್ನೆ ಮಾಡಿ ಮಾಹಿತಿ ಪಡೆಯಬಹುದು. ಅದನ್ನು ಬಿಟ್ಟು ಈ ತರಹ ಕಚ್ಚಾಟ ನಡೆಸಬಾರದು. ಇಬ್ಬರೂ ಅಧಿಕಾರಿಗಳು ಇಲಾಖಾ ಶಿಸ್ತು ಮೀರಿ ನಡೆದುಕೊಂಡಿದ್ದಾರೆ ಎಂದು ಗುರು ಪ್ರಸಾದ್ ಬೇಸರ ಹೊರಹಾಕಿದರು.
ಬೇಕಾದವರಿಗೆ ಟೆಂಡರ್ ನೀಡೋಕಾಗಲ್ಲ ನಿರ್ಭಯಾ ಯೋಜನೆಗಾಗಿ 8 ರಾಜ್ಯಗಳಿಗೆ ಕೇಂದ್ರ ಸರ್ಕಾರ ಹಣ ನೀಡುತ್ತಿದೆ. ಈ ರೀತಿ ಕೇಂದ್ರ ಸರ್ಕಾರ ಹಣ ನೀಡುವಾಗ ಟೆಂಡರ್ ನಮಗೇ ಬೇಕಾದ ರೀತಿಯಲ್ಲಿ ಸಿದ್ಧಪಡಿಸಿಕೊಳ್ಳಲು ಸಾಧ್ಯವಾಗುವುದು ಅನುಮಾನ. ಇದೇ ರೀತಿ ಆರೋಪಗಳು ಬರುತ್ತಿದ್ದರೆ ಮುಂದೆ ಅಧಿಕಾರಿಗಳಿಗೆ ಟೆಂಡರ್ ಸಿದ್ಧಪಡಿಸೋಕೆ ಭಯ ಆಗುತ್ತೆ ಎಂದು ಗುರು ಪ್ರಸಾದ್ ಕಳವಳ ವ್ಯಕ್ತಪಡಿಸಿದರು.
ಮದನ್ ಮಾತನ್ನು ಒಪ್ಪಿದ ಗುರುಪ್ರಸಾದ್ ಹೇಮಂತ್ ಟೆಂಡರ್ ಕಮಿಟಿ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಬೇಕಿತ್ತು ಎಂದು ಮದನ್ ಅಭಿಪ್ರಾಯಪಟ್ಟಿದ್ದರು. ಇದನ್ನು ಗುರು ಪ್ರಸಾದ್ ಕೂಡ ಒಪ್ಪಿದ್ದಾರೆ. ಟೆಂಡರ್ ಕಮಿಟಿ ಅಧ್ಯಕ್ಷ ಸ್ಥಾನವನ್ನು ಹೇಮಂತ್ ಅವರನ್ನು ನೋಡಿ ಕೊಟ್ಟಿದ್ದಲ್ಲ. ಬದಲಿಗೆ ಅವರ ಹುದ್ದೆ ಆಧಾರದ ಮೇಲೆ ಕೊಟ್ಟಿದ್ದು. ಆದರೆ, ಅವರ ವಿರುದ್ಧ ಆರೋಪ ಇರುವುದರಿಂದ ಹೇಮಂತ್ ಕಮಿಟಿ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಬೇಕಿತ್ತು ಎಂದಿದ್ದಾರೆ.
ಅಧಿಕಾರಿಗಳಿಗೆ ಪತ್ರ ಬರೆಯಲಿ ಅಧಿಕಾರಿಗಳು ಏನೇ ಮಾಡುವಾಗಲೂ ಅದಕ್ಕೊಂದು ನಿಯಮ ಇರುತ್ತದೆ. ಅಧಿಕಾರಿಗಳು ನೇರವಾಗಿ ಎಂದಿಗೂ ಮಾಧ್ಯಮಗಳ ಎದುರು ಹೋಗಬಾರದು. ತಪ್ಪು ಕಂಡರೆ ಆ ಬಗ್ಗೆ ಹೇಳೋಕೆ ಸರ್ಕಾರ ಇದೆ. ಮೇಲಧಿಕಾರಿಗಳು ಇದ್ದಾರೆ. ಅವರಿಗೆ ದೂರು ನೀಡಬೇಕು. ಈ ರೀತಿ ಸಾರ್ವಜನಿಕವಾಗಿ ಕಚ್ಚಾಡಿದರೆ ಜನರಿಗೆ ಸರ್ಕಾರದ ಬಗ್ಗೆ ಕೆಟ್ಟ ಹೆಸರು ಬರುತ್ತಿದೆ ಎಂದರು.
ಆರ್ಟಿಐ ಕಾರ್ಯಕರ್ತ ಭೀಮಪ್ಪ ಗಡದ್ ಶಾಸಕಾಂಗ ಭ್ರಷ್ಟಾಚಾರ ತುಂಬಿದೆ. ಇದರಿಂದ ಕಾರ್ಯಾಂಗ ಕೂಡ ಭ್ರಷ್ಟಾಚಾರದಿಂದ ತುಂಬಿದೆ. ಈ ಮೊದಲು ಶಾಸಕರು ನೀಡಿದ ಲ್ಯಾಪ್ಟಾಪ್ ಮಾರುಕಟ್ಟೆಯಲ್ಲಿ ಹುಡುಕಿದಾಗ ಎಲ್ಲೂ ಸಿಕ್ಕಿರಲಿಲ್ಲ. ಹೀಗಾಗಿ, ಟೆಂಡರ್ ಸಿದ್ಧವಾಗುವಾಗಲೇ ಆ ಬಗ್ಗೆ ಗಮನ ಹರಿಸಬೇಕು ಎಂದರು.
ಹೇಮಂತ್ ನಿಂಬಾಳ್ಕರ್ ಸರ್ಕಾರದ ದಾರಿ ತಪ್ಪಿಸುತ್ತಿದ್ದಾರೆ; ಗೃಹ ಕಾರ್ಯದರ್ಶಿ ಡಿ.ರೂಪಾ ಗಂಭೀರ ಆರೋಪ
Published On - 5:06 pm, Mon, 28 December 20