AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋಡಿ ಸ್ವಾಮಿ ನಾವಿರೋದೆ ಹೀಗೆ! 2020ರಲ್ಲಿ ವೈರಲ್ ಆದ 5 ವಿಭಿನ್ನ ಪ್ರಯೋಗಗಳಿವು

ಇರುವ ಸಂಪನ್ಮೂಲವನ್ನೇ ಬಳಸಿ ಕೆಲಸ ಮಾಡುವುದು ಹೇಗೆ? ಉತ್ತರ ಬೇಕಾದವರು ಭಾರತೀಯರನ್ನು ನೋಡಿ ಕಲಿಯಬೇಕು. ಜುಗಾಡ್ ಮಾಡಲು ನಮಗ್ಯಾವ ನಿರ್ಬಂಧವೂ ಇಲ್ಲ. ಸಮಸ್ಯೆಗಳು ಎದುರಾದಾಗ ಸುಮ್ಮನಾಗದೆ, ಸುಲಭವಾಗಿ ಪರಿಹಾರ ಕಂಡುಕೊಳ್ಳುವ ನಾವು ಫಕ್ಕನೆ ಚಿಗುರುತ್ತೇವೆ.

ನೋಡಿ ಸ್ವಾಮಿ ನಾವಿರೋದೆ ಹೀಗೆ! 2020ರಲ್ಲಿ ವೈರಲ್ ಆದ 5 ವಿಭಿನ್ನ ಪ್ರಯೋಗಗಳಿವು
ಕೊರೊನಾ ನಡುವೆ ಅರಳಿದ ತಂತ್ರಗಳು
Follow us
TV9 Web
| Updated By: ganapathi bhat

Updated on:Apr 06, 2022 | 11:18 PM

ನೋಡಿ ಸ್ವಾಮಿ ನಾವಿರೋದೆ ಹೀಗೆ.. ಅಂತ ಅಂದವರು ನಾವು. ಸುಮ್ನಿರ್ತೀವಾ? ಟಿವಿ ರಿಮೋಟ್ ಕೆಲಸ ಮಾಡುತ್ತಿಲ್ಲ ಅಂದರೆ ಅದರ ತಲೆಗೊಮ್ಮೆ ಟಕ್ಕನೆ ಕುಟ್ಟಿ ಬಿಡುತ್ತೇವೆ. ಪೆಟ್ಟು ತಿಂದ ರಿಮೋಟ್ ಎದ್ದೂ ಬಿದ್ದೂ ಕೆಲಸ ಮಾಡಲು ತೊಡಗುತ್ತದೆ. ಲೂಸಾಗಿ ಜಾರುತ್ತಿರುವ ಪ್ಯಾಂಟ್​ಗೆ ಬೆಲ್ಟ್ ಸಿಕ್ಕಿಲ್ಲ ಅಂತ ತಲೆಕೆಡಿಸಿಕೊಳ್ಳುವುದಿಲ್ಲ. ಮಾರುದ್ದದ ಹಗ್ಗವನ್ನು ಹುಡುಕಿ ತಂದು ಸೊಂಟಕ್ಕೆ ಸುತ್ತಿಬಿಡುತ್ತೇವೆ. ಹೊಟ್ಟೆ ಬಿರಿದಾಗ ಗಣಪ ಹಾವು ಸುತ್ತಿಕೊಂಡಂತೆ!

ಇರುವ ಸಂಪನ್ಮೂಲವನ್ನೇ ಬಳಸಿ ಕೆಲಸ ಮಾಡುವುದು ಹೇಗೆ? ಉತ್ತರ ಬೇಕಾದವರು ಭಾರತೀಯರನ್ನು ನೋಡಿ ಕಲಿಯಬೇಕು. ಜುಗಾಡ್ ಮಾಡಲು ನಮಗ್ಯಾವ ನಿರ್ಬಂಧವೂ ಇಲ್ಲ. ಸಮಸ್ಯೆಗಳು ಎದುರಾದಾಗ ಸುಮ್ಮನಾಗದೆ, ಸುಲಭವಾಗಿ ಪರಿಹಾರ ಕಂಡುಕೊಳ್ಳುವ ನಾವು ಫಕ್ಕನೆ ಚಿಗುರುತ್ತೇವೆ. ಬಾವಿಕಟ್ಟೆಯ ಸಂದಿಯಲ್ಲಿ ಹಸಿರ ಎಲೆಗಳು ಅರಳಿ ನಿಂತಂತೆ. ನಮ್ಮ ಮನಸ್ಸು, ಮಾರ್ಗದ ಮುಂದೆ ಯಾವ ಸಮಸ್ಯೆಯೂ ದೊಡ್ಡದಲ್ಲ.

ಕೊರೊನಾ ಬಂದಾಗ ಇಂಥದ್ದೇ ಎಂದು ಹೇಳಲಾಗದಷ್ಟು ಬದಲಾವಣೆಗಳು ಜಗತ್ತಿನಲ್ಲಾದವು. ಭಾರತವೂ ತನ್ನ ಜನಜೀವನದಲ್ಲಿ ಹಲವು ಅಡೆತಡೆಗಳನ್ನು ಎದುರಿಸಿತು. ಆದರೆ, ಕೀ ಕೊಡದ ಗಡಿಯಾರದಂತೆ ನಿಂತಲ್ಲೇ ನಿಲ್ಲಲಿಲ್ಲ. ಗಾಳಿಗೆ ತಿರುಗುತ್ತಲೇ ಇರುವ ಬಣ್ಣದ ಗಿರಗಿಟ್ಲೆಯಂತೆ ಚಲನಶೀಲವಾಗಿತ್ತು. ನಿಧಾನವೋ ಪ್ರಧಾನವೋ ಅಂತೂ ನಾವು ಕೊರೊನಾ ಎದುರಿಸಿದ್ದು ಸತ್ಯ. ವರ್ಕ್ ಫ್ರಮ್ ಹೋಮ್, ಆನ್ಲೈನ್ ಕ್ಲಾಸು, ಸಾಮಾಜಿಕ ಅಂತರ, ಮಾಸ್ಕು, ಸ್ಯಾನಿಟೈಸರ್ ಇನ್ನೂ ಊದ್ದದ ಪಟ್ಟಿ!

ಸಮಸ್ಯೆಗಳನ್ನು ಸವಾಲಾಗಿ ಕಂಡು, ಸುಧಾರಿಸಿಕೊಂಡು ಅದಕ್ಕೆ ವಿಭಿನ್ನವಾಗಿ ಪರಿಹಾರ ಹುಡುಕಿದ ಒಂದಷ್ಟು ವಿಚಾರಗಳು ನಮಗೆ ಸಿಕ್ಕಿವೆ. ಅದನ್ನು ನಿಮ್ಮ ಅವಗಾಹನೆಗೂ ತರುವ ಅಭಿಲಾಷೆ. ನೋಡುವಿರಂತೆ.

ಫ್ರಿಡ್ಜ್ ಟ್ರೇ ಬಳಸಿ ಆನ್​ಲೈನ್ ಪಾಠ ಇಲ್ಲೊಬ್ಬರು ಟೀಚರ್ ಇದ್ದಾರೆ ನೋಡಿ. ಮಕ್ಕಳಿಗೆ ಏನೋ ಬರೆದು ತೋರಿಸಬೇಕು. ಜೊತೆಗೆ ಮಾತಿನ ಮೂಲಕ ವಿಷಯವನ್ನೂ ವಿವರಿಸಬೇಕು. ಆನ್​ಲೈನ್ ಪಾಠ ಮಾಡುವಾಗ ಮೊಬೈಲು, ಪೇಪರು ಜೊತೆಗೊಂದು ಪೆನ್ನು ಹಿಡಿಯಲು ನಮಗೇನು ಮೂರು ಕೈ ಇದೆಯೇ? ಇರುವುದು ಎರಡು ಕೈಗಳು. ಅದರಲ್ಲೇ ಆನ್​ಲೈನ್ ಕ್ಲಾಸ್ ಮಾಡಬೇಕು. ಅದಕ್ಕಾಗಿ ಈ ಟೀಚರ್ ಕಂಡುಕೊಂಡ ವಿಧಾನವಿದು.

ಟೇಬಲ್ ಮೇಲೆ ಎರಡು ಬಾಕ್ಸ್​ಗಳನ್ನು ಇಟ್ಟು, ಅದರ ಮೇಲೆ ಫ್ರಿಡ್ಜ್​ನ ಟ್ರೇ ಜೋಡಿಸಿ, ಅದರ ಮೇಲೆ ಮೊಬೈಲ್ ಇಟ್ಟುಕೊಂಡಿದ್ದಾರೆ. ಟ್ರೇ ಪಾರದರ್ಶಕವಾಗಿರುವುದರಿಂದ ಕೆಳಗಡೆ ಬರೆಯುತ್ತಿರುವುದು ಕಾಣುತ್ತದೆ. ಪಾಠ ಮಾಡಲು ಅನುಕೂಲವಾಗುತ್ತದೆ. ಈ ಯೋಚನೆ ಬರಲು ಆ ಟೀಚರಮ್ಮ ಎಷ್ಟು ಬಾರಿ ಫ್ರಿಡ್ಜ್ ಬಾಗಿಲು ತೆರೆದಿರಬೇಡ? ಏಕಕಾಲಕ್ಕೆ ಗೃಹಿಣಿಯಾಗಿಯೂ ಟೀಚರ್​ ಆಗಿಯೂ ಇರುವ ನಮ್ಮ ನಿಮ್ಮ ಮನೆಯ ಅಮ್ಮಂದಿರೂ ಇಲ್ಲಿ ಕಾಣುವುದಿಲ್ಲವೇ?

ಹ್ಯಾಂಗರ್ ಕೇವಲ ಬಟ್ಟೆಯನ್ನಲ್ಲ, ಮೊಬೈಲನ್ನೂ ನೇತು ಹಾಕುತ್ತದೆ! ಇಲ್ಲಿರುವ ಶಿಕ್ಷಕಿಯ ಪ್ರಯಾಸ ಗಮನಿಸಿ. ಕರಿಹಲಗೆಯ ಮೇಲೆ ಬರೆಯುವ ಅನುಕೂಲವಿದ್ದರೂ ಮೊಬೈಲ್​ನಲ್ಲಿ ಅದನ್ನು ತೋರಿಸುವುದು ಕಷ್ಟ. ಕೈಯಲ್ಲಿ ಹಿಡಿದರೆ ಹತ್ತಿರವಾಯ್ತು, ದೂರ ಇಡೋಣ ಅಂದರೆ ಟ್ರೈಪಾಡ್ ಇಲ್ಲ. ಅದಕ್ಕೆಲ್ಲಾ ಜಗ್ಗದ ಇವರು ಹ್ಯಾಂಗರ್, ಕುರ್ಚಿ ಮತ್ತು ಒಂದಷ್ಟು ಬಟ್ಟೆಯ ತುಂಡುಗಳನ್ನು ದಾರವಾಗಿಸಿ ಜಗತ್ತಿನಲ್ಲಿ ಎಲ್ಲೂ ಸಿಗದ ತಂತ್ರ ಹುಡುಕಿಕೊಂಡಿದ್ದಾರೆ. ಮಕ್ಕಳು ಚೆನ್ನಾಗಿ ಪಾಠ ಕೇಳಿರಬಹುದು ಬಿಡಿ!

ಪಾನಿಪುರಿ ಗುಳುಂ ಮಾಡಲು ಯಂತ್ರದ ಉಪಕಾರ! ಸಾಮಾಜಿಕ ಅಂತರ, ಪರಸ್ಪರ ಮುಟ್ಟದೆ ವ್ಯವಹಾರ ನಡೆಸುವ ಸಂದರ್ಭಗಳನ್ನು ಕೊವಿಡ್ ನಮಗೆ ತಂದೊಡ್ಡಿತು. ಅಷ್ಟಾದರೂ ನಮ್ಮ ಜನ ಪಾನಿಪುರಿ ಬಿಡುತ್ತಾರೆಯೇ? ಪಾನಿಪುರಿ ಅಂದ್ರೆ ಪಂಚಪ್ರಾಣ ಎಂದು ನುಲಿಯುವ ಹುಡುಗಿಯರು ಜೀವವನ್ನಾದರೂ ಬಿಟ್ಟಾರು ಅಂತ ಅನಿಸಿದರೆ ತಪ್ಪಾಗಬಹುದೇ? ಗೊತ್ತಿಲ್ಲ ಬಿಡಿ. ಈಗ ಇಲ್ಲಿನ ತಂತ್ರಜ್ಞಾನ ಗಮನಿಸಿ.

ಪಾನಿಪುರಿ ಕೊಡಬೇಕು, ಆದರೆ ಗ್ರಾಹಕರೊಡನೆ ಸಂಪರ್ಕ ಆದಷ್ಟು ಕಡಿಮೆ ಇರಬೇಕು. ಅದಕ್ಕಾಗಿ ನಮ್ಮ ಭೈಯ್ಯಾ ಹೊಸ ಉಪಾಯ ಮಾಡಿಕೊಂಡಿದ್ದಾನೆ. ತರಹೇವಾರಿ ಪಾನಿಗಳು ಸಣ್ಣ ನಳಿಕೆಯ ಮೂಲಕ ಪೂರಿಯ ಹೊಟ್ಟೆ ಸೇರುತ್ತದೆ. ಬಳಿಕ, ಪೂರಿ ನಮ್ಮ ಹೊಟ್ಟೆ ಸೇರುತ್ತದೆ ಅಷ್ಟೇ.

ಹಾಲಿಗಾಗಿ ಪೈಪ್​ ಲೈನ್ ಹಾಲು ಮಾರುವವನಿಗೆ ಹಾಲು ಮಾರಾಟ ಮಾಡದಿದ್ದರೆ ಕಷ್ಟ. ಹಾಲು ಕೊಂಡುಕೊಳ್ಳುವವರಿಗೆ ಹಾಲು ಸಿಗದಿದ್ದರೆ ಕಷ್ಟ. ಈ ನಡುವೆ ಇಬ್ಬರೂ ಜಗ್ಗಲಿಲ್ಲ. ಹೊಸ ಕ್ಷೀರಭಾಗ್ಯ ಹೀಗೆ ತಯಾರಾಯ್ತು ನೋಡಿ.

ಸಪ್ತಸಾಗರದಾಚೆ ಎಲ್ಲೋ! ಈ ಕೆಳಗಿನ ವೀಡಿಯೋ ನೋಡಿಬಿಡಿ. ಅಬ್ಬಾ! ಅಂತ ಅನಿಸದಿದ್ದರೆ ಆಮೇಲೆ ಹೇಳಿ. ಇಲ್ಲಿ ಕಾಣುವ ಬ್ಯಾಂಕ್ ಅಥವಾ ಕಚೇರಿಯಲ್ಲಿ ಗ್ರಾಹಕರು ಸಪ್ತಸಾಗರದಾಚೆ ಎಲ್ಲೋ ನಿಂತಂತಿದೆ. ನಗದು ಕೌಂಟರ್​ನಲ್ಲಿ ಕುಳಿತವರು ಭರ್ಜರಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಕಚೇರಿಗೆ ಬಂದಾಕೆ ಹೊರಗೆ ನಿಂತು, ಕಿಟಕಿಯ ಮೂಲಕ ಚೀಟಿ ಕೊಡುತ್ತಾಳೆ. ಅದನ್ನು ಗ್ಲೌಸ್ ಹಾಕಿಕೊಂಡ ಗುಮಾಸ್ತನೊಬ್ಬ ಪಡೆದು ಒಳಗೆ ಕೌಂಟರ್​ಗೆ ತಲುಪಿಸುತ್ತಾನೆ. ಅವರು ಅಷ್ಟಕ್ಕೇ ಸುಮ್ಮನಿರದೆ, ಆ ಚೀಟಿಗೆ ಇಸ್ತ್ರಿ ಮಾಡಿ, ಕೊರೊನಾ ವೈರಾಣುಗಳನ್ನು ಸುಟ್ಟು ಹಾಕುವ ಪ್ರಯತ್ನ ಮಾಡುತ್ತಾರೆ. ಇಂಥಾ ಮುಂಜಾಗ್ರತೆ ವಹಿಸಿದ ಅವರಿಗೆ ಒಂದು ನಮಸ್ಕಾರವನ್ನೂ ಕೊಡೋಣ.

ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ ಎಂದು ಹಾಡುವ ನಾವು ಕೃತಿಯಲ್ಲೂ ಹಾಗೆಯೇ. ಬಡತನವೋ, ಕಷ್ಟವೋ, ಮಣ್ಣು ಮಸಿಯೋ ಎಲ್ಲವನ್ನೂ ಸೋಲಿಸಿ ಗೆದ್ದು ಬಿಡುತ್ತೇವೆ. ಈ ಹೊಸ ಯೋಚನೆಗಳು ಕಷ್ಟ ಬಂದಾಗ ಮಾತ್ರವಲ್ಲ, ಎಲ್ಲಾ ಕಾಲದಲ್ಲೂ ಜೀವಂತವಾಗಿರಬೇಕು. ಹೊಸತೇನೋ ಸಿಕ್ಕಾಗ ನಾವು ಮತ್ತೆ ಮತ್ತೆ ಹೊಸಬರಾಗುತ್ತೇವೆ.

ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಧಡೂತಿ ಮಹಿಳೆಯರ ಸಂಖ್ಯೆ!

Published On - 5:58 pm, Sun, 27 December 20