ವರ್ಷಾಂತ್ಯ ವಿಶೇಷ 2020: ’ಓದಿನಂಗಳ’ದ ಓನಾಮ ಹಿರಿಯ ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರಿಂದ
‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿಯನ್ನೂ ಬರೆದುಕೊಟ್ಟಿದ್ದಾರೆ. ಈ ಸರಣಿಯು ಇಂದಿನಿಂದ ನಾಲ್ಕು ದಿನಗಳ ತನಕ ಪ್ರಕಟವಾಗಲಿದೆ. ಹಿರಿಯ ಕವಿ ಡಾ. ಎಚ್. ಎಸ್ ವೆಂಕಟೇಶಮೂರ್ತಿಯವರ ಆಯ್ಕೆ ಮತ್ತು ಟಿಪ್ಪಣಿಯೊಂದಿಗೆ ಈ ಸರಣಿಯ ಓನಾಮ.
ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?
‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿಯನ್ನು ಬರೆದುಕೊಟ್ಟಿದ್ದಾರೆ. ಇದು ಇಂದಿನಿಂದ ನಾಲ್ಕು ದಿನಗಳ ತನಕ ಪ್ರಕಟವಾಗಲಿದೆ. ಹಿರಿಯ ಕವಿ ಡಾ. ಎಚ್. ಎಸ್. ವೆಂಕಟೇಶಮೂರ್ತಿಯವರೊಂದಿಗೆ ಸರಣಿಯ ಓನಾಮ.
ಕೃ: ಮಹಿಳೆ ಮತ್ತು ಭಾರತೀಯ ಕಾನೂನು ವ್ಯವಸ್ಥೆ ಲೇ: ಸಿ. ಎನ್. ರಾಮಚಂದ್ರನ್ ಪ್ರ: ಅಂಕಿತ ಪುಸ್ತಕ ಇತ್ತೀಚೆಗೆ ಪ್ರಕಟವಾದ ‘ಮಹಿಳೆ ಮತ್ತು ಭಾರತೀಯ ಕಾನೂನು ವ್ಯವಸ್ಥೆ’ ಕೃತಿ ತನ್ನ ಲೋಕೋಪಯೋಗಿ ದೃಷ್ಟಿಯಿಂದ ನನಗೆ ಬಹುಪ್ರಿಯವಾದ ಕೃತಿಯಾಗಿದೆ. ನ್ಯಾಯಾಲಯದ ಕೇಸುಗಳ ಸಮೇತ ನಿರೂಪಣೆ ಸಾಗುವುದರಿಂದ ಹೆಣ್ಣುಮಕ್ಕಳ ನಾನಾಬಗೆಯ ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳಿಗೆ ಭಾರತೀಯ ನ್ಯಾಯಾಲಯಗಳು ನೀಡಿರುವ ತೀರ್ಪುಗಳು, ಆ ತೀರ್ಪುಗಳ ಹಿನ್ನೆಲೆ, ವಿವರಗಳು ನಮ್ಮ ಹೆಣ್ಣುಮಕ್ಕಳಿಗೆ ಮಾತ್ರವಲ್ಲ ಪುರುಷರಿಗೂ ಕಣ್ಣು ತೆರೆಸುವಂತಿದೆ. ವಿಚಾರ ಮತ್ತು ಅನುಭವದ ಮೇಳೈಕೆಯನ್ನು ಈ ಕೃತಿಯಲ್ಲಿ ಚೆನ್ನಾಗಿ ಸಾಧಿಸಲಾಗಿದೆ. ಬುದ್ಧಿಯನ್ನು ಮಾತ್ರವಲ್ಲ ಹೃಯಯವನ್ನೂ ಪುಸ್ತಕ ಕಲಕುತ್ತದೆ. ಖ್ಯಾತ ವಿಮರ್ಶಕರಾದ ರಾಮಚಂದ್ರನ್ ಅವರಿಂದ ಈ ಜೀವನ ವಿಮರ್ಶಾಕೃತಿ ತುಂಬಾ ಅನಿರೀಕ್ಷಿತವಾಗಿತ್ತು. ಕಾನೂನಿನ ಅರಿವು ಪ್ರಸ್ತುತ ಸಂದರ್ಭದಲ್ಲಿ ಹೆಣ್ಣುಮಕ್ಕಳು ಅನುಭವಿಸುತ್ತಿರುವ ನಾನಾ ಬಗೆಯ ಶೋಷಣೆಗಳನ್ನು ಪರಿಹರಿಸುವಲ್ಲಿ, ಕಡೇಪಕ್ಷ ಎದುರಿಸುವಲ್ಲಿ ಅದ್ಭುತವಾದ ಮಾರ್ಗದರ್ಶನ ನೀಡಬಲ್ಲುದು. ಈ ಕೃತಿಯ ಸಾಮಾಜಿಕ ಪ್ರಸ್ತುತತೆ ಈ ದೃಷ್ಟಿಯಿಂದ ಬಹು ಮುಖ್ಯವಾದುದಾಗಿದೆ. ಮನೆಮನೆಯ ಹೆಣ್ಣುಮಕ್ಕಳು ತಪ್ಪದೇ ಓದಬೇಕಾದ ಪುಸ್ತಕವಿದು.
ಕೃ: ಗೈರ ಸಮಜೂತಿ ಲೇ: ರಾಘವೇಂದ್ರ ಪಾಟೀಲ ಕೃ: ಮನೋಹರ ಗ್ರಂಥಮಾಲೆ ನಾನು ಈಚಿನ ದಿನಗಳಲ್ಲಿ ಓದಿದ, ಓದಿ ತ್ರಸ್ತಗೊಂಡ ಬಹು ವಿಸ್ತಾರದ ಬೃಹತ್ ಕಾದಂಬರಿ. ಕನ್ನಡ ಸಾಹಿತ್ಯದಲ್ಲಿ ಮಹತ್ವಾಕಾಂಕ್ಷೆ ಕುಂದಿಲ್ಲ ಎನ್ನುವುದನ್ನು ಸಾಬೀತು ಪಡಿಸುತ್ತಿರುವ ಈಚಿನ ಬೃಹತ್ ಕಾದಂಬರಿ ಸರಣಿಯಲ್ಲಿ ಗೈರ ಸಮಜೂತಿ ಮುಖ್ಯವಾದುದು. ಎರಡು ತಲೆಮಾರಿನ ಅನುಭವ ಕಥನವನ್ನು ಐತಿಹಾಸಿಕ ಮತ್ತು ಸಾಮಾಜಿಕ ಪರಿಪ್ರೇಕ್ಷ್ಯದಲ್ಲಿ ಹೃದಸ್ಪರ್ಶೀ ಬರವಣಿಗೆಯ ಮೂಲಕ ಶೋಧಿಸುವ ಗೈರು ಸಮಜೂತಿ, ಹಳೆಯ ವಸ್ತುವನ್ನು ಹೊಸ ನೆಲೆಯಲ್ಲಿ ಪೃತ್ಥಕ್ಕರಿಸುವ ಕಾದಂಬರಿ. ಈ ಕಾದಂಬರಿಯು ಕನ್ನಡದ ದೇಸೀ ತತ್ವ-ಆಕಾರ-ಪರಿಣಾಮಗಳನ್ನು ಗಟ್ಟಿಯಾಗಿ ಪ್ರಕಟಗೊಳಿಸುತ್ತಿರುವುದು ಪಾಟೀಲರ ಬರವಣಿಗೆಯ ಉಪಕ್ರಮದ ಸಹಜ ಬೆಳವಣಿಗೆಯೇ ಆಗಿದೆ. ಇಲ್ಲಿಯ ಅನುಭವ ಘಟಕಗಳು ಮತ್ತು ಪಾತ್ರಗಳು ಈ ನೆಲದಲ್ಲಿ ಬೇರೂರಿದವು. ಭಾರತದ ಜಾತಿವ್ಯವಸ್ಥೆ, ಆಚಾರವಿಚಾರ, ಲೋಪದೋಷಗಳನ್ನು ನಿರ್ಭಿಡೆಯಿಂದ ಅನುಸಂಧಾನ ಮಾಡುವಲ್ಲಿ ಕಾದಂಬರಿಗೆ ಯಾವುದೇ ಬಗೆಯ ಸಂಕೋಚವಿಲ್ಲ. ಬರೆವಣಿಗೆಯಲ್ಲಿ ಶಸ್ತ್ರಚಿಕಿತ್ಸಕನ ನಿರ್ಲಿಪ್ತಿ ಮತ್ತು ಜೀವರಕ್ಷಕ ತನ್ಮಯತೆಯಿದೆ. ಪೊಲಿಟಿಕಲಿ ಕರೆಕ್ಟ್ ಆಗಬೇಕೆಂಬ ಉಮೇದಿನಲ್ಲಿ ಜೀವವಿಮುಖಿಯಾಗುವ ಉಪಾಯಗಳು ಇಲ್ಲಿ ಕಾಣವು ಕಡೆಯ ಪಕ್ಷ ಬಿಡಿಸಿಕೊಳ್ಳಲು ಸರ್ವಥಾ ಪ್ರಯತ್ನಿಸುತ್ತೇವೆ ಎಂದು ಅನುಭವ ಪರಿಷ್ಕರಣದಲ್ಲಿ ತೊಡಗಿರುವ ಈ ಕಾದಂಬರಿ ಚರ್ಚಿಸಲೇಬೇಕಾದ ಬಹು ಮುಖ್ಯ ಕೃತಿ.
ರಾಷ್ಟ್ರಕವಿ ಕುವೆಂಪುರವರ ಸಮಗ್ರ ಸಾಹಿತ್ಯ ಪುಸ್ತಕಗಳ ಸರಣಿ, ಡಿಜಿಟಲ್ ಆವೃತ್ತಿ ಲೋಕಾರ್ಪಣೆ
Published On - 3:09 pm, Mon, 28 December 20