ಕರುವಿಗೆ ತಾಯಿ ಮಮತೆ ನೀಡಿದ ಶ್ವಾನ: ಸಾಂಸ್ಕೃತಿಕ ನಗರಿಯಲ್ಲೊಂದು ಅಪರೂಪದ ನಾಯಿ, ಕರು ಜೋಡಿ

ಇನ್ನು ಕಳೆದ 2 ತಿಂಗಳಿಂದ ನಿರಂತರವಾಗಿ ಇದು ನಡೆದಿದೆ. ಬೆಳಗ್ಗೆಯಾದರೆ ಸಾಕು ಕೆಂಚಿ ನಾಯಿ ಕರುವಿಗಾಗಿ ಹುಡುಕಾಟ ನಡೆಸುತ್ತದೆ. ಕರುವನ್ನು ಕಾದು ಹಾಲುಣಿಸುತ್ತದೆ. ಸಾಮಾನ್ಯವಾಗಿ ಕರುವನ್ನು ಕೊಟ್ಟಿಗೆಯ ಒಳಗೆ ಕಟ್ಟಿರುತ್ತಾರೆ. ಕೊಟ್ಟಿಗೆಯಿಂದ ತಂದು ಹೊರಗೆ ಕಟ್ಟುವ ಸಮಯಕ್ಕೆ ಸರಿಯಾಗಿ ನಾಯಿ ಅಲ್ಲಿ ಬಂದು ಕಾಯುತ್ತಿರುತ್ತದೆ.

ಕರುವಿಗೆ ತಾಯಿ ಮಮತೆ ನೀಡಿದ ಶ್ವಾನ: ಸಾಂಸ್ಕೃತಿಕ ನಗರಿಯಲ್ಲೊಂದು ಅಪರೂಪದ ನಾಯಿ, ಕರು ಜೋಡಿ
ನಾಯಿ ಕರುವಿಗೆ ಹಾಲುಣಿಸುತ್ತಿರುವ ದೃಶ್ಯ
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Dec 28, 2020 | 6:08 PM

ಮೈಸೂರು: ಪ್ರಯೋಜನಕ್ಕೆ ಬಾರದ ವಿಚಾರವನ್ನು ಹೇಳುವಾಗ ನಾಯಿ ಮೊಲೆ ಹಾಲು ಇದ್ದರೇನು.. ಬಿಟ್ಟರೇನು! ಎಂದು ಉದಾಹರಣೆ ನೀಡುವುದನ್ನು ನೀವೆಲ್ಲಾ ಕೇಳಿರುತ್ತೀರಾ. ಈ ಮಾತು ಸರಿಯಲ್ಲ ಎನ್ನುವುದನ್ನು ಮೈಸೂರಿನ ನಾಯಿಯೊಂದು ರುಜುವಾತು ಮಾಡಿದೆ.. ತನ್ನ ಮೊಲೆ ಹಾಲನ್ನು ತನ್ನ ಮರಿಗಳಿಗೆ ಮಾತ್ರವಲ್ಲ ತನ್ನ ಮನೆಯ ಯಜಮಾನ ಸಾಕಿರುವ ಕರುವಿಗೂ ಮೀಸಲಿಟ್ಟಿದೆ.

ಅಪರೂಪದಲ್ಲಿ ಅಪರೂಪ ಈ ನಾಯಿ! ಈ ನಾಯಿಯ ಹೆಸರು ಕೆಂಚಿ. ಆಕೆಗೆ 4 ವರ್ಷ. ಇದು ಮೈಸೂರು‌ ಜಿಲ್ಲೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಬಳಿಯಲ್ಲಿರುವ ಭಾಸ್ಕರ್ ಎಲ್.ಗೌಡ ಅವರ ಸಾಕು ನಾಯಿ. ತೋಟದ ಮನೆಯ ನೆಚ್ಚಿನ ನಾಯಿ ಈ ಕೆಂಚಿ. ಇನ್ನು ಈ‌ ತೋಟದ ಮನೆಯ ಮತ್ತೊಬ್ಬ ಅದೃಷ್ಟದ ಸದಸ್ಯೆ ಎಂದರೆ ಲಕ್ಷ್ಮೀ. ಈಕೆ ಮೂರು ತಿಂಗಳ ಕರು.

ಇವರಿಬ್ಬರು ಈಗ ಭಾಸ್ಕರ್ ಎಲ್. ಗೌಡನ ಹೆಸರಿನ ತೋಟದ ಮನೆಯ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಇದಕ್ಕೆ ಕಾರಣ ಕೆಂಚಿ ನಾಯಿ, ಲಕ್ಷ್ಮಿ ಕರುವಿಗೆ ಮಾತೃ ಸ್ವರೂಪಿಯಾಗಿರುವುದು. ಲಕ್ಷ್ಮಿ ಕರುವಿಗೆ ಕೆಂಚಿ ನಾಯಿ ಪ್ರತಿದಿ‌ನ ತನ್ನ ಮೊಲೆ ಹಾಲನ್ನು ಉಣಿಸುತ್ತಿದ್ದಾಳೆ. ಅಚ್ಚರಿ ಆದರೂ ಇದು ಸತ್ಯ. ಪ್ರತಿದಿನ ಭಾಸ್ಕರ್ ಗೌಡರ ತೋಟದ ಮನೆಯಲ್ಲಿ ಈ ಅಪರೂಪದ ದೃಶ್ಯ ಕಾಣಸಿಗುತ್ತದೆ.

ಕೆಂಚಿ ಲಕ್ಷ್ಮಿಯ ಅಪರೂಪದ ಅನುಬಂಧ: ಕೆಂಚಿ ನಾಯಿ ಕಳೆದ ನಾಲ್ಕು ವರ್ಷಗಳಿಂದಲೂ ಭಾಸ್ಕರ್ ಗೌಡ ಅವರ ಮನೆಯ ಸದಸ್ಯೆಯಾಗಿದ್ದಾಳೆ. ಲಕ್ಷ್ಮಿ 3 ತಿಂಗಳ ಹಿಂದೆ ಆಗಮಿಸಿದ ಅತಿಥಿ. ಲಕ್ಷ್ಮಿ ಹುಟ್ಟಿದಾಗ ಆಕೆಯ ತಾಯಿ ಹಸುವಿಗೆ ಕೆಚ್ಚಲಲ್ಲಿ ಗಾಯವಾಗಿದ್ದು, ಹಾಲು ಕುಡಿಸಲು ಹಸುವಿನ ತಾಯಿ ಪರದಾಡುತಿತ್ತು. ಇದರಿಂದ ಲಕ್ಷ್ಮಿಗೆ ಸಾಕಷ್ಟು ಪ್ರಮಾಣದಲ್ಲಿ ತಾಯಿ ಹಾಲು ಸಿಗುತ್ತಿರಲಿಲ್ಲ.

ಇದನ್ನು ಗಮನಿಸಿದ ಭಾಸ್ಕರ್ ಗೌಡ, ಹಸುವಿನ ಹಾಲನ್ನು ಕರೆದು ಲಕ್ಷ್ಮಿಗೆ ಕುಡಿಸುವ ಕೆಲಸ ಮಾಡುತ್ತಿದ್ದರು. ಈ‌ ಮಧ್ಯೆ ಕೆಂಚಿ ನಾಯಿ ಸಹ ಮರಿ ಹಾಕಿದ್ದಳು. ಹಾಕಿದ್ದ 4 ಮರಿಯಲ್ಲಿ ಒಂದು ಮರಿ ಸತ್ತು ಹೋಯಿತು‌. ಉಳಿದ 3 ಮರಿಗಳು ಆರೋಗ್ಯವಾಗಿವೆ. ಈ ಮಧ್ಯೆ ಒಂದು ದಿನ ಭಾಸ್ಕರ್ ಗೌಡ ಲಕ್ಷ್ಮಿ ಕರು ಕೆಂಚಿ ನಾಯಿ ಬಳಿ ಹಾಲು ಕುಡಿಯುತ್ತಿರುವುದನ್ನು ನೋಡಿದ್ದಾರೆ. ಮೊದಲು ಭಾಸ್ಕರ್ ಗೌಡ ಅವರಿಗೆ ಗೊತ್ತಾಗಿಲ್ಲ. ಪ್ರಾಣಿಗಳು ಒಟ್ಟಿಗೆ ಆಟ ಆಡುತ್ತಿರಬಹುದು ಎಂದುಕೊಂಡಿದ್ದರು, ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಕೆಂಚಿ ನಾಯಿ ಲಕ್ಷ್ಮಿ ಕರುವಿಗೆ ಹಾಲುಣಿಸುತ್ತಿರುವುದು ಸ್ಪಷ್ಟವಾಗಿದೆ.

2 ತಿಂಗಳಿಂದ ನಿರಂತರವಾಗಿ ಹಾಲುಣಿಸುತ್ತಿರುವ ಕೆಂಚಿ: ಇನ್ನು ಕಳೆದ 2 ತಿಂಗಳಿಂದ ನಿರಂತರವಾಗಿ ಇದು ನಡೆದಿದೆ. ಬೆಳಗ್ಗೆಯಾದರೆ ಸಾಕು ಕೆಂಚಿ ನಾಯಿ ಕರುವಿಗಾಗಿ ಹುಡುಕಾಟ ನಡೆಸುತ್ತದೆ. ಕರುವನ್ನು ಕಾದು ಹಾಲುಣಿಸುತ್ತದೆ. ಸಾಮಾನ್ಯವಾಗಿ ಕರುವನ್ನು ಕೊಟ್ಟಿಗೆಯ ಒಳಗೆ ಕಟ್ಟಿರುತ್ತಾರೆ. ಕೊಟ್ಟಿಗೆಯಿಂದ ತಂದು ಹೊರಗೆ ಕಟ್ಟುವ ಸಮಯಕ್ಕೆ ಸರಿಯಾಗಿ ನಾಯಿ ಅಲ್ಲಿ ಬಂದು ಕಾಯುತ್ತಿರುತ್ತದೆ. ಈ ನಾಯಿಗೆ ಸಮಯ ಹೇಗೆ ತಿಳಿಯುತ್ತದೋ ಗೊತ್ತಿಲ್ಲ ಸರಿಯಾಗಿ ಕರು ಬರುವ ಸಮಯಕ್ಕೆ ಬಂದು ಹಾಲುಣಿಸಿ ಹೋಗುತ್ತದೆ. ಒಂದು ವೇಳೆ ಕರು ಕಾಣಲಿಲ್ಲ ಎಂದರೆ ಕೆಂಚಿ ಪರದಾಡಿ, ತನ್ನ ಮರಿಯೇ ಕಾಣುತ್ತಿಲ್ಲವೇನೋ ಎಂಬಂತೆ ಸಂಕಟ ಅನುಭವಿಸುತ್ತದೆ.

ನಾಯಿ ಮತ್ತು ಕರುವಿನ ಬಾಂಧವ್ಯ

ಈ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿದ ಮೈಸೂರು ಮಹಾನಗರ ಪಾಲಿಕೆಯ ಪಶುವೈದ್ಯಾಧಿಕಾರಿ ಡಾ. ಎಸ್.ಸಿ. ಸುರೇಶ್ ಎಲ್ಲಾ ಸಸ್ತನಿಗಳ ದೇಹದಲ್ಲಿ ಉತ್ಪಾದನೆಯಾಗುವ ಹಾಲಿನಲ್ಲೂ ಬಹುತೇಕ ಒಂದೇ ರೀತಿಯ ಗುಣಲಕ್ಷಣಗಳಿರುತ್ತವೆ. ಆದ್ದರಿಂದ ಒಂದು ಪ್ರಾಣಿಯ ಹಾಲನ್ನು ಮತ್ತೊಂದು ಕುಡಿದರೆ ಯಾವುದೇ ಸಮಸ್ಯೆಯಿಲ್ಲ. ಇದು ಅವುಗಳ ನಡುವಿನ ಅಪರೂಪದ ಬಾಂಧವ್ಯಕ್ಕೆ ಸಾಕ್ಷಿ. ಮೇಕೆ ಕೋತಿಗಳಿಗೆ ಹಾಲುಣಿಸುವುದು, ಕರುಗಳಿಗೆ ನಾಯಿ ಹಾಲುಣಿಸುವುದು ಇಂತಹ ಘಟನೆಗಳು ಆಗಿಂದಾಗ್ಗೆ ಕೇಳಿಬರುತ್ತವೆ. ಒಟ್ಟಿಗೆ ಬಾಳುತ್ತಿರುವ ಕಾರಣದಿಂದ ಅವುಗಳ ಮಧ್ಯೆ ಬೆಳೆಯುವ ಬಾಂಧವ್ಯವೇ ಇದಕ್ಕೆ ಕಾರಣ. ಯಾವ ಸಸ್ತನಿ ಯಾವ ಸಸ್ತನಿಗೆ ಹಾಲುಣಿಸಿದರೂ ಅಪಾಯವಿಲ್ಲ ಎಂದು ಹೇಳಿದರು.

ನಮ್ಮ ಮನೆಯ ಈ ಕರು ಹಾಗೂ ನಾಯಿಯ ಸಂಬಂಧ ನೋಡಿ ನಮಗೆ ಅಚ್ಚರಿಯಾಗಿದೆ. ಇಂತಹ ಘಟನೆಯನ್ನು ನಾನು ಎಲ್ಲೂ ನೋಡಿರಲಿಲ್ಲ. ಕರು ಬಹಳ ಆರೋಗ್ಯವಾಗಿದೆ. 3 ತಿಂಗಳ ಕರು 5 ತಿಂಗಳಾದಂತೆ ಕಾಣುತ್ತದೆ. ನಾವು ಅವುಗಳನ್ನು ಅವುಗಳ ಪಾಡಿಗೆ ಬಿಟ್ಟಿದ್ದೇವೆ ಎಂದು ನಾಯಿ ಕರುಗಳ ಮಾಲಿಕ ಭಾಸ್ಕರ್. ಎಲ್. ಗೌಡ ಹೇಳಿದ್ದಾರೆ.

ಜಾತಿ, ಮತ, ಪಂಥ, ವಿಚಾರಗಳ ಸಾಮಾಜಿಕ ಸ್ಥಾನಮಾನಗಳ ವ್ಯತ್ಯಾಸವಿದ್ದರೆ, ಒಬ್ಬರು ಮತ್ತೊಬ್ಬರನ್ನು ಹೀಯಾಳಿಸುವ ಮತ್ತು ಅವರನ್ನು ಕೀಳಾಗಿ ಕಾಣುವ ಮನಸ್ಥಿತಿ ಮನುಷ್ಯರದ್ದು. ಇಂತಹ ಮನುಷ್ಯರ ಮಧ್ಯೆಯೇ ಹುಟ್ಟಿ, ಬೆಳೆದು, ಬದುಕುವ ಪ್ರಾಣಿಗಳಿಗೆ ಮಾತ್ರ ಮನುಷ್ಯರಿಗಿಂತ ಹೆಚ್ಚಿನ ಮಾನವೀಯತೆ ಇರುತ್ತದೆ. ಅದು ಸಹ ವ್ಯತ್ಯಾಸಗಳನ್ನು ಮೀರಿ ಸಾಮರಸ್ಯದ ಜೀವನ ನಡೆಸುತ್ತವೆ ಎನ್ನುವುದಕ್ಕೆ ಕೆಂಚಿ‌ ನಾಯಿ ಹಾಗೂ ಲಕ್ಷ್ಮೀ ಕರುವಿನ ತಾಯಿ ಮಗುವಿನ ಬಾಂಧವ್ಯ ಸಾಕ್ಷಿಯಾಗಿದೆ.‌ ಇದು ಎಲ್ಲರಿಗೂ ಮಾದರಿಯಾಗಲಿ ಜಾತಿ‌, ಮತ, ಧರ್ಮ, ಆಸ್ತಿ, ಅಂತಸ್ತು, ಬಡವ, ಶ್ರೀಮಂತ ಎಂದು ಹೊಡೆದಾಡುವ ನಮ್ಮ ಜನ ಈ ಪ್ರಾಣಿಗಳನ್ನು ನೋಡಿಯಾದರೂ ಸಹಬಾಳ್ವೆಯನ್ನು ಕಲಿಯಲಿ ಎನ್ನುವುದೇ ಎಲ್ಲರ ಆಶಯ.

ನಾಯಿಗಳ ಹಸಿವು ತಣಿಸಿ‌ ನಿಜ‌ ಮಾನವೀಯತೆ ಮೆರೆಯುತಿರುವ ಮಹಾಮಾತೆ.. ಎಲ್ಲಿ?