
ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯಕ್ಕೆ (Akshaya Tritiya) ವಿಶೇಷ ಮಹತ್ವ ನೀಡಲಾಗಿದೆ. ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಅಂದರೆ ಈ ವರ್ಷ ಮೇ.10 ಶುಕ್ರವಾರದಂದು ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಧಾರ್ಮಿಕ ಮತ್ತು ಪೌರಾಣಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯ ದಿನದಂದು, ಮದುವೆ, ನಿಶ್ಚಿತಾರ್ಥ, ಗೃಹಪ್ರವೇಶ ಸೇರಿದಂತೆ ಎಲ್ಲಾ ರೀತಿಯ ಶುಭ ಕಾರ್ಯಗಳನ್ನು ಯಾವುದೇ ರೀತಿಯ ಮೂಹೂರ್ತವಿಲ್ಲದೆ ಮಾಡಬಹುದು.
ಪಂಚಾಂಗದ ಪ್ರಕಾರ, ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯು ಮೇ. 10 ರಂದು ಬೆಳಿಗ್ಗೆ 4:17 ಕ್ಕೆ ಪ್ರಾರಂಭವಾಗಿ ಮರುದಿನ ಅಂದರೆ ಮೇ. 11 ರಂದು ಮುಂಜಾನೆ 2:49 ಕ್ಕೆ ಕೊನೆಗೊಳ್ಳುತ್ತದೆ. ಹಾಗಾಗಿ ಉದಯ ತಿಥಿಯ ಪ್ರಕಾರ ಮೇ 10 ರಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಈ ದಿನ ಪೂಜೆ ಮಾಡಲು ಶುಭ ಸಮಯವು ಬೆಳಿಗ್ಗೆ 5.34 ರಿಂದ ಮಧ್ಯಾಹ್ನ 12.17 ರವರೆಗೆ ಇರುತ್ತದೆ. ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸಲು ದಿನವಿಡೀ ಶುಭ ಮೂಹೂರ್ತವಿರಲಿದ್ದು ಯಾವುದೇ ಸಮಯದಲ್ಲಿಯೂ ಚಿನ್ನ ಖರೀದಿ ಮಾಡಬಹುದು.
ಧಾರ್ಮಿಕ ದೃಷ್ಟಿಕೋನದಿಂದ ಈ ದಿನವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಅಲ್ಲದೆ ನೀವು ಯಾವುದೇ ರೀತಿಯ ಪುಣ್ಯ ಕಾರ್ಯವನ್ನು ಮಾಡಿದರೂ ಕೂಡ ಅದಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತದೆ ಎಂದು ಶ್ರೀಕೃಷ್ಣನು ಯುಧಿಷ್ಠಿರನಿಗೆ ಹೇಳಿದ್ದನು. ಜೊತೆಗೆ ಅಕ್ಷಯ ತೃತೀಯದಂದು ಯಾವ ವಸ್ತು ಖರೀದಿಸಿದರೂ ಕೂಡ ಅದು ಮತ್ತೆ ಮತ್ತೆ ಖರೀದಿ ಮಾಡುವ ಹಾಗಾಗುತ್ತದೆ ಅಂದರೆ ಅದು ನಿಮ್ಮ ಮನೆಯಲ್ಲಿ ಅಕ್ಷಯವಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಈ ದಿನ ಚಿನ್ನವನ್ನು ಖರೀದಿ ಮಾಡುವ ಪದ್ಧತಿ ಹುಟ್ಟುಕೊಂಡಿದೆ.
ಇದನ್ನೂ ಓದಿ: ಅಕ್ಷಯ ತೃತೀಯದಂದು ಲಕ್ಷ್ಮೀ ದೇವಿಗೆ ಈ ವಸ್ತುಗಳನ್ನು ಅರ್ಪಿಸಿ
ಸತ್ಯಯುಗ ಮತ್ತು ತ್ರೇತಾಯುಗವು ಅಕ್ಷಯ ತೃತೀಯದಿಂದ ಪ್ರಾರಂಭವಾಯಿತು ಎಂದು ನಂಬಲಾಗಿದೆ. ದ್ವಾಪರಯುಗವು ಈ ದಿನದಂದು ಕೊನೆಗೊಂಡಿತು, ಅದರ ನಂತರ ಕಲಿಯುಗವು ಅಕ್ಷಯ ತೃತೀಯದಿಂದ ಪ್ರಾರಂಭವಾಯಿತು ಎಂಬ ನಂಬಿಕೆ ಇದೆ. ಜೊತೆಗೆ ಈ ದಿನವನ್ನು ಭಾರತದ ಅನೇಕ ಭಾಗಗಳಲ್ಲಿ ಪರಶುರಾಮ ಜಯಂತಿ ಎಂದು ಆಚರಿಸಲಾಗುತ್ತದೆ. ಇದಲ್ಲದೆ, ಕೆಲವು ದಂತಕಥೆಗಳು ಅಕ್ಷಯ ತೃತೀಯದಂದು, ಮಹಾಭಾರತದ ಲೇಖಕ ವ್ಯಾಸ ಮುನಿ ಭಗವಾನ್ ಗಣೇಶನಿಗೆ ಹಿಂದೂ ಮಹಾಕಾವ್ಯವನ್ನು ವಿವರಿಸಲು ಪ್ರಾರಂಭಿಸಿದರು ಎನ್ನಲಾಗುತ್ತದೆ. ಜೊತೆಗೆ ಈ ದಿನದಂದು ಗಂಗೆಯು ಭೂಮಿಗೆ ಇಳಿದು ಬಂದಳು ಎಂಬ ನಂಬಿಕೆ ಇದೆ. ಈ ಕಥೆಗಳು ಹಿಂದೂ ಪುರಾಣದಲ್ಲಿ ಅಕ್ಷಯ ತೃತೀಯದ ಮಹತ್ವವನ್ನು ತೋರಿಸುತ್ತವೆ.
ಅಕ್ಷಯ ತೃತೀಯದಂದು ಅಗತ್ಯವಿರುವವರಿಗೆ ಕೆಲವು ವಸ್ತುಗಳನ್ನು ದಾನ ಮಾಡಿದರೆ, ಅದು ಭಗವಾನ್ ವಿಷ್ಣು ಮತ್ತು ಲಕ್ಷ್ಮೀ ದೇವಿಯನ್ನು ಸಂತುಷ್ಟ ಪಡಿಸುತ್ತದೆ ಎಂದು ಶಾಸ್ತ್ರದಲ್ಲಿಯೂ ಹೇಳಲಾಗಿದೆ. ಜೊತೆಗೆ ನಿಮ್ಮ ಮನೆಯಲ್ಲಿ ಸಂತೋಷ, ಸಮೃದ್ಧಿ ಸದಾಕಾಲ ಇರುತ್ತದೆ. ಸಂಪತ್ತಿನ ದೇವತೆಯಾದ ಮಾತೆ ಲಕ್ಷ್ಮೀಯನ್ನು ಮೆಚ್ಚಿಸುವ ಮೂಲಕ ಮನೆಯ ಎಲ್ಲಾ ಆರ್ಥಿಕ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:44 pm, Wed, 8 May 24