ಹಿಂದೂ ಕ್ಯಾಲೆಂಡರ್ ಪ್ರಕಾರ, ನವರಾತ್ರಿ ಹಬ್ಬವನ್ನು ವರ್ಷದಲ್ಲಿ ನಾಲ್ಕು ಬಾರಿ ಆಚರಿಸಲಾಗುತ್ತದೆ. ಅದರಲ್ಲಿ ಮೊದಲನೇಯದು ಚೈತ್ರ ನವರಾತ್ರಿ. ಹಾಗಾಗಿ ಇದು ದುರ್ಗಾ ದೇವಿಯ ಭಕ್ತರಿಗೆ ವಿಶೇಷವಾಗಿದೆ. ಈ 9 ದಿನಗಳಲ್ಲಿ, ಭಕ್ತರು ದುರ್ಗಾ ಮಾತೆಯನ್ನು ಭಕ್ತಿಯಿಂದ ಹಗಲು ರಾತ್ರಿ ಪೂಜಿಸುತ್ತಾರೆ. ಈ ಬಾರಿ ತಾಯಿ ದೇವಿಗೆ ಅರ್ಪಿತವಾದ ಚೈತ್ರ ನವರಾತ್ರಿಯು ಎ. 9 ರಿಂದ ಪ್ರಾರಂಭವಾಗಿ, ಎ. 17 ರಂದು ಕೊನೆಗೊಳ್ಳುತ್ತದೆ. ಹಾಗಾದರೆ ದೇವಿಯನ್ನು ಮೆಚ್ಚಿಸಲು ಈ 9 ದಿನಗಳು ಯಾವ ರೀತಿಯ ಆಚರಣೆಗಳನ್ನು ಮಾಡಬೇಕು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಚೈತ್ರ ನವರಾತ್ರಿ ಪ್ರತಿಪಾದ ತಿಥಿಯಿಂದ ಪ್ರಾರಂಭವಾಗುತ್ತದೆ. ವಿಶೇಷವೆಂದರೆ ಈ ಬಾರಿ ನವರಾತ್ರಿಯ ಮೊದಲ ದಿನದಂದು ಸರ್ವಾರ್ಥ ಸಿದ್ಧಿ ಯೋಗ ಮತ್ತು ಅಮೃತ ಸಿದ್ಧಿ ಯೋಗವಿದೆ. ಈ ಸಮಯದಲ್ಲಿ, ಕಲಶ ಸ್ಥಾಪನೆ ಮಾಡುವದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಎಲ್ಲವೂ ಸದಾ ನೆಲೆಸಿರುತ್ತದೆ ಎಂಬ ನಂಬಿಕೆ ಇದೆ. ಹಿಂದೂ ಧರ್ಮದಲ್ಲಿ ಚೈತ್ರ ಮತ್ತು ಶಾರದೀಯ ನವರಾತ್ರಿಗೆ ವಿಶೇಷ ಮಹತ್ವವಿದೆ. ದುರ್ಗಾ ಮಾತೆಯನ್ನು ವರ್ಷಕ್ಕೆ ಎರಡು ಬಾರಿ ಎಲ್ಲಾ ರೀತಿಯ ಆಚರಣೆಗಳ ಪ್ರಕಾರ ಪೂಜಿಸಲಾಗುತ್ತದೆ, ಗುಪ್ತ ನವರಾತ್ರಿಯನ್ನು ಸಾಧು- ಸಂತರು ಮಾತ್ರ ಆಚರಣೆ ಮಾಡುತ್ತಾರೆ. ಈ 9 ದಿನಗಳಲ್ಲಿ, ಮಾತೆಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ಹಾಗಾದರೆ ಈ ದಿನದ ಪ್ರಾಮುಖ್ಯತೆಯ ಬಗ್ಗೆ ತಿಳಿದುಕೊಳ್ಳಿ.
ನವರಾತ್ರಿಯ ಮೊದಲ ದಿನದಂದು, ಕಲಶ ಸ್ಥಾಪನೆ ಮಾಡಿ, ದುರ್ಗಾ ಮಾತೆಯ ಮೊದಲ ರೂಪ ಮತ್ತು ಚಂದ್ರನ ಸಂಕೇತವಾದ ತಾಯಿ ಶೈಲಪುತ್ರಿಯನ್ನು ಪೂಜಿಸಲಾಗುತ್ತದೆ. ಇದರಿಂದ ಜೀವನದಲ್ಲಿರುವ ಕಷ್ಟ ಮಾಯವಾಗಿ ಸಂತೋಷ ಮನೆಮಾಡುತ್ತದೆ. ಈ ದಿನ ಭಕ್ತರು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸುವುದು ತುಂಬಾ ಉತ್ತಮವಾದ ಫಲಗಳನ್ನು ನೀಡುತ್ತದೆ.
ಈ ದಿನ ದುರ್ಗಾ ಮಾತೆಯ ಎರಡನೇ ರೂಪವಾದ ಮಾತೆ ಬ್ರಹ್ಮಚಾರಿಣಿಯನ್ನು ಪೂಜಿಸುವ ಸಂಪ್ರದಾಯವಿದೆ. ತಾಯಿಯನ್ನು ಭಕ್ತಿಯಿಂದ ಪೂಜಿಸುವುದರಿಂದ ಎಲ್ಲಾ ರೀತಿಯ ದುಃಖ, ನೋವು ಮತ್ತು ತೊಂದರೆಗಳು ದೂರವಾಗುತ್ತವೆ. ತಾಯಿ ಬ್ರಹ್ಮಚಾರಿಣಿಯನ್ನು ಪೂಜಿಸುವಾಗ ಹಸಿರು ಬಟ್ಟೆಗಳನ್ನು ಧರಿಸಿ.
ನವರಾತ್ರಿಯ ಮೂರನೇ ದಿನ ಶುಕ್ರ ಗ್ರಹವನ್ನು ನಿಯಂತ್ರಿಸುವ ತಾಯಿ ಚಂದ್ರಘಂಟಾಳನ್ನು ಪೂಜಿಸಲಾಗುತ್ತದೆ. ಈ ದೇವಿಯನ್ನು ಭಕ್ತಿಯಿಂದ ಪೂಜಿಸುವುದರಿಂದ ಯಾವುದೇ ರೀತಿಯ ಭಯವಿದ್ದರೂ ಅದು ನಿವಾರಣೆಯಾಗುತ್ತದೆ. ಚಂದ್ರಘಂಟಾ ದೇವಿಯನ್ನು ಪೂಜಿಸುವಾಗ ಬೂದು ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ಮರೆಯಬೇಡಿ.
ಈ ದಿನ ಸೂರ್ಯ ದೇವರನ್ನು ಪ್ರತಿನಿಧಿಸುವ ಕೂಷ್ಮಾಂಡಾ ದೇವಿಯನ್ನು ಪೂಜಿಸುವ ಸಂಪ್ರದಾಯವಿದೆ. ಚತುರ್ಥಿ ತಿಥಿಯಂದು ಕಿತ್ತಳೆ ಬಣ್ಣದ ಬಟ್ಟೆಗಳನ್ನು ಧರಿಸುವುದು ತುಂಬಾ ಶುಭವೆಂದು ಹೇಳಲಾಗುತ್ತದೆ.
ಇದನ್ನೂ ಓದಿ: ಕ್ರೋಧಿ ಸಂವತ್ಸರ ಆರಂಭ ಯಾವಾಗ? ಶುಭ ಸಮಯವೇನು?
ಈ ದಿನ ಬುಧ ಗ್ರಹವನ್ನು ನಿಯಂತ್ರಿಸುವ ಸ್ಕಂದಮಾತಾ ದೇವಿಯನ್ನು ಪೂಜಿಸಲಾಗುತ್ತದೆ. ತಾಯಿಯನ್ನು ಭಕ್ತಿಯಿಂದ ಪೂಜಿಸುವುದರಿಂದ ಆಕೆಯ ವಿಶೇಷ ಆಶೀರ್ವಾದವನ್ನು ಪಡೆಯುತ್ತಾನೆ. ಪಂಚಮಿ ತಿಥಿಯಂದು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭವೆಂದು ಹೇಳಲಾಗುತ್ತದೆ.
ನವರಾತ್ರಿಯ ಆರನೇ ದಿನ ತಾಯಿ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ, ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸುವುದು ತುಂಬಾ ಒಳ್ಳೆಯದು. ಈ ದಿನ ತಾಯಿಯನ್ನು ಭಕ್ತಿಯಿಂದ ಪೂಜಿಸುವುದರಿಂದ ಧೈರ್ಯ, ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ.
ಈ ದಿನ ಶನಿ ಗ್ರಹದ ಸಂಕೇತವಾದ ಕಾಳರಾತ್ರಿಯನ್ನು ಪೂಜಿಸಲಾಗುತ್ತದೆ. ಈ ದೇವಿಯನ್ನು ಪೂಜಿಸುವುದರಿಂದ ಮಾಡಿದಂತಹ ಪಾಪಗಳಿಂದ ಮುಕ್ತಿ ಸಿಗುತ್ತದೆ. ಈ ಸಪ್ತಮಿ ತಿಥಿಯಂದು ನೀವು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸುವುದು ತುಂಬಾ ಒಳ್ಳೆಯದು.
ಅಷ್ಟಮಿ ತಿಥಿಯಂದು ಮಹಾಗೌರಿಯನ್ನು ಪೂಜಿಸುವ ಸಂಪ್ರದಾಯವಿದೆ. ಈ ದಿನ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭವೆಂದು ಹೇಳಲಾಗುತ್ತದೆ.
ಮಾತೆ ಸಿದ್ಧಿಧಾತ್ರಿ ರಾಹು ಗ್ರಹವನ್ನು ಪ್ರತಿನಿಧಿಸುತ್ತಾಳೆ, ಹಾಗಾಗಿ ನವಮಿ ತಿಥಿಯಂದು ಈಕೆಯನ್ನು ಪೂಜಿಸಲಾಗುತ್ತದೆ. ಈ ದಿನ ನೀವು ನೇರಳೆ ಬಣ್ಣದ ಬಟ್ಟೆಗಳನ್ನು ಧರಿಸುವುದು ತುಂಬಾ ಒಳ್ಳೆಯದು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ