ಭಾರತದಲ್ಲಿ ಧಾರ್ಮಿಕ ನಂಬಿಕೆಗಳ ಬೇರು ಅತ್ಯಂತ ಗಟ್ಟಿಯಾಗಿದೆ. ಎಷ್ಟೇ ಆಧುನಿಕತೆಗೆ ತೆರೆದುಕೊಂಡರೂ ಮನಸ್ಸಿನೊಳಗೆ ಬೀಡುಬಿಟ್ಟ ನಂಬಿಕೆಗಳು ತಲೆಮಾರಿನಿಂದ ತಲೆಮಾರಿಗೆ ದಾಟುತ್ತಾ ಬಂದು, ಇಂದಿಗೂ ಪ್ರಚಲಿತದಲ್ಲಿವೆ. ಅದರ ಭಾಗವೆಂಬಂತೆಯೇ ಹಣ, ಆಸ್ತಿ, ಅಂತಸ್ತಿನ ವಿಚಾರಕ್ಕೆ ಬಂದಾಗ ಲಕ್ಷ್ಮಿ ದೇವಿಯನ್ನು ಆರಾಧಿಸುವುದು ಚಾಲ್ತಿಯಲ್ಲಿದೆ. ಯಾರ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೋ, ಯಾರ ಮನೆಯ ಮೇಲೆ ಲಕ್ಷ್ಮಿಯ ಕೃಪೆ ಇರುತ್ತದೋ ಅಲ್ಲಿ ಹಣದ ಜತೆಗೆ ಧವಸ, ಧಾನ್ಯಗಳೂ ತುಂಬಿಕೊಂಡಿರುತ್ತವೆ. ಆ ಮನೆಯವರು ಎಂತಹ ಸಂದರ್ಭದಲ್ಲೂ ಹಸಿವಿನಿಂದ ಒದ್ದಾಡಬೇಕಾದ ಕಷ್ಟ ಎದುರಾಗುವುದಿಲ್ಲ ಎಂಬ ನಂಬಿಕೆಯಿದೆ. ಆದರೆ, ಆ ಮನೆಯವರೇನಾದರೂ ಲಕ್ಷ್ಮಿಗೆ ಬೇಸರ ಆಗುವಂತೆ ವರ್ತಿಸಿ, ಆಕೆ ಮನೆಯಿಂದ ಆಚೆ ಹೋದರೆ ನಂತರ ಹಿಂದೆಂದೂ ಕಾಣದಷ್ಟು ದಾರಿದ್ರ್ಯ ತುಂಬಿಕೊಳ್ಳುತ್ತದೆ ಎಂದೂ ಹೇಳಲಾಗುತ್ತದೆ. ಹೀಗಾಗಿ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಏನು ಮಾಡಬೇಕು ಎನ್ನುವುದನ್ನು ಚಾಣಕ್ಯ ಸೂತ್ರದಲ್ಲಿ ಸರಳವಾದ 3 ವಿಧಾನಗಳ ಮೂಲಕ ವಿವರಿಸಲಾಗಿದೆ.
1. ದಡ್ಡರಿಂದ ಅಥವಾ ಮೂರ್ಖರಿಂದ ಹೊಗಳಿಸಿಕೊಳ್ಳುವುದಕ್ಕಿಂತ ಬುದ್ಧಿವಂತರಿಂದ ತೆಗಳಿಸಿಕೊಳ್ಳುವುದು ಉತ್ತಮ ಎಂಬ ಮಾತಿದೆ. ಮೂರ್ಖರ ಗುಂಪಿನಲ್ಲಿದ್ದು ಬುದ್ಧಿವಂತ ಎನ್ನಿಸಿಕೊಳ್ಳುವುದಕ್ಕಿಂತ ಏನೂ ಗೊತ್ತಿಲ್ಲವೆಂಬಂತೆ ಬುದ್ಧಿವಂತರ ಗುಂಪಿನಲ್ಲಿದ್ದು ವಿಷಯ ಅರಿತುಕೊಳ್ಳುವುದು ಒಳ್ಳೆಯದು ಎನ್ನಲಾಗುತ್ತದೆ. ಹೀಗಾಗಿ, ಯಾವತ್ತೂ ಜ್ಞಾನವಂತರಿಗೆ ಗೌರವ ನೀಡಬೇಕು. ಯಾವ ಮನೆಯಲ್ಲಿ ಜ್ಞಾನಿಗಳಿಗೆ ಸೂಕ್ತ ಗೌರವ ಲಭಿಸುತ್ತದೋ ಆ ಜಾಗಕ್ಕೆ ಲಕ್ಷ್ಮಿ ತಾನಾಗಿಯೇ ಒಲಿದು ಬರುತ್ತಾಳೆ.
2. ಆಹಾರ ಪದಾರ್ಥಗಳು ಎಷ್ಟೇ ಕಡಿಮೆ ಬೆಲೆಗೆ ಸಿಕ್ಕರೂ ಅವುಗಳಿಗಿರುವ ಮಹತ್ವಕ್ಕೆ ಬೆಲೆ ಕಟ್ಟಲಾಗದು. ಒಬ್ಬರ ಹಸಿವು ನೀಗಿಸಬಲ್ಲ ಆಹಾರ ಪದಾರ್ಥಗಳನ್ನು ಯಾವ ಮನೆಯಲ್ಲಿ ಶಿಸ್ತುಬದ್ಧವಾಗಿ ಇಡಲಾಗುತ್ತದೋ, ಯಾರು ಅವುಗಳನ್ನು ಸುಮ್ಮನೇ ಕೂಡಿಟ್ಟು ಹಾಳು ಮಾಡದೇ ಅವಶ್ಯಕತೆ ಇದ್ದವರಿಗೆ ಕೊಡುತ್ತಾ ಸಹಾಯ ಮಾಡುತ್ತಾರೋ ಅಲ್ಲಿಗೆ ಲಕ್ಷ್ಮಿ ಬಂದೇ ಬರುತ್ತಾಳೆ. ಒಮ್ಮೆ ಲಕ್ಷ್ಮಿ ಕೃಪೆಗೆ ಪಾತ್ರರಾದರೆ ನೀವು ಯಾರಿಗೆ ಎಷ್ಟೇ ಸಹಾಯ ಮಾಡಿದರೂ ನಿಮಗೆ ಕೊರತೆಯಾಗದಷ್ಟು ಆಹಾರ ಒದಗಿ ಬರಲಾರಂಭಿಸುತ್ತದೆ. ಹೀಗಾಗಿ ಹಸಿದವರಿಗೆ ಮಿಡಿಯುವುದು, ಆಹಾರವನ್ನು ಗೌರವಿಸುವುದು ಬಹಳ ಮುಖ್ಯ.
3. ಮಹಿಳೆಯರನ್ನು ಲಕ್ಷ್ಮಿ ಎಂದೇ ಗೌರವಿಸಲಾಗುತ್ತದೆ. ಮನೆಗೆ ಮಹಾಲಕ್ಷ್ಮಿ ಬಂದಹಾಗಾಯಿತು, ಈಕೆ ಕಾಲಿಟ್ಟ ಮೇಲೆ ನಮ್ಮ ಮನೆಯ ಕಷ್ಟಗಳೆಲ್ಲಾ ನಿವಾರಣೆ ಆಯಿತು ಎಂಬ ಮಾತುಗಳನ್ನು ಸಾಧಾರಣವಾಗಿ ಕೇಳಿರುತ್ತೀರಿ. ಹೀಗಾಗಿ ಯಾವ ಮನೆಯಲ್ಲಿ ಮಹಿಳೆಯರನ್ನು ಗೌರವಿಸಲಾಗುತ್ತದೋ ಮತ್ತು ಯಾವ ಮ ನೆಯಲ್ಲಿ ಮಹಿಳೆಯರು ಕೂಡಾ ನಗುನಗುತ್ತಾ ಮನೆಯ ವಾತಾವರಣವನ್ನು ಶಾಂತಿಯಿಂದ ಕಾಪಾಡಿಕೊಳ್ಳುತ್ತಾರೋ ಅಂತಹ ಜಾಗದಲ್ಲಿ ನೆಲೆಸಲು ಲಕ್ಷ್ಮಿ ಇಚ್ಛಿಸುತ್ತಾಳೆ. ಒಂದುವೇಳೆ ಇದಕ್ಕೆ ತದ್ವಿರುದ್ಧವಾಗಿ ಬರೀ ಗಲಾಟೆ, ಘರ್ಷಣೆ, ಅಳು, ಕೂಗಾಟಗಳೇ ಮನೆಯನ್ನು ತುಂಬಿಕೊಂಡರೆ ಅಲ್ಲಿ ನೆಮ್ಮದಿಯ ಜತೆಗೆ ಲಕ್ಷ್ಮಿಯ ಅನುಪಸ್ಥಿತಿಯೂ ಕಾಡುತ್ತದೆ.
ಇದನ್ನೂ ಓದಿ:
Chanakya Niti: ಈ ವಿಚಾರಗಳನ್ನು ಗಂಡ ತನ್ನ ಹೆಂಡತಿಯ ಬಳಿ ಹೇಳಿಕೊಳ್ಳಬಾರದು; ಚಾಣಕ್ಯ ನೀತಿ ಇಲ್ಲಿದೆ
Chanakya Niti: ಜೀವನದಲ್ಲಿ ನೀವು ಅಳವಡಿಸಿಕೊಳ್ಳಬೇಕಾದ 7 ಪ್ರಮುಖ ಅಂಶಗಳಿವು; ಚಾಣಕ್ಯ ನೀತಿ ಹೀಗೆ ಹೇಳುತ್ತದೆ