ಬುಧ- ಶುಕ್ರರ ಅಂತರದಿಂದ ಸೆಪ್ಟೆಂಬರ್ ತನಕ ಮಳೆಗೆ ತತ್ವಾರ; ಇದು ಜ್ಯೋತಿಷ್ಯ ಲೆಕ್ಕಾಚಾರ

ಈ ಸಲ (ಈ ದಿನದ ಸ್ಥಿತಿ) ಬುಧನು ಮೇಷದಲ್ಲಿ 28 (ಡಿಗ್ರಿ), ಶುಕ್ರನು ಕರ್ಕಾಟಕದಲ್ಲಿ 6° (ಡಿಗ್ರಿ) ಇದ್ದಾನೆ. ಅಂದರೆ ಬುಧನಿಂದ ಶುಕ್ರನು 68 (ಡಿಗ್ರಿ) ದೂರದಲ್ಲಿ ಇದ್ದಾನೆ ಎಂದಾಯಿತು. ಇದರ ಪರಿಣಾಮ ಏನೆಂದರೆ, ಮಳೆಯು ದೂರ ಎಂದರ್ಥ. ಬುಧ- ಶುಕ್ರರ ಯುತಿಯು (ಒಂದೇ ಸ್ಥಾನದಲ್ಲಿ ಇರುವುದು) ಮಳೆಯ ಸೂಚಕ.

ಬುಧ- ಶುಕ್ರರ ಅಂತರದಿಂದ ಸೆಪ್ಟೆಂಬರ್ ತನಕ ಮಳೆಗೆ ತತ್ವಾರ; ಇದು ಜ್ಯೋತಿಷ್ಯ ಲೆಕ್ಕಾಚಾರ
ಸಾಂದರ್ಭಿಕ ಚಿತ್ರ
Follow us
ಸ್ವಾತಿ ಎನ್​ಕೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 06, 2023 | 1:56 PM

ಜ್ಯೋತಿಷ್ಯದಲ್ಲಿ ಗಣಿತ ಲೆಕ್ಕಾಚಾರಗಳು ಬಹಳ ಕರಾರುವಾಕ್. ಡಿಗ್ರಿಗಳಲ್ಲಿ ಗ್ರಹ ಸ್ಥಿತಿಯನ್ನು ಪರಾಮರ್ಶಿಸಿ, ಫಲವನ್ನು ನುಡಿಯಬಹುದು. ನಿಮಗೆಲ್ಲ ಗೊತ್ತಿರುವ ಹಾಗೆ ಹನ್ನೆರಡು ರಾಶಿಗಳಿವೆ. ಅವುಗಳಿಗೆ ಇಪ್ಪತ್ತೇಳು ನಕ್ಷತ್ರ, ನೂರಾ ಎಂಟು ಪಾದಗಳು ಬರುತ್ತವೆ. ಡಿಗ್ರಿಯಲ್ಲಿ ಲೆಕ್ಕ ಹಾಕುವಾಗ ಒಂದು ರಾಶಿಗೆ 30 ಡಿಗ್ರಿಯಂತೆ, ಹನ್ನೆರಡು ರಾಶಿಗೆ 360 ಡಿಗ್ರಿ ಆಗುತ್ತದೆ. ಗ್ರಹ ಸ್ಥಿತಿಗಳು ಹೇಗಿರುತ್ತವೆ ಅಂದರೆ, ಅವುಗಳು ಚಲಿಸುವ ವೇಗದಲ್ಲಿ ಒಂದು ಗ್ರಹ ಎಲ್ಲಿದೆ ಎಂಬುದು ಗೊತ್ತಾದರೆ, ಉಳಿದ ಎರಡು- ಮೂರು ಗ್ರಹಗಳು ಇಂಥ ರಾಶಿಯಲ್ಲೇ ಇರಲಿಕ್ಕಿದೆ ಅಂತ ಹೇಳಿಬಿಡಬಹುದು. ಆದರೆ ಕೆಲವು ಬಾರಿ ಲೆಕ್ಕಾಚಾರವನ್ನೂ ಮೀರಿದ ಬೆಳವಣಿಗೆಗಳು ಆಗುತ್ತವೆ: ಅಬ್ದಿಯುಮೊರ್ಮೆ ಮರ್ಯಾದೆಯಂ ದಾಂಟದೆ ಅನ್ನುವ ಹಾಗೆ. ಸಮುದ್ರವೂ ತನ್ನ ಮಿತಿಯನ್ನು ಮೀರುತ್ತದೆ. ಆಗಲೇ ಪ್ರಕೃತಿಯಲ್ಲಿ, ಮನುಜರಲ್ಲಿ ವ್ಯತ್ಯಾಸಗಳನ್ನು ಕಾಣುವುದು. ಈಗ ಅಂಥದ್ದೇ ಒಂದು ಉದಾಹರಣೆಯನ್ನು ನೀಡಬೇಕಾಗಿದೆ. ಇದಕ್ಕೆ ನಾವೆಲ್ಲರೂ ಸಿದ್ಧರಾಗಬೇಕು ಎಂಬ ಕಾರಣಕ್ಕಾಗಿ ಈ ಮಾಹಿತಿಯನ್ನು ನಿಮ್ಮ ಜತೆಗೆ ಹಂಚಿಕೊಳ್ಳುತ್ತಿದ್ದೇನೆ.

ಸಾಮಾನ್ಯವಾಗಿ ರವಿಯಿಂದ ಬುಧ ಶುಕ್ರರು 60° (ಅರವತ್ತು ಡಿಗ್ರಿ) ದಾಟಿ ಹೋಗೋದೇ ಇಲ್ಲ..ಯಾವುದೋ ಹಿಂದಿನ ಮನ್ವಂತರದಲ್ಲಿ ರವಿಯಿಂದ 180 (ಡಿಗ್ರಿ) ದೂರದಲ್ಲಿ ಇದ್ದಂಥ ಉದಾಹರಣೆ ಸಿಗಬಹುದು. ಆಗ ಶಬರ ತಸ್ಕರಾದಿ ಯೋಗಗಳಿತ್ತು.ಈ ಮನ್ವಂತರದಲ್ಲಿ ರವಿಯಿಂದ ಬುಧನಾಗಲೀ ಶುಕ್ರನಾಗಲೀ 60 (ಡಿಗ್ರಿ)ಗಿಂತ ದೂರದ ಅಂತರದಲ್ಲಿ ಇರಲು ಸಾಧ್ಯವೇ ಇಲ್ಲ. ಆದರೆ ಬುಧನು ಶುಕ್ರನಿಂದ 60 (ಡಿಗ್ರಿ) ದೂರದಲ್ಲಿ ಇರಲು ಸಾಧ್ಯ. ಆದರೂ ಇದು ಅಪರೂಪವೆ.

ಈ ಸಲ (ಈ ದಿನದ ಸ್ಥಿತಿ) ಬುಧನು ಮೇಷದಲ್ಲಿ 28 (ಡಿಗ್ರಿ), ಶುಕ್ರನು ಕರ್ಕಾಟಕದಲ್ಲಿ 6° (ಡಿಗ್ರಿ) ಇದ್ದಾನೆ. ಅಂದರೆ ಬುಧನಿಂದ ಶುಕ್ರನು 68 (ಡಿಗ್ರಿ) ದೂರದಲ್ಲಿ ಇದ್ದಾನೆ ಎಂದಾಯಿತು. ಇದರ ಪರಿಣಾಮ ಏನೆಂದರೆ, ಮಳೆಯು ದೂರ ಎಂದರ್ಥ. ಬುಧ- ಶುಕ್ರರ ಯುತಿಯು (ಒಂದೇ ಸ್ಥಾನದಲ್ಲಿ ಇರುವುದು) ಮಳೆಯ ಸೂಚಕ. ಹತ್ತಿರದಲ್ಲಿ ಅಂದರೆ 10°-15 (ಡಿಗ್ರಿ) ದೂರವಿದ್ದರೂ ಮಳೆಯಾಗುತ್ತದೆ. ಆದರೆ ಈ ಸಲ ಇದು ಬಹಳ ಕಷ್ಟ.

ಸುಮಾರು ಆಗಸ್ಟ್ ಅಂತ್ಯದವರೆಗೂ ಈ ಗ್ರಹರು ಅತಂತ್ರದಲ್ಲಿ ಇರುವಂತಿದೆ. ಇದಕ್ಕೆ ಸರಿಯಾಗಿ ಶುಕ್ರನಿಗೂ ವಕ್ರತ್ವ ಬಂದುಬಿಡುತ್ತದೆ. ಸೆಪ್ಟೆಂಬರ್ ವರೆಗೂ ಮಳೆಯ ಅಭಾವ ಇರಬಹುದು. ಏನೂ ಯಾವುದೋ ಅಂಶಗಳಲ್ಲಿ ಯುತಿಯೋ, ದೃಷ್ಟಿಯೋ ಇದ್ದಾಗ ಅಲ್ಪ ಸ್ವಲ್ಪ ಪ್ರಯೋಜನಕ್ಕಿಲ್ಲದ ಮಳೆ ಬರಬಹುದು. ಇದೊಂದು ರೀತಿಯ ಬರದ ಛಾಯೆ ಆಗುತ್ತದೆ. ಅದೂ ಅಲ್ಲದೆ ಈ ಗ್ರಹರ ಈ ಸ್ಥಿತಿಗತಿಗಳಿಂದ ಸೂರ್ಯನ ಪ್ರಖರತೆಯೂ ಹೆಚ್ಚಾದೀತು. ಅಂದರೆ ಸೂರ್ಯನ ಹತ್ತಿರದ ಗ್ರಹನು ಪಾದರಸದ ವಾತಾವರಣದಿಂದ (moisture) ಒಂದು ಪ್ರಖರತೆಗೆ ರಕ್ಷಣೆ ನೀಡಿದರೆ ಅದರ ನಂತರದ ಆವರಣ (ಲೇಯರ್)ದಲ್ಲಿ ಜಲ ಗ್ರಹ ಶುಕ್ರನ ಆವರಣ ಇರುತ್ತದೆ, moisture ಆವರಣ. ಹಾಗಾಗಿ ಪ್ರಖರತೆಯ ನಿಯಂತ್ರಣ ಇರುತ್ತದೆ.

ಇದನ್ನೂ ಓದಿ: Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 6ರ ದಿನಭವಿಷ್ಯ

ಈಗ ರವಿಯಿಂದ ಶುಕ್ರನು 38 (ಡಿಗ್ರಿ) ದೂರ, ಬುಧನು ರವಿಯಿಂದ 30 (ಡಿಗ್ರಿ) ಅಂತರದಲ್ಲಿ ಇದ್ದಾನೆ. ಸಾಮಾನ್ಯವಾಗಿ ಬುಧ, ಶುಕ್ರ, ರವಿಯದ್ದು ಪರಿಭ್ರಮಣಾ ವೇಗ ಹೆಚ್ಚು- ಕಡಿಮೆ ಒಂದೇ ಆಗಿರುತ್ತದೆ. ಇದು ಸರಿ ಹೊಂದಬೇಕಾದರೆ ವಕ್ರ, ಸ್ಥಂಭನಗಳ ಮೂಲಕವೇ ಆಗಬೇಕಷ್ಟೆ.

ಇದಕ್ಕೊಂದು ಉಪಮೆಯ ಕಥೆ ಹೇಳಿದ್ದರು. ಬುಧ- ಶುಕ್ರರಿಗೆ ಕಲಹ ಆಗುತ್ತದೆ. ಎಲ್ಲಿಯವರೆಗೆ ಅಂದರೆ ಬುಧನಿದ್ದಲ್ಲಿಗೆ ಶುಕ್ರ ಹೋಗಲ್ಲ, ಶುಕ್ರನಿದ್ದಲ್ಲಿಗೆ ಬುಧ ಹೋಗಲ್ಲ.ಇದು ಹನ್ನೆರಡು ವರ್ಷ ನಡೆಯುತ್ತದೆ. ಪರಿಣಾಮ ಭೀಕರ ಬರಗಾಲ. ಪ್ರಜೆಗಳು ತತ್ತರಿಸಿದರು, ನೀರು ಇಲ್ಲದಂತಾಯಿತು. ಕೊನೆಗೆ ದೇವತೆಗಳು ಒಂದು ಕಾರ್ಯಕ್ರಮ ಏರ್ಪಡಿಸಿ, ಮೋಸದಿಂದ ಬುಧ- ಶುಕ್ರರನ್ನು ಬರಮಾಡಿಸಿ, ಯುತಿ ಮಾಡಿಸಿದರು. ಆಗ ಮಳೆಯು ಧಾರಾಕಾರ ಬಂದು, ಇಳೆಯು ಹಸನಾಯಿತು. ಇದು ಉಪಮೆಯ ಕಥೆ.

ಈ ವರ್ಷ ಇದೇ ರೀತಿಯ ವಾತಾವರಣ ಕಾಣುತ್ತಿದೆ. ಸುಮಾರು ಸೆಪ್ಟೆಂಬರ್ ಅಂತ್ಯದವರೆಗೂ ಮಳೆಯ ಅಭಾವ ಕಾಡಲಿದೆ.

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಉಡುಪಿ (ಕಾಪು)

Published On - 1:53 pm, Tue, 6 June 23