
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಡಿಭಾಗದಲ್ಲಿರುವ ಗುಡ್ಡಟ್ಟು ಗ್ರಾಮವು ಶ್ರೀ ವಿನಾಯಕ ದೇವಸ್ಥಾನದಿಂದಾಗಿ ಪ್ರಪಂಚದಾದ್ಯಂತ ಗಮನ ಸೆಳೆದಿದೆ. ಈ ದೇವಸ್ಥಾನವು ಹಲವು ಅಪರೂಪದ ವೈಶಿಷ್ಟ್ಯಗಳನ್ನು ಹೊಂದಿದ್ದು, ಗಣಪತಿ ಭಕ್ತರಿಗೆ ಒಂದು ವಿಶಿಷ್ಟ ಅನುಭವವನ್ನು ನೀಡುತ್ತದೆ. ದೇವಸ್ಥಾನವು ಶಿರಿಹಾರ-ಗುಡ್ಡಟ್ಟು ರಸ್ತೆಯಲ್ಲಿದೆ. ಇಲ್ಲಿನ ವಿನಾಯಕ ದೇವರ ಮೂರ್ತಿಯು ಸ್ವಯಂಭೂ ರೂಪವಾಗಿದೆ. ಅಂದರೆ, ಇದನ್ನು ಯಾವುದೇ ಶಿಲ್ಪಿಯು ಕೆತ್ತದೆ, ಸಾವಿರಾರು ವರ್ಷಗಳ ಹಿಂದೆ ತಾನಾಗಿಯೇ ಕಲ್ಲಿನಿಂದ ಉದ್ಭವಿಸಿದೆ. ಇತರ ಸ್ವಯಂಭೂ ವಿಗ್ರಹಗಳಂತೆ ಇದು ಕೇವಲ ಬಂಡೆಯ ಆಕಾರದಲ್ಲಿಲ್ಲ, ಬದಲಾಗಿ ಸ್ಪಷ್ಟವಾದ ಗಣಪತಿಯ ಆಕಾರವನ್ನು ಹೊಂದಿದೆ. ಒಂದು ಕಾಲು ಮಡಚಿ, ಇನ್ನೊಂದು ಕಾಲು ಕೆಳಗೆ ಬಿಟ್ಟುಕೊಂಡು, ದಕ್ಷಿಣಕ್ಕೆ ಮುಖ ಮಾಡಿರುವ ಪೂರ್ವಾಸನದಲ್ಲಿ ಕುಳಿತಂತೆ ಕಾಣುತ್ತದೆ. ತಲೆಯಿಂದ ಕೆಳಗಿನವರೆಗೂ ಮೂಲ ಬಂಡೆಗೆ ಸೇರಿಕೊಂಡಿದ್ದು, ಸ್ಪಷ್ಟವಾದ ಸ್ವರೂಪದಿಂದ ಭಕ್ತರನ್ನು ಆಕರ್ಷಿಸುತ್ತದೆ.
ಈ ದೇವಸ್ಥಾನದ ಅತ್ಯಂತ ಮಹತ್ವದ ಮತ್ತು ವಿಶ್ವದಲ್ಲಿಯೇ ಏಕೈಕ ವಿಶಿಷ್ಟತೆಯೆಂದರೆ “ಜಲಾಧಿವಾಸ”. ಇಲ್ಲಿನ ಗಣಪತಿ ವಿಗ್ರಹವು ವರ್ಷದ 365 ದಿನಗಳೂ, ದಿನದ 24 ಗಂಟೆಯೂ ಕುತ್ತಿಗೆಯವರೆಗೂ ನೀರಿನಲ್ಲಿ ಮುಳುಗಿರುತ್ತದೆ. ಜಲಾಧಿವಾಸ ಗಣಪತಿಯ ಪರಿಕಲ್ಪನೆಯು ಪ್ರಪಂಚದಲ್ಲಿ ಬೇರೆಲ್ಲೂ ಕಂಡುಬರುವುದಿಲ್ಲ. ಮೂರನೆಯ ವಿಶಿಷ್ಟತೆಯೆಂದರೆ, ಇದು ಬಲಮುರಿ ಗಣಪತಿ. ಸೊಂಡಿಲು ಬಲಕ್ಕೆ ತಿರುಗಿರುವ ಗಣಪತಿಯನ್ನು ಬಲಮುರಿ ಗಣಪತಿ ಎಂದು ಕರೆಯಲಾಗುತ್ತದೆ.
ಪುರಾಣದ ಪ್ರಕಾರ, ತ್ರಿಪುರಾಸುರ ಸಂಹಾರದ ಸಮಯದಲ್ಲಿ ಈಶ್ವರನು ಗಣಪತಿಯನ್ನು ಪ್ರಾರ್ಥಿಸದೆ ಯುದ್ಧಕ್ಕೆ ತೆರಳುತ್ತಾನೆ. ವಿಘ್ನನಿವಾರಕನಾದ ಗಣಪತಿಯನ್ನು ಸ್ಮರಿಸದೆ ಹೋದ ಕಾರಣ ಈಶ್ವರನಿಗೆ ಹಿನ್ನಡೆಯಾಗುತ್ತದೆ. ಇದರಿಂದ ಕೋಪಗೊಂಡ ಈಶ್ವರನು ಗಣಪತಿಯ ಮೇಲೆ ಅಗ್ನೇಯಾಸ್ತ್ರ ಪ್ರಯೋಗಿಸುತ್ತಾನೆ. ಆದರೆ ಗಣಪತಿಯನ್ನು ಯಾವ ಅಸ್ತ್ರವೂ ಬಾಧಿಸಲಾಗದ ಕಾರಣ, ಈಶ್ವರನ ಅಸ್ತ್ರವು ಹುಸಿಯಾಗದೆ ಮಧುಸಾಗರದಲ್ಲಿ ಬೀಳುತ್ತದೆ. ಗಣಪತಿಗೆ ಜೇನು ಇಷ್ಟವಾದುದರಿಂದ, ಮಧುಸಾಗರದಲ್ಲಿ ಯಥೇಚ್ಛ ಜೇನನ್ನು ಸೇವಿಸುತ್ತಾನೆ. ಅತಿಯಾದ ಮಧುಪಾನದಿಂದ ದೇಹದಲ್ಲಿ ಉಷ್ಣ ಹೆಚ್ಚಾಗಿ ಉರಿಯಿಂದ ನರಳುತ್ತಾನೆ. ಇದನ್ನು ಕಂಡ ಈಶ್ವರನು ಪಕ್ಕದಲ್ಲಿರುವ ನರಸಿಂಹ ತೀರ್ಥ ಎಂಬ ಹೊಳೆಯ ಸಮೀಪ, ಜಲಾಧಿವಾಸಿ ಯಾಗಿರುವಂತೆ ಗಣಪತಿಗೆ ಸೂಚಿಸುತ್ತಾನೆ. ಈಶ್ವರನ ಈ ಸೂಚನೆಯ ಮೇರೆಗೆ ಗಣಪತಿಯು ತನ್ನ ಉರಿ ಶಮನಕ್ಕಾಗಿ ನಿರಂತರವಾಗಿ ನೀರಿನಲ್ಲಿ ನೆಲೆಸಿದ್ದಾನೆ ಎಂಬ ಪ್ರತೀತಿ ಇದೆ. ನರಸಿಂಹ ತೀರ್ಥದ ನೀರು ರೋಗನಾಶಕವೆಂದು ನಂಬಲಾಗಿದೆ.
ಇದನ್ನೂ ಓದಿ: ಸಾಮಾನ್ಯ ಜನರು ದೇವಸ್ಥಾನದ ಗರ್ಭಗುಡಿ ಪ್ರವೇಶ ಮಾಡಬಾರದು ಯಾಕೆ?
ಇಲ್ಲಿನ ಪ್ರಮುಖ ಮತ್ತು ವಿಶೇಷ ಪೂಜೆಯು ಆಯಿರ ಕೊಡ ಸೇವೆ (ಸಹಸ್ರ ಕುಂಭಾಭಿಷೇಕ) ಎಂದರೆ ಸಾವಿರ ಕೊಡಗಳಲ್ಲಿ (ಕುಡಿಕೆಗಳಲ್ಲಿ) ನೀರು ಅಥವಾ ಪವಿತ್ರ ದ್ರವ್ಯಗಳನ್ನು ತಂದು ಗಣಪತಿಗೆ ಅಭಿಷೇಕ ಮಾಡುವ ವಿಶೇಷ ಪೂಜಾ ವಿಧಾನವಾಗಿದೆ. ಗಣಪತಿಯ ಜಲಾಧಿವಾಸದ ನೀರು ಪರಿಸರದ ಉಷ್ಣತೆಯಿಂದ ಬಿಸಿಯಾಗುವುದರಿಂದ, ಉಷ್ಣತೆ ಕಡಿಮೆ ಮಾಡಲು ಈ ಸೇವೆಯನ್ನು ಮಾಡಲಾಗುತ್ತದೆ. ಆಯಿರ ಕೊಡ ಸೇವೆಯಲ್ಲಿ, ಹಳೆಯ ನೀರನ್ನು ಕೈಯಿಂದಲೇ ತೆಗೆದು, ದೇವರಿಗೆ ತೈಲಾಭ್ಯಂಜನ ಮತ್ತು ರುದ್ರಾಭಿಷೇಕ ಮಾಡಲಾಗುತ್ತದೆ. ನಂತರ ಗರ್ಭಗುಡಿಯನ್ನು ಸಂಪೂರ್ಣವಾಗಿ ಒರೆಸಿ, ಶುದ್ಧಗೊಳಿಸಲಾಗುತ್ತದೆ. ಈ ಪ್ರಕ್ರಿಯೆಗೆ ಸುಮಾರು ಮುಕ್ಕಾಲು ಗಂಟೆ ಬೇಕಾಗುತ್ತದೆ. ನಂತರ ಋಗ್ವೇದದ ಮಂತ್ರಗಳನ್ನು ಪಠಿಸುತ್ತಾ ದೀಪ ಬೆಳಗಿಸಿ ದೇವರಿಗೆ ಕಲ್ಪೋಕ್ತ ಪೂಜೆ, ನೈವೇದ್ಯ, ಮಂಗಳಾರತಿ, ಮಂತ್ರಪುಷ್ಪ ಸಮರ್ಪಿಸಲಾಗುತ್ತದೆ. ಬಳಿಕ ಶುದ್ಧವಾದ ತಂಪಾದ ನೀರನ್ನು ಸಾವಿರಾರು ಕೊಡಗಳಲ್ಲಿ ಗರ್ಭಗುಡಿಗೆ ಸುರಿಯಲಾಗುತ್ತದೆ. ಗಣಪತಿಯ ಕಂಠಪ್ರಮಾಣದವರೆಗೂ ನೀರು ತುಂಬಿದ ನಂತರ ಮತ್ತೊಂದು ಪೂಜೆ ಸಲ್ಲಿಸಿ, ಮಹಾಮಂಗಳಾರತಿ ಮಾಡಲಾಗುತ್ತದೆ. ಈ ಸೇವೆಯಲ್ಲಿ ಎರಡು ರುದ್ರಾಭಿಷೇಕ ಮತ್ತು ಒಂದು ಪವಮಾನ ಅಭಿಷೇಕ ಸೇರಿದಂತೆ ಸಾವಿರಾರು ಕೊಡ ನೀರು ಬಳಕೆಯಾಗುವುದರಿಂದ ಇದನ್ನು “ಆಯಿರ ಕೊಡ ಸೇವೆ” ಎಂದು ಕರೆಯಲಾಗುತ್ತದೆ.
ಮೊದಲು ದಿನಕ್ಕೆ ಒಂದು ಸೇವೆ ಮಾತ್ರ ನಡೆಯುತ್ತಿತ್ತು. ಆದರೆ 2007ರಿಂದ ದಿನಕ್ಕೆ ಎರಡು ಸೇವೆಗಳು ನಡೆಯುತ್ತಿವೆ. ಆದರೂ ಈ ಸೇವೆಗೆ ಅಗಾಧ ಬೇಡಿಕೆಯಿದ್ದು, ಈಗ ಕಾಯ್ದಿರಿಸಿದರೆ 2041ರ ವೇಳೆಗೆ ದಿನಾಂಕ ಲಭ್ಯವಾಗುವಷ್ಟು ಜನಪ್ರಿಯವಾಗಿದೆ. ಇಲ್ಲಿ ಪ್ರತಿದಿನ ಅನ್ನಸಂತರ್ಪಣೆ ಇರುತ್ತದೆ. ಮಧ್ಯಾನ ಪೂಜೆ ಮುಗಿದ ನಂತರ ಪ್ರಸಾದ ವಿತರಣೆ ಮಾಡಲಾಗುತ್ತದೆ. ದೇವಸ್ಥಾನವು ಅರಣ್ಯ ಪ್ರದೇಶದ ಮಧ್ಯೆ, ಸುಂದರ ಹಸಿರು ಪರಿಸರದಲ್ಲಿದ್ದು, ಯಾವುದೇ ಗದ್ದಲವಿಲ್ಲದ ಶಾಂತ ವಾತಾವರಣವನ್ನು ಹೊಂದಿದೆ. ಕುಂದಾಪುರದಿಂದ ಸುಮಾರು 30 ನಿಮಿಷಗಳ ಪ್ರಯಾಣದಲ್ಲಿ ಈ ಕ್ಷೇತ್ರವನ್ನು ತಲುಪಬಹುದು. ಗಣಪತಿ ಭಕ್ತರು ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಪವಿತ್ರ ಕ್ಷೇತ್ರವಿದು.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ