AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Traditional Method: ವೆಂಕಟೇಶ್ವರನಿಗೆ ಹರಕೆ ಅಥವಾ ಮುಡುಪು ಕಟ್ಟುವ ಸರಿಯಾದ ವಿಧಾನ ಇಲ್ಲಿದೆ

ಕಲಿಯುಗದ ದೇವರೆಂದು ನಂಬಲಾದ ಶ್ರೀ ವೆಂಕಟೇಶ್ವರನು ಭಕ್ತರ ಆಸೆ ಆಕಾಂಕ್ಷೆಗಳನ್ನು ಈಡೇರಿಸುತ್ತಾನೆ. ಹರಕೆ ಅಥವಾ ಮುಡುಪು ಕಟ್ಟುವ ಮೂಲಕ ಇಷ್ಟಾರ್ಥಗಳನ್ನು ಕೋರಬಹುದು. ಶ್ರದ್ಧಾಭಕ್ತಿಯಿಂದ ನಿರ್ದಿಷ್ಟ ವಿಧಾನದಲ್ಲಿ ಮುಡುಪು ಸಿದ್ಧಪಡಿಸಿ, ಕೆಲಸ ನೆರವೇರಿದ ನಂತರ ತಿರುಪತಿಗೆ ತೆರಳಿ ಹುಂಡಿಗೆ ಸಮರ್ಪಿಸುವುದರಿಂದ ಸಕಲ ಕಾರ್ಯಗಳೂ ಸಿದ್ಧಿಸುತ್ತವೆ ಎಂದು ನಂಬಲಾಗಿದೆ.

Traditional Method: ವೆಂಕಟೇಶ್ವರನಿಗೆ ಹರಕೆ ಅಥವಾ ಮುಡುಪು ಕಟ್ಟುವ ಸರಿಯಾದ ವಿಧಾನ ಇಲ್ಲಿದೆ
ವೆಂಕಟೇಶ್ವರನಿಗೆ ಹರಕೆ
ಅಕ್ಷತಾ ವರ್ಕಾಡಿ
|

Updated on: Dec 31, 2025 | 11:58 AM

Share

ಕಲಿಯುಗದ ದೈವ ಶ್ರೀ ವೆಂಕಟೇಶ್ವರನಿಗೆ ಹರಕೆ ಅಥವಾ ಮುಡುಪು ಕಟ್ಟುವ ಸಂಪೂರ್ಣ ವಿಧಾನದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ಮನುಷ್ಯನು ಜೀವನದಲ್ಲಿ ಹಲವು ಆಸೆ ಆಕಾಂಕ್ಷೆಗಳನ್ನು ಹೊಂದಿರುತ್ತಾನೆ. ಇಂತಹ ಆಸೆಗಳನ್ನು ಈಡೇರಿಸಲು ಕಲಿಯುಗದಲ್ಲಿ ನೇರವಾಗಿ ಅನುಗ್ರಹಿಸುವ ದೈವ ಕಲೌ ವೆಂಕಟನಾಥ ಎಂಬ ನಂಬಿಕೆ ಇದೆ. ಶ್ರೀ ವೆಂಕಟೇಶ್ವರನು ಕಲಿಯುಗದ ದೇವರಾಗಿದ್ದು, ಭಕ್ತರ ಕೋರಿಕೆಗಳನ್ನು ಈಡೇರಿಸುವ ಶಕ್ತಿಯನ್ನು ಹೊಂದಿದ್ದಾನೆ. ಭಕ್ತಿ, ಶರಣಾಗತಿ ಮತ್ತು ಆತ್ಮವಿಶ್ವಾಸದಿಂದ ಹರಕೆ ಅಥವಾ ಮುಡುಪನ್ನು ಕಟ್ಟುವ ಮೂಲಕ ನಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬಹುದು. ಕನ್ನಡದಲ್ಲಿ ಹರಕೆ ಎಂದು ಕರೆಯಲಾಗುವ ಇದನ್ನು ತಿರುಪತಿ ಕ್ಷೇತ್ರದಲ್ಲಿ ಮುಡುಪು ಎಂದು ಕರೆಯುತ್ತಾರೆ. ಈ ಮುಡುಪನ್ನು ಕಟ್ಟುವ ಒಂದು ವಿಶಿಷ್ಟ ವಿಧಾನವಿದೆ.

ಯಾರು ಶ್ರದ್ಧಾಭಕ್ತಿಯಿಂದ ಸಂಕಲ್ಪ ಮಾಡಿಕೊಂಡು ಮುಡುಪನ್ನು ಕಟ್ಟುತ್ತಾರೋ, ಅವರ ಕಾರ್ಯಗಳು ಯಶಸ್ವಿಯಾದ ನಂತರ ಆ ಮುಡುಪಿನ ಸಮೇತ ಕ್ಷೇತ್ರಕ್ಕೆ ಭೇಟಿ ನೀಡಿ ಭಗವಂತನಿಗೆ ಅರ್ಪಿಸಿದರೆ ಶುಭವಾಗುತ್ತದೆ. ಈ ಹರಕೆ ಅಥವಾ ಮುಡುಪು ಹೇಗೆ ಇರಬೇಕು ಮತ್ತು ಅದನ್ನು ಹೇಗೆ ಕಟ್ಟಬೇಕು ಎಂಬುದು ಇಲ್ಲಿ ವಿವರಿಸಲಾಗಿದೆ. ವೆಂಕಟೇಶ್ವರನನ್ನು ಕರೆದರೆ ಮಾತಾಡೋ ದೈವ ಎಂದೂ ಕರೆಯುತ್ತಾರೆ. ನಿಮ್ಮ ಎಲ್ಲೆಡೆ ಇರುವ ವೆಂಕಟೇಶ್ವರನ ಚಿತ್ರ ಅಥವಾ ವಿಗ್ರಹದ ಮುಂದೆ ನೀವು ನಿಮ್ಮ ಕೋರಿಕೆಗಳನ್ನು ಪ್ರಾರ್ಥಿಸಬಹುದು. ವಿದ್ಯಾಭ್ಯಾಸ, ಸಂತಾನ, ಮನೆ ನಿರ್ಮಾಣ ಅಥವಾ ಮಾರಾಟ, ಆಸ್ತಿ ಖರೀದಿ ಅಥವಾ ಮಾರಾಟ, ಉದ್ಯೋಗ, ವ್ಯಾಪಾರ ಅಥವಾ ಆರೋಗ್ಯ ಸಮಸ್ಯೆಗಳು ಹೀಗೆ ಮನುಷ್ಯನ ಯಾವುದೇ ನ್ಯಾಯಯುತವಾದ ಇಷ್ಟಾರ್ಥಗಳನ್ನು ಭಗವಂತನಿಗೆ ಅರಿಕೆ ಮಾಡಿಕೊಳ್ಳಬಹುದು. ಧರ್ಮಬದ್ಧವಾದ ಕೋರಿಕೆಗಳಾಗಿದ್ದರೆ ಕಲೌ ವೆಂಕಟನಾಥನ ಕೃಪೆ ನೇರವಾಗಿ ಸಿಗುತ್ತದೆ ಮತ್ತು ಎಂತಹ ಸಮಸ್ಯೆಗೂ ಪರಿಹಾರ ಸಿಗುತ್ತದೆ ಎಂಬುದು ನಂಬಿಕೆ.‘

ಹರಕೆ ಅಥವಾ ಮುಡುಪನ್ನು ಕಟ್ಟುವ ವಿಧಾನ ಹೀಗಿದೆ. ಶನಿವಾರದ ದಿನದಂದು ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಶುಚಿರ್ಭೂತರಾಗಬೇಕು. ನಂತರ ನಿಮ್ಮ ಮನೆಯಲ್ಲಿರುವ ವೆಂಕಟೇಶ್ವರನ ಚಿತ್ರಪಟ ಅಥವಾ ವಿಗ್ರಹದ ಮುಂದೆ ಕುಳಿತು ದೀಪಾರಾಧನೆ ಮಾಡಬೇಕು. ಗಣಪತಿ ಸ್ತೋತ್ರವನ್ನು ಪಠಿಸುವುದು ಶುಭ. ಒಂದು ಬಿಳಿಯ ವಸ್ತ್ರವನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಚೆನ್ನಾಗಿ ಶುದ್ಧೀಕರಿಸಿ, ಅದಕ್ಕೆ ಅರಿಶಿನವನ್ನು ಲೇಪಿಸಿ ಹಳದಿ ಬಟ್ಟೆಯನ್ನಾಗಿ ಮಾಡಿಕೊಳ್ಳಬೇಕು. ಆ ಅರಿಶಿನದ ಬಟ್ಟೆಯ ನಾಲ್ಕು ಕಡೆಗಳಲ್ಲಿ ಕುಂಕುಮ ಹಚ್ಚಿ, ಅದರಲ್ಲಿ ಒಂದಷ್ಟು ಅರಿಶಿನದ ಅಕ್ಷತೆಗಳನ್ನು ಇಡಬೇಕು. ನಂತರ ಹನ್ನೊಂದು ರೂಪಾಯಿ ನಾಣ್ಯಗಳನ್ನು (ಹನ್ನೊಂದು ಒಂದೊಂದು ರೂಪಾಯಿ ನಾಣ್ಯಗಳಾಗಿರಬಹುದು, ಅಥವಾ ಹತ್ತು ರೂಪಾಯಿ ಮತ್ತು ಒಂದು ರೂಪಾಯಿ ನಾಣ್ಯವಾಗಿರಬಹುದು) ಅದರಲ್ಲಿ ಇಡಬೇಕು. ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೆಚ್ಚಿನ ಹಣವನ್ನೂ ಸಹ ಇಡಬಹುದು.

ಇದನ್ನೂ ಓದಿ: ವೈಕುಂಠ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎಂದು ಕರೆಯುವುದೇಕೆ? ಮಾಹಿತಿ ಇಲ್ಲಿದೆ

ಈ ಹರಕೆ ಅಥವಾ ಮುಡುಪನ್ನು ಸಿದ್ಧಪಡಿಸಿದ ನಂತರ ಸ್ವಾಮಿಗೆ ಹೇಳಿ, “ನನ್ನ ಇಂತಹ ಕೋರಿಕೆ ಈಡೇರಿದ ಮೇಲೆ ದರ್ಶನಕ್ಕೆ ಬರುತ್ತೇನೆ” ಎಂದು ಪ್ರಾರ್ಥಿಸಬೇಕು. ಅದಕ್ಕೆ ಆರತಿ ಮಾಡಿ, ಪೂಜೆ ಮಾಡಿ ಭಗವಂತನ ಹತ್ತಿರ ಇಟ್ಟು ಪ್ರಾರ್ಥಿಸಬೇಕು. “ನನ್ನ ಆಸೆ, ನನ್ನ ಕೋರಿಕೆ ಇದನ್ನು ಈಡೇರಿಸು ಸ್ವಾಮಿ” ಎಂದು ಶ್ರದ್ಧಾಭಕ್ತಿಯಿಂದ ಬೇಡಿಕೊಳ್ಳಬೇಕು. ಶನಿವಾರದ ದಿನ ಅವರ ನಾಮಾವಳಿಗಳಾದ “ಓಂ ನಮೋ ವೆಂಕಟೇಶಾಯ” ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು. ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖಮಾಡಿ ಪ್ರಾರ್ಥನೆ ಮಾಡುವುದು ಉತ್ತಮ.

ಈ ಪ್ರಾರ್ಥನೆ ಮಾಡಿದ ಹರಕೆಯನ್ನು ದೇವರ ಗುಡಿಯಲ್ಲಿ ಅಥವಾ ನಿಮ್ಮ ಬೀರುವಿನಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ನಿಮ್ಮ ಕೆಲಸ ಕಾರ್ಯಗಳು ಯಶಸ್ವಿಯಾಗಿ, ಇಷ್ಟಾರ್ಥ ಈಡೇರಿದ ನಂತರ ಆ ಮುಡುಪನ್ನು ತೆಗೆದುಕೊಂಡು ನೇರವಾಗಿ ತಿರುಪತಿ ಕ್ಷೇತ್ರಕ್ಕೆ ಹೋಗಿ ಹುಂಡಿಗೆ ಹಾಕಿ. ಅದರ ಜೊತೆಗೆ ಇನ್ನೊಂದಷ್ಟು ಹಣವನ್ನು ಹಾಕಿ ಭಗವಂತನಿಗೆ ಕೃತಜ್ಞತೆ ಸಲ್ಲಿಸಿ ಪ್ರಾರ್ಥನೆ ಮಾಡಿಕೊಂಡು ಬಂದರೆ, ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಕೂಡಾ ಈಡೇರುತ್ತವೆ. ಈ ದರ್ಶನದಿಂದಲೇ ಕೂಡಾ ಒಳ್ಳೆದಾಗುತ್ತದೆ. ಇದು ಹರಕೆ ಅಥವಾ ಮುಡುಪಿನ ಮಹತ್ವ ಮತ್ತು ಫಲವಾಗಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ