Vaikuntha Dwadashi: ವೈಕುಂಠ ದ್ವಾದಶಿಯ ಮಹತ್ವ, ಆಚರಣೆ ಮತ್ತು ಫಲಗಳ ಮಾಹಿತಿ ಇಲ್ಲಿದೆ
ವೈಕುಂಠ ಏಕಾದಶಿಯ ಮಾರನೇ ದಿನ ಆಚರಿಸಲಾಗುವ ಮುಕ್ಕೋಟಿ ದ್ವಾದಶಿ ಅಥವಾ ವೈಕುಂಠ ದ್ವಾದಶಿ ಅತ್ಯಂತ ಪವಿತ್ರ ದಿನ. 33 ಕೋಟಿ ದೇವತೆಗಳು ವಿಷ್ಣುವಿನ ದರ್ಶನ ಪಡೆದ ಈ ದಿನ, ಏಕಾದಶಿ ವ್ರತದ ಪಾರಣೆಗೆ, ದಾನ ಧರ್ಮಗಳಿಗೆ ಪ್ರಾಶಸ್ತ್ಯವಿದೆ. ಈ ದಿನ ಮಾಡುವ ದಾನ ಧರ್ಮಗಳು ನೂರು ಯಜ್ಞಗಳ ಫಲ ನೀಡುತ್ತವೆ ಎಂದು ನಂಬಲಾಗಿದೆ.

ವೈಕುಂಠ ದ್ವಾದಶಿ ಅಥವಾ ಮುಕ್ಕೋಟಿ ದ್ವಾದಶಿಯ ಮಹತ್ವ, ಆಚರಣೆ ಮತ್ತು ಫಲಗಳ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ವೈಕುಂಠ ಏಕಾದಶಿಯನ್ನು ಆಚರಿಸಿದ ಮಾರನೇ ದಿನ ಬರುವ ಈ ದ್ವಾದಶಿ ಅತೀ ಮಹತ್ವಪೂರ್ಣವಾದ ದಿನವಾಗಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ, 33 ಕೋಟಿ ದೇವತೆಗಳು ವೈಕುಂಠದಲ್ಲಿ ಉತ್ತರ ದ್ವಾರದ ಮುಖಾಂತರ ಶ್ರೀ ವಿಷ್ಣುವಿನ ದರ್ಶನ ಪಡೆದ ಸಂದರ್ಭ ಇದಾಗಿದೆ. ಹೀಗಾಗಿ, ಈ ದಿನವನ್ನು ಮುಕ್ಕೋಟಿ ದ್ವಾದಶಿ ಎಂದು ಕರೆಯಲಾಗುತ್ತದೆ.
ಯಾವುದೇ ಕಾರ್ಯ ಅಥವಾ ಯಜ್ಞ ಮಾಡಿದಾಗ ಪೂರ್ಣಾಹುತಿ ಎಷ್ಟು ಮುಖ್ಯವೋ, ಹಾಗೆಯೇ ವೈಕುಂಠ ದ್ವಾದಶಿ ವೈಕುಂಠ ಏಕಾದಶಿ ವ್ರತದ ಪರಿಸಮಾಪ್ತಿಯ ದಿನವಾಗಿದೆ. ಏಕಾದಶಿಯಂದು ಪೂರ್ಣವಾಗಿ ಉಪವಾಸವಿದ್ದು, ದಾನ ಧರ್ಮಗಳು ಮತ್ತು ಜಪ ತಪಗಳನ್ನು ಕೈಗೊಂಡ ಭಕ್ತರು ಈ ದಿನ ಪಾರಣ ಮಾಡಿ ವ್ರತವನ್ನು ಪೂರ್ಣಗೊಳಿಸುತ್ತಾರೆ. ಇದು ಉಪವಾಸ ವ್ರತದ ಫಲವನ್ನು ಸಂಪೂರ್ಣವಾಗಿ ಪಡೆಯಲು ಅತ್ಯಂತ ಪ್ರಾಶಸ್ತ್ಯವಾದ ದಿನ. ಅತಿಥಿಗಳಿಗೆ ಪೂರ್ಣ ಗೌರವ ನೀಡಿ ಬೀಳ್ಕೊಡುವುದು ಎಷ್ಟು ಮುಖ್ಯವೋ, ಹಾಗೆಯೇ ಏಕಾದಶಿ ವ್ರತದ ಸಮರ್ಪಕ ಅಂತ್ಯ ವೈಕುಂಠ ದ್ವಾದಶಿಯಲ್ಲಾಗುತ್ತದೆ. ಈ ದಿನದಂದು ಉಪವಾಸವನ್ನು ಬಿಡುವುದು ಮತ್ತು ದಾನ ಧರ್ಮಗಳನ್ನು ಮಾಡುವುದು ನೂರು ಯಜ್ಞಗಳನ್ನು ಮಾಡಿದ ಫಲಕ್ಕೆ ಸಮಾನವೆಂದು ಶಾಸ್ತ್ರಗಳು ಹೇಳುತ್ತವೆ.
ವೈಕುಂಠ ದ್ವಾದಶಿಯಂದು ಭಕ್ತರು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನಾದಿಗಳನ್ನು ಮುಗಿಸಿ, ಭಗವಂತನ ಪೂಜೆ ಮಾಡಬೇಕು. ಈ ದಿನ ಸಾತ್ವಿಕ ಆಹಾರ ಸೇವನೆ ಮಾತ್ರ ಮಾನ್ಯವಾಗಿದ್ದು, ರಜೋ ಮತ್ತು ತಮೋ ಆಹಾರಗಳು ನಿಷಿದ್ಧವಾಗಿರುತ್ತವೆ. ಭಗವಂತನ ಆರಾಧನೆ ಮಾಡುತ್ತಾ, ಸಾಧ್ಯವಾದರೆ ಕನಿಷ್ಠ ಐದು ಜನ ನಿರ್ಗತಿಕರಿಗೆ ಅಥವಾ ಅಶಕ್ತರಿಗೆ ಆಹಾರ ದಾನ ಮಾಡಬೇಕು. ಇದರಿಂದ ಪೂರ್ಣ ಫಲ ದೊರೆಯುತ್ತದೆ. ತುಳಸಿಯಿಂದ ವಿಷ್ಣುವನ್ನು ಆರಾಧಿಸುವುದರಿಂದಲೂ ಅತಿ ಹೆಚ್ಚು ಪುಣ್ಯ ಲಭಿಸುತ್ತದೆ. ಕೆಲವರಿಗೆ ಏಕಾದಶಿಯಂದು ವಿಷ್ಣು ದರ್ಶನಕ್ಕೆ ಅವಕಾಶವಾಗದಿದ್ದರೆ, ದ್ವಾದಶಿಯಂದು ದರ್ಶನ ಮಾಡಿದರೂ ಅದರ ಫಲ ದೊರೆಯುತ್ತದೆ. ಕೆಲವು ದೇವಾಲಯಗಳಲ್ಲಿ ಉತ್ತರದ ದ್ವಾರವನ್ನು ದ್ವಾದಶಿಯಂದು ಸಹ ತೆರೆದಿಡಲಾಗುತ್ತದೆ.
ಇದನ್ನೂ ಓದಿ: ವೈಕುಂಠ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎಂದು ಕರೆಯುವುದೇಕೆ? ಮಾಹಿತಿ ಇಲ್ಲಿದೆ
ಈ ಪವಿತ್ರ ದಿನದಂದು ಅನ್ನದಾನ, ಸಂಕಲ್ಪಗಳು ಮತ್ತು ದಾನ ಧರ್ಮಗಳನ್ನು ಕೈಗೊಳ್ಳಲು ಬಹಳ ವಿಶೇಷ ಕಾಲ ಇದಾಗಿದೆ. ಕೇವಲ ವಿಷ್ಣುವಿನ ಅನುಗ್ರಹವಷ್ಟೇ ಅಲ್ಲದೆ, 33 ಕೋಟಿ ದೇವತೆಗಳ ಅನುಗ್ರಹವೂ ಸಹ ಈ ದಿನ ಲಭಿಸುತ್ತದೆ. ಸಂತೃಪ್ತಿಯಿಂದ ಮತ್ತು ಸಂತೋಷದಿಂದ ನಿರ್ಗತಿಕರಿಗೆ ಸಹಾಯ ಮಾಡುವುದು, ಅನ್ನದಾನ ಮಾಡುವುದರಿಂದ ಭಕ್ತರಿಗೆ ಬಹಳಷ್ಟು ಶುಭವಾಗುತ್ತದೆ. ಮುಕ್ಕೋಟಿ ಏಕಾದಶಿಗೆ ಎಷ್ಟು ಪ್ರಾಶಸ್ತ್ಯವಿದೆಯೋ, ಮುಕ್ಕೋಟಿ ದ್ವಾದಶಿಗೂ ಅಷ್ಟೇ ಪ್ರಾಶಸ್ತ್ಯವಿದೆ. ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಓಂ ನಮೋ ವೆಂಕಟೇಶಾಯ ಎಂಬ ಮಂತ್ರವನ್ನು ನಿರಂತರವಾಗಿ ಜಪಿಸುವುದರಿಂದ ಉತ್ತಮ ಫಲಗಳು ಪ್ರಾಪ್ತವಾಗುತ್ತವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




