ಹಿಂದೂ ಸಂಪ್ರದಾಯದಲ್ಲಿ ಹಿರಿಯರನ್ನು ಗೌರವಿಸುವ ಪದ್ಧತಿ ಎಂದಿಗೂ ಇದೆ. ಅದೇ ರೀತಿ ಗುರು ಹಿರಿಯರಿಗೆ ಗೌರವ ನೀಡುವ ಈ ವಿಶೇಷ ದಿನದ ಗುರು ಪೂರ್ಣಿಮೆಯ ದಿನದಂದು ನಮಗೆ ವಿದ್ಯೆ ಹೇಳಿಕೊಟ್ಟ ಗುರುಗಳನ್ನು ನೆನೆಯಲೇಬೇಕು. ಚಿಕ್ಕ ವಯಸ್ಸಿನಿಂದ ನಮ್ಮ ಪ್ರತಿಯೊಂದು ಹೆಜ್ಜೆಯಲ್ಲಿಯೂ ತಪ್ಪುಗಳನ್ನು ತಿದ್ದಿ ಮುನ್ನಡೆಸಿದ್ದಾರೆ. ಸೋತಾಗ ಧೈರ್ಯ ತುಂಬಿ ಗೆದ್ದಾಗ ಬೆನ್ನು ತಟ್ಟಿ ಹುರಿದುಂಬಿಸಿದ್ದಾರೆ. ಈ ವರ್ಷದ ಗುರು ಪೂರ್ಣಿಮೆಯನ್ನು ನಾಳೆ (ಜುಲೈ 24)ರಂದು ಎಲ್ಲೆಡೆ ಆಚರಿಸಲಾಗುತ್ತಿದೆ.
ಇತಿಹಾಸ
‘ಗುರು’ ಎಂಬ ಪದವು ಸಂಸ್ಕೃತ ಭಾಷೆಯಿಂದ ಬಂದಿದೆ. ‘ಗು’ ಎಂದರೆ ಕತ್ತಲೆ ಮತ್ತು ‘ರು’ ಎಂದರೆ ದೂರ ಮಾಡು ಎಂದರ್ಥ. ಅಂದರೆ ಕತ್ತಲೆಯನ್ನು ತೊರೆದು ಜೀವನದುದ್ದಕ್ಕೂ ಸಂತೋಷವೇ ಬೆಳಗಲಿ ಎಂದರ್ಥ. ಸಾಂಪ್ರದಾಯಿಕವಾಗಿ ಈ ದಿನವನ್ನು ಭಾರತ, ನೇಪಾಳ ಮತ್ತು ಭೂತಾನ್‌ನಲ್ಲಿ ಹಿಂದೂಗಳು, ಬೌದ್ಧರು ಮತ್ತು ಜೈನರು ಆಚರಿಸುತ್ತಾರೆ. ಗುರು ಪೂರ್ಣಿಮವನ್ನು ಬುದ್ಧ ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ. ಪ್ರತಿ ವರ್ಷ ಹಿಂದೂ ಕ್ಯಾಲೆಂಡರ್ ಪ್ರಕಾರ ಆಷಾಢ ತಿಂಗಳಲ್ಲಿ ಪೂರ್ಣಿಮಾ ಅಂದರೆ ಹುಣ್ಣಿಮೆಯ ದಿನದಂದು ಬರುತ್ತದೆ.
ಗುರು ಪೂರ್ಣಿಮಾ ಬೌದ್ಧರಿಗೆ ಶುಭ ತರುವ ಹಬ್ಬವಾಗಿದೆ. ಏಕೆಂದರೆ ಈ ಶುಭ ದಿನದಂದು ಭಗವಾನ್ ಬುದ್ಧ ತನ್ನ ಮೊದಲ ಧರ್ಮೋಪದೇಶವನ್ನು ನೀಡಿದ ಎಂದು ಇತಿಹಾಸ ತಿಳಿಸಿದೆ. ಅದಕ್ಕಾಗಿಯೇ ಈ ದಿನವನ್ನು ಬುದ್ಧ ಪೂರ್ಣಿಮಾ ಎಂದೂ ಕರೆಯುತ್ತಾರೆ.
ಆಚರಣೆಯ ದಿನಾಂಕ ಮತ್ತು ಸಮಯ
ಈ ವರ್ಷದ ನಾಳೆ (ಜುಲೈ 24 )ರಂದು ಬರುವ ಆಷಾಢ ತಿಂಗಳ ಹುಣ್ಣಿಮೆಯ ದಿನದಂದು ಗುರು ಪೂರ್ಣಿಮವನ್ನು ಆಚರಿಸಲಾಗುವುದು. ಪೂರ್ಣಿಮಾ ತಿಥಿ ಜುಲೈ 23, ಶುಕ್ರವಾರ ಬೆಳಿಗ್ಗೆ 10.45 ಕ್ಕೆ ಪ್ರಾರಂಭವಾಗಲಿದ್ದು, ಜುಲೈ 24 ರಂದು ರಾತ್ರಿ 08.08 ಕ್ಕೆ ಕೊನೆಗೊಳ್ಳಲಿದೆ.
ಆಚರಣೆ
ಜೀವನದ ಪ್ರತಿ ಹಂತದಲ್ಲೂ ತಿದ್ದಿ ನಡೆಸಿದ ಗುರು ಹಿರಿಯರಿಗಾಗಿ ಈ ದಿನನ್ನು ಸಮರ್ಪಿಸಲಾಗುತ್ತದೆ. ಜತೆಗೆ ಈ ದಿನದಂದು ಬೆಳಗ್ಗೆ ಬೇಗ ಎದ್ದು, ಸ್ನಾನ ಮಾಡಿ ಶುಭ್ರ ವಸ್ತ್ರ ತೊಟ್ಟು ಗರುಗಳ ಆಶಿರ್ವಾದ ಪಡೆದುಕೊಳ್ಳುವ ಪದ್ಧತಿ ಮೊದಲಿನಿಂದಲೂ ಬಂದಿದೆ. ಅನೇಕರು ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸಲು ಉಪವಾಸ ಮಾಡುತ್ತಾರೆ. ಜತೆಗೆ ಹಣ್ಣುಗಳನ್ನು, ಸಿಹಿ ತಿಂಡಿಗಳನ್ನು ಶಿಕ್ಷಕರಿಗೆ ನೀಡುವ ಮೂಲಕ ಈ ದಿನವನ್ನು ಆಚರಿಸುತ್ತಾರೆ. ಗುರು ಪೂರ್ಣಿಮಾ ವಿಶೇಷ ದಿನದಂದು ನಮ್ಮ ಏಳಿಗೆಯನ್ನು ಬಯಸಿದ ಗುರುಗಳಿಗೆ ಕೃತಜ್ಞತೆಯನ್ನು ಸಲ್ಲಿಸೋಣ.
ಇನ್ನೂ ಓದಿ: