ಹಿಂದೂ ಆಚರಣೆಯದಲ್ಲಿ ಗುರು ಪೂರ್ಣಿಮೆ ದಿನಕ್ಕೆ ಮಹತ್ವದ ಸ್ಥಾನವಿದೆ. ಆಶಾಢ ತಿಂಗಳಲ್ಲಿ ಆಚರಿಸಲಾಗುವ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಈ ವರ್ಷದ ಗುರು ಪೂರ್ಣಿಮೆಯನ್ನು ಜುಲೈ 24ನೇ ತಾರೀಕಿನಂದು ಆಚರಿಸಲಾಗುತ್ತಿದೆ. ಅಂಧಕಾರವನ್ನು ದೂರ ಮಾಡಿ, ಅಜ್ಞಾನವನ್ನು ತೊರೆದು ಎಲ್ಲೆಲ್ಲೂ ಜ್ಞಾನವೇ ಬೆಳಗಲಿ ಎಂಬ ಆಶಯದೊಂದಿಗೆ ವಿದ್ಯೆ ಕಲಿಸುವ, ಪ್ರತಿಯೊಂದು ಹಂತದಲ್ಲೂ ತಿದ್ದಿ ನಡೆಸುವ ಗುರುಗಳಿಗಾಗಿ ಈ ದಿನವನ್ನು ಮೀಸಲಿಡಲಾಗಿದೆ.
ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ಗುರು ಎಂದರೆ ಯಾರು? ಪ್ರತಿ ಹಂತದಲ್ಲೂ ನಮ್ಮ ಏಳಿಗೆಯನ್ನೇ ಬಯಸುವವರು, ವಿದ್ಯೆಯನ್ನು ಅರ್ಥೈಸಿ ಹೇಳುವವರು, ತಪ್ಪು ಮಾಡಿದಾಗ ತಿದ್ದಿ ಮುನ್ನಡೆಸುವವರು. ಜೀವನದಲ್ಲಿ ಗುರುವಿನ ಆಶೀರ್ವಾದ ಪಡೆಯುವವರೆಗೆ ಮುಕ್ತಿ ಹೊಂದಲು ಸಾಧ್ಯವಿಲ್ಲ ಎಂದು ಹಿರಿಯರು ಹೇಳುತ್ತಾರೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಅರ್ಥಗರ್ಭಿತವಾದ ಸಾಲು ಗುರುವಿನ ಮಹತ್ವವನ್ನು ತಿಳಿಸುತ್ತದೆ. ಗುರುವಿನ ಆಶೀರ್ವಾದ ಇಲ್ಲದ ವ್ಯಕ್ತಿ ಜೀವನದ ಹಾದಿಯಲ್ಲಿ ಒಳ್ಳೆಯ ಮಾರ್ಗವನ್ನು ಕಾಣಲು ಸಾಧ್ಯವಿಲ್ಲ ಎಂಬ ಸಾರವನ್ನು ಈ ಸಾಲು ತಿಳಿಸಿಕೊಡುತ್ತದೆ.
ಗುರು ಎಂಬ ಶಬ್ದದಲ್ಲಿ ಗು ಎಂದರೆ ಅಂಧಕಾರ ಆಥವಾ ಅಜ್ಞಾನ, ರು ಅಂದರೆ ದೂರ ಮಾಡುವುದು ಎಂದರ್ಥ. ಇದು ಸಂಸ್ಕೃತ ಭಾಷೆಯ ಪದವಾಗಿದ್ದು ಅಂಧಕಾರವನ್ನು ಅಥವಾ ಅಜ್ಞಾನವನ್ನು ದೂರ ಮಾಡು ಎಂಬ ಅರ್ಥವನ್ನು ಹೊಂದಿದೆ. ಪ್ರತಿ ಹಂತದಲ್ಲಿಯೂ ನಮ್ಮನ್ನು ತಿದ್ದಿ ನಡೆಸುವ ಶಿಕ್ಷಕರಿಗೆ, ವಿದ್ವಾಂಸರಿಗೆ, ಗುರು-ಹಿರಿಯರಿಗೆ ಗೌರವ ಸಲ್ಲಿಸುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ.
ಆಚರಣೆಯ ದಿನಾಂಕ- ಸಮಯ
ಗುರು ಪೂರ್ಣಿಮೆ 2021 ದಿನಾಂಕ: ಜುಲೈ 24, ಶನಿವಾರ
ಪೂರ್ಣಿಮಾ ತಿಥಿ ಆರಂಭ: ಜುಲೈ 23, ಬೆಳಗ್ಗೆ 10: 43
ಪೂರ್ಣಿಮಾ ತಿಥಿ ಮುಕ್ತಾಯ: ಜುಲೈ 24, ಬೆಳಗ್ಗೆ 08:06
ಈ ದಿನ ಮಹರ್ಷಿ ವೇದವ್ಯಾಸರು ಜನಸಿದರು. ಉತ್ತಮ ಲೇಖಕ, ಜ್ಞಾನಿ, ಗುರುವಾದ ವೇದವ್ಯಾಸರ ಜನ್ಮದಿನದ ಸ್ಮರಣೆಗಾಗಿ ಈ ದಿನವನ್ನು ಗುರು ಪೂರ್ಣಿಮೆ ದಿನ ಎಂದು ಆಚರಿಸಲಾಗುತ್ತದೆ. ನಿಮ್ಮ ಜೀವನದಲ್ಲಿ ಸಾಧನೆಯತ್ತ ಸಾಗಲು ಸಹಕರಿಸಿದ ಎಲ್ಲಾ ಗುರು ಹಿರಿಯನ್ನು ನೆನೆದು ಶುಭಾಶಯ ಕೋರುವ ಮೂಲಕ ಜುಲೈ 24ರಂದು ಆಚರಿಸುವ ಗುರು ಪೂರ್ಣಿಮೆ ದಿನವನ್ನು ಆಚರಿಸಿ.
ಇದನ್ನೂ ಓದಿ:
ಇಂದು ಗುರು ಪೂರ್ಣಿಮೆ: ಸಂಗಮ್ ಘಾಟ್‌ನಲ್ಲಿ ನಡೆಯುತ್ತಿದೆ ಪವಿತ್ರ ಸ್ನಾನ, ಪೂಜೆ
ನಾನೆಂಬ ಪರಿಮಳದ ಹಾದಿಯಲಿ : ಹಡಗು ದಡ ಮುಟ್ಟಿತೇ ಎಂದು ಕೇಳುವವರು ದಾರಿಯ ಬಗ್ಗೆ ಯೋಚಿಸಲಾರರು
Published On - 11:32 am, Thu, 22 July 21