Guru Purnima 2021: ಅಜ್ಞಾನದಿಂದ ಜ್ಞಾನದೆಡೆಗೆ ಕೊಂಡೊಯ್ಯುವ ಗುರುವನ್ನು ಸ್ಮರಿಸುವ ಈ ದಿನಕ್ಕೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನ

ಗುರು ಪೂರ್ಣಿಮೆ 2021: ಹಿಂದೂಗಳಿಗಾಗಿ, ಗುರುಪೂರ್ಣಿಮೆಯಂದು ಚಾತುರ್ಮಾಸ ಆರಂಭವಾಗುತ್ತದೆ. ರೈತರಿಗೆ ಈ ದಿನ ಅತ್ಯಂತ ಮಹತ್ವದ್ದಾಗಿದೆ. ಮಳೆಗಾಲದ ಪ್ರಾರಂಭವನ್ನು ಸೂಚಿಸುವ ಗುರುಪೂರ್ಣಿಮೆ ದಿವಸ ಧಾನ್ಯಗಳ ಬೆಳೆಯುವಿಕೆ ಅತೀ ಮುಖ್ಯವಾದ ಸಮಯವಾಗಿದೆ.

Guru Purnima 2021: ಅಜ್ಞಾನದಿಂದ ಜ್ಞಾನದೆಡೆಗೆ ಕೊಂಡೊಯ್ಯುವ ಗುರುವನ್ನು ಸ್ಮರಿಸುವ ಈ ದಿನಕ್ಕೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನ
ಗುರು ಪೂರ್ಣಿಮೆ
Follow us
TV9 Web
| Updated By: ಆಯೇಷಾ ಬಾನು

Updated on:Jul 22, 2021 | 2:43 PM

ನಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನ ಗುರುವಿನದ್ದಾಗಿದೆ. ನಮ್ಮ ಭವಿಷ್ಯವನ್ನು ರೂಪಿಸಿ ನಮ್ಮನ್ನು ವಿದ್ಯಾವಂತರು ಬುದ್ಧಿವಂತರನ್ನಾಗಿ ಮಾಡುವ ಕಲೆ ನಮ್ಮ ಗುರಗಳದ್ದಾಗಿದೆ. ಹಸಿಮಣ್ಣಿಗೆ ಆಕಾರ ಕೊಡುವ ಗುರು ಎಂಬ ಮಾರ್ಗದರ್ಶಿ ತಂದೆ ತಾಯಿಯ ಸ್ಥಾನಕ್ಕೆ ಸಮಾನರು. ಜ್ಞಾನ ಎಂಬ ಬೆಳಕಿನೆಡೆಗೆ ನಮ್ಮನ್ನು ಕೊಂಡೊಯ್ಯುವ ಈ ಮಹಾನುಭಾವರಾದ ಗುರುಗಳು ನಮ್ಮ ಜೀವನದ ದಿಕ್ಕನ್ನು ಬದಲಾಯಿಸುವವರಲ್ಲಿ ಪ್ರಮುಖರಾಗಿದ್ದಾರೆ.

ಹಿಂದೂ ಕ್ಯಾಲೆಂಡರ್‌ನಲ್ಲಿ ಗುರು ಪೂರ್ಣಿಮೆಯನ್ನು ನಮ್ಮ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಗುರುಗಳಿಗೆ ಅರ್ಪಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಗುರು ಅಥವಾ ಶಿಕ್ಷಕರನ್ನು ದೇವರಿಗೆ ಹೋಲಿಸಲಾಗುತ್ತದೆ. ನಿಜವಾದ ಗುರುವು ವ್ಯಕ್ತಿ ಮತ್ತು ಮಹಾನ್ ಶಕ್ತಿಗೆ ಒಂದು ಸಂಪರ್ಕ ಅಥವಾ ಕೊಂಡಿ ಇದ್ದಂತೆ. ಆದ್ದರಿಂದಲೇ ಗುರು ಪೂರ್ಣಿಮೆಯಂದು ಗುರುಗಳಿಗೆ ಶಿಕ್ಷಕರಿಗೆ ಗೌರವ ತೋರುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.

ನಿಮ್ಮನ್ನು ಶಿಕ್ಷಣದ ಮೂಲಕ ಉತ್ತಮ ಜೀವನಕ್ಕೆ ಕಾಲಿರಿಸುವಂತೆ ಮಾಡಿದ ಗುರುಗಳಿಗೆ ಈ ದಿನವನ್ನು ಅರ್ಪಿಸಬೇಕು. ಹಿಂದೂ ತಿಂಗಳ ಆಷಾಢ ಮಾಸ (ಜುಲೈ-ಆಗಸ್ಟ್) ದಂದು ಪೂರ್ಣ ಚಂದ್ರನ ದಿನದಂದು ಗುರುವಿಗೆ ವಿಶೇಷ ಗೌರವ ಸಲ್ಲಿಸುವ ದಿನವನ್ನಾಗಿ ಆಚರಿಸಲಾಗುತ್ತದೆ. ವ್ಯಾಸರ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ನಾಲ್ಕು ವೇದಗಳನ್ನು, 18 ಪುರಾಣಗಳನ್ನು ಮಹಾಭಾರತ ಮತ್ತು ಶ್ರೀಮದ್ಭಾಗವತವನ್ನು ರಚಿಸಿದ ಮಹಾತ್ಮರಾಗಿದ್ದಾರೆ ವೇದವ್ಯಾಸರು.

ಬೌದ್ಧರಿಗೂ ಗುರು ಪೂರ್ಣಿಮೆ ಮಹತ್ವದ ದಿನವಾಗಿದೆ. ಸಾಂಪ್ರದಾಯಿಕವಾಗಿ ಬೌದ್ಧರು ಬುದ್ಧನಿಗೆ ಗೌರವ ಅರ್ಪಿಸುವ ದಿನವನ್ನಾಗಿ ಗುರುಪೂರ್ಣಿಮೆಯನ್ನು ಆಚರಿಸುತ್ತಾರೆ. ಸಾರನಾಥದಲ್ಲಿ ಪ್ರಥಮ ಉಪದೇಶವನ್ನು ಬುದ್ಧನು ಈ ದಿನ ಮಾಡಿದರೆಂದು ಪ್ರತೀತಿ ಇದೆ. ಗುರು ಪೂರ್ಣಿಮೆಯ ಮಹತ್ವ ಮತ್ತು ವಿಶೇಷತೆಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದ್ದು ಮುಂದೆ ಓದಿ.

ಗುರುಪೂರ್ಣಿಮೆಯ ಆಚಾರಗಳು ಹಿಂದೂ ಆಧ್ಯಾತ್ಮಿಕ ಗುರುಗಳನ್ನು ಅವರ ಜೀವನ ಮತ್ತು ಕಲಿಸುವಿಕೆಗಳನ್ನು ಸ್ಮರಿಸಿಕೊಂಡು ಅವರಿಗೆ ಈ ದಿನ ಗೌರವ ಸಲ್ಲಿಸಲಾಗುತ್ತದೆ. ಹಲವಾರು ದೇವಸ್ಥಾನಗಳಲ್ಲಿ ವ್ಯಾಸ ಪೂಜೆಯನ್ನು ನೆರವೇರಿಸಲಾಗುತ್ತದೆ. ಹೂವು ಮತ್ತು ಕೆಲವೊಂದು ಉಡುಗೊರೆಗಳನ್ನು ಅವರ ಗೌರವಕ್ಕಾಗಿ ಈ ದಿನ ಅರ್ಪಿಸಲಾಗುತ್ತದೆ. ಅನುಯಾಯಿಗಳಿಗಾಗಿ ಪ್ರಸಾದ ರೂಪದಲ್ಲಿ ಹಬ್ಬವನ್ನು ಆಚರಿಸುವವರು ಈ ದಿನವನ್ನು ಆಚರಿಸುತ್ತಾರೆ. ಅಂದರೆ ಅನುಯಾಯಿಗಳಿಗೆ ಪ್ರಸಾದ ಮತ್ತು ಫಲ ಪುಷ್ಪಗಳನ್ನು ಅರ್ಪಿಸುವುದಾಗಿದೆ. ಗುರುಗಳ ಪಾದಗಳನ್ನು ತೊಳೆಯುವುದು ಗುರುವಿನ ಕೃಪೆ ಕರುಣೆ ನಮ್ಮ ಮೇಲೆ ಯಾವಾಗಲೂ ಇರುತ್ತದೆ ಎಂಬುದನ್ನು ತೋರಿಸುವ ದ್ಯೋತಕವಾಗಿದೆ. ಬೌದ್ಧ ಭಿಕ್ಷುಗಳು ಈ ದಿನದಂದು ಯೋಗವನ್ನು ಮಾಡುತ್ತಾರೆ ಇದರಿಂದಾಗಿಯೇ ಅರಿಷಡ್ವರ್ಗಗಳ ವಿರುದ್ಧ ಅವರಿಗೆ ಹೋರಾಡಲು ಸಾಧ್ಯವಾಗಿರುವುದು.

ಗುರುಪೂರ್ಣಿಮೆಯ ಮಹತ್ವ ಹಿಂದೂಗಳಿಗಾಗಿ, ಗುರುಪೂರ್ಣಿಮೆಯಂದು ಚಾತುರ್ಮಾಸ ಆರಂಭವಾಗುತ್ತದೆ. ರೈತರಿಗೆ ಈ ದಿನ ಅತ್ಯಂತ ಮಹತ್ವದ್ದಾಗಿದೆ. ಮಳೆಗಾಲದ ಪ್ರಾರಂಭವನ್ನು ಸೂಚಿಸುವ ಗುರುಪೂರ್ಣಿಮೆ ದಿವಸ ಧಾನ್ಯಗಳ ಬೆಳೆಯುವಿಕೆ ಅತೀ ಮುಖ್ಯವಾದ ಸಮಯವಾಗಿದೆ. ಬೇಸಿಗೆಯ ತಾಪದಿಂದ ತಂಪಿನ ಅನುಭೂತಿಯನ್ನು ನಮಗೆ ನೀಡುವ ಮಾನ್‌ಸೂನ್ ಅಥವಾ ಮಳೆಗಾಲ ನಿಮ್ಮ ಆಧ್ಯಾತ್ಮಿಕ ಪಾಠಗಳನ್ನು ಪ್ರಾರಂಭಿಸಲು ಮುಖ್ಯವಾದ ದಿನಗಳಾಗಿವೆ. ಆದ್ದರಿಂದ ಗುರುಪೂರ್ಣಿಮೆಯಂದು ಸ್ವಲ್ಪ ಹೊತ್ತನ್ನು ಗುರುವಿಗಾಗಿ ಮೀಸಲಿಟ್ಟು ನಿಮ್ಮನ್ನು ಜ್ಞಾನದ ಕಡೆಗೆ ಕೊಂಡೊಯ್ದ ಆ ಮಹಾನ್ ಚೇತನಕ್ಕೆ ನಮಸ್ಕರಿಸಿ.

ಹಿಂದೂ ಪಂಚಾಂಗದ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಈ ದಿನದಂದು, ಹಿಂದೂಗಳು ಮತ್ತು ಬೌದ್ಧರು ತಮ್ಮ ಗುರುವಿಗೆ ಪೂಜೆ ಸಲ್ಲಿಸುತ್ತಾರೆ. ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಗುರು ಅನ್ನುವ ಶಬ್ದ ಗು ಮತ್ತು ರು ಅನ್ನುವ ಮೂಲ ಪದಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ ಗು ಅಂದರೆ ಅಂಧಕಾರ ಅಥವಾ ಅಜ್ಞಾನ. ರು ಅಂದರೆ ಕಳೆಯುವ ಅಥವಾ ದೂರ ಮಾಡುವ ಎಂದರ್ಥ. ಅದಕ್ಕೆ ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ. ಬಹುತೇಕ ಜನರು ಗುರುವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ. ಗುರುಪೂರ್ಣಿಮೆಗೆ ಧಾರ್ಮಿಕ ಪ್ರಾಮುಖ್ಯತೆ ಅಲ್ಲದೆ ಶೈಕ್ಷಣಿಕ ಮತ್ತು ವಿದ್ವಾಂಸರ ವೃಂದದಲ್ಲೂ ಮಹತ್ವ ಇದೆ. ಈ ದಿನ ಶೈಕ್ಷಣಿಕ ವೃಂದದವರು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಮತ್ತು ತಮ್ಮ ಭಾವಿ ಶಿಕ್ಷಕರನ್ನು ಮತ್ತು ವಿದ್ವಾಂಸರನ್ನು ಸ್ಮರಿಸುವ ಮೂಲಕ ಆಚರಿಸುತ್ತಾರೆ.

ಬೌದ್ಧರು ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ಅಂಗವಾಗಿ ಆಚರಿಸುತ್ತಾರೆ. ಈ ದಿನ ಗೌತಮ ಬುದ್ಧನು ಉತ್ತರ ಪ್ರದೇಶದಸಾರನಾಥದಲ್ಲಿ ತನ್ನ ಪ್ರಥಮ ಧರ್ಮೋಪದೇಶ ನೀಡಿದ. ಯೋಗ ಸಂಪ್ರದಾಯದಲ್ಲಿ ಈ ದಿನವನ್ನು ಶಿವನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರೆದು ಪ್ರಥಮ ಗುರು ಆದ ದಿನ ಎಂಬ ನಂಬಿಕೆಯಿಂದ ಆಚರಿಸುತ್ತಾರೆ. ಹಲವಾರು ಹಿಂದೂಗಳು, ಹಿಂದೂ ಪರಂಪರೆಯ ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ವೇದವ್ಯಾಸ ಮಹರ್ಷಿಗಳ ಜನ್ಮದಿನದ ಅಂಗವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ವೇದವ್ಯಾಸ ಮಹರ್ಷಿಗಳು ಈ ದಿನ ಹುಟ್ಟಿದ್ದಲ್ಲದೇ ಆಷಾಢ ಶುಕ್ಲ ಪಕ್ಷದ ಪ್ರಾರಂಭದಿಂದ ಬ್ರಹ್ಮಸೂತ್ರಗಳ ರಚನೆ ಪ್ರಾರಂಭಿಸಿದರು. ಈ ದಿನ ಆ ಶುಕ್ಲ ಪಕ್ಷ ಕೊನೆಗೊಳ್ಳುತ್ತದೆ. ಇದರ ಸ್ಮರಣಾರ್ಥಕವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಲಾಗುತ್ತದೆ ಹಾಗೂ ಈ ದಿನವನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ.

ಹಿಂದೂ ಧರ್ಮದ ಎಲ್ಲ ಅಧ್ಯಾತ್ಮಿಕ ಪರಂಪರೆಗಳಲ್ಲಿಯೂ ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸುತ್ತ ಈ ಹಬ್ಬವನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಆಚರಿಸಲಾಗುತ್ತದೆ. ಮಳೆಗಾಲದ ನಾಲ್ಕು ತಿಂಗಳುಗಳಾದ ಚಾತುರ್ಮಾಸದಲ್ಲಿ ಬರುವ ಈ ಗುರುಪುರ್ಣಿಮೆಯಂದು ಸನ್ಯಾಸಿಗಳು ತಮ್ಮ ಗುರುಗಳಿಗೆ ಪೂಜೆ ಸಲ್ಲಿಸುತ್ತಾರೆ. ಈ ಚಾತುರ್ಮಾಸದಲ್ಲಿ ಸನ್ಯಾಸಿಗಳು ಸಾಮಾನ್ಯವಾಗಿ ಒಂದೇ ಸ್ಥಳದಲ್ಲಿ ಇದ್ದು, ಭಕ್ತಾದಿಗಳಿಗೆ ಪ್ರವಚನಗಳನ್ನು ನೀಡುತ್ತಾರೆ. ಭಾರತ ಶಾಸ್ತ್ರೀಯ ಸಂಗೀತವು ಗುರು ಶಿಷ್ಯ ಪರಂಪರೆ ಪಾಲಿಸುವುದರಿಂದ, ವಿಶ್ವಾದ್ಯಂತ ಅದರ ವಿದ್ಯಾರ್ಥಿಗಳು ಈ ಹಬ್ಬವನ್ನು ಆಚರಿಸುತ್ತಾರೆ.

ಹಿಂದೂ ಪುರಾಣ ಇದೇ ದಿನ ಮಹಾಭಾರತದ ಕರ್ತೃರಾದ ವೇದವ್ಯಾಸರು, ಪರಾಶರ ಋಷಿಗಳು ಹಾಗೂ ಒಬ್ಬ ಮೀನುಗಾರನ ಮಗಳಾದ ಸತ್ಯವತಿಗೆ ಜನ್ಮಿಸಿದರು. ವೇದವ್ಯಾಸರು ತಮ್ಮ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಎಲ್ಲ ವೈದಿಕ ಋಕ್ಕುಗಳನ್ನು ಸಂಗ್ರಹಿಸಿ, ಯಜ್ಞ ಯಾಗಾದಿ ಧಾರ್ಮಿಕ ವಿಧಿಗಳಲ್ಲಿ ಅವುಗಳ ಬಳಕೆಯೆ ಆಧಾರದ ಮೇಲೆ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂಬ ನಾಲ್ಕು ಭಾಗಗಳನ್ನಾಗಿ ವಿಭಾಗಿಸಿ, ಅವುಗಳನ್ನು ತಮ್ಮ ನಾಲ್ಕು ಮುಖ್ಯ ಶಿಷ್ಯರಾದ ಸುಮಂತು, ವೈಷಂಪಾಯನ, ಜೈಮಿನಿ ಹಾಗೂ ಪೈಲರಿಗೆ ಬೋಧಿಸುವ ಮೂಲಕ ವೈದಿಕ ಅಧ್ಯಯನಗಳ ಉದ್ದೇಶಕ್ಕಾಗಿ ಮಹತ್ತರವಾದ ಸೇವೆಮಾಡಿದರು. ಈ ವಿಭಜನೆ ಮತ್ತು ಸಂಪಾದನೆಯನ್ನು ಮಾಡಿದ್ದಕ್ಕಾಗಿ ಅವರಿಗೆ ವ್ಯಾಸ (ವ್ಯಾಸ = ಸಂಪಾದಿಸು, ವಿಭಾಗಿಸು) ಎಂಬ ಗೌರವ ನಾಮ ದೊರೆಯಿತು.

ಹಿಂದೂ ಮತ್ತು ಬೌದ್ಧ ಆಚರಣೆಗಳು ಈ ದಿನ ಬೌದ್ಧರು 8 ತತ್ವಗಳನ್ನು ಪಾಲಿಸುವ ಉಪೋಸಥ ಎಂಬ ಪದ್ಧತಿಯನ್ನು ಆತರಿಸುತ್ತಾರೆ. ವಿಪಸ್ಯನಾ ಧ್ಯಾನಿಗಳು ಈ ದಿನ ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಧ್ಯಾನ ಮಾಡುತ್ತಾರೆ. ಮಳೆಗಾಲ, ಅಂದರೆ ವರ್ಷ (ವಸ್ಸ) ಇಂದಿನಿಂದಲೇ ಪ್ರಾರಂಭವಾಗುತ್ತದೆ. ಜುಲೈ ಇಂದ ಅಕ್ಟೋಬರ್ ವರೆಗೆ ಚಾಂದ್ರಮಾನ ಪಂಚಾಂಗದ ಮೂರು ತಿಂಗಳುಗಳ ಕಾಲ ಇರುವ ಈ ಮಳೆಗಾಲದಲ್ಲಿ ಬೌದ್ಧ ಸನ್ಯಾಸಿಗಳು ಒಂದೇ ಸ್ಥಳದಲ್ಲಿ ಇರುತ್ತಾರೆ, ಅದೂ ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಇರುತ್ತಾರೆ. ಕೆಲವೊಂದು ಆಶ್ರಮಗಳಲ್ಲಿ ಸನ್ಯಾಸಿಗಳು ಈ ವಸ್ಸ ಕಾಲದಲ್ಲಿ ತೀವ್ರ ತಪಸ್ಸಿಗೆ ಒಳಗಾಗುತ್ತಾರೆ. ವಸ್ಸ ಕಾಲದಲ್ಲಿ ಹಲವಾರು ಸಾಮಾನ್ಯ ಬೌದ್ಧರು ತಮ್ಮ ಆಧ್ಯಾತ್ಮಿಕ ಅಭ್ಯಾಸ ತೀವ್ರಗೊಳಿಸಿ ಮಾಂಸ, ಮಧ್ಯ ಅಥವಾ ಧೂಮಪಾನವನ್ನು ತ್ಯಾಗ ಮಾಡುವಂತಹ ವಿರಕ್ತ ಪದ್ಧತಿಗಳನ್ನು ಪಾಲಿಸುತ್ತಾರೆ. ಸಾಂಪ್ರದಾಯಿಕವಾಗಿ ಚಾತುರ್ಮಾಸದ ಪದ್ಧತಿಗಳಲ್ಲಿ ಒಂದಾದ ಗುರು ಪೂರ್ಣಿಮೆಯ ಆಂಗವಾಗಿ ಸನ್ಯಾಸಿಗಳು ವ್ಯಾಸ ಪೂಜೆಮಾಡುತ್ತಾರೆ.

ಹಿಂದೂ ಆಧ್ಯಾತ್ಮಿಕ ಗುರುಗಳ ಜೀವನ ಚರಿತ್ರೆ ಹಾಗೂ ಅವರ ಬೋಧನೆಗಳನ್ನು ನೆನೆಸಿಕೊಂಡು ಅವರಿಗೆ ಗೌರವ ಸಲ್ಲಿಸಲಾಗುತ್ತದೆ. ಹಲವಾರು ದೇವಸ್ಥಾನಗಳಲ್ಲಿ ವ್ಯಾಸ ಪೂಜೆ ಏರ್ಪಡಿಸಿ, ಹೂವಿನ ಅಲಂಕಾರ ಹಾಗೂ ಹಲವು ಸಾಂಕೇತಿಕ ಕಾಣಿಕೆಗಳು ಅರ್ಪಣೆಯಿಂದ ವೇದವ್ಯಾಸರಿಗೆ ಹಾಗೂ ಬ್ರಹ್ಮಾಂಡದ ಸದ್ಗುರುವಿಗೆ ಗೌರವ ಸಲ್ಲಿಸಲಾಗುತ್ತದೆ. ಪೂಜೆ ಪುನಸ್ಕಾರಗಳ ನಂತರ, ಗುರುಗಳ ಕೃಪೆಯ ರೂಪಿಯಾದ ಗುರುಗಳ ಪಾದಪೂಜೆಯಿಂದ ದೊರೆತ ಚರಣಾಮೃತವನ್ನು ಪ್ರಸಾದದ ಜೊತೆ ಶಿಷ್ಯರಿಗೆ ಹಂಚಲಾಗುತ್ತದೆ.

ಯಾವ ಗುರುವಿನ ಮೂಲಕ ಭಗವಂತನು ಎಲ್ಲ ಶಿಷ್ಯರಿಗೆ ಜ್ಞಾನವನ್ನು ಧಾರೆಯೆರೆಯುತ್ತಾನೋ, ಅಂತಹ ಗುರುವಿನ ಸ್ಮರಣಾರ್ಥಕವಾಗಿ ಈ ದಿನ ವಿಶೇಷ ಮಂತ್ರಗಳಾದಂತಹ ವೇದವ್ಯಾಸರಿಂದಲೇ ರಚಿತವಾದ ೨೧೬ ಶ್ಲೋಕಗಳುಳ್ಳ ಗುರು ಗೀತಾ ಮಂತ್ರದ ಪಠಣ ಇಡೀ ದಿನ ಮಾಡಲಾಗುತ್ತದೆ. ಇದರ ಜೊತೆ ಅನೇಕ ಆಶ್ರಮ, ಮಠ ಅಥವಾ ಗುರು ಪೀಠ ಇರುವಂತಹ ಸ್ಥಳಗಳಲ್ಲಿ ಹಲವಾರು ಭಕ್ತಾದಿಗಳು ಸೇರಿ ವಿಶೇಷ ಭಜನೆ, ಕೀರ್ತನೆ ಮತ್ತು ಹೋಮಗಳನ್ನು ಆಯೋಜಿಸುತ್ತಾರೆ.ಈ ದಿನ ಗುರುಗಳ ಪಾದಪೂಜೆ ಮಾಡುವ ಮೂಲಕ ಶಿಷ್ಯರು ಮತ್ತೊಮ್ಮೆ ತಮ್ಮನ್ನು ತಾವೇ ಗುರುವಿಗೆ ಸಮರ್ಪಿಸಿಕೊಳ್ಳುತ್ತಾರೆ. ಎಂದಿನಂತೆ ಬರುವ ವರ್ಷವೂ ಗುರುವಿನ ಮಾರ್ಗದರ್ಶನ ಹಾಗೂ ಬೋಧನೆಗಳಿಗೆ ಬದ್ಧರಾಗಿರುತ್ತೇವೆ ಎಂದು ಶಿಷ್ಯರು ಸಂಕಲ್ಪ ಮಾಡುತ್ತಾರೆ. ಈ ದಿನದಂದು ವಿಶೇಷವಾಗಿ ಪಠಿಸುವ ಮಂತ್ರ.. ಗುರುರ್ಬ್ರಹ್ಮ, ಗುರುರ್ವಿಷ್ಣು, ಗುರುರ್ದೇವೋ ಮಹೇಶ್ವರಾ । ಗುರು ಸಾಕ್ಷಾತ್ ಪರಬ್ರಹ್ಮ । ತಸ್ಮೈ ಶ್ರೀ ಗುರವೇ ನಮಃ.

ಭಾರತ ಶೈಕ್ಷಣಿಕ ವೃಂದದಲ್ಲಿ ಅಚರಣೆ ಭಾರತ ಶೈಕ್ಷಣಿಕ ವೃಂದದಲ್ಲಿ ಈ ಹಬ್ಬವನ್ನು ಧರ್ಮಾತೀತವಾಗಿ ಆಚರಿಸಲಾಗುತ್ತದೆ. ಹಲವಾರು ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಆಯೋಜಿತವಾದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತಾರೆ ಮತ್ತು ಹಿಂದಿನ ವಿದ್ವಾಂಸರನ್ನು ನೆನೆಸುತ್ತಾರೆ. ವಿದ್ಯಾ ಸಂಸ್ಥೆಗಳ ಹಳೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಭೇಟಿ ಆಗಿ ಅವರಿಗೆ ಕಾಣಿಕೆಗಳನ್ನು ಅರ್ಪಿಸಿ ತಮ್ಮ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ.

ಇದನ್ನೂ ಓದಿ: Guru Purnima 2021: ಗುರು ಪೂರ್ಣಿಮೆಯ ದಿನಾಂಕ, ಸಮಯ ಮತ್ತು ಮಹತ್ವ

Published On - 2:36 pm, Thu, 22 July 21