ಮೃತರ ತಿಥಿಯನ್ನು ಯಾವತ್ತು ಆಚರಿಸಬೇಕು? ಅದಕ್ಕೆ ಏನಾದರೂ ಮಾನದಂಡ ಇದೆಯಾ?

ಶ್ರಾದ್ಧದ ಆಚರಣೆ ಬಗ್ಗೆ ಹಲವರಿಗೆ ಪ್ರಶ್ನೆಗಳಿರುತ್ತವೆ. ಯಾವಾಗ ಆಚರಿಸಬೇಕು, ಅದರ ಆಚರಣೆ ಹೇಗೆ, ಒಂದು ವೇಳೆ ಮಾಡದೆ ಹೋದಲ್ಲಿ ಏನಾಗುತ್ತದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಇದೆ.

ಮೃತರ ತಿಥಿಯನ್ನು ಯಾವತ್ತು ಆಚರಿಸಬೇಕು? ಅದಕ್ಕೆ ಏನಾದರೂ ಮಾನದಂಡ ಇದೆಯಾ?
ಸಾಂದರ್ಭಿಕ ಚಿತ್ರ

ಇದೊಂದು ಪ್ರಶ್ನೆ ಹಲವರನ್ನು ಕಾಡುತ್ತಿರುತ್ತದೆ. ಕುಟುಂಬದಲ್ಲಿ ಒಬ್ಬರು ತೀರಿಕೊಂಡಿದ್ದಾರೆ. ಈಗಾಗಲೇ ಬಹಳ ವರ್ಷಗಳೇ ಆಗಿಹೋಯಿತು. ಅವರು ತೀರಿಕೊಂಡ ದಿನಾಂಕ ನೆನಪಿದೆ. ವರ್ಷದಲ್ಲಿ ಆ ದಿನದಂದು ತಿಥಿ ಆಚರಣೆ ಮಾಡುತ್ತೇವೆ. ಹೀಗೆ ಮಾಡೋದು ಸರಿಯೇ ಎಂದು ಕೇಳುತ್ತಾರೆ. ಆದರೆ ನಿಮಗೆ ಗೊತ್ತಿರಲಿ, ಇದು ತೀರಿಕೊಂಡವರ ದಿನದ ಪುಣ್ಯಸ್ಕರಣೆಯೇ ವಿನಾ ಶ್ರಾದ್ಧ ಅಥವಾ ತಿಥಿ ಅಲ್ಲ. ಆದ್ದರಿಂದ ತೀರಿಕೊಂಡವರು ಯಾವ ದಿನಾಂಕದಂದು ಕಾಲವಾದರು ಎಂಬುದರ ಮಾಹಿತಿಯೊಂದಿಗೆ ಪಂಚಾಂಗದಲ್ಲಿ ಮಾಸ, ಪಕ್ಷ ಹಾಗೂ ತಿಥಿ ಯಾವುದು ಎಂಬುದನ್ನು ತಿಳಿದುಕೊಳ್ಳಬೇಕು. ಅದಕ್ಕಾಗಿ ತೀರಿಕೊಂಡ ದಿನಾಂಕ, ಸಮಯ ಹಾಗೂ ಸ್ಥಳದ ಮಾಹಿತಿಯನ್ನು ನೀಡಬೇಕಾಗುತ್ತದೆ. ಉದಾಹರಣೆಗೆ ಕಾರ್ತೀಕ ಮಾಸದ ಶುಕ್ಲ ಪಕ್ಷದ ತ್ರಯೋದಶಿ ಎಂದಾದರೆ, ಅದೇ ದಿನ ಆಚರಣೆ ಮಾಡಬೇಕು. ಆಗ ದಿನಾಂಕ ಲೆಕ್ಕಕ್ಕೆ ಬರಲ್ಲ. ಆ ಪಕ್ಷ, ಮಾಸ ಹಾಗೂ ತಿಥಿ ಮಾತ್ರ ಲೆಕ್ಕಕ್ಕೆ ಬರುತ್ತದೆ.

ಇನ್ನು ಶಾಸ್ತ್ರ ರೀತಿಯಾಗಿ ಆ ನಿರ್ದಿಷ್ಟ ತಿಥಿ (ಮೇಲ್ಕಂಡ ಉದಾಹರಣೆಯಲ್ಲಿ ತ್ರಯೋದಶಿ) ದಿನದಲ್ಲಿ 30 ಗಳಿಗೆ ಬಂದಿರಬೇಕು. ಒಂದು ಗಂಟೆಗೆ ಎರಡೂವರೆ ಗಳಿಗೆ ಎನ್ನಲಾಗುತ್ತದೆ. ಒಂದು ದಿನಕ್ಕೆ, 24 ಗಂಟೆಗೆ 60 ಗಳಿಗೆ ಆಗುತ್ತದೆ. ಮೇಲಿನ ಉದಾಹರಣೆಯನ್ನೇ ತೆಗೆದುಕೊಂಡು ಹೇಳುವುದಾದರೆ, ದ್ವಾದಶಿ ತಿಥಿ ಅಂದು ಬೆಳಗ್ಗೆ ಬೇಗ ಮುಗಿದು ಹೋಗುತ್ತದೆ ಅಂದುಕೊಳ್ಳಿ. ದಿನದಲ್ಲಿ 60 ಗಳಿಗೆ. ಆ ಪೈಕಿ ದ್ವಾದಶಿ 10 ಗಳಿಗೆಯೊಳಗೆ ಮುಗಿದು ಹೋದಲ್ಲಿ ಬಾಕಿ 50 ಗಳಿಗೆ ಆ ದಿನ ತ್ರಯೋದಶಿಯೇ ಇರುತ್ತದೆ. ಆದ್ದರಿಂದ ದ್ವಾದಶಿಯಂದೇ ತ್ರಯೋದಶಿಯ ತಿಥಿ ಆಚರಿಸಬೇಕಾಗುತ್ತದೆ.

ಇನ್ನೂ ಕೆಲವರು ಏಕಾದಶಿ ದಿನದಂದು ತಿಥಿ ಬಂದಿದ್ದಲ್ಲಿ ಅದನ್ನು ದ್ವಾದಶಿಯ ದಿನ ಆಚರಿಸುತ್ತಾರೆ. ಏಕೆಂದರೆ, ಆ ದಿನ ಉಪವಾಸ ಇರುತ್ತಾರೆ. ಯಾರೂ ಊಟ ಮಾಡುವುದಿಲ್ಲ ಎಂದಾದ ಮೇಲೆ ಶ್ರಾದ್ಧ ಮಾಡುವುದಾದರೂ ಹೇಗೆ ಎಂಬ ವಾದ ಅವರದು. ಇನ್ನೂ ಕೆಲವರು ಏಕಾದಶಿಯಂದು ಶ್ರಾದ್ಧ ಬಂದಿದ್ದರೆ ಅದೇ ದಿನವೇ ಆಚರಣೆ ಮಾಡುತ್ತಾರೆ, ಭೋಜನ ಮಾಡುತ್ತಾರೆ. ಪಿತೃ ದೇವತೆಗಳಿಗೆ ಆ ದಿನವನ್ನು ತಪ್ಪಿಸುವಂತಿಲ್ಲ ಎಂಬ ವಾದ ಅವರದು. ಅಂತಿಮವಾಗಿ ಅವರವರ ನಂಬಿಕೆ ಮುಖ್ಯವಾಗುತ್ತದೆ. ಜತೆಗೆ ಶ್ರಾದ್ಧದ ಆಚರಣೆಯನ್ನು ಮಾಡುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ.

ಶ್ರಾದ್ಧ ಆಚರಣೆ ಮಾಡುವ ಕರ್ತೃ ಹಿಂದಿನ ದಿನ ಹಾಗೂ ಆಚರಿಸಿದ ದಿನ ಉಪವಾಸ ಮಾಡಬೇಕು (ತಿಂಡಿ ತಿನ್ನಬಹುದು). ಬ್ರಹ್ಮಚರ್ಯವನ್ನು ಪಾಲಿಸಬೇಕು. ಶ್ರಾದ್ಧದ ದಿನ ಮನೆಯ ಮುಂದೆ ರಂಗೋಲಿಯನ್ನು ಹಾಕಬಾರದು. ವಸ್ತ್ರದಾನ ಹಾಗೂ ಉದಕ- ಕುಂಭ ದಾನಗಳನ್ನು ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು, ದಕ್ಷಿಣೆ ಸಹಿತವಾಗಿ ನೀಡಬೇಕು. ಇನ್ನೂ ಒಂದು ಮಾತೆಂದರೆ, ಶ್ರಾದ್ಧಾಚರಣೆಯನ್ನು ಅಪರಾಹ್ನದಲ್ಲಿ ಮಾಡಬೇಕು ಅಂತಿದೆ. ತಾನಿರುವ ಮನೆಯಲ್ಲಿ ಆಚರಿಸಿದರೆ ಪಿತೃ ದೇವತೆಗಳ ಆಶೀರ್ವಾದ ದೊರೆಯುತ್ತದೆ. ಒಂದು ವೇಳೆ ಅಡುಗೆ ಮಾಡಿಸಿ, ಬ್ರಾಹ್ಮಣರಿಗೆ ಉಣಬಡಿಸಲು ಸಾಧ್ಯವಾಗದಿದ್ದಲ್ಲಿ ಸ್ವಯಂಪಾಕ ದಾನ ಮಾಡಬೇಕು. ಮುತ್ತೈದೆಯ ಶ್ರಾದ್ಧ ಮಾಡುವಾಗ ಸೀರೆ- ಕುಪ್ಪಸದ ಕಣವನ್ನು ದಾನವಾಗಿ ನೀಡಬೇಕು. ಹಾಗೂ ಹೋಳಿಗೆಯಂಥ ಸಿಹಿ ತಿನಿಸನ್ನು ಮಾಡಬೇಕು. ಐದು ಜನ ಮುತ್ತೈದೆಯರಿಗೆ ಅರಿಶಿನ- ಕುಂಕುಮ ಇತ್ಯಾದಿ ಮಂಗಳ ದ್ರವ್ಯಗಳನ್ನು ನೀಡಬೇಕು.

ಶ್ರಾದ್ಧ ಆಚರಣೆಯ ವಿಚಾರಕ್ಕೆ ಬಂದಾಗ ಶ್ರದ್ಧೆಗೆ ಹೆಚ್ಚು ಪ್ರಾಶಸ್ತ್ಯ. ಆ ಕಾರ್ಯವನ್ನು ಯಾವ ಪ್ರಮಾಣದಲ್ಲಿ ಶ್ರದ್ಧೆಯಿಂದ ಮಾಡಿದರು ಮತ್ತು ಅದಕ್ಕೆ ಶಾಸ್ತ್ರೋಕ್ತವಾಗಿ ಮಂತ್ರಗಳನ್ನು ಹೇಳಲಾಯಿತೇ ಎಂಬುದು ಬಹಳ ಮುಖ್ಯವಾಗುತ್ತದೆ. ಹಿರಿಯರ ಕಾರ್ಯಗಳನ್ನು ಸರಿಯಾಗಿ ಮಾಡದಿದ್ದಲ್ಲಿ ಅದು ಮುಂದಿನ ತಲೆಮಾರಿಗೆ ಶಾಪವಾಗಿ ಪರಿಣಮಿಸುತ್ತದೆ. ಜಾತಕವನ್ನು ತೋರಿಸಿದಾಗ ಜ್ಯೋತಿಷಿಗಳು ಪಿತೃದೋಷ ಎನ್ನುತ್ತಾರಲ್ಲಾ ಅದೇ ಇದು. ಕುಟುಂಬದಲ್ಲಿ ಹಿರಿಯರ ಕಾರ್ಯಗಳನ್ನು ಮಾಡದೇ ಇದ್ದಾಗ ಅದು ಮಕ್ಕಳಿಗೆ ಶ್ರೇಯಸ್ಸಲ್ಲ. ಇದರಿಂದ ವಿವಾಹ ವಿಳಂಬ, ಸಂತಾನ ಸಮಸ್ಯೆ, ನೆಮ್ಮದಿ ಇಲ್ಲದಿರುವುದು ಸೇರಿ ನಾನಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಶ್ರಾದ್ಧದ ಆಚರಣೆ ಬಹಳ ಮುಖ್ಯ.

ಇದನ್ನೂ ಓದಿ: Garuda Purana: ಗರುಡ ಪುರಾಣದಲ್ಲಿ ಹೇಳಿರುವ ಈ 5 ಸಂಗತಿಗಳನ್ನು ಅಳವಡಿಸಿಕೊಂಡರೆ ಬದುಕು ಬದಲಿಸಬಹುದು

ಇದನ್ನೂ ಓದಿ: ಪಿತೃದೋಷ ಎಂದರೇನು? ಇದು ಹೇಗೆ ಪ್ರಭಾವ ಬೀರುತ್ತದೆ ಮತ್ತು ಪರಿಹಾರಗಳೇನು?

(Importance And Significance Of Pitru Shraddha Why And How To Perform This)