ಸಪ್ತ ಚಿರಂಜೀವಿಗಳು
ನಮ್ಮ ಪುರಾಣಗಳಲ್ಲಿ ನಾವು ಹಲವಾರು ವಿಸ್ಮಯಕಾರಿ ಸಂಗತಿಗಳನ್ನು ಕಾಣುತ್ತೇವೆ. ಅವುಗಳಲ್ಲಿ ಒಂದು ಅಮರತ್ವ ಅಥವಾ ಚಿರಂಜೀವಿ. ಪುರಾಣಗಳಲ್ಲಿ ಉಲ್ಲೇಖವಾಗಿರುವಂತೆ ಏಳು ಜನ ಚಿರಂಜೀವಿಗಳು ಇದ್ದಾರೆ. ಚಿರಂಜೀವಿಗಳು ಎಂದರೆ ಈ ಕಲಿಯುಗದಲ್ಲಿ ಸತ್ಯ ಯುಗ ಪ್ರಾರಂಭವಾಗುವವರೆಗೂ ಜೀವಂತವಾಗಿರುತ್ತಾರೆ ಎಂದು ನಂಬಲಾಗಿದೆ. ಚಿರಂಜೀವಿ ಎಂಬುದು ಸಂಸ್ಕೃತ ಪದವಾಗಿದ್ದು, “ಚಿರಂ” ಎಂದರೆ “ದೀರ್ಘ” ಮತ್ತು “ಜೀವಿ” ಎಂದರೆ “ಜೀವಂತ” ಎಂಬ ಎರಡು ಪದಗಳ ಸಂಯೋಜನೆಯಾಗಿದೆ. ಹಿಂದೂ ಧರ್ಮದಲ್ಲಿ ಮುಖ್ಯವಾಗಿ ಏಳು ಚಿರಂಜೀವಿಗಳಿದ್ದಾರೆ. ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಲಾದ ಸಪ್ತ ಚಿರಂಜೀವಿ ಯಾರು ಎಂಬ ಮಾಹಿತಿ ಇಲ್ಲಿದೆ. ತಿಳಿದುಕೊಳ್ಳಿ.
- ಪರಶುರಾಮ: ವಿಷ್ಣುವಿನ ಐದನೇ ಅವತಾರ ಎಂದು ನಂಬುವ ಪರಶುರಾಮನು ತನ್ನ ಪ್ರಾಮಾಣಿಕತೆ ಹಾಗೂ ದೃಢನಿಶ್ಚಯದ ಸ್ವಭಾವದಿಂದ ಶಿವನಿಂದ ಚಿರಂಜೀವಿಯಾಗುವ ವರವನ್ನು ಪಡೆದನು. ಸಪ್ತರ್ಷಿಗಳಲ್ಲಿ ಒಬ್ಬನಾದ ಜಮದಗ್ನಿಯ ಮಗನಾದ ಪರಶುರಾಮನು ಒಬ್ಬ ಕ್ಷತ್ರಿಯ ರಾಜನು ತನ್ನ ತಂದೆಯನ್ನು ಕೊಂದ ಪರಿಣಾಮ, ಭೂಮಿ ಮೇಲಿರುವ ಪ್ರತಿಯೊಬ್ಬ ಕ್ಷತ್ರಿಯನನ್ನು ಕೊಲ್ಲುವುದಾಗಿ ಪ್ರತಿಜ್ಞೆ ಮಾಡುತ್ತಾನೆ. ಅಂದಿನಿಂದಲೂ ಭೂಮಿಯ ಮೇಲೆ ಎಲ್ಲಾ ಕ್ಷತ್ರಿಯರನ್ನು ಕೊಲ್ಲಲು ಪರಶುರಾಮನು ಇಂದಿಗೂ ಜೀವಂತವಿದ್ದಾನೆಂಬ ನಂಬಿಕೆಯಿದೆ.
- ವಿಭೀಷಣ: ಲಂಕಾಧಿಪತಿ ರಾವಣನ ಕಿರಿಯ ಸಹೋದರನಾದ ವಿಭೀಷಣನು ರಾಮಾಯಣದ ರಾಮ-ರಾವಣರ ಯುದ್ಧದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಾನೆ. ಪ್ರಾಮಾಣಿಕನಾದ ವಿಭೀಷಣನು ರಾವಣನು ಸೀತೆಯನ್ನು ಲಂಕೆಗೆ ಕರೆದುಕೊಂಡು ಬಂದದ್ದಕ್ಕೆ ಅಸಮಾಧಾನನಾಗಿ ರಾಮನ ಸೈನ್ಯವನ್ನು ಸೇರುತ್ತಾನೆ. ರಾಮನ ಜೊತೆಗೂಡಿ ಸೀತೆಯನ್ನು ರಾವಣನಿಂದ ಮರಳಿ ಪಡೆಯಲು ರಾಮನಿಗೆ ಸಹಾಯ ಮಾಡುತ್ತಾನೆ. ರಾವಣನ ಸಂಹಾರದ ನಂತರ ಲಂಕಾ ರಾಜನಾಗಿ ವಿಭೀಷಣನಿಗೆ ಕಿರೀಟಧಾರಣೆ ಮಾಡಲಾಗುತ್ತದೆ. ಇಂದಿಗೂ ಲಂಕೆಯನ್ನು ಪ್ರಾಮಾಣಿಕವಾಗಿ ನೋಡಿಕೊಳ್ಳುತ್ತಾ ವಿಭೀಷಣನು ಬದುಕಿದ್ದಾನೆ ಎಂಬ ನಂಬಿಕೆ ಇದೆ.
- ವೇದವ್ಯಾಸ: ಮಹಾಭಾರತದ ಕರ್ತೃವಾಗಿರುವ ವೇದವ್ಯಾಸರು ವೇದಗಳನ್ನು ರಚಿಸಿದ್ದಕ್ಕೆ ಕೂಡ ಪ್ರಸಿದ್ಧರಾಗಿದ್ದಾರೆ. ವೇದಗಳ ರಚನೆಯ ನಂತರ ಶ್ರೀಮದ್ಭಾಗವತವನ್ನು ನಾರದ ಮುನಿಯ ಸಲಹೆಯಂತೆ ವ್ಯಾಸರು ರಚಿಸುತ್ತಾರೆ. ದ್ವಾಪರಯುಗದಿಂದ ವೇದವ್ಯಾಸರು ಕಲಿಯುಗದ ಕೊನೆಯವರೆಗೂ ಇರುತ್ತಾರೆ ಎಂಬ ನಂಬಿಕೆ ಹಾಗೂ ಉಲ್ಲೇಖಗಳು ಪುರಾಣಗಳಲ್ಲಿವೆ.
- ಬಲಿ ಚಕ್ರವರ್ತಿ: ವಿರೋಚನನ ಮಗ ಹಾಗೂ ಪ್ರಹ್ಲಾದನ ಮೊಮ್ಮಗನಾದ ಬಲಿಯು, ಅಸುರರ ರಾಜ. ಹಾಗೂ ಉತ್ತಮ ಆಡಳಿತಗಾರ. ವಾಮನ ಅವತಾರದಲ್ಲಿ ಭಗವಾನ್ ವಿಷ್ಣುವು ಆಗಮಿಸಿ ಬಲಿಚಕ್ರವರ್ತಿಯ ನಿಷ್ಠೆಯನ್ನು ಪರೀಕ್ಷಿಸುತ್ತಾನೆ. ಕರುಣಾಮಯಿ ರಾಜನಾದ ಬಲಿಚಕ್ರವರ್ತಿಗೆ ತಾನು ಕಾಲಿಡುವ ಮೂರು ಪಾದದಷ್ಟು ಭೂಮಿಯನ್ನು ದಾನ ನೀಡಬೇಕೆಂದು ವಾಮನನ ವೇಷದಲ್ಲಿದ್ದ ಕೇಳುತ್ತಾನೆ. ಅದಕ್ಕೆ ಬಲಿಚಕ್ರವರ್ತಿಯು ಸಹ ಒಪ್ಪುತ್ತಾನೆ ಆದರೆ ತನ್ನ ವಿಶ್ವರೂಪದಿಂದ ವಿಷ್ಣುವು ಒಂದು ಹೆಜ್ಜೆ ಭೂಮಿಯಲ್ಲಿಯೂ ಒಂದು ಹೆಜ್ಜೆ ಆಕಾಶದಲ್ಲಿಯೂ ಇಡುತ್ತಾನೆ.ತನ್ನ ಮೂರನೇ ಹೆಜ್ಜೆ ಇಡಲು ಸ್ಥಳವಿಲ್ಲದೇ ಮಹಾಬಲಿ ಚಕ್ರವರ್ತಿಯ ತಲೆಯ ಮೇಲೆ ಇಟ್ಟು ಅವನನ್ನು ಪಾತಾಳದಲ್ಲಿ ನೆಲೆಸುವಂತೆ ವಿಷ್ಣುವು ಆಶೀರ್ವದಿಸುತ್ತಾನೆ. ಅವನ ತ್ಯಾಗವನ್ನು ಮೆಚ್ಚಿದ ವಿಷ್ಣುವು ಅವನಿಗೆ ಅಮರತ್ವದ ವರವನ್ನು ನೀಡುತ್ತಾನೆ ಇಂದಿಗೂ ಪ್ರತಿವರ್ಷ ಬಲಿಚಕ್ರವರ್ತಿ ತನ್ನ ಪ್ರಜೆಗಳನ್ನು ನೋಡಿಕೊಂಡು ಹೋಗುತ್ತಾನೆ ಎಂಬ ನಂಬಿಕೆ ಇದೆ.
- ಅಶ್ವತ್ಥಾಮ: ಗುರು ದ್ರೋಣಾಚಾರ್ಯರ ಮಗನಾದ ಅಶ್ವತ್ಥಾಮನು ಮಹಾನ್ ಯೋಧ. ಪಾಂಡವರಿಗೆ ಮಾರ್ಗದರ್ಶಕರಾಗಿದ್ದ ಅಶ್ವತ್ಥಾಮನು ಕೊನೆಗೆ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ವಿರುದ್ಧ ಹೋರಾಡಿದ. ಬ್ರಹ್ಮಾಸ್ತ್ರವನ್ನು ಉಪಯೋಗಿಸಿ ಉತ್ತರೆಯ ಗರ್ಭದಲ್ಲಿದ್ದ ಮಗುವನ್ನು ಕೊಂದ ಪರಿಣಾಮ ಶ್ರೀಕೃಷ್ಣನಿಂದ ಶಾಪಗ್ರಸ್ತನಾಗುತ್ತಾನೆ.ಅಶ್ವತ್ಥಾಮನು ಕಲಿಯುಗ ಅಂತ್ಯದವರೆಗೆ ಭೂಮಿಯಲ್ಲಿಯೇ ನೆಲೆಸುವಂತೆ ಶ್ರೀಕೃಷ್ಣನು ಶಾಪ ನೀಡಿದ ಪರಿಣಾಮ ಕುರುಕ್ಷೇತ್ರ ಯುದ್ಧದಲ್ಲಿನ ಗಾಯಗಳೊಂದಿಗೆ ಅಶ್ವತ್ಥಾಮನು ಇಂದಿಗೂ ಭೂಮಿಯಲ್ಲಿ ಸಂಚರಿಸುತ್ತಾನೆ ಎಂಬ ನಂಬಿಕೆಯಿದೆ.
- ಕೃಪಾಚಾರ್ಯ: ಕೃಪಾಚಾರ್ಯನು ಬ್ರಹ್ಮನ ನಾಲ್ಕನೇ ಅವತಾರವೆಂಬ ನಂಬಿಕೆಯಿದೆ. ಕುರುಕ್ಷೇತ್ರದಲ್ಲಿ ಪಾಂಡವರ ವಿರುದ್ಧ ಹೋರಾಡಿದ ಕೃಪಾಚಾರ್ಯರು, ಯುದ್ಧದ ನಂತರ ಜೀವಂತವಾಗಿ ಉಳಿದ ಕೆಲವೇ ಕೆಲವು ಕೌರವ ಯೋಧರಲ್ಲಿ ಒಬ್ಬರು. ಯುದ್ಧದ ನಂತರ ಪಾಂಡವರಿಗೆ ಶರಣಾಗಿ ಹಸ್ತಿನಾಪುರಕ್ಕೆ ತೆರಳಿದ ಕೃಪಾಚಾರ್ಯರು ಅರ್ಜುನನ ಮೊಮ್ಮಗನಾದ ಪರೀಕ್ಷಿತನ ಮಾರ್ಗದರ್ಶಕರಾಗುತ್ತಾರೆ.
- ಹನುಮಂತ: ಅಂಜನಾ ದೇವಿಯ ಪುತ್ರನಾದ ರಾಮ ಬಂಟ ಹನುಮ ರಾಮನ ಅತ್ಯುನ್ನತ ಭಕ್ತರಲ್ಲಿ ಒಬ್ಬ. ರಾವಣ ಸಂಹಾರದ ನಂತರ ಅಯೋಧ್ಯೆಗೆ ಹನುಮಂತನು ತೆರಳುತ್ತಾನೆ ಅಲ್ಲಿ ರಾಮನು ಹನುಮಂತನಿಗೆ ಅವನು ಮಾಡಿದ ಸಹಾಯಕ್ಕಾಗಿ ಉಡುಗೊರೆ ನೀಡಲು ಬಯಸಿದಾಗ ಅವುಗಳನ್ನು ಸ್ವೀಕರಿಸಲು ನಿರಾಕರಿಸಿದ ಹನುಮಂತನು ರಾಮದೇವರ ಪಾದದಲ್ಲಿ ಸ್ವಲ್ಪ ಸ್ಥಳವನ್ನು ನೀಡುವಂತೆ ಕೇಳುತ್ತಾನೆ. ಅದರಿಂದ ಪ್ರಭಾವಿತನಾದ ರಾಮನು ಹನುಮಂತನಿಗೆ ಚಿರಂಜೀವಿ ಆಗುವಂತೆ ಆಶೀರ್ವಾದ ನೀಡುತ್ತಾನೆ. ಎಲ್ಲಿಯವರೆಗೆ ಭೂಮಿಯಲ್ಲಿ ರಾಮಭಕ್ತರು ಇರುತ್ತಾರೆಯೇ ಅಲ್ಲಿಯವರೆಗೂ ಹನುಮಂತನು ಭೂಮಿಯಲ್ಲಿ ಸಂಚರಿಸುತ್ತಾನೆ ಎಂಬ ನಂಬಿಕೆ ಇದೆ. (ಸತ್ಸಂಗ ಸಂಗ್ರಹ)
ಅಧ್ಯಾತ್ಮಕ್ಕೆ ಸಂಬಂಧ ಪಟ್ಟ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ