Badami Banashankari; ಬಾದಾಮಿ ಬನಶಂಕರಿ ದೇವಿ ಬಗ್ಗೆ ನಿಮಗೆಷ್ಟು ಗೊತ್ತು?

| Updated By: ಆಯೇಷಾ ಬಾನು

Updated on: Sep 05, 2021 | 7:06 AM

ಬಾದಾಮಿ ಬನಶಂಕರಿ ದೇವಿಯ ಬಗ್ಗೆ ಸ್ಕಂದ ಪುರಾಣದಲ್ಲಿ ವಿವರವಾಗಿ ತಿಳಿದು ಬರುತ್ತದೆ. ಬನಶಂಕರಿ ಜಾತ್ರೆ ಅದ್ದೂರಿಯಾಗಿ ನಡೆಯುತ್ತದೆ. ಪ್ರತಿವರ್ಷ ಬನಶಂಕರಿ ದೇವಿ ಜಾತ್ರೆ ಬರುವುದು ಪುಷ್ಯಮಾಸದ ಶುಕ್ಲ ಪಕ್ಷದ ಅಷ್ಟಮಿ ದಿನದಂದು.

Badami Banashankari; ಬಾದಾಮಿ ಬನಶಂಕರಿ ದೇವಿ ಬಗ್ಗೆ ನಿಮಗೆಷ್ಟು ಗೊತ್ತು?
ಬನಶಂಕರಿ ದೇವಿ
Follow us on

ಬಾಗಲಕೋಟೆ: ಜಿಲ್ಲೆಯ ಬಾದಾಮಿ ಎಂಬ ಊರಿನ ಹೆಸರು ಕೇಳಿದ ತಕ್ಷಣ ನೆನಪಿಗೆ ಬರುವುದು ಅಲ್ಲಿಯ ಬನಶಂಕರಿ ದೇವಾಲಯ. ಭಾರತದಲ್ಲಿರುವ ಶಕ್ತಿಪೀಠಗಳಲ್ಲಿ ಬಾದಾಮಿ ಬನಶಂಕರಿ ದೇವಿಯ ಕ್ಷೇತ್ರವು ಒಂದಾಗಿದೆ. ಬನಶಂಕರಿ ಎಂದು ಕರೆಯಲು ಕಾರಣ ವಿಶೇಷವಾಗಿದೆ. ಬನ ಎಂದರೆ ಅರಣ್ಯ, ಸಿರಿ ಎಂದರೆ ಸಂಪತ್ತು ಎಂದರ್ಥ. ಚಾಲುಕ್ಯರ ಆಳ್ವಿಕೆಯ ಕಾಲದಲ್ಲಿ ಬಾದಾಮಿಯು ಅವರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇವರು ಬನಶಂಕರಿ ದೇವಿಯನ್ನು ತಮ್ಮ ಆರಾಧ್ಯ ದೇವತೆ ಮತ್ತು ಕುಲ ದೇವಿಯಾಗಿ ಮಾಡಿಕೊಂಡಿದ್ದರು.

ಬಾದಾಮಿ ಬನಶಂಕರಿ ದೇವಿಯ ಬಗ್ಗೆ ಸ್ಕಂದ ಪುರಾಣದಲ್ಲಿ ವಿವರವಾಗಿ ತಿಳಿದು ಬರುತ್ತದೆ. ಬನಶಂಕರಿ ಜಾತ್ರೆ ಅದ್ದೂರಿಯಾಗಿ ನಡೆಯುತ್ತದೆ. ಪ್ರತಿವರ್ಷ ಬನಶಂಕರಿ ದೇವಿ ಜಾತ್ರೆ ಬರುವುದು ಪುಷ್ಯಮಾಸದ ಶುಕ್ಲ ಪಕ್ಷದ ಅಷ್ಟಮಿ ದಿನದಂದು. ಉತ್ತರ ಕರ್ನಾಟಕದಲ್ಲಿ ನಡೆಯುವ ಜಾತ್ರೆಗಳಲ್ಲಿ ಅತಿದೊಡ್ಡ ಜಾತ್ರೆಯೆಂದರೆ ಬಾದಾಮಿಯ ಬನಶಂಕರಿ ದೇವಿ ಜಾತ್ರೆ. ಕಾರಣ ಈ ಜಾತ್ರೆ ಒಂದು ತಿಂಗಳ ಕಾಲ ನಡೆಯುತ್ತದೆ. ಬನದ ಹುಣ್ಣಿಮೆಯ ನವರಾತ್ರಿಯು ಪುಷ್ಯಮಾಸದ ಶುಕ್ಲ ಪಕ್ಷದ ಅಷ್ಟಮೀ ದಿನದಿಂದ ಪ್ರಾರಂಭವಾಗುವುದು.

ಅಷ್ಟಮಿ ದಿನದಂದು ಅಷ್ಟಭುಜಳಾದ ಅಷ್ಟಸಿದ್ಧಿಯನ್ನು ಕೊಡುವ ದೇವಿಯನ್ನು ಭಕ್ತಿಯಿಂದ ವೈದಿಕ ಮಂತ್ರಗಳ ಪೂಜಿಸುವರು. ಆ ದಿನ ಘಟಸ್ಥಾಪನೆಯನ್ನು ಮಾಡುವರು. ನವಮಿಯ ದಿನದಂದು 9 ಕೋಟಿ ಸಖಿಯರಿಂದ ಕೂಡಿದ ನವದುರ್ಗಾ ಸ್ವರೂಪಳಾದ ನವರತ್ನ ಭರಿತ ಭೂಷಿತಳಾದ ದೇವಿಯನ್ನು ಪೂಜಿಸುವರು.

ಬನಶಂಕರಿ ದೇವಿ ಜಾತ್ರೆ ಒಂದು ತಿಂಗಳ ಕಾಲ ನಡೆಯುವ ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆ. ಜಾತ್ರೆ ವೇಳೆ ಅದ್ದೂರಿ ರಥೋತ್ಸವ ನಡೆಯುತ್ತದೆ. ರಥೋತ್ಸವ ದಿನದಂದು ಲಕ್ಷ ಜನರು ಸೇರುತ್ತಾರೆ. ಬನಶಂಕರಿ ದೇವಸ್ಥಾನಕ್ಕೆ ರಾಜ್ಯ ಪರರಾಜ್ಯದ ದೇಶ ವಿದೇಶದಿಂದಲೂ ಭಕ್ತರು ಬರುತ್ತಾರೆ. ದೇವಿ ದರ್ಶನ ಪಡೆದು ಪುನೀತರಾಗುತ್ತಾರೆ. ಇನ್ನು ದೇವಿಗೆ ಪ್ರತಿನಿತ್ಯ ವಿಶೇಷ ಪೂಜೆ ಅಭಿಷೇಕಗಳು ನಡೆಯುತ್ತಲೇ ಇರುತ್ತವೆ. ಭಕ್ತರು ತಮ್ಮ ಹರಕೆಯಂತೆ ವಿವಿಧ ಪೂಜೆ ಪುನಸ್ಕಾರ ಅಭಿಷೇಕ ಮಾಡಿ ದೇವಿ ಕೃಪೆಗೆ ಪಾತ್ರರಾಗುತ್ತಾರೆ. ‘ಬನಶಂಕರಿ ನಿನ್ನ ಪಾದಕ ಶಂಬುಕೊ’ ಎಂಬುದು ಪ್ರಮುಖ ಘೋಷಣೆ‌. ಇದಕ್ಕೆ ವಿಶೇಷ ಅರ್ಥವಿದೆ. ಹೀಗೆಂದರೆ ‘ಹೇ ಬನಶಂಕರಿಯೇ ನಾನು ನಿನಗೆ ಎಂದು ಸರಿಸಾಟಿ ಆಗಲಾರೆ. ನಾನು ಯಾವಾಗಲೂ ನಿನ್ನ ಪಾದದಡಿಯಲ್ಲೇ ಇರುವವನು’ ಎಂದರ್ಥ.

ಬನಶಂಕರಿ ಜಾತ್ರೆ

ಹೇಗಿದೆ ದೇವಾಲಯದ ವಿನ್ಯಾಸ?
ಈಗಿರುವ ದೇವಾಲಯ ಕಟ್ಟಡವು ಯಾವ ಕಾಲದ್ದು ಎಂಬುದರ ಬಗ್ಗೆ ನಿರ್ದಿಷ್ಟ ದಾಖಲೆಗಳಿಲ್ಲ‌. ಸಾವಿರಾರು ವರ್ಷಗಳ ಹಿಂದಿನದು ಎಂದು ಬಾವಿಸಬಹುದು. ಹಳೆಯ ಬನಶಂಕರಿ ದೇವಾಲಯದ ಗರ್ಭಗುಡಿಯು ಮಣ್ಣಲ್ಲಿ ಹೂತು ಹೋಗಿದೆ‌. ಈಗಿರುವ ದೇವಿಯ ಪೀಠದಲ್ಲಿ ಶಾಲಿವಾಹನ ಶಕ 603 ಎಂದು ಬರೆದಿರುವುದನ್ನು ಕಾಣಬಹುದು. ಈ ಪೀಠದಲ್ಲಿಯೇ ‘ಪರಶುರಾಮ ಆನಗಳ’ ಎಂಬುವವರ ಹೆಸರಿದೆ. ಬನಶಂಕರಿ ದೇವಿ ವಿಗ್ರಹವು ಐದು ಅಡಿ ಉದ್ದವಿದ್ದು, ಕಪ್ಪುಶಿಲೆಯಿಂದ ಕೂಡಿದೆ,‌ ಸಿಂಹ ರೂಪಿಣಿಯಾಗಿ ದೇವಿಯು ನೆಲೆಸಿರುವಳು. ದೇವಿಯು ಎಂಟು ಕೈಗಳಿಂದ ಕೂಡಿದ್ದು, ಬಲಗೈಯಲ್ಲಿ ಖಡ್ಗ, ಘಂಟೆ, ತ್ರಿಶೂಲ ಮತ್ತು ಲಿಪಿ ಹಾಗೂ ಎಡಗೈಯಲ್ಲಿ ಢಮರುಗ, ಢಾಲು, ರುಂಡ ಮತ್ತು ಅಮೃತ ಪಾತ್ರೆಗಳಿವೆ. ದೇವಿಯು ತ್ರಿನೇತ್ರವುಳ್ಳವಳು. ಇವಳನ್ನು ಮಹಾಕಾಳಿ, ಮಹಾಲಕ್ಷ್ಮಿ, ಮತ್ತು ಮಹಾಸರಸ್ವತಿಯೆಂತಲೂ ಕರೆಯುತ್ತಾರೆ.

ದೇವಿ ಕೇವಲ ಭಕ್ತರಿಗೆ ವರ ಕೊಡೋದಷ್ಟೇ ಅಲ್ಲ, ನೂರಾರು ಜನರು ಕಲಾವಿದರನ್ನು ಕಾಪಾಡುತ್ತಾಳೆ. ನಾಟಕ ಕಲೆಯನ್ನು ರಕ್ಷಿಸುತ್ತಾಳೆ ಎಂಬ ನಂಬಿಕೆಯಿದೆ. ಯಾಕೆಂದರೆ ಬನಶಂಕರಿ ದೇವಿ ಜಾತ್ರೆ ವೇಳೆ ತಿಂಗಳುಗಳ ಕಾಲ ಹದಿನೈದಕ್ಕೂ ಹೆಚ್ಚು ನಾಟಕ ಕಂಪನಿಗಳು ಬೀಡು ಬಿಟ್ಟು ನಾಟಕಗಳು ನಡೆಯುತ್ತವೆ. ಅಲ್ಲದೆ ಸಾವಿರಾರು ವ್ಯಾಪಾರಸ್ಥರು ದೇವಿ ನಂಬಿ ಬದುಕುತ್ತಾರೆ. ವರನಟ ಡಾ.ರಾಜಕುಮಾರ, ಗುಬ್ಬಿ ವೀರಣ್ಣ, ಚಿಂದೋಡಿ ಲೀಲಾ, ಉಮಾಶ್ರಿ, ಸುಧೀರ ಅಂತಹ ಮಹಾನ್ ಕಲಾವಿದರು ಇಲ್ಲಿ ನಾಟಕದಲ್ಲಿ ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ

ಗೋಕುಲಾಷ್ಟಮಿಯ ಪೂರ್ಣ ಫಲ ಪ್ರಾಪ್ತಿಯಾಗಲು ರಾಧಾ ಜನ್ಮಾಷ್ಟಮಿ ಆಚರಿಸಬೇಕು; ರಾಧಾ ಅಷ್ಟಮಿ ಸಿದ್ಧತೆ, ಆಚರಣೆ ಹೇಗೆ?

ಗೋಕುಲಾಷ್ಟಮಿಯ ದಿನ ನಿಮ್ಮ ರಾಶಿಗೆ ಅನುಸಾರವಾಗಿ ಕೃಷ್ಣನಿಗೆ ಹೀಗೆ ಬಟ್ಟೆ ತೊಡಿಸಿ, ಸಿಹಿ ತಿಂಡಿಯಿಟ್ಟು ಶ್ರೀ ಕೃಷ್ಣಾರ್ಪಣಮಸ್ತು ಅನ್ನಿ

(Information about badami banashankari Temple Bagalkot)