June Lucky Dates: ಜೂನ್‌ನಲ್ಲಿ ವಾಹನ ಖರೀದಿಸುತ್ತಿದ್ದೀರಾ? ಹಾಗಿದ್ರೆ ಈ ಮೂರು ದಿನಾಂಕಗಳನ್ನೇ ಆಯ್ಕೆ ಮಾಡಿ

ಜೂನ್ ಮಾಸದಲ್ಲಿ ವಾಹನ ಖರೀದಿಸಲು ಶುಭ ದಿನಗಳ ಬಗ್ಗೆ ಅನೇಕರಿಗೆ ಅನುಮಾನಗಳಿರುತ್ತವೆ. ಅಧಿಕ ಜೇಷ್ಠ ಮಾಸದಲ್ಲಿಯೂ ಕೆಲವು ಮಂಗಳಕರ ಮುಹೂರ್ತಗಳಿವೆ ಎಂದು ಜ್ಯೋತಿಷ್ಯ ತಜ್ಞರು ತಿಳಿಸಿದ್ದಾರೆ. ಜೂನ್ 17, 24, ಮತ್ತು 27 ರಂದು ವಾಹನ ಖರೀದಿಯು ಸಕಲ ರಾಶಿಗಳಿಗೂ ಶುಭ ತರುತ್ತದೆ. ಈ ದಿನಗಳಲ್ಲಿ ಖರೀದಿಸಿದರೆ ಸ್ಥಿರತೆ, ದೈವಬಲ ಮತ್ತು ಸಕಾರಾತ್ಮಕ ಶಕ್ತಿ ಪ್ರಾಪ್ತವಾಗುತ್ತದೆ ಎಂದು ನಂಬಲಾಗಿದೆ.

June Lucky Dates: ಜೂನ್‌ನಲ್ಲಿ ವಾಹನ ಖರೀದಿಸುತ್ತಿದ್ದೀರಾ? ಹಾಗಿದ್ರೆ ಈ ಮೂರು ದಿನಾಂಕಗಳನ್ನೇ ಆಯ್ಕೆ ಮಾಡಿ
ವಾಹನ ಖರೀದಿಗೆ ಶುಭ ದಿನ
Image Credit source: Pinterest

Updated on: Jun 09, 2026 | 8:41 AM

ಪ್ರತಿಯೊಬ್ಬರಿಗೂ ತಮ್ಮ ಯೋಗ್ಯತೆಗೆ ತಕ್ಕಂತೆ ಒಂದು ವಾಹನ ಹೊಂದಬೇಕೆಂಬ ಆಸೆ ಇರುತ್ತದೆ. ಅದು ಪುಟ್ಟ ಕಾರು, ಬೈಕ್, ಸ್ಕೂಟರ್, ಲಾರಿ, ಟ್ರ್ಯಾಕ್ಟರ್, ವ್ಯಾನ್ ಅಥವಾ ಸೈಕಲ್ ಆಗಿರಬಹುದು. ಆದರೆ, ಬೇರೆಯವರನ್ನು ನೋಡಿ ಮೊಂಡು ಹಠದಿಂದ ವಾಹನ ಖರೀದಿಸುವುದಕ್ಕಿಂತ, ನಮ್ಮ ಶಕ್ತ್ಯಾನುಸಾರ ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಭಾವಿಸುವುದು ಉತ್ತಮ. ವಾಹನ ಖರೀದಿ ವಿಷಯದಲ್ಲಿ, ಯಾವ ದಿನ ಶುಭ, ಯಾವಾಗ ಖರೀದಿಸಬೇಕು ಎಂಬ ಗೊಂದಲ ಅನೇಕರಲ್ಲಿ ಸಹಜ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಪ್ರಸ್ತುತ, ಜೂನ್ ಮಾಸವು ಅಧಿಕ ಜೇಷ್ಠ ಮಾಸವಾಗಿದೆ. ಈ ಅಧಿಕ ಜೇಷ್ಠ ಮಾಸವು ಜೂನ್ 15 ರವರೆಗೂ ಇದ್ದು, ನಂತರ ನಿಜ ಜೇಷ್ಠ ಮಾಸವು ಮುಂದುವರಿಯುತ್ತದೆ. ಈ ಅವಧಿಯಲ್ಲಿ ವಾಹನ ಖರೀದಿಸುವುದು ಶುಭವೋ ಅಶುಭವೋ ಎಂಬ ಗೊಂದಲ ಅನೇಕರನ್ನು ಕಾಡುತ್ತದೆ. ಲೋನ್ ಮಂಜೂರಾದವರು ಅಥವಾ ಹಣ ಸಿದ್ಧವಾಗಿಟ್ಟುಕೊಂಡವರು “ಮಲ ಮಾಸ” ಎಂಬ ಕಾರಣಕ್ಕೆ ವಾಹನ ಖರೀದಿಯನ್ನು ಮುಂದೂಡಬೇಕೇ ಎಂದು ಯೋಚಿಸುತ್ತಾರೆ. ಆದರೆ, ಧರ್ಮಶಾಸ್ತ್ರಗಳಲ್ಲಿ ಉಲ್ಲೇಖದ ಪ್ರಕಾರ, ಪ್ರಪಂಚದಲ್ಲಿ ಯಾವುದೂ ಪೂರ್ತಿ ಕೆಟ್ಟದ್ದೂ ಇಲ್ಲ, ಪೂರ್ತಿ ಒಳ್ಳೆಯದೂ ಇಲ್ಲ. “ಯದ್ಭಾವಂ ತದ್ಭವತಿ” ಎಂಬಂತೆ, ನಮ್ಮ ಭಾವನೆಗಳೇ ಫಲಿತಾಂಶವನ್ನು ನಿರ್ಧರಿಸುತ್ತವೆ.

ಪ್ರಾಚೀನ ಕಾಲದಲ್ಲಿ ವಾಹನಗಳನ್ನು ಚರಾಸ್ತಿಗಳ ಸಮಾನವಾಗಿ ಪರಿಗಣಿಸಲಾಗುತ್ತಿತ್ತು. ಮನೆ ವಿಭಾಗ ಮಾಡುವಾಗ ಭೂಮಿಯಂತೆ ವಾಹನಗಳನ್ನೂ ಹಂಚಿಕೊಳ್ಳಲಾಗುತ್ತಿತ್ತು. ಇಂದಿಗೂ ವಾಹನವು ನಮ್ಮ ದೇಹ, ಆತ್ಮ ಮತ್ತು ಪ್ರಾಣವನ್ನೇ ಹೊತ್ತು ಸಾಗಿಸುವ ಒಂದು ಅವಿಭಾಜ್ಯ ಅಂಗವಾಗಿದೆ. ಅಂತಹ ವಾಹನವನ್ನು ಖರೀದಿಸಲು ಜೂನ್ ಮಾಸದಲ್ಲಿ ಮೂರು ಮಹಾಯೋಗಗಳಿವೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಜೂನ್ 17, ಬುಧವಾರ (ಪುನರ್ವಸು ನಕ್ಷತ್ರ):

ಈ ದಿನ ವಾಹನ ಖರೀದಿಗೆ ಅತ್ಯಂತ ಶುಭಕರವಾಗಿದೆ. ಬುಧವಾರದಂದು ಮಧ್ಯಾಹ್ನ 12 ರಿಂದ 1:30 ರವರೆಗೆ ರಾಹುಕಾಲವಿರುತ್ತದೆ. ಈ ರಾಹುಕಾಲವನ್ನು ಹೊರತುಪಡಿಸಿ ವಾಹನ ಖರೀದಿಸಿದರೆ ನಿಮ್ಮ ಜೀವನದಲ್ಲಿ ಸ್ಥಿರತೆ, ಮಾಡುವ ಕೆಲಸಗಳಲ್ಲಿ ಶುಭ ಮತ್ತು ಮಾನಸಿಕ ನೆಮ್ಮದಿ ಪ್ರಾಪ್ತವಾಗುತ್ತದೆ. ಇದು ಅತ್ಯಂತ ಒಳ್ಳೆದಾಗುವ ದಿನ.

ಜೂನ್ 24, ಬುಧವಾರ (ಚಿತ್ತಾ ನಕ್ಷತ್ರ):

ಇದು ಅತ್ಯಂತ ಶಕ್ತಿಶಾಲಿ ಮುಹೂರ್ತಗಳಲ್ಲಿ ಒಂದಾಗಿದೆ. ಚಿತ್ತಾ ನಕ್ಷತ್ರದಲ್ಲಿ ವಾಹನ ಖರೀದಿಸುವುದರಿಂದ ದೈವಬಲ ಚೆನ್ನಾಗಿರುತ್ತದೆ. ಈ ಮುಹೂರ್ತವು 12 ರಾಶಿಗಳಿಗೂ ಶುಭವನ್ನು ತರುತ್ತದೆ. ಅಷ್ಟೇ ಅಲ್ಲದೆ, ಸಣ್ಣಪುಟ್ಟ ಅಪಘಾತಗಳು ಸಂಭವಿಸುವುದನ್ನು ತಪ್ಪಿಸುವ ಸಾಧ್ಯತೆಯೂ ಈ ಮುಹೂರ್ತಕ್ಕೆ ಇದೆ.

ಜೂನ್ 27, ಶನಿವಾರ (ಉತ್ತರಭಾದ್ರ ನಕ್ಷತ್ರ):

ಶನಿವಾರ ವಾಹನ ಖರೀದಿಯು ಬಹಳ ವಿಶೇಷವಾಗಿದೆ. ಈ ದಿನ ಸಾಕ್ಷಾತ್ ವೆಂಕಟೇಶ್ವರನ ಕೃಪೆ, ಶನಿಭಗವಾನ್ ಮತ್ತು ಹನುಮನ ಕೃಪೆ ಇರುತ್ತದೆ. ಉತ್ತರಭಾದ್ರ ನಕ್ಷತ್ರವಿರುವುದರಿಂದ, ಈ ದಿನ ವಾಹನ ಖರೀದಿಸಿದರೆ ಶನಿಭಗವಾನ್‌ನ ಕೃಪಾಶೀರ್ವಾದ ನಿಮಗೆ ದೊರೆಯುತ್ತದೆ.

ಈ ಮೂರು ದಿನಗಳಲ್ಲಿ ನೀವು ಹೊಸ ಕಾರು, ಬೈಕ್, ಸ್ಕೂಟರ್, ಲಾರಿ, ಟ್ರ್ಯಾಕ್ಟರ್, ವ್ಯಾನ್ ಅಥವಾ ಯಾವುದೇ ವಾಹನವನ್ನು ಬುಕ್ ಮಾಡಬಹುದು ಅಥವಾ ನೇರವಾಗಿ ಮನೆಗೆ ತರಬಹುದು. ವಾಹನ ಖರೀದಿಸಿದ ನಂತರ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸುವುದು ಮತ್ತು ವಾಹನದ ಮೇಲೆ ಸ್ವಸ್ತಿಕ್ ಅಳವಡಿಸುವುದು ಅತ್ಯಂತ ಶುಭಕರವೆಂದು ಜ್ಯೋತಿಷ್ಯ ತಜ್ಞರು ಸಲಹೆ ನೀಡುತ್ತಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:18 am, Tue, 9 June 26

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us