
ನವರಾತ್ರಿಯ ಏಳನೇ ದಿನ ಆರಾಧನೆಗೆ ಪಾತ್ರವಾಗುವ ದೇವಿಯ ಸ್ವರೂಪವೇ ಕಾಲರಾತ್ರಿ. ಈ ರೂಪದಲ್ಲಿ ಜಗನ್ಮಾತೆಯು ಭಯಾನಕ ವೇಷದಲ್ಲಿ ಕಾಣಿಸಿಕೊಂಡರೂ, ಭಕ್ತರಿಗೆ ಸದಾ ಶುಭಫಲಗಳನ್ನು ನೀಡುವ ಶಕ್ತಿ ಎಂದು ಪುರಾಣಗಳು ವಿವರಿಸುತ್ತವೆ. ಕಾಲರಾತ್ರಿ ದೇವಿಯೇ ಶುಂಬ-ನಿಶುಂಬ ಎಂಬ ಕ್ರೂರ ರಾಕ್ಷಸರನ್ನು ಸಂಹರಿಸಿದಳು. ಅವಳ ಸ್ಮರಣೆಯಿಂದಲೇ ಭೂತ-ಪ್ರೇತ, ಪಿಶಾಚಗಳ ಹಿಂಸೆ ಅಳಿದುಹೋಗುತ್ತದೆ. ಆದ್ದರಿಂದ ಈ ತಾಯಿಯನ್ನು ಆರಾಧನೆ ಮಾಡಿದರೆ ಪಾಪ ವಿನಾಶವಾಗುತ್ತದೆ, ಶತ್ರುಗಳಿಲ್ಲದಂತಾಗುತ್ತದೆ, ಜೀವನವು ಧೈರ್ಯ, ಸಮಾಧಾನ ಮತ್ತು ಆಧ್ಯಾತ್ಮಿಕ ಸಂತೋಷದಿಂದ ತುಂಬುತ್ತದೆ ಎಂದು ನಂಬಲಾಗಿದೆ.
ಏಕವೇಣೀ ಜಪಾಕರ್ಣಪೂರಾ ನಗ್ನ ಖರಾಸ್ಥಿತಾ ।
ಲಂಬೋಷ್ಠೀ ಕರ್ಣಿಕಾಕರ್ಣೀ ತೈಲಾಭ್ಯಕ್ತ ಶರೀರಿಣೀ ॥
ವಾಮಪಾದೋಲ್ಲಸಲ್ಲೋಹಲತಾಕಂಟಕ ಭೂಷಣಾ ।
ವರ್ಧನಮೂರ್ಧಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ ॥
ಕಾಲರಾತ್ರಿಯ ದೇಹವು ಕಪ್ಪು ಬಣ್ಣದಂತೆ, ಗಾಢಾಂಧಕಾರವನ್ನು ಹೋಲುತ್ತದೆ. ತಲೆಯ ಜಡೆಯನ್ನು ಕಟ್ಟದೆ ಹಾಗೆಯೇ ಬಿಟ್ಟಿದ್ದಾಳೆ. ಕುತ್ತಿಗೆಯಲ್ಲಿ ಹೊಳೆಯುವ ಮಾಲೆ ಇದೆ. ದೇವಿಗೆ ಮೂರು ಕಣ್ಣುಗಳಿದ್ದು, ಅವು ಗೋಲಾಕಾರದಂತೆ ಪ್ರಕಾಶಿಸುತ್ತವೆ. ಉಸಿರಾಡುವಾಗ ಬೆಂಕಿಯ ಜ್ವಾಲೆಗಳು ಹೊರಹೊಮ್ಮುತ್ತವೆ.
ಆಕೆಯ ವಾಹನ ಕತ್ತೆ. ಬಲಗಡೆಯ ಮೇಲಿನ ಕೈ ವರಮುದ್ರೆಯಲ್ಲಿ, ಬಲಗಡೆಯ ಕೆಳಗಿನ ಕೈ ಅಭಯಮುದ್ರೆಯಲ್ಲಿ, ಎಡಗಡೆಯ ಮೇಲಿನ ಕೈಯಲ್ಲಿ ಕಬ್ಬಿಣದ ಮುಳ್ಳು,ಎಡಗಡೆಯ ಕೆಳಗಿನ ಕೈಯಲ್ಲಿ ಖಡ್ಗ ಹಿಡಿದಿದ್ದಾಳೆ. ಈ ಸ್ವರೂಪದಲ್ಲಿ ದುರ್ಗೆಯು ಭಯಾನಕಳಾಗಿ ಕಾಣಿಸಿಕೊಂಡರೂ, ಫಲದರ್ಶನದಲ್ಲಿ ಸದಾ ಶುಭಂಕರಿ ಎಂಬ ಹೆಸರಿನಿಂದ ಪ್ರಸಿದ್ಧಳಾಗಿದ್ದಾಳೆ.
ಇದನ್ನೂ ಓದಿ: ನವರಾತ್ರಿಯ 6 ನೇ ದಿನದ ವಿಶೇಷ; ಸಕಲ ಸೌಭಾಗ್ಯ ನೀಡುವ ಕಾತ್ಯಾಯಿನಿ
ನವರಾತ್ರಿಯ ಏಳನೇ ದಿನ ಕಾಲರಾತ್ರಿಯ ಆರಾಧನೆ ಮಾಡುವುದರಿಂದ ಎದುರಾಗುವ ಪಾಪ, ಅಡೆತಡೆಗಳು ನಾಶವಾಗುತ್ತವೆ. ಜೊತೆಗೆ ಅಂತ್ಯವಿಲ್ಲದ ಪುಣ್ಯಲಾಭ ದೊರೆಯುತ್ತದೆ. ದುಷ್ಟರು, ರಾಕ್ಷಸರು, ಪ್ರೇತಬಾಧೆಗಳು ದೂರವಾಗುತ್ತವೆ. ಗ್ರಹಬಾಧೆಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ. ಭಕ್ತರು ಈ ಸ್ವರೂಪಕ್ಕೆ ಹೆದರದೆ, ಶ್ರದ್ಧಾ-ಭಕ್ತಿಯಿಂದ ಆರಾಧನೆ ಮಾಡಿದರೆ, ಬೆಂಕಿ, ನೀರು, ಪ್ರಾಣಿಗಳು, ಕ್ರಿಮಿ-ಕೀಟಗಳಿಂದ ಸಂಭವಿಸಬಹುದಾದ ಎಲ್ಲಾ ಅಪಾಯಗಳು ದೂರವಾಗುತ್ತವೆ.
ಭಯಾನಕ ಸ್ವರೂಪದಲ್ಲಿದ್ದರೂ ಕಾಲರಾತ್ರಿ ಭಕ್ತರಿಗಾಗಿ ಸದಾ ಶುಭಪ್ರದಿನಿ. ಏಳನೇ ದಿನ ಆಕೆಯ ಆರಾಧನೆ ಮಾಡಿದರೆ ಪಾಪ ಸಂಹಾರ, ಶತ್ರು ವಿನಾಶ, ದುಃಖದ ಪರಿಹಾರ ಹಾಗೂ ಶಾಂತಿ-ಸಂತೋಷಗಳ ಅನುಭವ ದೊರೆಯುವುದು ಖಚಿತ.
ಮಾಹಿತಿ: ಶ್ರೀ ವಿಠ್ಠಲ್ ಭಟ್ (6361335497)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:50 pm, Sat, 27 September 25