ದೇವರು ನಿದ್ರಿಸುವ ಕಾಲವಿದು; ಮಲಗಿದ ದೇವರು ಏಳುವುದು ಯಾವಾಗ? ದೇವ ಲೋಕದ ಒಂದು ದಿನ ಎಷ್ಟು ದೀರ್ಘ?

| Updated By: Skanda

Updated on: Jul 31, 2021 | 6:40 AM

ಈ ಏಕಾದಶಿಯನ್ನು ದೇವಶಯಾನಿ ಏಕಾದಶಿ ಎಂದಷ್ಟೇ ಅಲ್ಲದೆ ಬೇರೆ ಬೇರೆ ಹೆಸರುಗಳಿಂದಲೂ ಕರೆಯಲಾಗುತ್ತದೆ. ಇದನ್ನು ಹರಿಶಯನಿ ಏಕಾದಶಿ ಮತ್ತು ಪದ್ಮನಾಭ ಏಕಾದಶಿ ಎಂದೂ ಸಾಧಾರಣವಾಗಿ ಕರೆಯುತ್ತಾರೆ. ಈ ದಿನ ಭಗವಂತ ವಿಷ್ಣು ಕ್ಷೀರಸಾಗರದಲ್ಲಿ ಮಲಗುತ್ತಾನೆ.

ದೇವರು ನಿದ್ರಿಸುವ ಕಾಲವಿದು; ಮಲಗಿದ ದೇವರು ಏಳುವುದು ಯಾವಾಗ? ದೇವ ಲೋಕದ ಒಂದು ದಿನ ಎಷ್ಟು ದೀರ್ಘ?
ಮಹಾವಿಷ್ಣು (ಸಾಂಕೇತಿಕ ಚಿತ್ರ)
Follow us on

ಅಪರೂಪಕ್ಕೆ ಏನಾದರೂ ಒಳ್ಳೇ ಕೆಲಸ ಆದಾಗ ಅಥವಾ ಅನೇಕ ಪ್ರಯತ್ನಗಳ ನಂತರ ಗೆಲುವು ಸಿಕ್ಕಾಗ ಅಬ್ಬಾ ಅಂತೂ ದೇವರು ಕಣ್ಬಿಟ್ಟ! ಎಂಬ ಮಾತನ್ನು ಸಾಧಾರಣವಾಗಿ ಹೇಳುವುದನ್ನು ನೀವು ಕೇಳಿರಬಹುದು. ಅಂತೆಯೇ, ಎಷ್ಟೇ ಪ್ರಯತ್ನ ಮಾಡಿದರೂ ಸೋಲು ಬೆನ್ನಿಗೆ ಅಂಟಿಕೊಂಡಂತೆ ಕಾಡುತ್ತಿದ್ದರೆ, ಬಯಸಿದ್ದು ಈಡೇರದೇ ಇದ್ದರೆ ದೇವರು ಇನ್ನೂ ಕಣ್ಣು ಬಿಟ್ಟಿಲ್ಲ ಎಂದು ಹೇಳುವುದೂ ಸರ್ವೇ ಸಾಮಾನ್ಯ. ಅಂದಹಾಗೆ, ಇತ್ತೀಚೆಗಷ್ಟೇ ದೇವಶಯನಿ ಏಕಾದಶಿಯನ್ನೂ ದೇಶದ ವಿವಿಧೆಡೆ ಆಚರಿಸಲಾಗಿದೆ. ಅದನ್ನು ದೇವರು ವಿಶ್ರಾಂತಿಗೆ ತೆರಳುವ ದಿನ ಎಂದೂ ಹೇಳಲಾಗುತ್ತದೆ. ಈ ದಿನದಂದು ನಿದ್ರಾವಸ್ಥೆಗೆ ತೆರಳುವ ದೇವರು ಇನ್ನೊಂದಷ್ಟು ತಿಂಗಳು ಮುಗಿದ ಮೇಲೆಯೇ ಎಚ್ಚರಗೊಳ್ಳುವುದು ಎಂಬ ನಂಬಿಕೆಯೂ ಇದೆ. ಹಾಗಾದರೆ, ದೇವರು ಎಷ್ಟು ಕಾಲ ನಿದ್ರಾವಸ್ಥೆಯಲ್ಲಿರುತ್ತಾನೆ, ಯಾವಾಗ ಕಣ್ಬಿಡುತ್ತಾನೆ ಎಂಬ ಕುತೂಹಲಗಳಿಗೆ ಇಲ್ಲಿ ನಂಬಿಕೆಯ ಆಧಾರದಲ್ಲಿ ಉತ್ತರಿಸಲಾಗಿದೆ.

ಗಮನಾರ್ಹ ಅಂಶವೆಂದರೆ ನಾವು ನೋಡುವ ಹಗಲು, ರಾತ್ರಿಗಳಿಗೂ ದೇವರ ಹಗಲು, ರಾತ್ರಿಗಳಿಗೂ ಅಜಗಜಾಂತರವಿದೆ. ನಾವಿಲ್ಲಿ 24 ಗಂಟೆಗಳಿಗೆ ಒಂದು ದಿನವನ್ನು ಹೊಂದಿದ್ದರೆ ದೇವಲೋಕದಲ್ಲಿ ಇದರ ಲೆಕ್ಕಾಚಾರ ಬೇರೆಯದೇ ಇದೆ. ಹಾಗಾದರೆ ಪುರಾಣದಲ್ಲಿ ಈ ಕುರಿತು ಏನು ಹೇಳಲಾಗಿದೆ. ದೇವಲೋಕದ ಹಗಲು ರಾತ್ರಿಗಳ ಲೆಕ್ಕಾಚಾರವನ್ನು ಪುರಾಣದಲ್ಲಿ ವಿವರಿಸಿರುವುದು ಹೇಗೆ ಎಂಬುದನ್ನು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ದೇವರು ಸುಮಾರು ತಿಂಗಳು ಕಾಲ ಮಲಗುತ್ತಾನಾ?
ಶ್ರಾವಣ ಆರಂಭಕ್ಕೂ ಮುನ್ನ ಆಷಾಢದಲ್ಲಿ ಬರುವ ಶುಕ್ಲಪಕ್ಷದ ಏಕಾದಶಿಯನ್ನು ದೇವಶಯನಿ ಏಕಾದಶಿ ಎಂದೆನ್ನಲಾಗುತ್ತದೆ. ಈ ದಿನದಂದು ಮಹಾವಿಷ್ಣು ಮಹಾ ನಿದ್ರೆಗೆ ತೆರಳುತ್ತಾನಂತೆ. ಸುಮಾರು ನಾಲ್ಕು ತಿಂಗಳು ಕಾಲ ನಿದ್ರಿಸುವ ವಿಷ್ಣು ಕಾರ್ತೀಕ ಮಾಸದ ಶುಕ್ಲಪಕ್ಷದಲ್ಲಿ ಬರುವ ಏಕಾದಶಿಯಂದು ಎಚ್ಚರಗೊಳ್ಳುತ್ತಾನಂತೆ. ವಿಷ್ಣು ನಿದ್ರೆಗೆ ಜಾರುವ ಈ 4 ತಿಂಗಳ ಕಾಲವನ್ನು ಚಾತುರ್ಮಾಸವೆಂದು ಕರೆಯಲಾಗುತ್ತದೆ ಎನ್ನುವ ನಂಬಿಕೆ ಹಲವೆಡೆ ಇದೆ. ಇದು ನಮ್ಮ ದೃಷ್ಟಿಯಲ್ಲಿ ಸುದೀರ್ಘ ನಿದ್ರೆಯಂತೆ ಕಂಡರೂ ದೇವರ ಲೆಕ್ಕಾಚಾರದಲ್ಲಿ ಬೇರೆಯದ್ದೇ ಆಗಿರುತ್ತದೆ. ದೇವರು 8 ತಿಂಗಳು ಎಚ್ಚರವಿದ್ದು, 4 ತಿಂಗಳು ಮಲಗುತ್ತಾನಲ್ಲ ಎಂದು ನಾವು ಯೋಚಿಸಿದರೂ ಅದು ದೇವರ ಪ್ರಕಾರ ಬೇರೆಯದೇ ಆಗಿದೆ.

ಈ ಏಕಾದಶಿಯನ್ನು ದೇವಶಯಾನಿ ಏಕಾದಶಿ ಎಂದಷ್ಟೇ ಅಲ್ಲದೆ ಬೇರೆ ಬೇರೆ ಹೆಸರುಗಳಿಂದಲೂ ಕರೆಯಲಾಗುತ್ತದೆ. ಇದನ್ನು ಹರಿಶಯನಿ ಏಕಾದಶಿ ಮತ್ತು ಪದ್ಮನಾಭ ಏಕಾದಶಿ ಎಂದೂ ಸಾಧಾರಣವಾಗಿ ಕರೆಯುತ್ತಾರೆ. ಈ ದಿನ ಭಗವಂತ ವಿಷ್ಣು ಕ್ಷೀರಸಾಗರದಲ್ಲಿ ಮಲಗುತ್ತಾನೆ ಮತ್ತು ಕಾರ್ತಿಕ ಶುಕ್ಲ ಪಕ್ಷದ ಏಕಾದಶಿಯಂದು ಹಿಂದಿರುಗುತ್ತಾನೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಆಷಾಢ ಶುಕ್ಲ ಪಕ್ಷದ ಏಕಾದಶಿಯನ್ನು ದೇವಶಯನಿ ಮತ್ತು ಕಾರ್ತಿಕ ಶುಕ್ಲ ಪಕ್ಷದ ಏಕಾದಶಿಯನ್ನು ಪ್ರಬೋಧಿನಿ ಅಥವಾ ದೇವುತ್ಥಾನ ಏಕಾದಶಿ ಎಂದು ಕರೆಯುತ್ತಾರೆ. ಈ ನಾಲ್ಕು ತಿಂಗಳಲ್ಲಿ ಮದುವೆ ಸಮಾರಂಭ, ಗೃಹಪ್ರವೇಶ ಅಥವಾ ಯಾವುದೇ ಶುಭ ಕಾರ್ಯಗಳನ್ನು ನಿಲ್ಲಿಸಲಾಗುತ್ತದೆ.

ದೇವರ ಹಗಲು, ರಾತ್ರಿಗಳು ಹೇಗಿರುತ್ತವೆ?
ದೇವರ ಹಗಲು, ರಾತ್ರಿಗಳು ನಮಗಿದ್ದಂತೆ ಇರುವುದಿಲ್ಲ. ದೇವರ ಒಂದು ದಿನ ಎಂದರೆ ಮನುಷ್ಯ ಮಾತ್ರರಿಗೆ ಅದು ಒಂದು ವರ್ಷದ ಸಮಾನ ಎಂದು ಪುರಾಣಗಳು ಹೇಳುತ್ತವೆ. ಅಂದರೆ ನಾವು ಆಚರಿಸುವ ಉತ್ತರಾಯಣ ಕಾಲ ದೇವರ ಪಾಲಿಗೆ ಹಗಲಾಗಿಯೂ, ಇಲ್ಲಿನ ದಕ್ಷಿಣಾಯಣ ಕಾಲ ದೇವರಿಗೆ ರಾತ್ರಿಯಾಗಿಯೂ ಪರಿಗಣಿಸಲ್ಪಡುತ್ತದೆ.

ಇದನ್ನೂ ಓದಿ:
Garuda Purana: ನಿಮ್ಮ ಜೀವನದಲ್ಲಿ ಸಂತೋಷವೇ ತುಂಬಿರಬೇಕೆ? ಗರುಡ ಪುರಾಣದ ಈ ವಿಷಯಗಳನ್ನು ತಿಳಿಯಿರಿ

Garuda Purana: ಶವಸಂಸ್ಕಾರ ಮುಗಿಸಿ ಹೊರಟ ನಂತರ ಚಿತೆಯತ್ತ ತಿರುಗಿ ನೋಡಬಾರದು ಎನ್ನುವುದೇಕೆ? ಗರುಡ ಪುರಾಣ ಹೇಳುವುದೇನು?

(Know about day and night process of god in devaloka and know how much time god sleeps)