Garuda Purana: ಶವಸಂಸ್ಕಾರ ಮುಗಿಸಿ ಹೊರಟ ನಂತರ ಚಿತೆಯತ್ತ ತಿರುಗಿ ನೋಡಬಾರದು ಎನ್ನುವುದೇಕೆ? ಗರುಡ ಪುರಾಣ ಹೇಳುವುದೇನು?

ಈ ನೆಲದ ಆಚರಣೆಯಲ್ಲಿ ಒಬ್ಬ ವ್ಯಕ್ತಿ ಸಾವಿಗೀಡಾದ ನಂತರ ಆತನ ದೇಹಕ್ಕೆ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ಸಲ್ಲಿಸಿ ಮೋಕ್ಷ ಕಲ್ಪಿಸಿಕೊಟ್ಟರಷ್ಟೇ ಆ ಆತ್ಮಕ್ಕೆ ಸದ್ಗತಿ ದೊರಕುತ್ತದೆ ಎಂಬ ನಂಬಿಕೆ ಇದೆ.

Garuda Purana: ಶವಸಂಸ್ಕಾರ ಮುಗಿಸಿ ಹೊರಟ ನಂತರ ಚಿತೆಯತ್ತ ತಿರುಗಿ ನೋಡಬಾರದು ಎನ್ನುವುದೇಕೆ? ಗರುಡ ಪುರಾಣ ಹೇಳುವುದೇನು?
Garuda Purana: ಗರುಡ ಪರಾಣ ಎಲ್ಲರೂ ಕೇಳಬೇಕು, ಏಕೆ? ಏನಿದರ ಮಹತ್ವ? ತಿಳಿಯಿರಿ
Follow us
TV9 Web
| Updated By: ganapathi bhat

Updated on: Jul 10, 2021 | 6:15 PM

ಭಾರತೀಯ ಸಂಸ್ಕೃತಿಯಲ್ಲಿ ಹುಟ್ಟು, ಸಾವು, ಬದುಕು ಇವೆಲ್ಲವೂ ನಂಬಿಕೆಗಳೊಂದಿಗೆ ಬೆಸೆದುಕೊಂಡಿವೆ. ಧರ್ಮ ಗ್ರಂಥಗಳು ಕೂಡಾ ಮನುಷ್ಯನ ಕರ್ಮ ಫಲಗಳ ಆಧಾರವಾಗಿ ಜೀವನ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ತಿಳಿಸುತ್ತವೆ. ಹದಿನೆಂಟು ಮಹಾಪುರಾಣಗಳ ಪೈಕಿ ಒಂದೆನ್ನಲಾದ ಗರುಡ ಪುರಾಣವೂ ಹಲವು ಸೂಕ್ಷ್ಮ ವಿಚಾರಗಳನ್ನು ತೆರೆದಿಡುತ್ತದೆ. ಇದರಲ್ಲಿ ಕೇವಲ ಬದುಕಿನ ಮಾರ್ಗವನ್ನಷ್ಟೇ ಅಲ್ಲದೇ ಮರಣಾನಂತರದ ಸಂಗತಿಗಳನ್ನೂ ಕಟ್ಟಿಕೊಡಲಾಗಿದೆ. ಈ ನೆಲದ ಆಚರಣೆಯಲ್ಲಿ ಒಬ್ಬ ವ್ಯಕ್ತಿ ಸಾವಿಗೀಡಾದ ನಂತರ ಆತನ ದೇಹಕ್ಕೆ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ಸಲ್ಲಿಸಿ ಮೋಕ್ಷ ಕಲ್ಪಿಸಿಕೊಟ್ಟರಷ್ಟೇ ಆ ಆತ್ಮಕ್ಕೆ ಸದ್ಗತಿ ದೊರಕುತ್ತದೆ ಎಂಬ ನಂಬಿಕೆ ಇದೆ. ಆದರೆ, ಅದಕ್ಕೂ ಒಂದಷ್ಟು ನಿರ್ದಿಷ್ಟ ನಿಯಮಾವಳಿಗಳಿದ್ದು ಶವದ ಅಂತ್ಯಸಂಸ್ಕಾರ ಮಾಡಿ ಹೊರಡುವಾಗ ಅದರತ್ತ ಹಿಂತಿರುಗಿ ನೋಡಬಾರದು ಎಂಬ ನಂಬಿಕೆ ಚಾಲ್ತಿಯಲ್ಲಿದೆ.

ಗರುಡ ಪುರಾಣದಲ್ಲಿ ಹೇಳಲಾಗಿರುವಂತೆ ವ್ಯಕ್ತಿಯ ಮರಣಾನಂತರ ಆತನ ದೇಹ ನಿರ್ಜೀವವಾದರೂ ಆತ್ಮ ಸಾಯುವುದಿಲ್ಲ. ದೇಹದಿಂದ ವಿಸರ್ಜಿಸಲ್ಪಟ್ಟ ಆತ್ಮ ಈ ಜಗತ್ತನ್ನೇ ತೊರೆದು ಹೋಗಿ ಪಾಪ, ಪುಣ್ಯದ ಕರ್ಮ ಫಲಗಳನ್ನು ಅನುಭವಿಸಿ ನಂತರ ಸಮಯ ಬಂದಾಗ ಮತ್ತೊಂದು ದೇಹವನ್ನು ಪ್ರವೇಶಿಸುವ ಮೂಲಕ ಮರುಹುಟ್ಟು ಪಡೆಯುತ್ತದೆ. ಆದರೆ, ದೇಹವನ್ನು ತೊರೆಯುವ ಆತ್ಮ ಪರಲೋಕಕ್ಕೆ ಪ್ರಯಾಣ ಬೆಳೆಸುವ ಮೊದಲು ಅದು ತಾನು ಯಾವ ದೇಹದಿಂದ ಹೊರಬಂದಿರುತ್ತದೋ ಅದು ಸಂಪೂರ್ಣ ನಾಶವಾಗುವುದನ್ನು ನೋಡಿಕೊಂಡೇ ಹೊರಡುತ್ತದೆಯಂತೆ.

ಗರುಡ ಪುರಾಣದ ಪ್ರಕಾರ ದೇಹವನ್ನು ಸುಟ್ಟರೂ ಆತ್ಮ ಅದರೊಂದಿಗಿನ ಬಾಂಧವ್ಯ ಕಡಿದುಕೊಂಡಿರುವುದಿಲ್ಲ. ಹೀಗಾಗಿ ತನ್ನ ಬಂಧು ಬಳಗ, ಕುಟುಂಬ, ಅತ್ಯಾಪ್ತರೆಡೆಗೆ ಮರಳಿ ಹೋಗಲು ಮರಣಾನಂತರವೂ ಆತ್ಮ ತುಡಿಯುತ್ತಿರುತ್ತದೆ. ಹೀಗಿರುವಾಗ ಅಂತ್ಯಸಂಸ್ಕಾರದ ನಂತರ ಯಾರಾದರೂ ತಿರುಗಿ ನೋಡಿದರೆ ಅವರು ನನ್ನನ್ನು ಕರೆಯುತ್ತಿದ್ದಾರೆ ಎಂದು ಆತ್ಮ ಭಾವಿಸುತ್ತದೆಯಂತೆ. ಆದ್ದರಿಂದ ಶವ ಸಂಸ್ಕಾರ ಮಾಡಿ ಮರಳುವಾಗ ಯಾವುದೇ ಕಾರಣಕ್ಕೂ ಹಿಂತಿರುಗಿ ನೋಡಬಾರದು ಎನ್ನಲಾಗುತ್ತದೆ.

ಒಮ್ಮೆ ಸ್ಮಶಾನಕ್ಕೆ ಬೆನ್ನು ಹಾಕಿ ಹೊರಟ ನಂತರ ಪುನಃ ತಿರುಗಿ ನೋಡದೇ ಇದ್ದಾಗ, ನೀನು ಈ ದೇಹದೊಂದಿಗಿನ ಸಂಪರ್ಕ ಕಡಿದುಕೊಳ್ಳುವ ಸಮಯ ಬಂದಿದೆ. ಅಂತೆಯೇ, ನಮ್ಮೊಂದಿಗಿನ ನಿನ್ನ ಸಂಬಂಧವೂ ಮುಗಿದಿದೆ. ನೀನು ಮಾಡಬೇಕಾದ ಕೆಲಸ ಪೂರ್ಣಗೊಂಡಿದ್ದು. ಇನ್ನು ಇಲ್ಲಿಂದ ಹೊರಡಬಹುದು. ನೀನು ಎಲ್ಲಾ ಬಂಧನಗಳಿಂದ ಮುಕ್ತವಾಗಿದ್ದಿ ಎಂಬ ಸಂದೇಶವನ್ನು ನಾವು ಆತ್ಮಕ್ಕೆ ನೀಡಿದಂತಾಗುತ್ತದೆ. ಆ ಮೂಲಕ ಅದು ಈ ಲೋಕವನ್ನು ತೊರೆಯಲು ಅನುಕೂಲವಾಗುತ್ತದೆ.

ಇದರ ಜತೆಗೆ, ಇನ್ನೊಂದು ನಂಬಿಕೆಯೂ ಚಾಲ್ತಿಯಲ್ಲಿದ್ದು, ಮರಣಾನಂತರ ಆತ್ಮವು ಬೇರೊಂದು ದೇಹವನ್ನು ಪ್ರವೇಶಿಸಲು ಯತ್ನಿಸುತ್ತಿರುತ್ತದೆ, ಹೀಗಾಗಿ ಯಾರಾದರೂ ತನ್ನತ್ತ ನೋಡಲಿ ಎಂದು ಕಾಯುತ್ತಿರುತ್ತದೆ ಎಂದು ಹೇಳುತ್ತಾರೆ. ಯಾರು ಹಿಂತಿರುಗಿ ನೋಡುತ್ತಾರೋ ಅವರು ತನ್ನೆಡೆಗೆ ಸೆಳೆತ ಹೊಂದಿದ್ದಾರೆ ಎಂದು ಭಾವಿಸುವ ಆತ್ಮ ಆ ದೇಹವನ್ನು ಪ್ರವೇಶಿಸಿ ತೊಂದರೆ ನೀಡಲಾರಂಭಿಸುತ್ತದೆ. ಅದರಲ್ಲೂ ಮಕ್ಕಳು ಹಾಗೂ ಮೃದು ಸ್ವಭಾವದವರಿದ್ದರೆ ಆತ್ಮ ಬಲುಬೇಗನೇ ಒಳಗೆ ಸೇರಿಕೊಳ್ಳುತ್ತದೆ ಎಂದು ನಂಬಿಕೆ ಇದೆ. ಈ ಎಲ್ಲಾ ಕಾರಣಗಳಿಗಾಗಿಯೇ ಸ್ಮಶಾನದಿಂದ ಶವ ಸಂಸ್ಕಾರ ಮುಗಿಸಿ ಮರಳುವಾಗ ಹಿಂತಿರುಗಿ ನೋಡಬಾರದು ಎಂದು ಹಿರಿಯರು ಹೇಳುತ್ತಾರೆ.

(ಈ ವಿಚಾರಗಳು ಸಂಪೂರ್ಣ ನಂಬಿಕೆಯ ಆಧಾರದ ಮೇಲಿದ್ದು, ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಇರುವುದಿಲ್ಲ)

ಇದನ್ನೂ ಓದಿ: Garuda Purana: ಹುಟ್ಟಿಗೂ ಮೊದಲು ನಾವು, ನೀವು ಅನುಭವಿಸಿದ ಕಷ್ಟ ಎಂಥದ್ದು? ಗರುಡ ಪುರಾಣ ಹೇಳುವುದೇನು?

Chanakya Niti: ಈ ವಿಚಾರಗಳನ್ನು ಗಂಡ ತನ್ನ ಹೆಂಡತಿಯ ಬಳಿ ಹೇಳಿಕೊಳ್ಳಬಾರದು; ಚಾಣಕ್ಯ ನೀತಿ ಇಲ್ಲಿದೆ