Garuda Purana: ಹುಟ್ಟಿಗೂ ಮೊದಲು ನಾವು, ನೀವು ಅನುಭವಿಸಿದ ಕಷ್ಟ ಎಂಥದ್ದು? ಗರುಡ ಪುರಾಣ ಹೇಳುವುದೇನು?
ಗರ್ಭದಲ್ಲಿದ್ದಾಗ ತಪ್ಪನ್ನು ಮಾಡುವುದಿಲ್ಲ ಎನ್ನುವ ಮಗು ಅಮ್ಮನ ಹೊಟ್ಟೆಯಿಂದ ಹೊರಬರುತ್ತಿದ್ದಂತೆಯೇ ಒಳಗೆ ಅನುಭವಿಸಿದ್ದನ್ನೆಲ್ಲಾ ಮರೆತು ಈ ಜಗತ್ತಿನ ಮಾಯೆಗೆ ಸಿಲುಕಿಬಿಡುತ್ತದೆಯಂತೆ. ಹೀಗಾಗಿಯೇ, ಹುಟ್ಟಿಗೂ ಮೊದಲು ಯಾವೆಲ್ಲಾ ತಪ್ಪುಗಳಿಗೆ ಪರಿತಪಿಸಿರುತ್ತದೋ ಅದೇ ತಪ್ಪುಗಳನ್ನು ಜಗದ ಮಾಯೆಗೆ ಸಿಲುಕಿ ಪದೇ ಪದೇ ಪ್ರದರ್ಶಿಸುತ್ತದೆ.
ಭಾರತೀಯ ಸಂಸ್ಕೃತಿಯಲ್ಲಿ ಹುಟ್ಟು, ಸಾವು, ಬದುಕು ಎಲ್ಲವೂ ಒಂದೊಂದು ನಂಬಿಕೆಯನ್ನು ಆಧಾರವಾಗಿಸಿಕೊಂಡಿವೆ. ಅಂತೆಯೇ, ಹುಟ್ಟಿಗೂ ಮೊದಲಿನ ಬದುಕು ಹಾಗೂ ಮರಣಾನಂತರದ ಸ್ಥಿತಿಯ ಬಗ್ಗೆಯೂ ಪುರಾಣ ಗ್ರಂಥಗಳಲ್ಲಿ ಸಾಕಷ್ಟು ಉಲ್ಲೇಖಗಳಿವೆ. ಹೀಗಾಗಿ ಭಾರತೀಯರ ಪಾಲಿಗೆ ಒಂದು ಹುಟ್ಟು ಕೇವಲ ಜೈವಿಕ ಪ್ರಕ್ರಿಯೆಯಲ್ಲ. ಬದಲಾಗಿ ಅದಕ್ಕೆ ಜೀವಕಳೆಯನ್ನು ತುಂಬುವ ಆತ್ಮ ಹಿಂದಿನ ಜನ್ಮದಲ್ಲಿ ಮಾಡಿದ ಪಾಪ, ಪುಣ್ಯದ ಲೆಕ್ಕಾಚಾರಗಳ ಮಿಳಿತ ಎಂದೇ ಭಾವಿಸಲಾಗುತ್ತದೆ. ಸಾಧಾರಣವಾಗಿ ಹುಟ್ಟಿನ ಬಗ್ಗೆ ಮಾತನಾಡುವಾಗ ತಾಯ್ತನದ ಬಗೆಗೆ ಹೆಚ್ಚು ಒತ್ತು ಕೊಟ್ಟು, ಜನ್ಮ ನೀಡುವ ತಾಯಿ ಎಷ್ಟು ಕಷ್ಟಪಡುತ್ತಾಳೆ, ಆಕೆ ನವಮಾಸ ಹೊತ್ತು ತಿರುಗುವಾಗ ಯಾತನೆಯಲ್ಲೂ ಹೇಗೆ ಖುಷಿ ಕಾಣುತ್ತಾಳೆ, ಹೆರಿಗೆ ಕಾಲದ ನೋವು ಯಾವ ಮಟ್ಟದ್ದು ಎಂದೆಲ್ಲಾ ಹೇಳಲಾಗುತ್ತದೆ. ಆದರೆ, ಗರ್ಭದೊಳಗಿನ ಭ್ರೂಣ ಅದೇ ಸಂದರ್ಭದಲ್ಲಿ ಅನುಭವಿಸುವ ಯಾತನೆ ಹೇಗಿರುತ್ತದೆ ಎಂದು ಮಾತನಾಡುವುದು ಕಡಿಮೆ. ಹುಟ್ಟಿಗೂ ಮುನ್ನ ಶಿಶು ಯಾವೆಲ್ಲಾ ಹಂತದ ಕಷ್ಟಗಳನ್ನು ದಾಟುತ್ತದೆ, ಅದಕ್ಕಾಗಿ ಹೇಗೆ ಪರಿತಪಿಸುತ್ತದೆ ಎನ್ನುವ ಬಗ್ಗೆ ಗರುಡ ಪುರಾಣದಲ್ಲಿ ಉಲ್ಲೇಖವಿದೆ.
ಗರುಡ ಪುರಾಣ ಸೇರಿದಂತೆ ಬೇರೆ ಬೇರೆ ಶಾಸ್ತ್ರಗಳ ನಂಬಿಕೆ ಪ್ರಕಾರ ಯಾವುದೇ ಒಂದು ಭ್ರೂಣಕ್ಕೆ ಜೀವ ನೀಡುವುದು ಆತ್ಮ. ಒಂದು ದೇಹದಿಂದ ಬಿಡುಗಡೆ ಹೊಂದುವ ಆತ್ಮ ಇನ್ನೊಂದನ್ನು ಸೇರುವುದೇ ಮರುಹುಟ್ಟು. ಹೀಗೆ ಆತ್ಮ ಭ್ರೂಣದೊಳಗೆ ಪ್ರವೇಶಿಸಿದ ಕ್ಷಣದಿಂದ ಮತ್ತೊಂದು ಹೊಸ ಅಧ್ಯಾಯ ಆರಂಭವಾಗುತ್ತದೆ. ಆದರೆ, ಭ್ರೂಣವೆಂದು ಜೀವತಳೆದು ಹೊರಬರುವ ಪ್ರಕ್ರಿಯೆಯಲ್ಲಿ ಅದು ವಿಪರೀತ ಹಿಂಸೆಯನ್ನು ಅನುಭವಿಸುತ್ತದೆಯಂತೆ. ತಾಯಿ ಹೆರಿಗೆ ಹೊತ್ತಿನಲ್ಲಿ ಅನುಭವಿಸುವ ನೋವಿನಂತೆಯೇ, ಉದರದೊಳಗಿನ ಶಿಶು ಕೂಡಾ ಬೇರೆ ಬೇರೆ ರೀತಿಯ ಕಷ್ಟಗಳನ್ನು ಎದುರಿಸುತ್ತದೆ ಎಂದು ಹೇಳಲಾಗುತ್ತದೆ.
ಆತ್ಮವೊಂದು ಗರ್ಭವನ್ನು ಪ್ರವೇಶಿಸುವ ಹೊತ್ತಿನಲ್ಲಿ ಭ್ರೂಣಕ್ಕೆ ಒಂದು ನಿರ್ದಿಷ್ಟ ರೂಪ ಎಂದೇನೂ ಇರುವುದಿಲ್ಲ. ಆದರೆ, ಕ್ರಮೇಣ ಅದು ಬೆಳವಣಿಗೆ ಹೊಂದುತ್ತಾ ಹೋಗುತ್ತದೆ. ಆತ್ಮ ಪ್ರವೇಶಿಸಿದ ಸುಮಾರು 10 ದಿನಗಳ ನಂತರ ಒಂದು ಆಕಾರ ಪಡೆದುಕೊಳ್ಳುವ ಭ್ರೂಣ ಅದರ ನಂತರದ ಹಂತದಲ್ಲಿ ಮೊಟ್ಟೆಯಾಕಾರಕ್ಕೆ ತಿರುಗುತ್ತದೆ. ಅದಾದ ಬಳಿಕ ಒಂದೊಂದೇ ಅಂಗಗಳ ಬೆಳವಣಿಗೆ ಆರಂಭವಾಗುತ್ತದೆ. ಮೊದಲ ತಿಂಗಳಲ್ಲಿ ಮೆದುಳು ಬೆಳವಣಿಗೆಯ ಸೂಚನೆ ತೋರಿಸಿದರೆ ಎರಡನೇ ತಿಂಗಳಲ್ಲಿ ಕೈ ಕಾಲುಗಳು ಅಸ್ತಿತ್ವ ಪಡೆದುಕೊಳ್ಳುತ್ತವೆ. ಮೂರನೇ ತಿಂಗಳಲ್ಲಿ ಮೂಳೆ, ಉಗುರು, ಚರ್ಮ, ಜನನಾಂಗ ರೂಪುಗೊಳ್ಳುತ್ತವೆ. ನಾಲ್ಕನೇ ಹಂತದಲ್ಲಿ ಚರ್ಮದ ಜತೆಗೆ ಮಾಂಸ, ರಕ್ತ, ಮೂಳೆಯ ಅಭಿವೃದ್ಧಿ ಆಗುತ್ತದೆ. ಈ ಬೆಳವಣಿಗೆಗಳನ್ನು ದಾಟುತ್ತಾ ಸಾಗುವ ಭ್ರೂಣಕ್ಕೆ ಐದನೇ ತಿಂಗಳಲ್ಲಿ ಹಸಿವು ಅನುಭವಕ್ಕೆ ಬರಲಾರಂಭಿಸುತ್ತದೆ. ಆರನೇ ತಿಂಗಳಲ್ಲಿ ಶಿಶು ಗರ್ಭದೊಳಗೆ ಅತ್ತಿತ್ತ ಚಲಿಸಲಾರಂಭಿಸುತ್ತದೆ ಹಾಗೂ ತಾಯಿಯ ಆಹಾರದ ಸಹಾಯದೊಂದಿಗೆ ಬೆಳೆಯಲಾರಂಭಿಸುತ್ತದೆ. ಈ ಹಂತದಲ್ಲಿ ಮಗು ಅಮ್ಮನ ಹೊಟ್ಟೆಯೊಳಗೇ ಜೀವನ ಆರಂಭಿಸುತ್ತದೆ. ಆದರೆ, ಅದರ ನಿದ್ರೆ, ಊಟ, ಚಲನೆ ಎಲ್ಲವುದರ ಜತೆಗೆ ದೇಹದಿಂದ ಕಲ್ಮಶವೂ ಹೊರಬರುವುದರಿಂದ ಸೂಕ್ಷ್ಮಾಣು ಜೀವಿಗಳು ಹಾಗೂ ಕಲ್ಮಶಗಳೊಂದಿಗೆ ಬದುಕಬೇಕಾದ ಅನಿವಾರ್ಯತೆಗೆ ಸಿಲುಕಿಕೊಳ್ಳುತ್ತದೆ.
ತಾಯಿ ಖಾರದ ಪದಾರ್ಥ ತಿಂದರೆ, ಉಪ್ಪಿನಾಂಶ ಹೆಚ್ಚು ಸೇವಿಸಿದರೆ ಮಗುವಿಗೆ ಹಿಂಸೆ ಶುರುವಾಗುತ್ತದೆ. ಇತ್ತ ಸೂಕ್ಷ್ಮಾಣು ಜೀವಿಗಳಿಂದಲೂ ಸಾಕಷ್ಟು ಉಪಟಳ ಶುರುವಾಗುತ್ತದೆ. ಇಂತಹ ಸಂದರ್ಭದಲ್ಲಿ ಮಗು ಕೆಲವೊಮ್ಮೆ ಹೊಟ್ಟೆಯೊಳಗೇ ತಲೆಕೆಳಗಾಗಿ ಬಿಡುತ್ತದೆ ಮತ್ತು ಚಲಿಸಲು ಸಾಧ್ಯವಾಗದೇ ಒದ್ದಾಡುತ್ತದೆ. ಈ ಹಂತದಲ್ಲಿ ದೇವರನ್ನು ಪ್ರಾರ್ಥಿಸುವ ಮಗು ತನ್ನನ್ನು ಈ ಕಷ್ಟದ ಕೂಪದಿಂದ ಪಾರು ಮಾಡು, ನನ್ನ ತಪ್ಪುಗಳನ್ನೆಲ್ಲಾ ಮನ್ನಿಸು, ನಾನು ಏನೇ ತಪ್ಪೆಸಗಿದ್ದರೂ ನಿನ್ನ ಪಾದಕ್ಕೆ ಒಪ್ಪಿಸುವೆ ಕ್ಷಮಿಸು ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತದೆಯಂತೆ. ದೇವರ ಹೆಸರನ್ನೇ ಪಠಿಸುತ್ತಾ ದಿನದೂಡುತ್ತದೆಯಂತೆ. ಆದರೆ, ಇಷ್ಟೆಲ್ಲಾ ಬೇಡಿಕೊಂಡು, ತಪ್ಪನ್ನು ಮಾಡುವುದಿಲ್ಲ ಎನ್ನುವ ಮಗು ಅಮ್ಮನ ಹೊಟ್ಟೆಯಿಂದ ಹೊರಬರುತ್ತಿದ್ದಂತೆಯೇ ಒಳಗೆ ಅನುಭವಿಸಿದ್ದನ್ನೆಲ್ಲಾ ಮರೆತು ಈ ಜಗತ್ತಿನ ಮಾಯೆಗೆ ಸಿಲುಕಿಬಿಡುತ್ತದೆಯಂತೆ. ಹೀಗಾಗಿಯೇ, ಹುಟ್ಟಿಗೂ ಮೊದಲು ಯಾವೆಲ್ಲಾ ತಪ್ಪುಗಳಿಗೆ ಪರಿತಪಿಸಿರುತ್ತದೋ ಅದೇ ತಪ್ಪುಗಳನ್ನು ಜಗದ ಮಾಯೆಗೆ ಸಿಲುಕಿ ಪದೇ ಪದೇ ಪ್ರದರ್ಶಿಸುತ್ತದೆ. ಇದು ಅಂತ್ಯವಿಲ್ಲದ ಮಾಯಾಜಾಲ ಎಂದು ಅದನ್ನು ವಿವರಿಸಲಾಗಿದೆ.
ಇದನ್ನೂ ಓದಿ: Garuda Purana: ಯಮಲೋಕಕ್ಕೆ 4 ಬಾಗಿಲು, ಒಂದೊಂದು ದ್ವಾರವೂ ವಿಶಿಷ್ಟ; ಯಾರಿಗೆ ಯಾವುದರಿಂದ ಪ್ರವೇಶ?
Garuda Purana: ಮರಣಾನಂತರ ಸುಮಾರು 12 ಲಕ್ಷ ಕಿ.ಮೀ ದೂರ ಕ್ರಮಿಸುತ್ತವೆ ಆತ್ಮ; ಎದುರಾಗುವ ಕಷ್ಟಗಳು ಎಂಥವು ಗೊತ್ತಾ?