Garuda Purana: ಮರಣಾನಂತರ ಸುಮಾರು 12 ಲಕ್ಷ ಕಿ.ಮೀ ದೂರ ಕ್ರಮಿಸುತ್ತವೆ ಆತ್ಮ; ಎದುರಾಗುವ ಕಷ್ಟಗಳು ಎಂಥವು ಗೊತ್ತಾ?
ನರಕದತ್ತ ಬೆಳೆಸುವ ಪಯಣ ತೀರಾ ಕಷ್ಟಕರವಾಗಿರಲಿದ್ದು ಅಲ್ಲಿಗೆ ತಲುಪಲು 99 ಸಾವಿರ ಯೋಜನಗಳ ದೂರ ಕ್ರಮಿಸಬೇಕು. ಅಂದರೆ, ಮೃತರ ಪಾಪಾತ್ಮವು 11 ಲಕ್ಷದ 99 ಸಾವಿರದ 988 ಕಿಲೋ ಮೀಟರ್ ದೂರವನ್ನು ನರಕದ ಪ್ರಯಾಣಕ್ಕಾಗಿ ಕ್ರಮಿಸಬೇಕಾಗುತ್ತದೆ.
ಭಾರತೀಯ ಸಂಸ್ಕೃತಿಯಲ್ಲಿ ಹುಟ್ಟು, ಬದುಕು, ಸಾವು ಇವೆಲ್ಲವೂ ನಂಬಿಕೆಗಳಿಂದಲೇ ಹೆಣೆಯಲ್ಪಟ್ಟಿವೆ. ಹುಟ್ಟು ಪೂರ್ವಜನ್ಮದ ಫಲ ಎಂದು ನಂಬಲಾಗುವಂತೆಯೇ, ಈ ಜನ್ಮದ ಫಲಗಳನ್ನು ಸಾವಿನ ನಂತರ ಅನುಭವಿಸಲಾಗುತ್ತದೆ ಎಂಬ ನಂಬಿಕೆಯೂ ಇದೆ. ಈ ಕುರಿತು ಗರುಡ ಪುರಾಣದಲ್ಲೂ ಕೆಲ ಅಂಶಗಳಿದ್ದು, ಯಾರು ಪಾಪಕರ್ಮಗಳನ್ನೆಸಗಿ ಸಾಯುತ್ತಾರೋ ಅವರು ಮರಣಾನಂತರ ಅಷ್ಟೇ ಕಠಿಣ ಶಿಕ್ಷೆಯನ್ನು ಎದುರಿಸುತ್ತಾರೆ ಎಂದೆನ್ನಲಾಗಿದೆ. ಬದುಕಿರುವಾಗ ಇನ್ನೊಬ್ಬರಿಗೆ ಉದ್ದೇಶಪೂರ್ವಕವಾಗಿಯೇ ಮೋಸ ಮಾಡಿದವರಿಗೆ, ವಂಚಿಸಿದವರಿಗೆ, ಹಿಂಸಿಸಿದವರಿಗೆ ಸತ್ತ ಮೇಲೆ ಸಿಗುವ ಘನಘೋರ ಶಿಕ್ಷೆಗಳು ಎಂಥವು ಎಂದು ತಿಳಿಯುತ್ತಾ ಹೋದರೆ ಎಂತಹ ಗಟ್ಟಿಗರೂ ಒಮ್ಮೆ ನಡುಗಬೇಕು.
ಗರುಡ ಪುರಾಣದಲ್ಲಿ ಹೇಳುವಂತೆ ಮರಣಾನಂತರ ಆ ವ್ಯಕ್ತಿಯನ್ನು ಒಂದು ದಿನದ ಸಲುವಾಗಿ ಯಮಲೋಕಕ್ಕೆ ಕರೆದುಕೊಂಡು ಹೋಗಲಾಗುತ್ತದೆಯಂತೆ. ಅಲ್ಲಿ ಅವರ ಜೀವನದ ಪುಣ್ಯ, ಪಾಪಗಳ ಪಟ್ಟಿಯನ್ನು ಲೆಕ್ಕ ಹಾಕಲಾಗುತ್ತದೆ. ನಂತರ ಅದೆಲ್ಲವನ್ನೂ ಪರಿಶೀಲಿಸಿ ಕರ್ಮಗಳ ಆಧಾರದ ಮೇಲೆ ಆ ವ್ಯಕ್ತಿಯನ್ನು ಸ್ವರ್ಗಕ್ಕೆ ಕಳುಹಿಸಬೇಕೋ ಅಥವಾ ನರಕಕ್ಕೆ ನೂಕಬೇಕೋ ಎನ್ನುವ ತೀರ್ಮಾನವಾಗುತ್ತದೆ.
ಒಂದುವೇಳೆ ಬದುಕಿನಲ್ಲಿ ಜಾಸ್ತಿ ಪುಣ್ಯಕಾರ್ಯಗಳನ್ನು ಮಾಡಿದ್ದರೆ ಅವರಿಗೆ ಕುಟುಂಬಸ್ಥರು ಪಿಂಡಪ್ರದಾನ ಮಾಡುತ್ತಿದ್ದಂತೆಯೇ ಸ್ವರ್ಗದ ಬಾಗಿಲು ತೆರೆದುಕೊಳ್ಳುತ್ತದೆ. ಅಪ್ಪಿತಪ್ಪಿ ಪಾಪಕೃತ್ಯಗಳನ್ನೇ ಹೆಚ್ಚು ಎಸಗಿದ್ದರೆ ಅವರಿಗೆ ನರಕ ಕಟ್ಟಿಟ್ಟಬುತ್ತಿ. ಅದು ಕೂಡಾ ನರಕದತ್ತ ಬೆಳೆಸುವ ಪಯಣ ತೀರಾ ಕಷ್ಟಕರವಾಗಿರಲಿದ್ದು ಅಲ್ಲಿಗೆ ತಲುಪಲು 99 ಸಾವಿರ ಯೋಜನಗಳ ದೂರ ಕ್ರಮಿಸಬೇಕು. ಅಂದರೆ, ಮೃತರ ಪಾಪಾತ್ಮವು 11 ಲಕ್ಷದ 99 ಸಾವಿರದ 988 ಕಿಲೋ ಮೀಟರ್ ದೂರವನ್ನು ನರಕದ ಪ್ರಯಾಣಕ್ಕಾಗಿ ಕ್ರಮಿಸಬೇಕಾಗುತ್ತದೆ.
ಈ ಸುದೀರ್ಘ ಪ್ರಯಾಣದಲ್ಲೂ ಅನೇಕ ಹಂತಗಳನ್ನು ದಾಟಬೇಕಾಗಿದ್ದು, ಹಲವು ಪರೀಕ್ಷೆಗಳು ಎದುರಾಗಲಿವೆ. ಶಿಕ್ಷೆಯ ಕಠಿಣತೆ ಹೇಗಿರುತ್ತದೆ ಎಂದರೆ ಲಕ್ಷಾಂತರ ಕಿಲೋ ಮೀಟರ್ ಪ್ರಯಾಣದಲ್ಲೆಲ್ಲೂ ವಿಶ್ರಾಂತಿ ಪಡೆಯಲು ಕುಳಿತುಕೊಳ್ಳಲು ಜಾಗವಾಗಲೀ, ದಾಹ ತೀರಿಸಿಕೊಳ್ಳಲು ನೀರಾಗಲೀ ಸಿಗುವುದಿಲ್ಲ. ನಡೆಯುತ್ತಾ ಹೋದಂತೆ ಬಿಸಿಲಿನ ಝಳ ಹೆಚ್ಚುತ್ತಾ ಹೋಗಿ ಮೈ ಸುಡಲಾರಂಭಿಸಿದರೂ ಒಂದು ಅಡಿ ಜಾಗದಲ್ಲೂ ನೆರಳು ಸಿಗಲಾರದು. ಆ ಮಟ್ಟಿಗೆ ಕಠಿಣ ಸವಾಲುಗಳು ಎದುರಾಗುತ್ತಾ ಹೋಗುತ್ತವೆ.
ಈ ಸಂಕಷ್ಟದಿಂದ ನರಳುತ್ತಾ ಸಾಗುವ ಆತ್ಮ ಇನ್ನೇನು ನರಕದ ಬಾಗಿಲಿಗೆ ಬರಬೇಕು ಎನ್ನುವಷ್ಟರಲ್ಲಿ ದಟ್ಟ ಕಾಡೊಂದನ್ನು ದಾಟುವ ಸವಾಲು ಬರುತ್ತದೆ. ಕಾಡಲ್ಲಾದರೂ ಆಯಾಸ ಪರಿಹರಿಸಿಕೊಳ್ಳಬಹುದು ಎಂದುಕೊಂಡರೆ ಅಲ್ಲಿ ಸುತ್ತಲೂ ಧಗಧಗಿಸುವ ಬೆಂಕಿ, ಅದರ ನಡುವೆಯೂ ಕಾಡುವ ಕ್ರೂರ ಪ್ರಾಣಿಗಳು, ಸೊಳ್ಳೆ, ದುಂಬಿ, ಕಾಗೆ, ರಣಹದ್ದು, ಗೂಬೆ ಮುಂತಾದವುಗಳು ಆತ್ಮವನ್ನು ಮತ್ತಷ್ಟು ಪರದಾಡಿಸಿಬಿಡುತ್ತವೆ. ಆ ಸಂದರ್ಭದಲ್ಲಿ ಆತ್ಮ ಅವುಗಳಿಂದ ಬಚಾವಾಗಲಿಕ್ಕಾಗಿ ಕೊಳಚೆ, ಮೂತ್ರಾದಿಗಳಿಂದ ತುಂಬಿಕೊಂಡ ಗುಂಡಿಯಲ್ಲೆಲ್ಲಾ ಮುಳುಗಿ ಏಳಬೇಕಾಗುತ್ತದೆ. ಅಷ್ಟಾದ ನಂತರವೂ ಗಾಢ ಅಂಧಕಾರದಲ್ಲೇ ಸಾಗುವ ಆತ್ಮ ನರಕದಲ್ಲೂ ಪ್ರತಿಕ್ಷಣ ಪರಿತಪಿಸುವಷ್ಟು ಹೀನಾಯ ಮಟ್ಟದ ಶಿಕ್ಷೆ ಅನುಭವಿಸಬೇಕಾಗುತ್ತದೆ.
ಹೀಗಾಗಿ, ಮರಣಾನಂತರ ಆತ್ಮ ಘನಘೋರ ಶಿಕ್ಷೆ ಅನುಭವಿಸಬಾರದೆಂದರೆ ಜೀವನದುದ್ದಕ್ಕೂ ಸತ್ಯದ ಹಾದಿಯನ್ನೇ ಅನುಸರಿಸಬೇಕು. ಎಷ್ಟೇ ಕಷ್ಟ, ಸವಾಲು ಎದುರಾದರೂ ಯಾವುದೇ ಕಾರಣಕ್ಕೂ ಎದೆಗುಂದದೆ ನ್ಯಾಯಪಥದಲ್ಲೇ ಸಾಗಬೇಕು. ಆಗ ಮಾತ್ರ ಬದುಕು ಪರಿಪೂರ್ಣಗೊಂಡು ಮುಕ್ತಿ ಲಭಿಸುವುದು ಸಾಧ್ಯ.
(ಇಲ್ಲಿ ನೀಡಲಾಗಿರುವ ಮಾಹಿತಿಯನ್ನು ನಂಬಿಕೆಯ ಆಧಾರದ ಮೇಲೆ ನೀಡಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಇರುವುದಿಲ್ಲ.)
ಇದನ್ನೂ ಓದಿ: ಈ ಗುಣಗಳು ನಿಮ್ಮ ಯಶಸ್ಸನ್ನು ಕಸಿದುಕೊಳ್ಳಬಹುದು; ಗರುಡ ಪುರಾಣದಲ್ಲೂ ಉಲ್ಲೇಖಿಸಿರುವ ಅಂಶಗಳೇನು?
Chanakya Niti: ಈ ಮೂರು ವಿಚಾರಗಳನ್ನು ಪಾಲಿಸುವವರ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸುತ್ತಾಳೆ; ಚಾಣಕ್ಯ ನೀತಿ