ಈ ಗುಣಗಳು ನಿಮ್ಮ ಯಶಸ್ಸನ್ನು ಕಸಿದುಕೊಳ್ಳಬಹುದು; ಗರುಡ ಪುರಾಣದಲ್ಲೂ ಉಲ್ಲೇಖಿಸಿರುವ ಅಂಶಗಳೇನು?

ಜೀವನದಲ್ಲಿ ಮುಂದೆ ಹೋಗಲು ಅಂಥಾ ಕೆಲವು ಅಂಶಗಳನ್ನು ಜೀವನದಿಂದ ಕಿತ್ತೊಗೆಯುವುದು ಮುಖ್ಯ. ನಮ್ಮ ಯಶಸ್ಸಿಗೆ ತೊಡಕುಂಟುಮಾಡುವ ಅಂಥ ಗುಣಗಳ ಬಗ್ಗೆ ಗರುಡ ಪುರಾಣ ಏನು ಹೇಳುತ್ತದೆ ಎಂದು ಇಲ್ಲಿ ತಿಳಿಯಿರಿ.

ಈ ಗುಣಗಳು ನಿಮ್ಮ ಯಶಸ್ಸನ್ನು ಕಸಿದುಕೊಳ್ಳಬಹುದು; ಗರುಡ ಪುರಾಣದಲ್ಲೂ ಉಲ್ಲೇಖಿಸಿರುವ ಅಂಶಗಳೇನು?
ವಿಷ್ಣು ದೇವರು-ಗರುಡವಾಹನ
Follow us
TV9 Web
| Updated By: ganapathi bhat

Updated on:Apr 06, 2022 | 6:53 PM

ಹಿಂದೂ ಧರ್ಮದಲ್ಲಿ ಗರುಡ ಪುರಾಣವನ್ನು ಒಂದು ಮಹಾ ಪುರಾಣ ಎಂದು ಪರಿಗಣಿಸಲಾಗುತ್ತದೆ. ಈ ಪುರಾಣದಲ್ಲಿ ಸ್ವರ್ಗ, ನರಕ, ಪಾಪ, ಪುಣ್ಯ, ಸಾವು ಈ ವಿಚಾರಗಳಿಗೆ ಸಂಬಂಧಿಸಿದ ವಿವರಣೆಗಳಿವೆ. ಈ ಎಲ್ಲಾ ವಿಷಯಗಳ ಜ್ಞಾನ, ವಿಜ್ಞಾನ, ಭಕ್ತಿ, ಮೌಲ್ಯ, ನಿಯಮ ಹಾಗೂ ಧರ್ಮವನ್ನು ಈ ಪುರಾಣದಲ್ಲಿ ಕಾಣಬಹುದು. ಅದರಲ್ಲಿ ಕೆಲವನ್ನಾದರೂ ಅಳವಡಿಸಿಕೊಳ್ಳುವ ಮೂಲಕ ನಾವು ಸಮೃದ್ಧಿಯುತ, ಉತ್ತಮ ಜೀವನವನ್ನು ಸಾಗಿಸಬಹುದು. ಆದರೆ, ನಮ್ಮ ಅಧ್ಯಾತ್ಮಿಕ ಜೀವನದ ಅಥವಾ ಸಾಮಾನ್ಯ ಜೀವನದ ಯಶಸ್ಸಿಗೆ ನಮ್ಮ ಕೆಲವು ಗುಣಗಳು ಅಡ್ಡವಾಗುತ್ತದೆ. ಜೀವನದಲ್ಲಿ ಮುಂದೆ ಹೋಗಲು ಅಂಥಾ ಕೆಲವು ಅಂಶಗಳನ್ನು ಜೀವನದಿಂದ ಕಿತ್ತೊಗೆಯುವುದು ಮುಖ್ಯ. ನಮ್ಮ ಯಶಸ್ಸಿಗೆ ತೊಡಕುಂಟುಮಾಡುವ ಅಂಥ ಗುಣಗಳ ಬಗ್ಗೆ ಗರುಡ ಪುರಾಣ ಏನು ಹೇಳುತ್ತದೆ ಎಂದು ಇಲ್ಲಿ ತಿಳಿಯಿರಿ.

1. ಕೋಪ ಒಳ್ಳೆಯದಲ್ಲ. ಯಾವನೇ ವ್ಯಕ್ತಿಯು ತಾನು ಸಿಟ್ಟಾಗಿರುವ ಸಂದರ್ಭದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಲಾರ. ಯಾರಿಗೆ ತಮ್ಮ ಸಿಟ್ಟನ್ನು ನಿಯಂತ್ರಿಸಲು ಆಗುವುದಿಲ್ಲವೋ ಅಂಥವರು ಹಲವು ಬಾರಿ ತಪ್ಪು ನಿರ್ಧಾರಗಳನ್ನೇ ತೆಗೆದುಕೊಂಡು ಜೀವನದಲ್ಲಿ ಸೋಲುವ ಸಂದರ್ಭ ಎದುರಾಗುತ್ತದೆ. ಜೊತೆಗೆ ಅಂಥವರು ತಮ್ಮ ಕೈಯಲ್ಲಿರುವ ಹಲವು ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ, ಕೋಪವನ್ನು ಮನುಷ್ಯನ ವೈರಿ ಎಂದು ಹೇಳಲಾಗಿದೆ. ಸಿಟ್ಟು ನಿಯಂತ್ರಿಸಲು ಕಲಿತುಕೊಳ್ಳಿ.

2. ಹೊಟ್ಟೆಕಿಚ್ಚು ಮತ್ತೊಂದು ಕೆಟ್ಟ ಗುಣ. ಈ ಗುಣವು ಮನುಷ್ಯನನ್ನು ಆಂತರ್ಯದಲ್ಲಿ ಟೊಳ್ಳಾಗಿಸುತ್ತದೆ. ತನ್ನನ್ನು ತಾನೇ ನಾಶ ಮಾಡಿಕೊಳ್ಳುವಂತೆ ಆಗುತ್ತದೆ. ನಿಮ್ಮ ಜೊತೆಗಿನ ಯಾರಾದರೂ ಯಶಸ್ಸಿನ ಹಾದಿಗೆ ಹೆಜ್ಜೆ ಇಟ್ಟಿದ್ದರೆ ಅಂಥವರ ಬಗ್ಗೆ ಹೊಟ್ಟೆಕಿಚ್ಚು ಪಡಬೇಡಿ. ಬದಲಾಗಿ ಅವರ ಬಗ್ಗೆ ಸಂತೋಷ ಪಡಿ. ಅವರು ಯಾಕೆ ಬೆಳೆಯುತ್ತಿದ್ದಾರೆ. ನೀವ್ಯಾಕೆ ಅವರಂತಾಗಿಲ್ಲ ಎಂಬುದನ್ನು ಆರೋಗ್ಯಕರವಾಗಿ ಚಿಂತಿಸಿ. ಕಲಿಯಿರಿ. ಮುನ್ನುಗ್ಗಿ. ಹೊಟ್ಟೆಕಿಚ್ಚು ಬೇಡ.

3. ಆಲಸ್ಯಕ್ಕಿಂತ ಶತ್ರು ಬೇಕೇ? ಒಬ್ಬ ವ್ಯಕ್ತಿಗೆ ಎಲ್ಲಾ ಇದ್ದು ಆತ ಆಲಸಿತನ ತೋರಿದರೆ ಅದಕ್ಕಿಂತ ಕೆಟ್ಟದು ಇನ್ನೇನಿದೆ. ಪ್ರಯತ್ನಕ್ಕೇ ಹಿಂಜರಿದು ಇದ್ದಲ್ಲೇ ಉಳಿದುಕೊಂಡರೆ ನಮ್ಮದೇ ತಪ್ಪು. ಆಲಸ್ಯ ಮನುಜನನ್ನು ಗೆಲುವಿನಿಂದ ಹಿಂದಕ್ಕೆ ಎಳೆಯುತ್ತದೆ. ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿ ಉಳಿಯಲು ಧ್ಯಾನ ಮಾಡಿರಿ. ಆಲಸ್ಯ ತೊರೆದು ಕೆಲಸ ಮಾಡಿ.

4. ನಿಮ್ಮ ಬಗ್ಗೆ ಸ್ಥೈರ್ಯ, ವಿಶ್ವಾಸ, ಅನುಮಾನ ಒಳ್ಳೆಯದಲ್ಲ. ನಮಗೆ ಯಾವುದೇ ಕೆಲಸ ಮಾಡಲು ನಮ್ಮ ಮೇಲೆ ನಮಗೆ ವಿಶ್ವಾಸ ಇರುವುದು ಮುಖ್ಯ. ಅದರ ಬದಲಾಗಿ ಅತಿಯಾದ ಅನುಮಾನ, ಆತಂಕ ಇದ್ದರೆ ಅದೂ ತಪ್ಪು. ಹಲವು ಬಾರಿ ನಮಗೆ ನಮ್ಮ ಮೇಲಿರುವ ಅವಿಶ್ವಾಸದಿಂದಲೇ ಕೆಲವು ನಿರ್ಧಾರಗಳನ್ನು ಕೈಗೊಂಡಿರುವುದಿಲ್ಲ. ನಮ್ಮ ಬಗ್ಗೆ ಅತಿಯಾದ ಕೀಳರಿಮೆ ಸರಿಯಲ್ಲ. ಇದು ನಮ್ಮ ದಿನನಿತ್ಯದ ಜೀವನ, ಮಾನಸಿಕ, ದೈಹಿಕ ಆರೋಗ್ಯ, ಭವಿಷ್ಯವನ್ನು ಹಾಳುಮಾಡಬಹುದು. ಹಾಗಾಗಿ, ನಿಮ್ಮ ಮೇಲೆ ನಿಮಗೆ ವಿಶ್ವಾಸವಿರಲಿ.

5. ಚಿಂತಿಸಿ ಫಲವಿಲ್ಲ. ಏನೋ ಒಂದು ಆಗಿ ಆಯ್ತು ಅಂತಾದರೆ ಮತ್ತೆ ಮತ್ತೆ ಅದನ್ನು ಚಿಂತಿಸಿ ಮುಂದಿನ ದಿನಗಳನ್ನೂ ಹಾಳು ಮಾಡುವುದು ಸರಿಯಲ್ಲ. ಚಿಂತೆ ಚಿತೆಯಂತೆ ಎಂಬುದನ್ನು ನೀವು ಕೇಳಿರಬಹುದು. ಅದು ನಮ್ಮನ್ನು ಒಳಗಿನಿಂದಲೇ ಸುಡುತ್ತದೆ. ಹಾಗಾಗಿ ಚಿಂತಿಸುವುದು ನಿಲ್ಲಿಸಿ. ಆತ್ಮ ವಿಮರ್ಶೆ ಮಾಡಿಕೊಳ್ಳಿ. ಚಿಂತಿಸಿ, ಒತ್ತಡ ಎಳೆದುಕೊಳ್ಳುವುದು ತಪ್ಪುತ್ತದೆ. ಆರೋಗ್ಯವೂ ಚೆನ್ನಾಗಿರುತ್ತದೆ. ಮತ್ತು ಆತ್ಮವಿಮರ್ಶೆ, ನಮ್ಮ ಬಗ್ಗೆ ನಾವು ಯೋಚಿಸುವುದು ಆತ್ಮವಿಶ್ವಾಸವನ್ನೂ ಯಾವುದೇ ಸಮಸ್ಯೆ ದೂರಮಾಡುವ ಧೈರ್ಯವನ್ನೂ ನೀಡುತ್ತದೆ. ಪರಿಹಾರ ಇರದ ಸಮಸ್ಯೆಯೇ ಇಲ್ಲ ಅಲ್ಲವೇ? ಹಾಗಾಗಿ ಚಿಂತೆ ಬಿಟ್ಟು, ಕೆಲಸ ಶುರುಮಾಡಿ. ಯಶಸ್ವಿ ಜೀವನ ನಿಮ್ಮದಾಗಲಿ.

ಇದನ್ನೂ ಓದಿ: Vastu tips: ತುಳಸಿ ಗಿಡ ಮನೆಯ ಯಾವ ದಿಕ್ಕಿನಲ್ಲಿ ಇದ್ದರೆ ಶ್ರೇಯಸ್ಸು?

ಮನೆಯಲ್ಲಿ, ಪೂಜಾ ಕಾರ್ಯಗಳಲ್ಲಿ ಶಂಖನಾದ ಮಾಡುವುದು ಏಕೆ? ಶಂಖದ ಪ್ರಾಮುಖ್ಯತೆ ಏನು?

Published On - 6:36 am, Mon, 22 March 21