ಸಿಲಿಕಾನ್ ಸಿಟಿಯಲ್ಲಿಂದು ಮೊಳಗಲಿದೆ ಅನ್ನದಾತರ ಕಹಳೆ.. ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ವಿಧಾನಸೌಧ ಚಲೋ

ಬಾರುಕೋಲು ಬೀಸಿದ್ದಾಯ್ತು.. ಟ್ರ್ಯಾಕ್ಟರ್​ ನುಗ್ಗಿಸಿದ್ದಾಯ್ತು.. ರಸ್ತೆ ರಸ್ತೆಯನ್ನೇ ಬಂದ್ ಮಾಡಿ, ರೋಷಾಗ್ನಿ ಹೊರಹಾಕಿದ್ದಾಯ್ತು.. ಆದ್ರೆ, ಕೇಂದ್ರ ಸರ್ಕಾರ ಮಾತ್ರ ಕೃಷಿ ಕಾಯ್ದೆ ಹಿಂಪಡೆಯೋಕೆ ಮುಂದಾಗ್ತಿಲ್ಲ.. ಇದೀಗ, ಹೋರಾಟ ನಾಲ್ಕು ತಿಂಗಳನ್ನು ಪೂರೈಸ್ತಿದ್ದು, ಇಂದು ಸಿಟಿಯಲ್ಲಿ ಮತ್ತೊಮ್ಮೆ ಬೃಹತ್​ ಱಲಿಗೆ ರೈತರು ಸಜ್ಜಾಗಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿಂದು ಮೊಳಗಲಿದೆ ಅನ್ನದಾತರ ಕಹಳೆ.. ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ವಿಧಾನಸೌಧ ಚಲೋ
ರಾಕೇಶ್ ಟಿಕಾಯತ್​
Follow us
ಆಯೇಷಾ ಬಾನು
|

Updated on: Mar 22, 2021 | 7:01 AM

ಬೆಂಗಳೂರು: ಒಂದೇ ಒಂದು ಗುಟುರು.. ರೈತರ ಹೆಸ್ರಲ್ಲಿ ಸುರಿಸಿದ ಕಣ್ಣೀರು.. ಅನ್ನದಾತರ ಎದುರು ನಿಂತು ರಾಕೇಶ್​​ ಟಿಕಾಯತ್​​​​​​​​​​ ಗುಡುಗುತ್ತಿದ್ರೆ, ಕೇಂದ್ರ ಸರ್ಕಾರ ಅಕ್ಷರಶಃ ಬೆಚ್ಚಿ ಬೀಳ್ತಿತ್ತು. ದೆಹಲಿ ಗಡಿಯಲ್ಲಿ ರಾಕೇಶ್​​ ಮೊಳಗಿಸಿದ ಕಹಳೆಗೆ, ರೈತರ ಮಾರುತವೇ ನಿರ್ಮಾಣವಾಗಿತ್ತು. ಕೃಷಿ ಕಾಯ್ದೆಗಳ ವಿರುದ್ಧ ಹೋರಾಟದ ಕ್ರಾಂತಿ ಶುರುಮಾಡಿರೋ, ಟಿಕಾಯತ್ ಈಗ, ರಾಜ್ಯಕ್ಕೂ ಎಂಟ್ರಿಕೊಟ್ಟಿದ್ದಾರೆ. ಇಂದು ಹಸಿರು ಸೈನಿಕರ ಜತೆ ಬೆಂಗಳೂರಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದಾರೆ.

ಇಂದು ಬೆಂಗಳೂರಿನಲ್ಲಿ ರೈತರ ಪ್ರತಿಭಟನಾ ಕಹಳೆ! ದೆಹಲಿ ಗಡಿಯಲ್ಲಿ ದಂಗೆ ಎದ್ದಿರೋ ಅನ್ನದಾತರ ಹೋರಾಟ ಮತ್ತೊಂದು ಸ್ವರೂಪಕ್ಕೆ ತಿರುಗಿದೆ. ಇದೇ ತಿಂಗಳ 26ಕ್ಕೆ ಪ್ರತಿಭಟನೆ ನಾಲ್ಕು ತಿಂಗಳು ಪೂರೈಸಲಿದ್ದು, ಭಾರತ್​​ ಬಂದ್​ಗೆ ರೈತರು ಕರೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲೇ ಸಾಲು ಸಾಲು ಸಮಾವೇಶ ನಡೀತಿದ್ದು, ಇಂದು ಬೆಂಗಳೂರಲ್ಲೂ ಶಕ್ತಿ ಪ್ರದರ್ಶನ ತೋರಲಿದ್ದಾರೆ. ಸುಮಾರು 25 ಸಾವಿರಕ್ಕೂ ಹೆಚ್ಚು ರೈತರು ವಿಧಾನಸೌಧ ಚಲೋ ನಡೆಸಲಿದ್ದಾರೆ. ದೆಹಲಿಯಲ್ಲಿ ರೈತ ಚಳವಳಿ ಮುನ್ನಡೆಸುತ್ತಿರೋ ರಾಕೇಶ್ ಟಿಕಾಯತ್, ಡಾ. ಸುದರ್ಶನ್ ಪಾಲ್, ಯುದ್ದವೀರ್ ಸಿಂಗ್ ಕೂಡ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ​​ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕರೆಲ್ಲ ಱಲಿಯಲ್ಲಿ ಭಾಗವಹಿಸುತ್ತಿದ್ದು, ಸಿಲಿಕಾನ್​​ ಸಿಟಿಯಲ್ಲಿ ಹೋರಾಟದ ರೋಷಾಗ್ನಿ ಹೊತ್ತಿಉರಿಯಲಿದೆ.

ಇಂದು ಬೆಳಗ್ಗೆ 11 ಗಂಟೆಗೆ ಱಲಿ ಆರಂಭ ಅಂದಹಾಗೇ, ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆ ಇಂದಿನ ಹೋರಾಟ ಆಯೋಜನೆ ಮಾಡಿದೆ.. ಬೆಳಗ್ಗೆ 11 ಗಂಟೆ ಸುಮಾರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಱಲಿ ಶುರುವಾಗಲಿದೆ. ಕ್ರಾಂತಿವೀರ ಸಂಗೊಳ್ಳಿ ಫ್ಲೈ ಓವರ್ ಮೂಲಕ ಶೇಷಾದ್ರಿ ರೋಡ್ ತಲುಪುವ ಹೋರಾಟಗಾರರು, ಅಲ್ಲಿಂದ ಕೆ.ಆರ್ ಸರ್ಕಲ್ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಪ್ಲಾನ್ ಮಾಡಿದ್ದಾರೆ. ಆದರೆ ಪೊಲೀಸರು ಮಾತ್ರ ಫ್ರೀಡಂಪಾರ್ಕ್​​​​ನಲ್ಲೇ ಱಲಿಗೆ ಬ್ರೇಕ್​​​ಹಾಕಲು ತಯಾರಿ ಮಾಡ್ಕೊಂಡಿದ್ದಾರೆ. ರಾಜ್ಯ ರೈತ ನಾಯಕರಾದ ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ, ಕುರುಬೂರು ಶಾಂತಕುಮಾರ್ ಹೋರಾಟಕ್ಕೆ ಸಾಥ್​ ಕೊಡ್ತಿದ್ದಾರೆ. ಹಾಗೇ, ರೈತರು, ದಲಿತಪರ ಸಂಘಟನೆ, ಕಾರ್ಮಿಕರು, ಮಹಿಳಾ ಮತ್ತು ವಿದ್ಯಾರ್ಥಿ ಸಂಘಟನೆಗಳು ಱಲಿಯಲ್ಲಿ ಪಾಲ್ಗೊಳ್ಳಲಿವೆ.

ಒಟ್ನಲ್ಲಿ, ಅನ್ನದಾತರ ಹೋರಾಟ ನೂರು ದಿನದ ಗಡಿದಾಟಿದ್ರೂ, ಕೇಂದ್ರ ಸರ್ಕಾರ ತಲೆ ಕೆಡಿಸಿಕೊಳ್ತಿಲ್ಲ. ಹೀಗಾಗಿ, ಮೇಲಿಂದ ಮೇಲೆ ಪ್ರತಿಭಟನೆ ಪೆಟ್ಟು ಕೊಡಲು ರೈತ ಪಡೆ ಮುಂದಾಗಿದೆ. ಇಂದು ಬೆಂಗಳೂರಲ್ಲಿ ಮತ್ತೊಮ್ಮೆ ರಣಕಹಳೆಗೆ ಸಜ್ಜಾಗಿದ್ದು, ಸರ್ಕಾರಕ್ಕೆ ಹೇಗೆ ಬಿಸಿ ಮುಟ್ಟಿಸ್ತಾರೆ ಕಾದು ನೋಡ್ಬೇಕು.

ಇದನ್ನೂ ಓದಿ: ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತರ ರಣಕಹಳೆ, ಸಿಲಿಕಾನ್ ಸಿಟಿಗೆ ತಟ್ಟದ ಬಂದ್ ಬಿಸಿ