Vastu tips: ತುಳಸಿ ಗಿಡ ಮನೆಯ ಯಾವ ದಿಕ್ಕಿನಲ್ಲಿ ಇದ್ದರೆ ಶ್ರೇಯಸ್ಸು?
ತುಳಸಿ ಗಿಡ ಎಂಬುದು ಹಿಂದೂಗಳಿಗೆ ಪರಮ ಪವಿತ್ರವಾದದ್ದು. ಈ ಗಿಡವನ್ನು ಮನೆಯ ಯಾವ ದಿಕ್ಕಿನಲ್ಲಿ ಇಟ್ಟರೆ ಶ್ರೇಯಸ್ಸು ಎಂದು ತಿಳಿಸುವ ವಾಸ್ತು ಕುರಿತಾದ ಲೇಖನ ಇದು. ಅಂದ ಹಾಗೆ ನಿಮ್ಮ ಮನೆಯಲ್ಲಿ ತುಳಸಿ ಗಿಡ ಯಾವ ದಿಕ್ಕಿನಲ್ಲಿದೆ?
ತುಳಸಿ ಗಿಡ ಅಂದಾಕ್ಷಣ ಬರೀ ಒಂದು ಗಿಡವಾಗಿ ಮಾತ್ರ ನೆನಪಾಗಲ್ಲ. ಹಿಂದೂಗಳಲ್ಲಿ ತುಳಸಿ ಗಿಡಕ್ಕೆ ಪರಮ ಪವಿತ್ರವಾದ ಸ್ಥಾನ ಇದೆ. ಕೃಷ್ಣ ಪರಮಾತ್ಮನಿಗೆ ತುಳಸಿ ಅರ್ಪಿಸುವುದು ಬಲು ಪ್ರೀತಿ ಹಾಗೂ ಪವಿತ್ರ ಎಂಬ ಧಾರ್ಮಿಕ ನಂಬಿಕೆ ಇದೆ. ಆ ಕಾರಣದಿಂದಲೇ ಈ ಗಿಡವನ್ನು ಬಹುತೇಕ ಮನೆಗಳಲ್ಲಿ ತುಂಬ ಸಾಮಾನ್ಯವಾಗಿ ಕಾಣಬಹುದು. ತುಳಸಿ ಪೂಜೆ ಮಾಡುವುದನ್ನು ನೋಡಬಹುದು. ಆದರೆ ಈ ಗಿಡವನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಇಟ್ಟರೆ ಕೆಟ್ಟ ಫಲಿತಾಂಶವನ್ನು ಪಡೆಯಬೇಕಾಗುತ್ತದೆ. ಆದ್ದರಿಂದ ಈ ಗಿಡದ ಬಗ್ಗೆ ಕೆಲವು ವಾಸ್ತು ಮಾಹಿತಿಗಳನ್ನು ತಿಳಿಯುವ ಪ್ರಯತ್ನ ಈ ಲೇಖನದಲ್ಲಿ ಮಾಡಲಾಗಿದೆ. ಮನೆಯಲ್ಲಿ ಜಾಗದ ಕೊರತೆ ಎಂಬ ಕಾರಣಕ್ಕೆ ಜನರು ಮನೆಯ ಛಾವಣಿ ಮೇಲೆ ಇಡುತ್ತಾರೆ. ವಾಸ್ತುಶಾಸ್ತ್ರದ ಪ್ರಕಾರ, ಛಾವಣಿ ಮೇಲೆ ತುಳಸಿ ಗಿಡ ಇಟ್ಟಲ್ಲಿ ಬಹಳ ಕೆಟ್ಟ ಫಲಿತಾಂಶವನ್ನು ಅನುಭವಿಸಬೇಕಾಗುತ್ತದೆ.
ಯಾರಿಗೆ ಜಾತಕದಲ್ಲಿ ಬುಧ ಗ್ರಹ ದುರ್ಬಲವಾಗಿರುತ್ತದೋ ಅಂಥವರು ತುಳಸಿ ಗಿಡವನ್ನು ಛಾವಣಿ ಮೇಲೆ ಇರಿಸಿದ್ದರಂತೂ ದೊಡ್ಡ ಮಟ್ಟದ ಹಣಕಾಸು ನಷ್ಟವನ್ನು ಅನುಭವಿಸುತ್ತಾರೆ. ಏಕೆ ಹೀಗೆ ಅಂದರೆ, ಮನೆಯ ಛಾವಣಿ ಮೇಲೆ ಇಟ್ಟ ತುಳಸಿ ಗಿಡವನ್ನು ಬಹುತೇಕರು ನಿರ್ಲಕ್ಷಿಸುತ್ತಾರೆ. ಆದ್ದರಿಂದ ಆ ಗಿಡ ಒಣಗುವ, ಹಾಳಾಗುವ ಸಾಧ್ಯತೆ ಇರುತ್ತದೆ. ಇನ್ನು ಕೆಲವು ಸಲ ಪಕ್ಷಿಗಳು ಗಲೀಜು ಮಾಡುವ ಅವಕಾಶಗಳಿರುತ್ತದೆ. ಇದು ಆ ಮನೆಗೆ ಒಳ್ಳೆ ಸೂಚನೆ ಅಲ್ಲ. ಇನ್ನು ಈ ಗಿಡವನ್ನು ಪೂರ್ವ ದಿಕ್ಕಿನಲ್ಲಿ ಸಹ ಇಡಬಾರದು. ಹೀಗೆ ಇಡುವುದರಿಂದ ವ್ಯಾಪಾರ- ವ್ಯವಹಾರದಲ್ಲಿ ನಷ್ಟವಾಗುತ್ತದೆ, ಆ ಕುಟುಂಬದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಎಲ್ಲಿರಬೇಕು ತುಳಸಿ ಗಿಡ? ತುಳಸಿ ಗಿಡವನ್ನು ಉತ್ತರ ದಿಕ್ಕಿನಲ್ಲಿ ಈಶಾನ್ಯಕ್ಕೆ ಮುಖ ಮಾಡಿದಂತೆ ಇಡಬೇಕು. ಇದನ್ನು ಹೊರತುಪಡಿಸಿದಂತೆ ಪಶ್ಚಿಮ ದಿಕ್ಕಿನಲ್ಲಿ ಸಹ ಇಡಬಹುದು. ಈ ಮೂಲಕ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಪಸರಿಸುತ್ತದೆ. ಇನ್ನು ತುಳಸಿ ಎಲೆಯನ್ನು ಅಗೆದು ತಿನ್ನಬಾರದು. ಗಂಟಲಿನಲ್ಲಿ ಇರಿಸಿಕೊಂಡು, ನುಂಗಬೇಕು. ತುಳಸಿ ದಳವನ್ನು ಮೊಸರಿನೊಂದಿಗೆ ಬೆರೆಸಿ, ಸೇವಿಸಬೇಕು. ಇದರಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಇಡೀ ದಿನ ಚೈತನ್ಯ ಕಾಯ್ದುಕೊಳ್ಳಬಹುದು.
ಪ್ರತಿ ದಿನ ತುಳಸಿ ಪೂಜೆ ಮಾಡುವುದರಿಂದ ಮನೆಯ ಕುಟುಂಬ ಸದಸ್ಯರಲ್ಲಿನ ನಕಾರಾತ್ಮಕ ಭಾವನೆಗಳನ್ನು ದೂರ ಮಾಡುತ್ತದೆ. ಇನ್ನು ಅಡುಗೆ ಮನೆಯ ಬಳಿ ತುಳಸಿ ಗಿಡ ಇದ್ದಲ್ಲಿ ಕುಟುಂಬ ಸದಸ್ಯರ ಮಧ್ಯೆ ಪ್ರೀತಿ- ಸೌಹಾರ್ದ ಹೆಚ್ಚಾಗುತ್ತದೆ. ಅಂದ ಹಾಗೆ ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ಸರಿಯಾದ ಸ್ಥಳದಲ್ಲಿ ಇಟ್ಟಿದ್ದೀರಿ ತಾನೆ?
ಇದನ್ನೂ ಓದಿ: ತುಳಸಿ ಎಲೆಗಳನ್ನು ಪ್ರತಿದಿನ ಸೇವಿಸಿದರೆ ಆರೋಗ್ಯ ಸ್ಥಿತಿ ಸ್ಥಿರವಾಗಿ ಇರುತ್ತದೆ; ಅದು ಹೇಗೆ?