AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧನಿಷ್ಠಾ ಪಂಚಕಾದಿ, ತ್ರಿಪಾದಿ ನಕ್ಷತ್ರ ಸೇರಿದಂತೆ ಮರಣ ಕಾಲದ ದೋಷಗಳ ಬಗ್ಗೆ ಮಾಹಿತಿ ಇಲ್ಲಿದೆ

ಈ ಲೇಖನವು ಜ್ಯೋತಿಷ್ಯದ ಪ್ರಕಾರ ಮರಣ ಸಮಯದ ದೋಷಗಳಾದ ಧನಿಷ್ಠಾ ಪಂಚಕ ಮತ್ತು ತ್ರಿಪಾದ ದೋಷಗಳ ಬಗ್ಗೆ ವಿವರಿಸುತ್ತದೆ. ಕುಂಭ ಮತ್ತು ಮೀನ ರಾಶಿಗಳಲ್ಲಿ ಚಂದ್ರನಿರುವಾಗ ಮರಣವಾದರೆ ಉಂಟಾಗುವ ಅಶುಭ ಪರಿಣಾಮಗಳು ಮತ್ತು ಅವುಗಳ ಪರಿಹಾರಗಳನ್ನು ಚರ್ಚಿಸಲಾಗಿದೆ. ಮರಣ ಸ್ಥಳವನ್ನು ಖಾಲಿ ಬಿಡುವ ಅವಶ್ಯಕತೆ ಮತ್ತು ತಿಥಿ, ವಾರ ದೋಷಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಕಾಲೀಕ ಸಂಚಾರ ದೃಷ್ಟಿ ಮತ್ತು ಅದರ ಪರಿಹಾರಗಳನ್ನು ಸಹ ವಿವರಿಸಲಾಗಿದೆ.

ಧನಿಷ್ಠಾ ಪಂಚಕಾದಿ, ತ್ರಿಪಾದಿ ನಕ್ಷತ್ರ ಸೇರಿದಂತೆ ಮರಣ ಕಾಲದ ದೋಷಗಳ ಬಗ್ಗೆ ಮಾಹಿತಿ ಇಲ್ಲಿದೆ
Dhanishta Panchika And Tripaada Doshas
ಸ್ವಾತಿ ಎನ್​ಕೆ
| Edited By: |

Updated on:May 04, 2025 | 6:35 AM

Share

ಮನುಷ್ಯನ ಜನನ ಕಾಲವನ್ನು ಹೇಗೆ ಒಳ್ಳೆಯದು ಹಾಗೂ ಕೆಟ್ಟದ್ದು ಎಂದು ಜ್ಯೋತಿಷ್ಯದ ಆಧಾರದಲ್ಲಿ ಹೇಳಲಾಗುತ್ತದೆಯೋ ಅದೇ ರೀತಿ ಒಬ್ಬ ವ್ಯಕ್ತಿಯ ಮರಣದ ಸಮಯವನ್ನೂ ಒಳ್ಳೆಯದು ಅಥವಾ ಕೆಟ್ಟದ್ದು ಎಂದು ಹೇಳಲಾಗುತ್ತದೆ. ಇದಕ್ಕೆ ಗ್ರಂಥಗಳು, ಶಾಸ್ತ್ರದಲ್ಲಿ ಪ್ರಮಾಣಗಳು ಇವೆ. ಈ ಲೇಖನವನ್ನು ಮಾಹಿತಿಯ ಕಾರಣಕ್ಕಾಗಿ ನೀಡಲಾಗುತ್ತಿದೆ. ಇದರಲ್ಲಿನ ವಿವರಣೆಗಳನ್ನು ಅನುಸರಿಸುವುದು ಅಥವಾ ಅನುಸರಿಸದೆ ಇರುವುದು ಆಯಾ ವ್ಯಕ್ತಿಗಳ ನಂಬಿಕೆ ಹಾಗೂ ಆರ್ಥಿಕ ಚೈತನ್ಯ, ಅನುಕೂಲಗಳ ಮೇಲೆ ಅವಲಂಬಿಸಿರುತ್ತದೆ. ಕುಂಭ ಹಾಗೂ ಮೀನ ರಾಶಿಯಲ್ಲಿ ಚಂದ್ರನಿರುವಾಗ ಮೃತಪಟ್ಟ ವ್ಯಕ್ತಿಗೆ ಸದ್ಗತಿ ಸಿಗುವುದಿಲ್ಲ, ಅದರ ಜೊತೆಗೆ ಆ ವ್ಯಕ್ತಿಯ ಸಂತತಿಯವರಿಗೆ ಕೂಡ ಅಶುಭವಾಗುತ್ತದೆ ಎಂಬ ಉಲ್ಲೇಖವಿದೆ. ಅದರ ಜೊತೆಗೆ ಈ ಮರಣ ಕಾಲದ ದೋಷಕ್ಕೆ ಪರಿಹಾರಗಳನ್ನು ಸಹ ಸೂಚಿಸಲಾಗಿದೆ. ಈ ಲೇಖನದಲ್ಲಿ ದೋಷಗಳ ಬಗ್ಗೆ ಮಾತ್ರ ತಿಳಿಸಲಾಗುತ್ತಿದೆ.

ಧನಿಷ್ಠಾ ಪಂಚಕ ನಕ್ಷತ್ರ ದೋಷ:

ಮರಣ ಸಮಯದಲ್ಲಿ ಬಹಳ ಮುಖ್ಯವಾಗಿ ಗಮನಿಸುವುದು ಆ ಸಮಯದಲ್ಲಿ ಇದ್ದ ನಕ್ಷತ್ರ ಯಾವುದು ಎಂಬ ಸಂಗತಿಯನ್ನು. ಏಕೆಂದರೆ, ಧನಿಷ್ಠಾ ನಕ್ಷತ್ರದ ಮೂರನೇ ಪಾದದಿಂದ (ಧನಿಷ್ಠಾ ಮೂರನೇ ಪಾದ ಕುಂಭ ರಾಶಿಗೆ ಬರುತ್ತದೆ) ಶತಭಿಷಾ, ಪೂರ್ವಾಭಾದ್ರ, ಉತ್ತರಾಭಾದ್ರ, ರೇವತಿ ಈ ಐದು ನಕ್ಷತ್ರದ ಪೈಕಿ ಯಾವುದರಲ್ಲಿ ಸಾವನ್ನಪ್ಪಿದರೂ ಅದಕ್ಕೆ ಶಾಂತಿಯನ್ನು ಮಾಡಿಸಲಾಗುತ್ತದೆ. ಈ ದೋಷಕ್ಕೆ ಧನಿಷ್ಠಾ ಪಂಚಕ ದೋಷ ಎಂದು ಕರೆಯಲಾಗುತ್ತದೆ. ಅಂದರೆ ಆರಂಭದಲ್ಲಿಯೇ ಹೇಳಿದಂತೆ, ಧನಿಷ್ಠಾ ಮೂರನೇ ಹಾಗೂ ನಾಲ್ಕನೇ ಪಾದ, ಶತಭಿಷಾ ನಕ್ಷತ್ರ ನಾಲ್ಕೂ ಪಾದ, ಪೂರ್ವಾಭಾದ್ರ ನಕ್ಷತ್ರ ಒಂದು-ಎರಡು- ಮೂರನೇ ಪಾದ ಕುಂಭ, ಪೂರ್ವಾಭಾದ್ರ ನಾಲ್ಕನೇ ಪಾದ, ಉತ್ತರಾಭಾದ್ರ ನಾಲ್ಕೂ ಪಾದ, ರೇವತಿ ನಕ್ಷತ್ರದ ನಾಲ್ಕೂ ಪಾದ ಮೀನ ರಾಶಿಗೆ ಬಂದು, ದೋಷಕಾರಿ ಎಂದು ಪರಿಗಣಿಸಲಾಗುತ್ತದೆ.

ತ್ರಿಪಾದ ನಕ್ಷತ್ರಗಳು:

ತ್ರಿಪಾದ ನಕ್ಷತ್ರಗಳು ಎಂದು ಸಹ ಇವೆ. ಕೃತ್ತಿಕಾ, ಪುನರ್ವಸು, ಉತ್ತರಾ, ವಿಶಾಖಾ, ಉತ್ತರಾಷಾಢ, ಪೂರ್ವಾಭಾದ್ರ – ಈ ನಕ್ಷತ್ರಗಳು ಇರುವ ದಿನ ಮೃತಪಟ್ಟಲ್ಲಿ ತ್ರಿಪಾದ ದೋಷ ಎಂದು ಕರೆಯಲಾಗುತ್ತದೆ. ಪೂರ್ವಾಭಾದ್ರ ನಕ್ಷತ್ರವು ಎರಡೂ ಕಡೆ ಬರುತ್ತದೆ.

ಮೃತಪಟ್ಟ ಸ್ಥಳವನ್ನು ಖಾಲಿ ಮಾಡಬೇಕು:

ಧನಿಷ್ಠಾ ಪಂಚಕ ನಕ್ಷತ್ರಗಳಲ್ಲಿ ಮೃತಪಟ್ಟರೆ ಮೃತಿ ಸ್ಥಳವನ್ನು (ವ್ಯಕ್ತಿಯು ಸಾವನ್ನಪ್ಪಿದ ಸ್ಥಳ) ಐದು ತಿಂಗಳ ಕಾಲ ಖಾಲಿ ಬಿಡಬೇಕು ಹಾಗೂ ತ್ರಿಪಾದಿ ನಕ್ಷತ್ರಗಳಲ್ಲಿ (ಪೂರ್ವಾಭಾದ್ರ ಹೊರತುಪಡಿಸಿ) ಮೃತಪಟ್ಟರೆ ಮೃತಿ ಸ್ಥಳವನ್ನು ಮೂರು ತಿಂಗಳ ಕಾಲ ಖಾಲಿ ಮಾಡಬೇಕು ಎಂದು ಹೇಳಲಾಗುತ್ತದೆ. ಬದಲಾದ ಕಾಲದಲ್ಲಿ ಇಂದಿನ ದಿನಮಾನದ ಸವಾಲುಗಳು ಹಾಗೂ ಅನನುಕೂಲದ ಕಾರಣಗಳಿಗೆ ಹಲವರು ಮರಣ ಶಾಂತಿಯನ್ನು ಮಾಡಿಸುತ್ತಾರೆ, ಮೃತ ವ್ಯಕ್ತಿಯ ಸ್ಥಳವನ್ನು ಖಾಲಿ ಮಾಡುವುದಿಲ್ಲ. ಇದು ಕೇವಲ ಕಾಲಮಾನ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡಂಥ ಬದಲಾವಣೆ ಆಗಿರುತ್ತದೆ. ಆಸ್ಪತ್ರೆಯಲ್ಲಿ ವ್ಯಕ್ತಿ ಸಾವನ್ನಪ್ಪಿದರೆ ಅಥವಾ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಮೃತಪಟ್ಟರೆ ಏನು ಮಾಡುವುದು ಎಂದೆಲ್ಲ ಕೇಳುವವರಿದ್ದಾರೆ.

ಸನ್ನಿವೇಶದ ವಿಶ್ಲೇಷಣೆ:

ಈ ರೀತಿ ಸಂದಿಗ್ಧಗಳಿಗೆ ಪರಿಸ್ಥಿತಿ- ಸನ್ನಿವೇಶ ಹಾಗೂ ಆ ಕಾಲದ ವಿವರಣೆಯನ್ನು ಪಡೆದುಕೊಂಡು ವಿಶ್ಲೇಷಿಸಿ ಉತ್ತರ ನೀಡಬೇಕಾಗುತ್ತದೆ. ಆದ್ದರಿಂದ ಆ ಪ್ರಶ್ನೆ ಉದ್ಭವಿಸಿದ ಸಂದರ್ಭದಲ್ಲಿ ವಿಷಯ ಜ್ಞಾನ, ತಿಳಿವಳಿಕೆ ಹಾಗೂ ಅನುಭವ ಇರುವಂಥವರ ಬಳಿ ತೆರಳಿ ಉತ್ತರ ಕಂಡುಕೊಳ್ಳುವುದು ಒಳ್ಳೆಯದು.

ತಿಥಿ- ವಾರ ದೋಷಗಳು:

ದ್ವಿತೀಯಾ (ಬಿದಿಗೆ), ಸಪ್ತಮಿ, ದ್ವಾದಶಿ ತಿಥಿಗಳಲ್ಲಿ ಹಾಗೂ ಭಾನುವಾರ, ಶನಿವಾರ ಅಥವಾ ಮಂಗಳವಾರದಂದು ಮೃತಪಟ್ಟಲ್ಲಿ ಆಗ ಕೂಡ ಮರಣ ಕಾಲದ ದೋಷ ಎಂದು ಪರಿಗಣಿಸಲಾಗುತ್ತದೆ. ಆ ವ್ಯಕ್ತಿಯ ಕುಟುಂಬಕ್ಕೆ ಆಶೌಚ ಅಥವಾ ಸೂತಕ- ಮೈಲಿಗೆ ಕಳೆದ ನಂತರ (ಸೂತಕ ಅಥವಾ ಮೈಲಿಗೆ ಕಳೆಯುವುದು ಸಹ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಹಾಗೂ ಶೂದ್ರರಿಗೆ ಒಂದೊಂದು ಎಂಬಂತೆ ವರ್ಣಾಧಾರಿತವಾಗಿ ಹೇಳಲಾಗಿದೆ. ಹತ್ತು ದಿನ- ಹದಿನೈದು ದಿನ- ಒಂದು ತಿಂಗಳು ಹೀಗೆ) ಮರಣ ಕಾಲದ ದೋಷವನ್ನು ಪರಿಹರಿಸಿಕೊಳ್ಳಬೇಕಾಗುತ್ತದೆ.

ಶಾಂತಿ ಮಾಡಿಕೊಳ್ಳದಿದ್ದರೆ ಏನಾಗುತ್ತದೆ?

ಈ ಮೇಲ್ಕಂಡ ಪ್ರಶ್ನೆ ಹಲವರಿಗೆ ಬರುತ್ತದೆ. ಅದಕ್ಕೆ ಗ್ರಂಥಗಳಲ್ಲಿ ಏನು ಹೇಳಲಾಗಿದೆ ಅಂತ ನೋಡುವುದಾದರೆ, ಧನಿಷ್ಠಾ ಪಂಚಕ ಶಾಂತಿ ಮಾಡಿಸದಿದ್ದಲ್ಲಿ ವರ್ಷದೊಳಗೆ ಆ ಕುಟುಂಬದಲ್ಲಿ ಐದು ಜೀವ ಹಾನಿ ಹಾಗೂ ತ್ರಿಪಾದ ನಕ್ಷತ್ರ ಶಾಂತಿ ಮಾಡಿಸದಿದ್ದಲ್ಲಿ ಮೂರು ಜೀವ ಹಾನಿ ಸಂಭವಿಸುತ್ತದೆ ಎನ್ನಲಾಗಿದೆ. ಇದು ಗ್ರಂಥಗಳಲ್ಲಿಯೇ ಉಲ್ಲೇಖವಾಗಿರುವ ಅಂಶ.

ಕಾಲಿಕಾ ಸಂಚಾರ ದೃಷ್ಟಿ:

ಮರಣ ಕಾಲದಲ್ಲಿನ ಮಹಾನಕ್ಷತ್ರದಿಂದ ಅಭಿಜಿನ್ ಸಹಿತವಾಗಿ ನಿತ್ಯ ನಕ್ಷತ್ರದ ತನಕ ಎಣಿಸಬೇಕು. ಹಾಗೆ ಬಂದ ಸಂಖ್ಯೆಯಲ್ಲಿ ಏಳರಿಂದ ಭಾಗಿಸಬೇಕು. ಶೇಷ ಒಂದು ಬಂದರೆ ನಲವತ್ತೆಂಟು ದಿನ, ಎರಡು ಬಂದರೆ ಮೂವತ್ತಾರು, ಮೂರಾದರೆ ಇಪ್ಪತ್ನಾಲ್ಕು, ನಾಲ್ಕಾದರೆ ಹನ್ನೆರಡು ದಿನ, ಐದು ಬಂದಲ್ಲಿ ಆರು ದಿನ, ಆರು ಬಂದಲ್ಲಿ ಮೂರು ದಿನ, ಸೊನ್ನೆ ಶೇಷವಾಗಿ ಉಳಿದಲ್ಲಿ ಒಂದು ದಿನ ಕಾಲೀಸಂಚಾರ ದೃಷ್ಟಿ ಮನೆಯ ಒಳಗೆ ಇರುತ್ತದೆ. ಇದರ ನಿವಾರಣೆಗೆ ಕೆಲವು ವಿಧಿಗಳನ್ನು ಹೇಳಲಾಗಿದೆ. ಯಾವ ದಿಕ್ಕಿನಲ್ಲಿ ಕಾಳೀಸಂಚಾರ ಇದೆ ಎಂದು ತಿಳಿಯುವುದಕ್ಕೆ ಕೆಲವು ಪಂಚಾಂಗಗಳಲ್ಲಿ ಕಾಲೀಚಕ್ರವಿದೆ. ಅದರಿಂದ ದಿಕ್ಕು ತಿಳಿದುಕೊಳ್ಳಬಹುದು. ಈ ಕಾಲೀದೃಷ್ಟಿಪಾತ ಹೋಗುವಾಗ ಅಪಶಕುನಗಳು ಆಗುತ್ತವೆ

(ಆಕರ: ಶ್ರೀಮುಹೂರ್ತಸಂಹಿತಾ- ಲೇಖಕರು ಜ್ಯೋತಿಷಿ ಕಬ್ಯಾಡಿ ಶ್ರೀನಿವಾಸಾಚಾರ್ಯ)

(ಇಲ್ಲಿ ನೀಡಲಾಗಿರುವ ಮಾಹಿತಿಗಳನ್ನು ವಿವಿಧ ಗ್ರಂಥಗಳಿಂದ ತೆಗೆದುಕೊಳ್ಳಲಾಗಿದೆ)

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:35 am, Sun, 4 May 25