Lord Shani Dev: ಶನಿ ದೇವರಿಗೆ ಹೆದರದೇ ಇರುವುದು ಈ ಇಬ್ಬರೇ!

| Updated By: ಸಾಧು ಶ್ರೀನಾಥ್​

Updated on: Feb 22, 2022 | 2:03 PM

Lord Ganesha: ಸಗಣಿ ಒಳಗಿರುವ ಗಣೇಶನನ್ನು ನೋಡಿ ಶನಿಗೆ ಅಸಹ್ಯವಾಯಿತು. ಸಗಣಿಯನ್ನು ಮುಟ್ಟಲು ನಿರಾಕರಿಸಿ ಶನಿ ಹಾಗೆಯೇ ಮರಳಿದ. ಹೀಗಾಗಿ ಗಣೇಶನನ್ನು ಎಂದಿಗೂ ಅವನಿಂದ ಮುಟ್ಟಲು ಆಗಲೇ ಇಲ್ಲ.

Lord Shani Dev: ಶನಿ ದೇವರಿಗೆ ಹೆದರದೇ ಇರುವುದು ಈ ಇಬ್ಬರೇ!
Lord Shani Dev: ಶನಿದೇವರಿಗೆ ಹೆದರದೇ ಇರುವುದು ಈ ಇಬ್ಬರೇ!
Follow us on

ಶನಿ ಮಹಾರಾಜನ ಮಹಿಮೆ ಎಲ್ಲರಿಗೂ ಗೊತ್ತಿದೆ. ಶನಿ ಮಹಾತ್ಮ ಸಾಕ್ಷಾತ್ ಪರಮೇಶ್ವರನನ್ನೂ ಬಿಟ್ಟಿಲ್ಲ. ಅಂದಮೇಲೆ ಮನುಷ್ಯನನ್ನು ಬಿಟ್ಟಾನೆಯೇ? ಇಂತಹ ಶನಿದೇವನಿಗೆ ದೇವಾನುದೇವತೆಗಳು ಹೆದರಿ ನಡುಗುತ್ತಾರೆ. ಆದರೆ ಆಂಜನೇಯ ಮತ್ತು ಗಣಪತಿ ಮಾತ್ರ ಶನಿದೇವರಿಗೆ ಹೆದರುವುದಿಲ್ಲ. ಶನಿ ಪರಿಹಾರಕ್ಕೆ ಆಂಜನೇಯ ಹಾಗೂ ಗಣಪತಿ ಪೂಜೆ (Lord Ganesha ) ಮಾಡಿದರೆ ಪರಿಹಾರ ಎಂದು ಹೇಳುತ್ತಾರೆ. ಶನಿ ದೋಷ ನಿವಾರಣೆಗೆ ಆಂಜನೇಯನ ಗುಡಿಗೆ (Lord Hanuman) ಜನ ಹೋಗುವುದನ್ನು ನೋಡಿರುತ್ತೇವೆ. ಹಾಗೆಯೇ ಪ್ರಥಮ ಪೂಜಕ, ಆದಿ ದೈವ, ವಿಘ್ನ ನಿವಾರಕ, ವಿದ್ಯಾ ಗಣಪತಿ ಹೀಗೆ ನಾನಾ ಹೆಸರುಗಳಿಂದ ಕರೆಯುವ ಗಣೇಶನನ್ನು ಪೂಜಿಸಿದರೆ ಶನಿ ದೋಷ (Lord Shani Dev) ನಿವಾರಣೆಯಾಗುತ್ತದೆ ಎಂಬುದರ ಕುರಿತಾಗಿ ಇಲ್ಲೊಂದು ಕಥೆಯಿದೆ ಓದಿ (Spiritual).

ಒಂದು ದಿನ ಗಣೇಶ ನಿಧಾನವಾಗಿ ವಾಯು ವಿಹಾರ ಹೋಗ್ತಾ ಇದ್ದ. ಹೀಗೆ ಹೋಗ್ತಾ ಇರುವಾಗ ಶನಿದೇವ ಎದುರಿಗೆ ಬರುತ್ತಿದ್ದ. ಗಿಡ್ಡವಾಗಿ ಬುಡ್ಡವಾಗಿ, ಡೊಳ್ಳುಡೊಳ್ಳಾಗಿ, ಮುದ್ದುಮುದ್ದಾಗಿ ಇರುವ ಗಣೇಶನನ್ನ ನೋಡಿ ಶನಿ ದೇವನಿಗೆ ಕೀಟಲೆ ಮಾಡಬೇಕು ಅನಿಸುತ್ತದೆ. ಹೀಗೆ ಮನಸ್ಸಿನಲ್ಲಿ ಅಂದುಕೊಂಡ ಶನಿ ಗಣೇಶನಿಗೆ ಎದುರಾಗಿಯೇ ಹೊರಟ. ಗಣೇಶ ತನ್ನ ಕಡೆಗೆ ಶನಿ ಬರುವುದನ್ನು ನೋಡಿದ. ಶನಿಗೆ ಸ್ವಲ್ಪ ಆಟ ಆಡಿಸಬೇಕು ಎಂದು ಅನಿಸಿತು.

ಶಿವನಿಗೆ ಹೆದರದ ಪಾರ್ವತಿ ಪುತ್ರ ಗಣೇಶ ಇನ್ನು ಶನಿಗೆ ಹೆದರುತ್ತಾನೆಯೇ? ಗಣೇಶ ತಕ್ಷಣ ಓಡತೊಡಗಿದ. ಶನಿಯು ಹಿಂದೆ ಒಡಿದ. ಆದರೆ ಗಣೇಶ ತನ್ನ ದೊಡ್ಡ ಹೊಟ್ಟೆಯನ್ನು ಹೊತ್ತುಕೊಂಡು ಓಡಿ ಓಡಿ, ಸುಸ್ತಾದ. ಶನಿಗೆ, ತನ್ನನ್ನು ನೋಡಿ ಓಡುತ್ತಿರುವ ಗಣೇಶನನ್ನು ನೋಡಿ ಕೋಪ ಬಂದಿತು. ಹೇಗಾದರೂ ಮಾಡಿ ಗಣೇಶನನ್ನು ಮುಟ್ಟಲೇ ಬೇಕೆಂದು ಬಿರ ಬಿರನೆ, ನಡೆಯತೊಡಗಿದ. ಗಣೇಶ ಸುತ್ತಮುತ್ತ ನೋಡಿದ ಹುಲ್ಲು ಮೇಯುತ್ತಿರುವ ಹಸು ಕಂಡಿತು ಕೂಡಲೇ ಓಡಿಹೋಗಿ ಹಸುವಿನ ಮುಂದೆ ಗರಿಕೆಯಾಗಿ ಕುಳಿತನು.

ಗರಿಕೆಯಾಗಿ ಕುಳಿತ ಗಣೇಶನನ್ನು ಶನಿ ಗುರುತಿಸಿ ಹಿಡಿಯಲು ಹೋದ. ಆದರೆ ಅಷ್ಟರಲ್ಲಿ ಹಸು ಗರಿಕೆಯನ್ನು ತಿಂದುಬಿಟ್ಟಿತು. ಶನಿ ಓಡಿ ಬಂದು ಹಸುವಿನ ಒಳಗೆ ಹೋಗಿ ಹುಡುಕಲು ಶುರು ಮಾಡಿದ. ಗಣೇಶನಿಗೆ ಏನು ಮಾಡುವುದೆಂದು ತಿಳಿಯದೆ ಯೋಚಿಸಿ ಹಸುವಿನ ಸಗಣಿಯಾಗಿ ಹೊರಬಂದ. ಸಗಣಿ ಒಳಗಿರುವ ಗಣೇಶನನ್ನು ನೋಡಿ ಶನಿಗೆ ಅಸಹ್ಯವಾಯಿತು. ಸಗಣಿಯನ್ನು ಮುಟ್ಟಲು ನಿರಾಕರಿಸಿ ಶನಿ ಹಾಗೆಯೇ ಮರಳಿದ. ಹೀಗಾಗಿ ಗಣೇಶನನ್ನು ಎಂದಿಗೂ ಅವನಿಂದ ಮುಟ್ಟಲು ಆಗಲೇ ಇಲ್ಲ.

ಅದಕ್ಕೆಂದೇ.. ಶನಿ ಹತ್ತಿರವೂ ಸುಳಿಯದ, ಸಗಣಿಯನ್ನು ಗೋಪುರದ ತರ ಮಾಡಿ ಅದಕ್ಕೆ 21 ಗರಿಕೆ ಸಿಕ್ಕಿಸಿ, ವಿಧಿವತ್ತಾಗಿ ಪೂಜಿಸಿದರೆ, ಶನಿ ದೋಷ ನಿವಾರಣೆಯಾಗುತ್ತದೆ. ಈ ಮೂಲಕ ತಿಳಿಯುವುದೇನೆಂದರೆ ಗರಿಕೆ ಔಷಧಿ ಸಸ್ಯವಾದರೆ, ಸಗಣಿ ಪವಿತ್ರತೆಗೆ ಸಾಕ್ಷಿಯಾಗಿದೆ. ಗೋಮಯದಿಂದ ಸಾರಿಸಿದ ಜಾಗದಲ್ಲಿ ಸೊಳ್ಳೆಗಳು ಬರುವುದಿಲ್ಲ. ಗೋಮಯದಿಂದ ಸಾರಿಸಿದ ನೆಲದ ಮೇಲೆ ಮಲಗಿದರೆ ಬೆನ್ನುನೋವು ಹೋಗುತ್ತದೆ. ಸಗಣಿಯನ್ನು ತಟ್ಟಿ ಒಣಗಿಸಿ ಕುರುಳು ಮಾಡಿ ಸುಟ್ಟ ಭಸ್ಮವು ಪವಿತ್ರ ವಿಭೂತಿಯಾಗುತ್ತದೆ.

ಪುರುಷರು ಸ್ನಾನ ಮಾಡಿ ಭಸ್ಮ ಧರಿಸಿ, ಸಂಧ್ಯಾವಂದನೆ, ಪೂಜಾದಿಗಳನ್ನು ಮಾಡಿದಾಗ, ಸಕಲ ದೋಷಗಳು ನಿವಾರಣೆಯಾಗಿ ಅಗೋಚರ ಶಕ್ತಿ ದೇಹಕ್ಕೆ ವ್ಯಾಪಿಸಿ, ಪರಮೇಶ್ವರನ ಕೃಪೆಗೆ ಪಾತ್ರರಾಗುತ್ತಾರೆ. ಹಾಗೆಯೇ ಇಂದ್ರಾಕ್ಷಿ ಮಂತ್ರ ಪಠಿಸಿದ ಭಸ್ಮವನ್ನು ಮಕ್ಕಳಿಗೆ ಹಚ್ಚಿದರೆ, ದೃಷ್ಟಿದೋಷ, ರಚ್ಚೆ ಹಿಡಿದು ಅಳುವುದು, ಹೆದರಿಕೆ, ಜ್ವರ, ಇಂಥವುಗಳಿಗೆಲ್ಲ, ತತ್ಕಕ್ಷಣದ ಪರಿಹಾರಕ್ಕೆ, ಸುಲಭ ಉಪಾಯವಾಗಿದೆ.

ನಮ್ಮ ಹಿರಿಯರು, ಗೋಮೂತ್ರ, ಸಗಣಿ, ಇವುಗಳು ಉಪಯೋಗಗಳನ್ನು ನೇರವಾಗಿ ಹೇಳಿದರೆ ಅರ್ಥವಾಗುವುದಿಲ್ಲವೆಂದು ಪುರಾಣ ಕಥೆಗಳ ಮೂಲಕ ತಿಳಿಸಿ ಅವುಗಳ ಮೇಲಿನ ಗೌರವ, ನಂಬಿಕೆ ಹೆಚ್ಚಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಧಾರ್ಮಿಕವಾಗಿಯೂ, ವೈಜ್ಞಾನಿಕವಾಗಿಯೂ, ಗೋವಿನ ಯಾವುದೇ ಅಂಶವಾಗಲಿ ಔಷಧಯುಕ್ತವಾಗಿದ್ದು ಗೋವು ಜನಮಾನಸದಲ್ಲಿ ಪೂಜನೀಯ ಸ್ಥಾನವನ್ನು ಪಡೆದು ಕೊಂಡಿದೆ.

ಗೋಮಾತೆಗೆ ನಮಸ್ಕಾರ:
ಗಾವೋ ಮಮಾಗ್ರತ ಸಂತು ಗಾವೋ ಮೇ ಸಂತು ಪ್ರೃಷ್ಠತಹ !
ಗಾವೋ ಮೇ ಹೃದಯ ನಿತ್ಯಂ ಗವಾಂ ಮಧ್ಯೇ ವಸಾಮ್ಯಹಂ !!

ಇದರ ಅರ್ಥ ಹೀಗಿದೆ: ನನ್ನ ಮುಂದೆ ಹಿಂದೆ ಮತ್ತು ಹೃದಯದಲ್ಲಿ ಗೋಮಾತೆ ಸದಾ ನೆಲೆಸಲಿ. ಗೋವುಗಳ ಮಧ್ಯದಲ್ಲಿಯೇ ನಾನು ವಾಸ ಮಾಡುತ್ತೇನೆ. (ಬರಹ: ಆಶಾ ನಾಗಭೂಷಣ)