God Shani Dev: ಲಕ್ಷ್ಮಿ ಬರುವಾಗ ಚಂದ, ಶನಿ ಹೋಗುವಾಗ ಚಂದ! ಇದು ಕೇಳಕ್ಕೆ ಇನ್ನೂ ಚೆನ್ನಾಗಿದೆ! ಏನು ಹಾಗೆಂದರೆ?
Goddess Lakshmi: ಲಕ್ಷ್ಮಿ ದೇವಿ "ಹೇಗೆಯೇ ಇರಲಿ, ಜನರು ನನ್ನನ್ನು ವಿವಿಧ ಪೂಜೆ ಪುನಸ್ಕಾರಗಳಿಂದ ತಮ್ಮ ಮನೆಗೆ ಆಹ್ವಾನಿಸುತ್ತಾರೆ, ಆದರೆ ಶನಿದೇವ - ನಿನ್ನನ್ನು ಪೂಜಿಸುವುದು, ನಿನ್ನ ತೊಲಗುವಿಕೆಗಾಗಿ. ಎಂತಹ ವಿಪರ್ಯಾಸ. ಇಷ್ಟಾದರೂ ನಿನಗೆ ನಿನ್ನ ಮೇಲೆ ಇಷ್ಟು ಗರ್ವ ಯಾಕೆ ?" ಅನ್ನುತ್ತಾ ಮುಗುಳ್ನಗುತ್ತಾಳೆ.
ಹಿಂದೊಮ್ಮೆ ಪುರಾತನ ಕಾಲದಲ್ಲಿ ದೇವಿ ಲಕ್ಷ್ಮಿ (Goddess Lakshmi) ಮತ್ತು ಶನಿ ದೇವರ (Lord Shani Dev) ಭೇಟಿಯಾದಾಗ ಪರಸ್ಪರ ಮಾತುಕತೆ ಮುಂದುವರಿಯುತ್ತಾ ತಾನು ಮೇಲೆ, ತಾನು ಮೇಲೆ ಎಂಬ ಪೈಪೊಟಿ ಆರಂಭವಾಯಿತು. ಶನಿ ದೇವರು ತಾನು ಸತ್ಯ, ಧರ್ಮ, ನ್ಯಾಯ ಇತ್ಯಾದಿ ನೈತಿಕತೆಗಳನ್ನು ಪ್ರಪಂಚದಲ್ಲಿ ಕಾಪಾಡುತ್ತಿದ್ದೇನೆ. ನಾನು ಪ್ರವೇಶ ಮಾಡಿದ ಮನುಷ್ಯರು ಸಂಸ್ಕಾರಗಳಿಂದ ಶುದ್ಧವಾಗುತ್ತಾ, ಉತ್ತಮರಾಗುವಂತೆ ಮಾಡುತ್ತಿದ್ದೇನೆ ಅಂದಾಗ, ಲಕ್ಷ್ಮಿ ದೇವಿ ತಾನು ಪ್ರವೇಶವಾಗುವಲ್ಲಿ ಸಂಪತ್ತು, ಸಮೃದ್ಧಿ ಬಂದು, ಮನುಷ್ಯರ ಜೀವನದಲ್ಲಿ ಸುಖ ಸಂತೋಷ ನೆಲೆಯಾಗುತ್ತದೆ. ಆದ್ದರಿಂದ ನನ್ನ ಮಹತ್ವ ಹೆಚ್ಚು ಅನ್ನುತ್ತಾಳೆ (Spiritual).
ಹೀಗೆ ಮಾತು ಮುಂದುವರಿಯುತ್ತಾ “ಲಕ್ಷ್ಮಿ ಅಂದರೆ ಮಾಯೆ, ನೀನು ಪ್ರವೇಶ ಮಾಡಿದ ಮನೆಯ ಜನರು ಹೆಚ್ಚಾಗಿ – ದ್ರವ್ಯ ಮದದಿಂದ, ಧರ್ಮವನ್ನು ಮರೆತು ಅಧರ್ಮ ಮಾರ್ಗದಲ್ಲಿ ನಡೆಯುತ್ತಾ ಅಧೋಗತಿ ಹೊಂದುತ್ತಾರೆ. ಇಷ್ಟಲ್ಲದೆ ನೀನು ಬಹಳ ಚಂಚಲ ಸ್ವಭಾವದವಳು. ಒಂದು ಕಡೆ ಶಾಶ್ವತವಾಗಿ ನೆಲೆಸುವುದಿಲ್ಲ. ಅದರಲ್ಲೂ ನೀನು ಹೆಚ್ಚಾಗಿ ಅಧರ್ಮಿಗಳೊಂದಿಗೆ ಇರುವುದರಿಂದ ಸಮಾಜದಲ್ಲಿ ನೈತಿಕತೆ ಕ್ಷೀಣವಾಗುತ್ತಾ, ಪಾಪ ಕಾರ್ಯಗಳು ಹೆಚ್ಚಾಗುತ್ತಿದೆ” ಅನ್ನುತ್ತಾರೆ ಶನಿದೇವರು.
ಅದಕ್ಕೆ ಲಕ್ಷ್ಮಿ ದೇವಿ “ಹೇಗೆಯೇ ಇರಲಿ, ಜನರು ನನ್ನನ್ನು ವಿವಿಧ ಪೂಜೆ ಪುನಸ್ಕಾರಗಳಿಂದ ತಮ್ಮ ಮನೆಗೆ ಆಹ್ವಾನಿಸುತ್ತಾರೆ, ಆದರೆ ಶನಿದೇವ – ನಿನ್ನನ್ನು ಪೂಜಿಸುವುದು, ನಿನ್ನ ತೊಲಗುವಿಕೆಗಾಗಿ. ಎಂತಹ ವಿಪರ್ಯಾಸ. ಇಷ್ಟಾದರೂ ನಿನಗೆ ನಿನ್ನ ಮೇಲೆ ಇಷ್ಟು ಗರ್ವ ಯಾಕೆ ?” ಅನ್ನುತ್ತಾ ಮುಗುಳ್ನಗುತ್ತಾಳೆ.
ಸಲ್ಪ ಕೋಪಗೊಂಡು ಶನಿದೇವರು – “ತಾಯೀ ನಿನಗಂತೂ ನ್ಯಾಯ ನೀತಿಯ ಪರಿವೇ ಇಲ್ಲ. ತಪ್ಪು ಜನರಿಗೇ ಹೆಚ್ಚಾಗಿ ಒಲಿಯುತ್ತೀಯ, ಮತ್ತು ಜನರು ನಿನ್ನನ್ನು ತಪ್ಪು ದಾರಿಯಿಂದಾಗಿಯೇ ಹೆಚ್ಚಾಗಿ ಸಂಪಾದಿಸುವುದನ್ನು ನೋಡಿದ್ದೇನೆ. ಆ ತಪ್ಪುಗಳನ್ನು ಸರಿಪಡಿಸಿ ಪುನಃ ಧರ್ಮ ಸಂಸ್ಥಾಪನೆಗೆ ನನ್ನ ಪ್ರವೇಶ ಅನಿವಾರ್ಯ. ಆದ್ದರಿಂದ ಪ್ರಪಂಚದಲ್ಲಿ ನನ್ನ ಮತ್ವವೇ ಹೆಚ್ಚು” ಅನ್ನುತ್ತಾನೆ.
ಈ ವಾದ – ವಿವಾದಗಳು ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿಯೂ ತೀರ್ಮಾನವಾಗದ ಕಾರಣ – ತ್ರಿಮೂರ್ತಿಯವರ ಸಲಹೆಯಂತೆ, ತ್ರಿಲೋಕ ಸಂಚಾರಿ ನಾರದ ಮಹರ್ಷಿಗಳನ್ನು ಸಂಪರ್ಕಿಸುತ್ತಾರೆ.
ಆಗ ನಾರದರು ಅಮ್ಮ ಲಕ್ಷ್ಮೀ ಮತ್ತು ಶನಿ ದೇವರೇ, ನೀವಿಬ್ಬರೂ ಸಮಾನಾಂತರದೊಂದಿಗೆ, ಸ್ವಲ್ಪ ದೂರ ನಿಧಾನವಾಗಿ ನಡೆದು ಹೋಗಿ, ನಂತರ ತಿರುಗಿ ಬನ್ನಿ, ಆಗ ಈ ಸಮಸ್ಯೆಯ ಪರಿಹಾರವನ್ನು ನಾನು ಹೇಳುತ್ತೇನೆ ಅಂದಾಗ, ಅವರಿಬ್ಬರೂ ಕುತೂಹಲದಿಂದ ನಾರದ ಮಹರ್ಷಿಗಳ ಸಲಹೆಯನ್ನು ಪಾಲಿಸಿದರು.
ಅವರಿಬ್ಬರ ನಡಿಗೆಯನ್ನು ಪರಿಶೀಲಿಸಿದ ನಾರದರು – ಭಾಗ್ಯಲಕ್ಷ್ಮೀ ನೀನು ಬರುವಾಗ ಎಷ್ಟು ಚಂದವಾಗಿ ಕಾಣಿಸಿದೆ. ಹಾಗೆಯೆ ಶನಿ ಹೋಗುವಾಗ ತುಂಬಾ ಚಂದವಾಗಿ ಕಾಣಿಸಿದ. ಆದ್ದರಿಂದ ಇಬ್ಬರ ಮಹತ್ವವೂ ಪ್ರಪಂಚದಲ್ಲಿ ಸಮಾನ ಎಂದು ತೀರ್ಮಾನ ಮಾಡಿದರು. ಆಗ ದೇವತೆಗಳ ಪುಷ್ಪವೃಷ್ಟಿಯಾಯಿತು.
ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೆ I ಶರಣು ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ II ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ I ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ II (ಬರಹ: ಆಶಾ ನಾಗಭೂಷಣ)
Published On - 6:11 am, Wed, 23 February 22