ಮಾಘ ಹುಣ್ಣಿಮೆ ಅಥವಾ ಪೂರ್ಣಿಮೆಯು ಹಿಂದೂಗಳಲ್ಲಿ ಹೆಚ್ಚಿನ ಧಾರ್ಮಿಕ ಮಹತ್ವವನ್ನು ಹೊಂದಿದ್ದು ಈ ದಿನವನ್ನು ವಿಷ್ಣುವನ್ನು ಪೂಜಿಸಲು ಮೀಸಲಿಡಲಾಗಿದೆ. ಕೆಲವು ಕಡೆಗಳಲ್ಲಿ ಹುಣ್ಣಿಮೆಯ ಶುಭ ದಿನದಂದು ಭಕ್ತರು ಸತ್ಯನಾರಾಯಣ ವ್ರತವನ್ನು ಕೂಡ ಆಚರಣೆ ಮಾಡುತ್ತಾರೆ. ಇದೆಲ್ಲದರ ಜೊತೆಗೆ ಈ ದಿನ ಗಂಗಾ ನದಿಯಲ್ಲಿ ಸ್ನಾನ ಮಾಡುವುದು ಕೂಡ ಶ್ರೇಷ್ಠ ಎನ್ನಲಾಗುತ್ತದೆ. ಈ ಬಾರಿಯ ಮಾಘ ಹುಣ್ಣಿಮೆಯನ್ನು ಫೆ. 24ರ ಶನಿವಾರ ಆಚರಣೆ ಮಾಡಲಾಗುತ್ತದೆ. ಅಲ್ಲದೆ ಈ ದಿನದಂದು ದೇವತೆಗಳು ಭೂಮಿಗೆ ಬರುತ್ತಾರೆ ಎಂದು ನಂಬಲಾಗಿದೆ. ಹಾಗಾಗಿಯೇ ಈ ದಿನ ದಾನ- ಧರ್ಮ ಮಾಡುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಇನ್ನು ಮಾಘ ಹುಣ್ಣಿಮೆಯ ತಿಥಿಯು ಫೆ. 23 ರಂದು ಮಧ್ಯಾಹ್ನ 03:33 ಕ್ಕೆ ಆರಂಭವಾಗುತ್ತದೆ. ಫೆ. 24ರಂದು ಸಂಜೆ 05:59 ಕ್ಕೆ ಹುಣ್ಣಿಮೆ ತಿಥಿ ಕೊನೆಗೊಳ್ಳುತ್ತದೆ. ಈ ದಿನದ ಮಹತ್ವ, ಪೂಜಾ ಆಚರಣೆಗಳ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ದಿನವನ್ನು ಮಾಘಿ ಪೂರ್ಣಿಮಾ ಎಂದೂ ಕೂಡ ಕರೆಯಲಾಗುತ್ತದೆ. ಹುಣ್ಣಿಮೆಯ ಶುಭ ದಿನದಂದು ವಿಷ್ಣು ಮತ್ತು ಚಂದ್ರ ದೇವರಿಗೆ ಪ್ರಾರ್ಥನೆ ಸಲ್ಲಿಸುವುದು ರೂಡಿ. ಹಾಗಾಗಿಯೇ ಈ ದಿನವು ಹಿಂದೂಗಳಲ್ಲಿ ಹೆಚ್ಚಿನ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದ್ದು, ಜನರು ವಿವಿಧ ರೀತಿಯ ಧಾರ್ಮಿಕ ಚಟುವಟಿಕೆಗಳಲ್ಲಿಯೂ ಕೂಡ ತೊಡಗಿಕೊಳ್ಳುತ್ತಾರೆ. ಈ ದಿನ ವಿವಿಧ ರೀತಿಯ ಪೂಜಾ ಆಚರಣೆಗಳನ್ನು ಮಾಡುವ ಮೂಲಕ ವ್ರತವನ್ನು ಆಚರಿಸುತ್ತಾರೆ.
ಭಕ್ತರು ಈ ದಿನ ಉಪವಾಸವನ್ನು ಆಚರಿಸುವ ಮೂಲಕ ಭಗವಾನ್ ಸತ್ಯನಾರಾಯಣನಿಗೆ ತಮ್ಮ ಇಚ್ಛೆಯನ್ನು ಪ್ರಾರ್ಥನೆಯ ಮೂಲಕ ಸಲ್ಲಿಸುತ್ತಾರೆ. ಇನ್ನು ಸತ್ಯನಾರಾಯಣ ಪೂಜೆಯನ್ನು ಪುರೋಹಿತರ ಮೂಲಕ ಅಥವಾ ಈ ಬಗ್ಗೆ ತಿಳಿದಿದ್ದವರು ಸ್ವತಃ ಅವರೇ ಮಾಡಿಕೊಳ್ಳಬಹುದು, ಬಳಿಕ ಸತ್ಯ ಸಾಯನಾರಾಯಣ ಕಥೆಯನ್ನು ಪಠಿಸುವ ಮೂಲಕ ಪಂಚಾಮೃತ ಮತ್ತು ನೈವೇದ್ಯವನ್ನು ದೇವರಿಗೆ ಅರ್ಪಿಸಿ, ಪೂಜಾ ಆಚರಣೆಗಳು ಮತ್ತು ಆರತಿಯನ್ನು ಪೂರ್ಣಗೊಳಿಸಿದ ನಂತರ, ಕುಟುಂಬ ಸದಸ್ಯರಿಗೆ ಪ್ರಸಾದವನ್ನು ವಿತರಿಸಿ ಮತ್ತು ಸಾತ್ವಿಕ ಆಹಾರವನ್ನು ಸೇವಿಸುವ ಮೂಲಕ ಉಪವಾಸವನ್ನು ಅಂತ್ಯಗೊಳಿಸಬೇಕು. ಈ ದಿನದ ಇನ್ನಷ್ಟು ಆಚರಣೆಗಳು ಇಲ್ಲಿವೆ.
-ಈ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡಲು ಭಕ್ತರು ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಆದರೆ ಅದು ಸಾಧ್ಯವಾಗದವರು, ಮನೆಯಲ್ಲಿ ಸ್ನಾನ ಮಾಡುವ ನೀರಿಗೆ ಗಂಗಾ ಜಲವನ್ನು ಸಿಂಪಡಿಸಿಕೊಳ್ಳಿ.
-ಮಾಘ ಹುಣ್ಣಿಮೆಯಂದು ಭಕ್ತರು ಶಿವ ಮತ್ತು ಪಾರ್ವತಿ, ರಾಧಾ ಕೃಷ್ಣ ಮತ್ತು ವಿಷ್ಣು ಹಾಗೂ ಲಕ್ಷ್ಮೀ ದೇವಿಗೆ ಸಮರ್ಪಿತವಾದ ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತಾರೆ ಜೊತೆಗೆ ದೇವಿಗೆ ಹೂವು, ಸಿಹಿತಿಂಡಿಗಳನ್ನು ಅರ್ಪಿಸುತ್ತಾರೆ. ಏಕೆಂದರೆ ಇದು ಶುಭ ಫಲಗಳನ್ನು ನೀಡುತ್ತದೆ.
-ಈ ದಿನ ಬಡವರು ಮತ್ತು ನಿರ್ಗತಿಕರಿಗೆ ಆಹಾರವನ್ನು ನೀಡುವ ಮೂಲಕ ಕೈಲಾದಷ್ಟು ಹಣವನ್ನು ದಾನ ಮಾಡಿ. ಜೊತೆಗೆ ಈ ದಿನ ಬ್ರಾಹ್ಮಣರಿಗೆ ಆಹಾರ, ಬಟ್ಟೆ ಮತ್ತು ದಕ್ಷಿಣೆ ನೀಡಲು ಶುಭವೆಂದು ಪರಿಗಣಿಸಲಾಗಿದೆ.
ಇದನ್ನೂ ಓದಿ: 1,200 ವರ್ಷಗಳಷ್ಟು ಹಳೆಯದಾದ ಈ ದೇವಾಲಯವನ್ನು ಒಂದೇ ಬಂಡೆಯಿಂದ ಕೆತ್ತಲಾಗಿದೆ
ಇನ್ನು ಈ ದಿನ, ಪ್ರಯಾಗ್ ರಾಜ್ ನಲ್ಲಿ ಮಾಘ ಮೇಳವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಸಂಗಮದಲ್ಲಿ (ಗಂಗಾ, ಸರಸ್ವತಿ ಮತ್ತು ಯಮುನಾ) ಪವಿತ್ರ ಸ್ನಾನ ಮಾಡಲು ಮತ್ತು ಶಿವನಿಗೆ ಪ್ರಾರ್ಥನೆ ಸಲ್ಲಿಸಲು ದೇಶದಾದ್ಯಂತ ಹೆಚ್ಚಿನ ಸಂಖ್ಯೆಯ ಭಕ್ತರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಜೊತೆಗೆ ಸಂಜೆ ಸಮಯದಲ್ಲಿ ದೀಪವನ್ನು ಹಚ್ಚಿ ಅದನ್ನು ಹರಿಯುವ ನೀರಿನಲ್ಲಿ ಬಿಡುತ್ತಾರೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ