ನಮ್ಮ ದೇಶ ಭಾರತ ಅದೇಷ್ಟು ಆಚಾರ ವಿಚಾರ, ಹಬ್ಬಗಳಿಗೆ ಹೆಸರುವಾಸಿ. ಭಾರತದಲ್ಲಿ ಆಚರಿಸುವ ಹಬ್ಬಗಳಲ್ಲಿ ಅದರಲ್ಲೂ ಶಿವ ಭಕ್ತರ ಪಾಲಿನ ವಿಶೇಷವಾದ ಹಬ್ಬ ಮಹಾಶಿವರಾತ್ರಿ(Mahashivratri). ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವ ಸೃಷ್ಟಿಯ ಪರಿವರ್ತನೆಯ ಜವಾಬ್ದಾರಿಯನ್ನು ಹೊಂದಿರುವ ಮಹಾದೇವನು ಶಾಂತ ರೂಪದಲ್ಲಿ ವೈರಾಗ್ಯ ಜೀವನ ಮತ್ತು ಸಾಂಸಾರಿಕ ಜೀವನ ಹಾಗೆಯೇ ರೌದ್ರ ರೂಪದಲ್ಲಿ ದುಷ್ಟರನ್ನು ಸಂಹರಿಸುವ ವಿವಿಧ ರೂಪಗಳನ್ನು ಮಹಾಕಾಲನಲ್ಲಿ ನೋಡಬಹುದು. ಆದಿಯೋಗಿ, ನಟರಾಜ ಎಂಬ ಹೆಸರನ್ನು ಪಡೆದ ಶಿವನು ಯೋಗ, ಧ್ಯಾನ ಕಲೆಗೆ ಹೆಸರುವಾಸಿಯಾಗಿರುವನು. ಕೊರಳಲ್ಲಿ ಹಾವು, ಕೇಶದಲ್ಲಿ ಅರ್ಧಚಂದ್ರ ಮತ್ತು ಗಂಗೆ ಹಾಗೆಯೇ ಹಣೆಯಲ್ಲಿ ಮೂರನೇ ಕಣ್ಣು, ಕೈಯಲ್ಲಿ ತ್ರಿಶೂಲ ಮತ್ತು ಡಮರುಗವನ್ನು ಹೊಂದಿರುವ ಭೋಲೆನಾಥನನ್ನು ಹೆಚ್ಚಾಗಿ ಲಿಂಗದ ರೂಪದಲ್ಲಿ ಪೂಜಿಸುತ್ತಾರೆ.
ಮಾಘ ಮಾಸ ಕೃಷ್ಣ ಪಕ್ಷದ ಚತುದ೯ಶಿಯಂದು ಆಚರಿಸುವ ಶಿವರಾತ್ರಿಯು ಶಿವ ಭಕ್ತರ ಪಾಲಿಗೆ ಶುಭಕರವಾದ ಶುಭದಿನ. ಶಿವರಾತ್ರಿಯಂದು ಹೆಚ್ಚಾಗಿ ಎಲ್ಲಾ ಕಡೆಗಳಲ್ಲಿಯೂ ಶಂಕರನಿಗೆ ಪ್ರಿಯವಾದ ಬಿಲ್ವ ಪತ್ರೆಯನ್ನು ಅರ್ಪಿಸಿ ತುಳಸಿಯಿಂದ ಅಲಂಕಾರ ಮಾಡಿ ಚಂದ್ರನ ಬೆಳಕಿನಲ್ಲಿ ಶಿವನಿಗೆ ಅಭಿಷೇಕ ಮಾಡಿ ತಮ್ಮ ಪಾಪಗಳೆಲ್ಲ ದೂರವಾಗಲಿ ಎಂದು ಭಕ್ತಿಯಿಂದ ಪೂಜಿಸುತ್ತಾರೆ.
ಇದನ್ನೂ ಓದಿ: ಶಿವನನ್ನು ಸುಲಭವಾಗಿ ಮೆಚ್ಚಿಸಲು ಈ ನೈವೇದ್ಯಗಳನ್ನು ಅರ್ಪಿಸಿ
ಹಿಮಾವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡಿ ಶಿವನಾಮ ಪಠಿಸುತ್ತಾ ತಪಸ್ಸು ಮಾಡಿ ಕೈಲಾಸವಾಸಿಯಾದ ಶಿವನನ್ನು ವಿವಾಹವಾದಳು ಎಂಬ ಪ್ರತೀತಿ ಇದೆ. ದೇವಲೋಕದಲ್ಲಿ ಬ್ರಹ್ಮ ಹಾಗೂ ವಿಷ್ಣುವಿನ ನಡುವೆ ಯಾರು ಶ್ರೇಷ್ಠರು ಎಂದು ನಡೆಯುತ್ತಿತ್ತು. ಅವರನ್ನು ಸಮಾಧಾನ ಮಾಡಲು ಆಗದಿದ್ದಾಗ ದೇವತೆಗಳು ಪರಶಿವನ ಬಳಿ ಹೇಳುತ್ತಾರೆ. ಆಗ ಶಿವನು ಬ್ರಹ್ಮ ಹಾಗೂ ವಿಷ್ಣುವಿನ ನಡುವೆ ಅಗ್ನಿಕುಂಭದ ರೂಪದಲ್ಲಿ ಬಂದು ತನ್ನ ಮೂಲವನ್ನು ಹುಡುಕಲು ಹೇಳುತ್ತಾನೆ. ಹಂಸದ ರೂಪ ತಾಳಿದ ಬ್ರಹ್ಮ, ಅಗ್ನಿಕುಂಭದ ಶಿರವನ್ನು ಹುಡುಕಲು ಮೇಲ್ಮುಖವಾಗಿ ಹೊರಡುತ್ತಾನೆ. ಹಾಗೆಯೇ ವಿಷ್ಣು ವರಹವತಾರ ತಾಳಿ ಕುಂಭದ ತಳವನ್ನು ನೋಡಲು ಪಾತಾಳಕ್ಕೆ ಹೋಗುತ್ತಾನೆ. ಅನಂತವಾಗಿರುವ ಶಿವನ ಶಕ್ತಿಯನ್ನು ನೋಡಿದ ವಿಷ್ಣು ಹಾಗೂ ಬ್ರಹ್ಮರಿಗೆ ಸತ್ಯದ ಅರಿವಾಗುತ್ತದೆ. ಆದರೆ, ಶಿವನ ಜಡೆಯಿಂದ ಕೆಳಗೆ ಬೀಳುತ್ತಿದ್ದ ಕೇತಕೀ ಪುಷ್ಪದ ಬಳಿ ಬ್ರಹ್ಮನು ನೀನು ಎಲ್ಲಿಂದ ಬೀಳುತ್ತಿದ್ದೀಯ ಎಂದು ಕೇಳುತ್ತಾನೆ. ಪುಷ್ಪವೂ ನಾನು ಅಗ್ನಿಕುಂಭದ ಮೇಲಿನಿಂದ ಬೀಳುತ್ತಿದ್ದೇನೆ ಎಂದು ಹೇಳುತ್ತದೆ. ಅಗ್ನಿ ಕಂಭದ ಶಿರದ ಭಾಗವನ್ನು ನೋಡಿದೆ ಎಂದು ಬ್ರಹ್ಮ ಶಿವನಿಗೆ ತಿಳಿಸುತ್ತಾನೆ. ಅವರ ಮೋಸವನ್ನು ಅರಿತ ಶಿವ, ಬ್ರಹ್ಮನನ್ನು ಯಾರು ಪೂಜಿಸಕೂಡದು ಎಂದು ಶಾಪ ನೀಡಿ ಲಿಂಗ ರೂಪವಾಗಿ ಪರಿವರ್ತನೆಗೊಳ್ಳುತ್ತಾನೆ . ಅಂದು ಮಘಮಾಸದ ಚತುರ್ಥಿ ಆಗಿರುತ್ತದೆ ಹಾಗಾಗಿ ಶಿವಲಿಂಗ ರೂಪ ತಾಳಿದ ಮಾಘ ಮಾಸದ ಚತುರ್ಥಿ ಎಂದು ಶಿವರಾತ್ರಿ ಎಂದು ಆಚರಿಸಲಾಗುತ್ತದೆ ಎಂಬ ಪ್ರತೀತಿ ಇದೆ.
ಸುರರು ಮತ್ತು ಅಸುರರ ನಡುವೆ ಸಮುದ್ರ ಮಂಥನ ನಡೆದ ಸಂದರ್ಭದಲ್ಲಿ ವಿಷ ಉದ್ಭವವಾದಗ ಅದನ್ನು ಶಿವನು ಕುಡಿದನು. ವಿಷ ಗಂಟಲಿನಿಂದ ಇಳಿಯದಂತೆ ಪಾರ್ವತಿಯು ಇಡೀ ರಾತ್ರಿ ಅದನ್ನು ತಡೆದಳು ಎಂದು ಶಿವಪುರಣ ಹೇಳುತ್ತದೆ.
ಬೇಟೆಗಾಗಿ ಹೊರಟ ಬೇಡನೊಬ್ಬ ದಿನವಿಡಿ ಅಲೆದಾಡಿದರು ಯಾವುದೇ ಬೇಟೆ ಸಿಗುವುದಿಲ್ಲ. ದಾರಿ ತಪ್ಪಿ ಕಾಡಿನಲ್ಲಿ ಅಲೆಯತೊಡಗಿದ. ಸಂಜೆಯಾಗಿದ್ದ ಕಾರಣ ಕ್ರೂರ ಪ್ರಾಣಿಗಳು ಬರತೊಡಗಿದವು. ಭಯಗೊಂಡ ಬೇಡ ಮರವೇರಿ ಶಿವಧ್ಯಾನ ಮಡುತ್ತಾ ಮರದ ಎಲೆಯನ್ನು ಕೆಳಗೆ ಹಾಕ ತೊಡಗಿದ. ಆತ ಹಾಕಿದ ಎಲೆಗಳು ಕೆಳಗೆಯೇ ಇದ್ದ ಶಿವಲಿಂಗದ ಮೇಲೆ ಬೀಳುತಿತ್ತು. ಕಾಕತಾಳೀಯ ಅಂದ್ರೆ, ಆ ಮರ ಶಿವನಿಗೆ ಪ್ರಿಯವಾದ ಬಿಲ್ವ ಮರದ ಎಲೆಗಳಾಗಿದ್ದವು. ರಾತ್ರಿಯಿಡಿ ಜಾಗರಣೆಯಿದ್ದು ಅರ್ಪಿಸಿದ ಬೇಡನನ್ನು ಶಿವ ಅಭಯ ನೀಡಿ ರಕ್ಷಿಸಿದ ಎಂಬ ಕಥೆಯು ಇದೆ.
ಶಿವರಾತ್ರಿಯ ವಿಶೇಷ ಅಂದ್ರೆ ಅದು ಶಿವನಿಗೆ ರಾತ್ರಿ ಹೊತ್ತು ಪೂಜೆ ಭಜನೆಯನ್ನು ಮಾಡಿ ಆರಾಧಿಸುತ್ತಾರೆ ಯಾಕೆಂದ್ರೆ ಕತ್ತಲು ಅಂದ್ರೆ ಅಜ್ಞಾನ, ಅಜ್ಞಾನವನ್ನು ಕಳೆದು ಸುಜ್ಞಾನವನ್ನು ನೀಡು ಎಂದು ಶಿವನನ್ನು ಬೇಡುವ ಶುಭದಿನ ಶಿವರಾತ್ರಿ. ಈ ಮಹಾಶಿವರಾತ್ರಿಯು ಎಲ್ಲರಿಗೂ ಶಂಭೋ ಶಂಕರನು ಸಂಮಂಗಳಾವನ್ನು ಕರುಣಿಸಲಿ ಎಲ್ಲರಿಗೂ ಮಹಾಶಿವರಾತ್ರಿಯ ಶುಭಾಶಯಗಳು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:05 pm, Fri, 8 March 24