Makar Sankranti 2023: ಜಗತ್ತನ್ನು ಬೆಳಗುವ ಸೂರ್ಯ ತನ್ನ ಪಥ ಬದಲಿಸುವ ಈ ಸುಸಮಯಕ್ಕಿದೆ ವಿಶೇಷ ಮಹತ್ವ, ಶಿವ ಪಾರ್ವತಿಯನ್ನು ವರಿಸಿದ್ದು ಇದೇ ಸಮಯದಲ್ಲಿ

| Updated By: ಆಯೇಷಾ ಬಾನು

Updated on: Jan 15, 2023 | 6:10 AM

ಪುರಾಣಗಳ ಪ್ರಕಾರ ಈ ಮಾಸದಲ್ಲಿ ಏಳು ಅಶ್ವಗಳ ರಥದಲ್ಲಿ ಸಂಚರಿಸುವ ಸೂರ್ಯ ದೇವನು ವೇಗವಾಗಿ ಸಂಚರಿಸ್ತಾನೆ. ಒಂದೊಂದೇ ರಾಶಿಯನ್ನು ದಾಟುತ್ತಾ ಸೂರ್ಯ ಮಕರ ರಾಶಿಗೆ ಬಂದಾಗ ಉತ್ತರಾಯಣ ಆರಂಭವಾಗುತ್ತೆ.

Makar Sankranti 2023: ಜಗತ್ತನ್ನು ಬೆಳಗುವ ಸೂರ್ಯ ತನ್ನ ಪಥ ಬದಲಿಸುವ ಈ ಸುಸಮಯಕ್ಕಿದೆ ವಿಶೇಷ ಮಹತ್ವ, ಶಿವ ಪಾರ್ವತಿಯನ್ನು ವರಿಸಿದ್ದು ಇದೇ ಸಮಯದಲ್ಲಿ
ಸಾಂದರ್ಭಿಕ ಚಿತ್ರ
Follow us on

ಸುಗ್ಗಿಯ ಹಿಗ್ಗನ್ನು ಹೆಚ್ಚಿಸೋ ಸಂಕ್ರಾಂತಿ ಹಬ್ಬ(Makar Sankranti) ಸಡಗರ ಸಂಭ್ರಮವನ್ನ ಹೊತ್ತು ತಂದಿದೆ. ಜಗತ್ತನ್ನು ಬೆಳಗುವ ಸೂರ್ಯ ತನ್ನ ಪಥ ಬದಲಿಸುವ ಈ ಸುಸಮಯವನ್ನು ಉತ್ತರಾಯಣ ಪರ್ವಕಾಲ ಎನ್ನಲಾಗುತ್ತೆ. ಮಕರ ಸಂಕ್ರಾಂತಿಯ ದಿನದಂದು ಸೂರ್ಯನು ಧನು ರಾಶಿಯನ್ನು ತೊರೆದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಹೀಗಾಗಿ ಇದಕ್ಕೆ ಮಕರ ಸಂಕ್ರಾಂತಿ ಎನ್ನಲಾಗುತ್ತೆ. ಪುರಾಣಗಳಲ್ಲಿ, ಮಕರ ಸಂಕ್ರಾಂತಿಯನ್ನು ದೇವತೆಗಳ ದಿನವೆಂದು ವಿವರಿಸಲಾಗಿದೆ. ಮಕರ ಸಂಕ್ರಾಂತಿಯ ದಿನದಂದು ಸೂರ್ಯನನ್ನು ಪೂಜಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಮಕರ ಸಂಕ್ರಾಂತಿಯು ಚಳಿಗಾಲದ ಅಂತ್ಯ ಮತ್ತು ವಸಂತಕಾಲದ ಆರಂಭವನ್ನು ಸೂಚಿಸುತ್ತದೆ. ಈ ಬಾರಿಯ ಮಕರ ಸಂಕ್ರಾಂತಿಯನ್ನು ಭಾನುವಾರ, ಜನವರಿ 15, 2023 ರಂದು ಆಚರಿಸಲಾಗುತ್ತದೆ.

ವರ್ಷವಿಡೀ ಧನ ಧಾನ್ಯ ಅಭಿವೃದ್ಧಿಯಾಗುವಂತೆ ಮಾಡಿದ ಸೂರ್ಯನಿಗೆ, ಭೂಮಿಗೆ, ವ್ಯವಸಾಯದಲ್ಲಿ ಸಹಾಯ ಮಾಡಿದ ರಾಸುಗಳಿಗೆ ಸಂಕ್ರಾಂತಿ ಹಬ್ಬದಂದು ಗೌರವ ಸೂಚಿಸಲಾಗುತ್ತೆ, ಕಣಗಳಿಗೆ ಪೂಜೆ ನಡೆಯುತ್ತೆ. ದವಸ ಧಾನ್ಯ ಬೆಳೆಯಲು ಸಹಾಯಕವಾದ ದನಕರುಗಳಿಗೆ ರೈತ ಈ ದಿನ ಕೃತಜ್ಞತೆ ಸಲ್ಲಿಸ್ತಾನೆ. ಸಂಕ್ರಾಂತಿಯಂದು ದನಕರುಗಳನ್ನು ಸಿಂಗರಿಸಿ ಮೆರವಣಿಗೆ ಮಾಡಿ ಕಿಚ್ಚು ಹಾಯಿಸಿ ಸಂಭ್ರಮಿಸಲಾಗುತ್ತೆ.

ಇಂದು ಸೂರ್ಯ ಮಕರ ರಾಶಿಗೆ ಪ್ರವೇಶ

ವೇದಗ್ರಂಥಗಳ ಪ್ರಕಾರ ಈ ದಿನ ಸೂರ್ಯ ಮಕರ ರಾಶಿಯನ್ನು ಪ್ರವೇಶ ಮಾಡುತ್ತಾನೆ. ಮಕರ ಸಂಕ್ರಮಣ ಆರಂಭವಾಗಿ ಉತ್ತರಾಯಣ ಪುಣ್ಯಕಾಲ ಆರಂಭವಾಗುತ್ತೆ, ಆ ಮೂಲಕ ದೇವತೆಗಳ ಹಗಲು ಆರಂಭವಾಗುತ್ತೆ. ಸ್ವರ್ಗದ ಬಾಗಿಲು ತೆರೆಯುತ್ತೆ.

ಇದನ್ನೂ ಓದಿ: Makar Sankranti 2023: ಮಕರ ಸಂಕ್ರಾಂತಿಗೆ ನೀವು ಭೇಟಿ ನೀಡಬಹುದಾದ ಪ್ರದೇಶಗಳಿವು

ಸಂಕ್ರಾಂತಿ ಹಬ್ಬದಂದು ಅನುಸರಿಸಬೇಕಾದ ವಿಧಿವಿಧಾನಗಳೇನು?

ಸಂಕ್ರಮಣದ ಬೆಳಗ್ಗೆ ನಸುಗತ್ತಲಲ್ಲಿ ಎದ್ದು ಸ್ನಾನ ಮಾಡಬೇಕು, ಹೊಸ ಬಟ್ಟೆ ಧರಿಸಿ, ಮನೆ ಮುಂದೆ ಬಣ್ಣಬಣ್ಣದ ರಂಗವಲ್ಲಿ ಹಾಕಬೇಕು. ರಂಗವಲ್ಲಿಯ ಸುತ್ತ ಹೂವಿನ ಅಲಂಕಾರ ಮಾಡಿ, ಸಗಣಿಯಲ್ಲಿ ಉಂಡೆ ಮಾಡಿ ರಂಗೋಲಿಯ ಮೇಲಿಟ್ಟು ಪೂಜಿಸಬೇಕು. ಸಗಣಿಯಲ್ಲಿ ಮಾಡಿದ ಉಂಡೆಯನ್ನು ಭೂದೇವಿ, ಲಕ್ಷ್ಮೀದೇವಿ, ಗೋದಾದೇವಿಯಾಗಿ ಭಾವಿಸಿ ಪೂಜೆ ಮಾಡಬೇಕು.

ಎಳ್ಳು-ಬೆಲ್ಲ ಹಂಚುವ ಹಿಂದಿದೆ ವೈಜ್ಞಾನಿಕ ಕಾರಣ

ಸಂಕ್ರಾಂತಿ ಹಬ್ಬ ಅಂದ್ರೆ ಎಳ್ಳು-ಬೆಲ್ಲ ಇರಲೇಬೇಕು. ಹೆಣ್ಣುಮಕ್ಕಳು ಸಂಭ್ರಮದಿಂದ ಮನೆ ಮನೆಗೆ ಹೋಗಿ ಎಳ್ಳು-ಬೆಲ್ಲ ಬೀರಲಿಲ್ಲ ಅಂದ್ರೆ ಅದು ಹಬ್ಬವೇ ಅಲ್ಲ. ಸಂಕ್ರಾಂತಿಯಂದು ಸಾಂಪ್ರದಾಯಿಕ ಉಡುಗೆ ತೊಟ್ಟು, ತಟ್ಟೆಯಲ್ಲಿ ಎಳ್ಳು-ಬೆಲ್ಲ, ಕಬ್ಬು, ಅರಿಶಿನ-ಕುಂಕುಮ ಇಟ್ಟುಕೊಂಡು ಮನೆ ಮನೆಗೆ ತೆರಳಿ ಎಳ್ಳು-ಬೆಲ್ಲ ಹಂಚೋದೇ ಒಂದು ಸಂಭ್ರಮ. ಈ ಸಂಭ್ರಮಾಚರಣೆ ಯುಗಯುಗಗಳಿಂದ ನಡೆದುಕೊಂಡು ಬಂದಿದೆ.

ಸಂಕ್ರಾಂತಿ ಹಬ್ಬದ ವೇಳೆ ಎಳ್ಳು-ಬೆಲ್ಲ ಹಂಚುವ ಹಾಗೂ ಸೇವಿಸುವ ಹಿಂದೆ ವೈಜ್ಞಾನಿಕ ಕಾರಣವಿದೆ. ಚಳಿಗಾಲದಲ್ಲಿ ಬರೋ ಸಂಕ್ರಾಂತಿ ವೇಳೆ ಚರ್ಮ ಒಣಗಿದಂತಿರುತ್ತೆ. ಕೆಮ್ಮು, ಶೀತವಾಗುತ್ತೆ. ಈ ಎಲ್ಲಾ ಸಮಸ್ಯೆಗೆ ಎಳ್ಳು-ಬೆಲ್ಲ ರಾಮಬಾಣವಾಗಿ ಕೆಲಸ ಮಾಡುತ್ತೆ.

ಮಕರ ಸಂಕ್ರಮಣದ ನಂತರ ಋತು ಬದಲಾಗಿ ಚಳಿಗಾಲ ಆರಂಭವಾಗುತ್ತೆ. ಚಳಿಗಾಲದಲ್ಲಿ ನಮ್ಮ ಶರೀರ ಕಡಿಮೆ ಕೊಬ್ಬಿನಾಂಶವನ್ನು ಉತ್ತೇಜಿಸುತ್ತೆ. ಈ ಸಂದರ್ಭದಲ್ಲಿ ಎಳ್ಳು ಸೇವನೆ ಮಾಡೋದ್ರಿಂದ ನಮ್ಮ ದೇಹಕ್ಕೆ ಬೇಕಾದ ಕೊಬ್ಬಿನಾಂಶ, ಪೋಷಕಾಂಶಗಳು ದೊರೆಯುತ್ತವೆ, ಇನ್ನು ದೇಹದ ತಾಪಮಾನವನ್ನು ಸರಿಯಾದ ಸ್ಥಿತಿಯಲ್ಲಿ ಕಾಪಾಡಲು ಬೆಲ್ಲವು ಬಹಳಷ್ಟು ಮುಖ್ಯ ಪಾತ್ರವನ್ನು ವಹಿಸುತ್ತದೆ, ಈ ಚಲಿಗಾಲಕ್ಕೆ ಅನುಗುಣವಾಗಿ ಎಳ್ಳು-ಬೆಲ್ಲ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಸರಿಯಾದ ಸ್ಥಿತಿಗತಿಯನ್ನು ವಹಿಸುತ್ತದೆ.

ಸಂಕ್ರಾಂತಿ ಹಬ್ಬಕ್ಕಿದೆ ಪುರಾಣಗಳ ಹಿನ್ನೆಲೆ

ಪುರಾಣಗಳ ಪ್ರಕಾರ ಈ ಮಾಸದಲ್ಲಿ ಏಳು ಅಶ್ವಗಳ ರಥದಲ್ಲಿ ಸಂಚರಿಸುವ ಸೂರ್ಯ ದೇವನು ವೇಗವಾಗಿ ಸಂಚರಿಸ್ತಾನೆ. ಒಂದೊಂದೇ ರಾಶಿಯನ್ನು ದಾಟುತ್ತಾ ಸೂರ್ಯ ಮಕರ ರಾಶಿಗೆ ಬಂದಾಗ ಉತ್ತರಾಯಣ ಆರಂಭವಾಗುತ್ತೆ. ಇದನ್ನೇ ಉತ್ತರಾಯಣ ಪುಣ್ಯಕಾಲ ಅಥವ ಮಕರ ಸಂಕ್ರಮಣ ಅನ್ನುತ್ತಾರೆ. ಸೂರ್ಯ ಮಕರ ರಾಶಿ ಪ್ರವೇಶಿಸಿದ ನಂತರ ಅವನ ಪಥ ಉತ್ತರಾಭಿಮುಖವಾಗಿ ಚಲಿಸಲು ಆರಂಭವಾಗುತ್ತೆ. ಇದನ್ನೇ ಉತ್ತರಾಯಣ ಪರ್ವಕಾಲ ಎನ್ನಲಾಗುತ್ತೆ. ಈ ಉತ್ತರಾಯಣ ಪರ್ವಕಾಲ ಅತ್ಯಂತ ಪುಣ್ಯಕರ ಅನ್ನೋದನ್ನ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನೇ ಹೇಳಿದ್ದಾನೆ.

ಇದನ್ನೂ ಓದಿ: Makar Sankranti 2023: ಮಕರ ಸಂಕ್ರಾಂತಿ, ಯಾವ ರಾಜ್ಯಗಳಲ್ಲಿ ಯಾವ ರೀತಿ ಆಚರಿಸಲಾಗುತ್ತದೆ? ಮಾಹಿತಿ ಇಲ್ಲಿದೆ

ಉತ್ತರಾಯಣದ 6 ತಿಂಗಳುಗಳು ದೇವತೆಗಳಿಗೆ 1 ಹಗಲಿದ್ದಂತೆ. ಉತ್ತರಾಯಣದಲ್ಲಿ ಎಲ್ಲಾ ದೇವತೆಗಳು ಎಚ್ಚರದಿಂದಿರ್ತಾರೆ. ಇಂತಹ ಪರ್ವಕಾಲದಲ್ಲಿ ಸ್ವರ್ಗದ ಬಾಗಿಲು ತೆರೆಯುತ್ತೆ ಅಂತ ಪುರಾಣಗಳಲ್ಲಿ ಉಲ್ಲೇಖವಿದೆ.

ಮಕರ ರಾಶಿಯಲ್ಲೇ ವಿಷ್ಣು ನಕ್ಷತ್ರವಾದ ಶ್ರವಣ ನಕ್ಷತ್ರವಿದೆ. ಅದಕ್ಕಾಗಿ ಮಕರ ರಾಶಿಯನ್ನು ವಿಷ್ಣು ನಕ್ಷತ್ರ ಎನ್ನಲಾಗುತ್ತೆ. ಶ್ರೀಮನ್ನಾರಾಯಣ ಅನಂತಪದ್ಮನಾಭನ ಅವತಾರ ಧಾರಣೆ ಮಾಡಿದ್ದು ಇದೇ ನಕ್ಷತ್ರದಲ್ಲಿ. ಇದೇ ಉತ್ತರಾಯಣದಲ್ಲಿ ಅಂತ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.

ಜಗತ್ತಿನ ಸೃಷ್ಟಿಕರ್ತ ಬ್ರಹ್ಮದೇವ, ಇದೇ ಉತ್ತರಾಯಣ ಪುಣ್ಯಕಾಲದಲ್ಲಿ ಬ್ರಹ್ಮ ಇಡೀ ಬ್ರಹ್ಮಾಂಡದ ಸೃಷ್ಟಿ ಕಾರ್ಯ ಆರಂಭಿಸಿದ್ದ ಎನ್ನಲಾಗುತ್ತೆ. ಲಯಕಾರಕ ಶಿವ ಜ್ಞಾನದ ಪ್ರತೀಕ. ಓಂಕಾರ ಸ್ವರೂಪ. ನಾದ ರೂಪ, ಗೌರಿಗೆ ಅರ್ಧ ದೇಹವನ್ನು ನೀಡಿದ ಅರ್ಧನಾರೀಶ್ವರ. ಗಂಗೆಯನ್ನು ಶಿರದಲ್ಲಿ ಧರಿಸಿದ ಗಂಗಾಧರೇಶ್ವರ

ಪಾರ್ವತಿಯ ಪ್ರೇಮಕ್ಕೆ ಸೋತಿದ್ದ ಜಗದೊಡೆಯ ಪರಮೇಶ್ವರ

ತನ್ನ ಪತಿ ಶಿವನಿಗೆ ಆದ ಅವಮಾನ ಸಹಿಸದ ಸತಿದೇವಿ ತನ್ನ ತಂದೆ ದಕ್ಷಪ್ರಜಾಪತಿಯ ಯಜ್ಞಕುಂಡದಲ್ಲಿ ಹಾರಿ ಆತ್ಮಹುತಿ ಮಾಡಿಕೊಳ್ತಾಳೆ. ಮುಂದೆ ಪರ್ವತರಾಜನ ಮಗಳಾಗಿ ಪಾರ್ವತಿಯಾಗಿ ಹುಟ್ಟುತ್ತಾಳೆ. ಶಿವನನ್ನೇ ಪತಿಯಾಗಿ ಪಡೆಯಲು ಕಠಿಣ ತಪಸ್ಸನ್ನು ಆಚರಿಸ್ತಾಳೆ.

ಪಾರ್ವತಿಯ ಅದಮ್ಯ ಪ್ರೀತಿ ಮತ್ತು ಅವಳ ತಪಸ್ಸಿಗೆ ಪರಮೇಶ್ವರ ಒಲಿಯುತ್ತಾನೆ. ಹಿಮವಂತ ಮತ್ತು ಶಿವಗಣಗಳ ನೇತೃತ್ವದಲ್ಲಿ ಶಿವ ಪಾರ್ವತಿಯನ್ನು ಮದುವೆಯಾಗ್ತಾನೆ. ಹೀಗೇ ಶಿವ ಪಾರ್ವತಿಯರ ವಿವಾಹ ನಡೆದಿದ್ದು ಇದೇ ಉತ್ತರಾಯಣ ಪುಣ್ಯಕಾಲದಲ್ಲಿ ಎಂಬ ಉಲ್ಲೇಖ ಪುರಾಣಗಳಲ್ಲಿ ಸಿಗುತ್ತೆ. ಆದಿದಂಪತಿಯ ವಿವಾಹ ಸಮಾರಂಭ ಉತ್ತರಾಯಣದ ಮಹತ್ವವನ್ನ, ವಿಶೇಷತೆಯನ್ನ ಸಾರಿ ಸಾರಿ ಹೇಳುತ್ತೆ.

ಪುರಾಣಗಳ ಪ್ರಕಾರ, ತಿಲ ಅಂದ್ರೆ ಎಳ್ಳು ಅಂತ – ಆ ಎಳ್ಳು ವಿಷ್ಣುವಿನ ದೇಹದಿಂದ ಹುಟ್ಟಿದ್ದು ಎನ್ನಲಾಗುತ್ತೆ. ಹೀಗಾಗೇ ಸಂಕ್ರಾಂತಿಯಂದು ಎಳ್ಳು ದಾನ ಮಾಡಿದ್ರೆ ಮಹಾವಿಷ್ಣುವಿನ ಕೃಪೆಯಾಗುತ್ತೆಂದು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ .

ವೇದಗಳಲ್ಲೂ ಇದೆ ತಿಲ ಪದದ ಪ್ರಯೋಗ

ಎಳ್ಳಿಗೆ ಸಂಸ್ಕೃತದಲ್ಲಿ ತಿಲ, ಹೋಮ ಧಾನ್ಯ, ಪಾಪಜ್ಞ, ಪುತಧಾನ್ಯ, ಜಟಿಲ, ಪುಣ್ಯಾಹ ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುತ್ತೆ. ವೇದಗಳಲ್ಲಿ ಪೂರ್ವ, ಅಪರ ಕರ್ಮಗಳಲ್ಲಿ ತಿಲದ ಪ್ರಾಮುಖ್ಯತೆ ಬಗ್ಗೆ ಹೇಳಲಾಗಿದೆ. ಶ್ರಾದ್ಧ ಕಾರ್ಯಕ್ಕೆ ಎಳ್ಳು ಅನಿವಾರ್ಯ. ಎಳ್ಳಿನಿಂದ ಮಾಡೋ ಶ್ರಾದ್ಧ ಕಾರ್ಯ ಅತ್ಯಂತ ಶ್ರೇಷ್ಠ ಎನ್ನಲಾಗುತ್ತೆ. ಎಲ್ಲಾ ಪುರಾಣಗಳಲ್ಲಿ, ಧರ್ಮಶಾಸ್ತ್ರದಲ್ಲೂ ಎಳ್ಳಿನ ಮಹತ್ವದ ಬಗ್ಗೆ ಹಲವು ಉಲ್ಲೇಖಗಳಿವೆ.

ಆಧ್ಯಾತ್ಮಕ್ಕೆ ಸಂಬಂಧಪಟ್ಟ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ