Mangala Gowri Vratha: ಯಾಕೆ ಸ್ತ್ರೀಯರೇ ಮಂಗಳಗೌರೀ ವೃತ ಮಾಡಬೇಕು? ಬಯಸಿದ್ದನ್ನು ಪಡೆದುಕೊಳ್ಳಲು ಹೇಗೆ ಪೂಜೆ ಮಾಡಬೇಕು?

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 06, 2024 | 11:58 AM

ಮಂಗಳಗೌರೀ ವೃತ ಒಂದು ದಿನ ಮಾಡಿ ಮುಗಿಸುವ ಪೂಜೆಯ ಹಬ್ಬವಲ್ಲ; ತಿಂಗಳು, ವರ್ಷಗಳ ಕಾಲ ಮಾಡುವ ವ್ರತ‌ ಇದು. ಈ ವ್ರತವನ್ನು ವಿಶೇಷವಾಗಿ ಅವಿವಾಹಿತ ಕನ್ಯೆಯಯರು ಅಥವಾ ವಿವಾಹಿತ ಸ್ತ್ರೀಯರು ಮಾಡುವ ವ್ರತ.‌ ಪುರುಷರಿಗೆ ಈ ವ್ರತವನ್ನು ಹೇಳಿಲ್ಲ.

Mangala Gowri Vratha: ಯಾಕೆ ಸ್ತ್ರೀಯರೇ ಮಂಗಳಗೌರೀ ವೃತ ಮಾಡಬೇಕು? ಬಯಸಿದ್ದನ್ನು ಪಡೆದುಕೊಳ್ಳಲು ಹೇಗೆ ಪೂಜೆ ಮಾಡಬೇಕು?
ಸಾಂದರ್ಭಿಕ ಚಿತ್ರ
Follow us on

ಶ್ರಾವಣ ಮಾಸದ ಮಾಡುವ ವ್ರತ ಮಂಗಳ ಗೌರೀ ವ್ರತ. ವ್ರತವೆಂದರೆ ಯಾವುದೋ ಉದ್ದೇಶವನ್ನು ಇಟ್ಟುಕೊಂಡು ಮಾಡುವ ಕಾರ್ಯ. ಇದನ್ನು ಕಾಮ್ಯಕರ್ಮ ಎಂಬುದಾಗಿ ಹಿಂದಿನವರು ಕರೆದಿದ್ದಾರೆ. ನಿತ್ಯ, ನೈಮಿತ್ತಿಕ, ಕಾಮ್ಯ ಎಂಬುದಾಗಿ ಮೂರು ರೀತಿಯ ಕರ್ಮಗಳು ಪ್ರಸಿದ್ಧವಾಗಿವೆ. ಕಾಮ್ಯಕರ್ಮ ಎಂದರೆ ಬಯಸಿದ್ದನ್ನು ಪಡೆದುಕೊಳ್ಳಲು ಮಾಡುವ ಕರ್ಮ.

ಅವಿವಾಹಿತ ಕನ್ಯೆಯರು ಉತ್ತಮ ಕುಲದ, ಒಳ್ಳೆಯ ಪತಿ ಸಿಗಲಿ ಎನ್ನುವ ಕಾರಣಕ್ಕೆ ಮಾಡಿದರೆ, ವಿವಾಹಿತರು ಪತಿಯು ದೀರ್ಘಾಯುಷ್ಮಂತನಾಗಲಿ ಎಂಬುದಾಗಿದೆ ಅಥವಾ ದೀರ್ಘಸುಮಂಗಲಿಯಾಗಿ ಇರಬೇಕು ಎನ್ನುವುದೂ ಇನ್ಮೊಂದು ಮುಖ.

ಯಾರು ಮಾಡುತ್ತಾರೆ ಈ ವ್ರತವನ್ನು?

ಜಾತಕದಲ್ಲಿ ಕುಜನ ದೋಷವಿದ್ದರೆ ಅಥವಾ ಕುಜನಿಂದ ದೋಷವಿದ್ದು, ಪತಿಗೆ ಅನಾರೋಗ್ಯ, ಮರಣ ಇಂತಹವು ಬರುವ ಸಂಭವಿದ್ದರೆ ಸಾಮನ್ಯವಾಗಿ ಮಾಡುತ್ತಾರೆ. ಇದಾವುದೂ ಇಲ್ಲದೆಯೂ ಕೂಡ ಮಂಗಳಗೌರೀ ವ್ರತವನ್ನು ಮಾಡಬಹುದು. ಇದೇ ಕಾರಣವೇ ಬೇಕೆನ್ನುವುದು ಇಲ್ಲ.

ಯಾಕೆ ಸ್ತ್ರೀಯರೇ ಮಾಡಬೇಕು?

ಈ ವ್ರತವನ್ನು ಸ್ತ್ರೀಯರೇ ಯಾಕೆ ಮಾಡಬೇಕು? ಸ್ತ್ರೀಯರಿಗೆ ಮಾತ್ರ ಪತಿಯನ್ನು ಪಡೆಯುವ ಉಳಿಸಿಕೊಳ್ಳುವ ಹೊಣೆ ಮಾತ್ರವಾ? ಪುರುಷರಿಗೆ ಪತ್ನಿಯನ್ನು ಪಡೆಯುವ ಉಳಿಸಿಕೊಳ್ಳುವ ಅವಶ್ಯಕತೆ ಇಲ್ಲವೇ ಎಂಬ ಪ್ರಶ್ನೆಯೂ ಬರಬಹುದು. ಆದರೆ ಇದರ ಹಿಂದೆ ಒಂದು ಕಥೆ ಇದೆ.

ಮಹಾಗೌರೀ ಎಂದರೆ ಶಿವನ ಪತ್ನಿ. ಮಹಾಗೌರಿಯು ಮಹಾದೇವನನ್ನು ಪತಿಯಾಗಿ ಪಡೆದ ಕಾರಣಕ್ಕೆ ಈ ವ್ರತವು ಬಂದಿದೆ. ತನ್ನ ಪಿತನಾದ ದಕ್ಷನ ಯಜ್ಞಕುಂಡದಲ್ಲಿ ದೇಹವನ್ನು ತ್ಯಜಿಸಿ ಪರ್ವತ ರಾಜನ ಮಗಳಾಗಿ ಜನಿಸುತ್ತಾಳೆ. ಶಿವನೂ ಸತಿಯಿಲ್ಲದೇ ಬೇಸರದಿಂದ ಸಮಾಧಿಸ್ಥನಾಗುತ್ತಾನೆ. ಇದು ಒಂದು ಕಡೆಯಾದರೆ, ದೇವಲೋಕದಲ್ಲಿ ರಾಕ್ಷಸರಿಂದ ತೊಂದರೆ. ತಾರಕನು ಬ್ರಹ್ಮನ‌ ಕುರಿತು ತಪಸ್ಸು ಮಾಡಿ ಶಿವನಿಂದ ಜನಿಸುವ ಮಗನಿಂದ ತನ್ನ ಮರಣವಾಗಬೇಕು ಎಂದು ಧೈರ್ಯದಿಂದ ಕೇಳುತ್ತಾನೆ.

ಇದನ್ನೂ ಓದಿ: ಮಂಗಳ ಗೌರಿ ವ್ರತಾಚರಣೆ ಹಿಂದಿದೆ ಆಶ್ಚರ್ಯಕಾರಿ ಪೌರಾಣಿಕ-ಲೌಕಿಕ ಕತೆ! ಏನದು

ನಾರದರು ಶಿವನನ್ನು ತಪಸ್ಸಿನಿಂದ ಭಂಗ ಮಾಡಿ, ಪಾರ್ವತಿಯನ್ನು ವಿವಾಹ ಮಾಡಿಸಲು ಪ್ರಯತ್ನಿಸುತ್ತಾರೆ. ಹಾಗಾಗಿ ಪಾರ್ವತಿಗೆ ತಪಸ್ಸು ಮಾಡಲು ಹೇಳುತ್ತಾಳೆ.‌ ಆಕೆ ಕಠಿಣ ತಪಸ್ಸಿನಿಂದ, ಅನ್ನ, ಆಹಾರ ಎಲ್ಲವನ್ನೂ ಬಿಟ್ಟು ಶಿವನ ಧ್ಯಾನದಲ್ಲಿ ಮಗ್ನಳಾಗುತ್ತಾಳೆ. ಜಗದೇಕ ನಾಯಕನ್ನೇ ಪತಿಯನ್ನಾಗಿ ಪಡೆಯುತ್ತಾಳೆ. ಅದಕ್ಕಾಗಿ ಪುರುಷರಿಗೆ ಹೇಳಿಲ್ಲ, ಸ್ತ್ರೀಯರಿಗೆ ಹೇಳಿದ ವ್ರತವಾಗಿದೆ. ಆಕೆಯದ್ದೂ ವ್ರತವೇ. ಆ ತಪಸ್ಸಿಗೆ ಯೋಗ್ಯವಾದ ವ್ರತ ಮಹಾಗೌರೀ ವ್ರತ. ಮಹಾಗೌರಿಯನ್ನು ಆರಾಧಿಸಿ, ಅಕೆಯ ಅನುಗ್ರಹವನ್ನು ಪಡೆಯುವುದು.

ಸರ್ವಮಂಗಳ ಮಾಂಗಲ್ಯೇ

ಶಿವೇ ಸರ್ವಾರ್ಥಸಾಧಿಕೇ |

ಶರಣ್ಯೇ ತ್ರ್ಯಂಬಕೇ ಗೌರಿ

ನಾರಾಯಣಿ ನಮೋಸ್ತು ತೇ ||

ಎನ್ನುವ ಸ್ತ್ರೋತ್ರವನ್ನು ಶ್ರಾವಣ ಮಂಗಳವಾರ ಪಠಿಸಬೇಕು ಮತ್ತು ಒಂದು ಹೊತ್ತು ಮಾತ್ರ ಆಹಾರ ಸೇವನೆ. ಅದೂ ಶುದ್ಧವಾದ ಆಹಾರ. ಇದನ್ನು ಶ್ರಾವಣ ಮಾಸದ ನಾಲ್ಕು ಮಂಗಳವಾರವೂ ಮಾಡಬೇಕು. ಮಹಾಗೌರಿಗೆ ನೈವೇದ್ಯ ಮಾಡಿದ ದ್ರವ್ಯವನ್ನೇ ಪ್ರಸಾದವಾಗಿ ಸ್ವೀಕರಿಸುವುದು ಉತ್ತಮ.

-ಲೋಹಿತ ಹೆಬ್ಬಾರ್ – 8762924271

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ