Skandamata Avatar: ನವರಾತ್ರಿಯ ಐದನೇ ದಿನದ ಅವತಾರ.. ಜಗತ್ ಕಲ್ಯಾಣ ರೂಪಧಾರಣಿ ಸ್ಕಂದ ಮಾತಾ!

| Updated By: ಸಾಧು ಶ್ರೀನಾಥ್​

Updated on: Sep 30, 2022 | 6:06 AM

Navratri: ತಾರಕಾಸುರನು ಬ್ರಹ್ಮನ ವರಬಲದಿಂದ ಕೊಬ್ಬಿರುತ್ತಾನೆ. ಶಿವ ಪಾರ್ವತಿಯರ ಕಂದನಿಂದ ಮಾತ್ರವೇ ತನಗೆ ಮರಣ ಎಂದು ವರ ಪಡೆದಿರುತ್ತಾನೆ. ಹಾಗಾಗಲು ಸಾಧ್ಯವಿಲ್ಲ ಎಂಬುದು ಅವನ ಎಣಿಕೆ. ಆದರೆ ಪಾರ್ವತಿ-ಶಿವ ಮದುವೆಯಾದ ಬಳಿಕ, ಸ್ಕಂದ ಅಥವಾ ಷಣ್ಮುಖ ಜನ್ಮ ತಾಳುತ್ತಾನೆ. ಅದುವೇ ಸ್ಕಂದ ಮಾತಾ!

Skandamata Avatar: ನವರಾತ್ರಿಯ ಐದನೇ ದಿನದ ಅವತಾರ.. ಜಗತ್ ಕಲ್ಯಾಣ ರೂಪಧಾರಣಿ ಸ್ಕಂದ ಮಾತಾ!
ನವರಾತ್ರಿಯ ಐದನೇ ದಿನದ ಅವತಾರ.. ಜಗತ್ ಕಲ್ಯಾಣ ರೂಪಧಾರಣಿ ಸ್ಕಂದ ಮಾತಾ!
Follow us on

ಈ ಹಿಂದಿನ ಮೂರು ದಿನಗಳಲ್ಲಿ ಪಾರ್ವತೀ ದೇವಿಯ ಮೂರು ಅವತಾರಗಳನ್ನು ನೋಡಿದೆವು – ಹಿಮವಂತನ ಮಗಳಾದ ಶೈಲಪುತ್ರೀ, ನಂತರ ಶಿವನನ್ನು ಆರಾಧಿಸಿ ಪೂಜಿಸಿ ಮೆಚ್ಚಿಸುವ ಬ್ರಹ್ಮಚಾರಿಣೀ, ನಂತರ ಭಯಂಕರ ಸ್ವರೂಪದ ಶಿವನನ್ನು ಮದುವೆಯ ಮಂಟಪದಲ್ಲಿ ಅದೇ ಸ್ವರೂಪ ತಾಳಿ ಒಲಿಸಿಕೊಳ್ಳುವ ಚಂದ್ರಘಂಟಾ, ನಂತರ ರಾಕ್ಷಸರನ್ನು ನಾಶ ಮಾಡುವ ಸ್ವರೂಪದ ಕೂಷ್ಮಾಂಡಾ ದೇವಿ. ಐದನೇ ದಿನದಂದು ದೇವಿಯು ಸ್ಕಂದಮಾತೆಯಾಗಿ (Skandamata Avatar) ಕಾಣಿಸಿಕೊಳ್ಳುತ್ತಾಳೆ.

ವಾಸ್ತವಿಕವಾಗಿ ಇದು ಜಗತ್ ಕಲ್ಯಾಣ ರೂಪ. ತಾರಕಾಸುರನ ಉಪಟಳದಿಂದ ದೇವತೆಗಳು, ಭೂಮಿಯ ಜನರು ದುಃಖಪೀಡಿತರಾಗಿರುತ್ತಾರೆ. ತಾರಕಾಸುರನು ಬ್ರಹ್ಮನ ವರಬಲದಿಂದ ಕೊಬ್ಬಿರುತ್ತಾನೆ. ಶಿವ ಪಾರ್ವತಿಯರ ಕಂದನಿಂದ ಮಾತ್ರವೇ ತನಗೆ ಮರಣ ಎಂದು ಅವನು ವರ ಪಡೆದಿರುತ್ತಾನೆ. ಹಾಗಾಗಲು ಸಾಧ್ಯವಿಲ್ಲ ಎಂಬುದು ಅವನ ಎಣಿಕೆ. ಆದರೆ ಪಾರ್ವತಿ ಹಾಗೂ ಶಿವನ ಮದುವೆಯಾದ ಬಳಿಕ, ಸ್ಕಂದ ಅಥವಾ ಷಣ್ಮುಖನು ಜನ್ಮ ತಾಳುತ್ತಾನೆ.

ಷಣ್ಮುಖನನ್ನೇ ತಮ್ಮ ದೇವಸೈನ್ಯಕ್ಕೆ ದೇವತೆಗಳು ಸೇನಾನಿಗಳಾಗಿಸಿಕೊಳ್ಳುತ್ತಾರೆ. ದೇವಿಯೂ ಸೇರಿದಂತೆ ಸರ್ವರೂ ಈತನಿಗೆ ತಮ್ಮ ಶಕ್ತಿಗಳನ್ನು ನೀಡುತ್ತಾರೆ. ಸ್ಕಂದನು ದೇವಸೇನಾ ಸಮೇತನಾಗಿ ತೆರಳಿ, ತಾರಕಾಸುರನನ್ನು ಘೋರ ಯುದ್ಧದಲ್ಲಿ ಕೊಂದು ಮರಳುತ್ತಾನೆ. ಹೀಗೆ ಜಗತ್ಕಲ್ಯಾಣಕಾರಕನಾದ ಸ್ಪಂದನನ್ನು ಹೆತ್ತು ಕೊಟ್ಟ ಈಕೆ ಸ್ಕಂದಮಾತೆ ಎನಿಸಿಕೊಳ್ಳುತ್ತಾಳೆ.

ಮಗನಾದ ಸ್ಕಂದನನ್ನು ತೊಡೆಯ ಮೇಲೆ ಕುಳ್ಳರಿಸಿಕೊಂಡಿರುವ ದುರ್ಗಾದೇವಿಯ ಈ ಅವತಾರ ಅತ್ಯಂತ ಪವಿತ್ರ ಹಾಗೂ ಅದ್ಭುತ ರೂಪ ಎಂದು ಹೇಳಲಾಗುತ್ತದೆ. ಈ ರೂಪದಲ್ಲಿ ತಾಯಿಯು ಸಂತೋಷದಿಂದ ಹಾಗೂ ಹಿತಕರವಾದ ಭಾವನೆಯೊಂದಿಗೆ ಕಾಣಿಸಿಕೊಳ್ಳುತ್ತಾಳೆ. ದೇವಿಯನ್ನು ಆರಾಧಿಸುವ ಭಕ್ತರು ಮಾತೆಯ ಆಶೀರ್ವಾದ ಮಾತ್ರವಲ್ಲದೇ ಮಗನಾದ ಸ್ಕಂದನ ಆಶೀರ್ವಾದವನ್ನೂ ಪಡೆಯಬಹುದು. ಈ ಅವತಾರವನ್ನು ಪೂಜಿಸುವುದರಿಂದ ಭಕ್ತರು ಎಲ್ಲಾ ಕಷ್ಟಗಳಿಂದ ಮುಕ್ತರಾಗಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.

ಸ್ಕಂದ ಮಾತೆಯು ಬುಧಗ್ರಹದ ಮೇಲೆ ಅಧಿಪತ್ಯವನ್ನು ಹೊಂದಿರುತ್ತಾಳೆ. ಶುದ್ಧ ಮನಸ್ಸಿನಿಂದ, ಭಕ್ತಿಯಿಂದ ಯಾರು ಆರಾಧನೆ ಮಾಡುತ್ತರೋ ಅವರಿಗೆ ದೇವಿಯು ಹೆಸರು, ಸಂಪತ್ತು ಹಾಗೂ ಸಮೃದ್ಧಿಯನ್ನು ನೀಡುತ್ತಾಳೆ. ಜನ್ಮ ಕುಂಡಲಿಯಲ್ಲಿ ಬುಧನು ಪ್ರತಿಕೂಲ ಸ್ಥಾನದಲ್ಲಿದ್ದರೆ ಉಂಟಾಗುವ ತೊಂದರೆಯನ್ನು ದೇವಿಯು ನಿವಾರಿಸುತ್ತಾಳೆ.

ಸ್ಕಂದ ಮಾತೆಗೆ ನಾಲ್ಕು ಭುಜಗಳಿದ್ದು ಒಂದು ಕೈಯಲ್ಲಿ ಸ್ಕಂದನನ್ನು ಹಾಗೂ ಎರಡು ಕೈಯಲ್ಲಿ ಕಮಲವನ್ನು ಹಿಡಿದಿರುತ್ತಾಳೆ. ಇನ್ನೊಂದು ಹಸ್ತವು ಅಭಯ ಮುದ್ರೆಯಲ್ಲಿದ್ದು, ಸದಾ ತನ್ನ ಭಕ್ತರಿಗೆ ಆಶೀರ್ವಾದ ಮಾಡುತ್ತಾಳೆ. ಇವಳ ಶರೀರದ ಬಣ್ಣವೂ ಸಂಪೂರ್ಣವಾಗಿ ಬೆಳ್ಳಗಿದ್ದು, ಕಮಲದ ಆಸನದಲ್ಲಿ ವಿರಾಜಮಾನಳಾಗಿದ್ದಾಳೆ. ಈ ಕಾರಣಕ್ಕಾಗಿ ಇವಳನ್ನು ಪದ್ಮಾಸನಾ ದೇವಿ ಎಂದು ಕರೆಯುತ್ತಾರೆ. ಸಿಂಹವು ಸ್ಕಂದಮಾತೆಯ ವಾಹನವಾಗಿದೆ.

ಪೂಜಾ ವಿಧಿ

ಸ್ಕಂದ ಮಾತೆಗೆ ಕೆಂಪು ಬಣ್ಣದ ಹೂವು ವಿಶೇಷವಾಗಿ ಗುಲಾಬಿ ಹೂವು ಪ್ರಿಯವಾದುದು. ಸ್ಕಂದ ಮಾತೆ ಹಾಗೂ ಮಾತೆಯ ಪುತ್ರ ಸ್ಕಂದ ಆಶೀರ್ವಾದಕ್ಕೆ ವಿಶೇಷ ಪೂಜೆಯನ್ನು ಈ ದಿನ ಮಾಡಬೇಕು. ಷೋಡಶೋಪಚಾರ ಪೂಜೆಯ ನಂತರ ಆರತಿಯೊಂದಿಗೆ ಪೂಜೆಯನ್ನು ಮುಕ್ತಾಯಗೊಳಿಸಬೇಕು. ಜೀವನದ ಸದ್ಗತಿಗೆ ಹಾಗೂ ಆಧ್ಯಾತ್ಮಿಕ ಸಂತುಷ್ಟಿಗಾಗಿ ಈ ಅವತಾರಕ್ಕೆ ಆರಾಧನೆ ಮಾಡಲಾಗುವುದು.

ಸ್ಕಂದಮಾತೆಯ ಮಂತ್ರ

ಓಂ ದೇವಿ ಸ್ಕಂದಮಾತಾಯ ನಮಃ
ಓಂ ದೇವಿ ಸ್ಕಂದಮಾತಾಯೈ ನಮಃ ಸಿಂಹಾಸಂಗತಂ ನಿತ್ಯಂ ಪದ್ಮಾಂಚಿತ ಕರದ್ವಾಯೇ
ಶುಭದಾಸ್ತು ಸದಾದೇವಿ ಸ್ಕಂದಮಾತಾ ಯಶಸ್ವಿನೀ

ಸ್ತುತಿ

ಯಾ ದೇವಿ ಸರ್ವಭೂತೇಷು ಮಾ ಸ್ಕಂದಮಾತಾ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ