ಮೈಸೂರು, (ಅಕ್ಟೋಬರ್ 13): ನಾಡಹಬ್ಬ ಮೈಸೂರು ದಸರಾ (Mysuru Dasara 2023) ಉದ್ಘಾಟನೆಗೆ ಇನ್ನೆರಡು ದಿನ ಮಾತ್ರ ಬಾಕಿ ಉಳಿದಿದೆ. ಇದರ ಮಧ್ಯೆ ಮೈಸೂರಿನಲ್ಲಿ(Mysuru) ಮಹಿಷ ದಸರಾ(mahisha dasara), ಚಾಮುಂಡಿಬೆಟ್ಟ ಚಲೋ ವಾರ್ ಭಕ್ತರಿಗೆ ಸಂಕಷ್ಟ ತಂದೊಡ್ಡಿದೆ. ಮೈಸೂರಿನಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಇಂದು(ಅಕ್ಟೋಬರ್ 13) ಬೆಳಗ್ಗೆ 6 ಗಂಟೆಯಿಂದಲೇ ಚಾಮುಂಡಿಬೆಟ್ಟಕ್ಕೆ (Chamundi betta)) ಭಕ್ತರಗೆ ನಿಷೇಧಿಸಲಾಗಿದೆ.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ ಹಿನ್ನೆಲೆಯಲ್ಲಿ ಬೆಟ್ಟದ ಮೊದಲ ಮೆಟ್ಟಿಲ ಬಳಿ ತಾಯಿ ಚಾಮುಂಡೇಶ್ವರಿ ವಿಗ್ರಹ ಖಾಲಿ ಖಾಲಿಯಾಗಿದೆ. ಪ್ರತಿದಿನ ಸಾವಿರಾರು ಭಕ್ತರು ಬಂದು ಹರಕೆ ತೀರಿಸುತ್ತಿದ್ದರು. ಬರಿಗಾಲಿನಲ್ಲಿ ಬೆಟ್ಟ ಹತ್ತುತ್ತಿದ್ದ ಭಕ್ತರಿಗೆ ಬ್ರೇಕ್ ಹಾಕಲಾಗಿದೆ. ವಿಗ್ರಹಕ್ಕೆ ಪೂಜೆ ಸಲ್ಲಿಸಿ ಪ್ರತಿ ಮೆಟ್ಟಿಲುಗಳಿಗೂ ಅರಿಶಿನ ಕುಂಕುಮ ಲೇಪಿಸಿ ಮೆಟ್ಟಿಲು ಹತ್ತಿಕೊಂಡು ಹೋಗುತ್ತಿದ್ದರು. ಇದೀಗ ಅದಕ್ಕೂ ಪೊಲೀಸರು ನಿರ್ಬಂಧಿಸಿದ್ದು, ಮೆಟ್ಟಿಲ ಮಾರ್ಗದಲ್ಲೂ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮೂವರು ಸಬ್ಇನ್ಸ್ಪೆಕ್ಟರ್, ಎಎಸ್‌ಐ ಮಹಿಳಾ ಕಾನ್ಸ್ಟೇಬಲ್ ಸೇರಿ 25ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ಮಹಿಷ ದಸರಾ ಹೆಸರಿನಲ್ಲಿ ಚಾಮುಂಡೇಶ್ವರಿಗೆ ಅಪಮಾನ: ಫೇಸ್ಬುಕ್ ಲೈವ್ನಲ್ಲಿ ಸಂಸದ ಪ್ರತಾಪ್ ಸಿಂಹ ಆಕ್ರೋಶ
ಮೊನ್ನೆ ಮೊನ್ನೆಯಷ್ಟೇ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಪ್ರಗತಿಪರರ ಮಹಿಷ ದಸರಾ ಮತ್ತು ಬಿಜೆಪಿಯವರು ಚಾಮುಂಡಿ ಬೆಟ್ಟ ಚಲೋ ಎರಡಕ್ಕೂ ಬ್ರೇಕ್ ಹಾಕಿದ್ದರು. ಆದ್ರೆ ಪ್ರಗತಿಪರರು ಮಾತ್ರ ಅಕ್ಟೋಬರ್ 13 ಅಂದ್ರೆ ಇವತ್ತು ಮಹಿಷ ದಸರಾ ಮಾಡಿಯೇ ತೀರುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಮಹಿಷ ದಸರಾ ಆಚರಿಸುವುದಕ್ಕೆ ನಾವು ಬಿಡುವುದಿಲ್ಲ ಎಂದಿದ್ದ ಸಂಸದ ಪ್ರತಾಪ್ ಸಿಂಹ ಪಕ್ಷದ ವತಿಯಿಂದ ಚಾಮುಂಡಿ ಬೆಟ್ಟ ಚಲೋಗೆ ಕರೆ ಕೊಟ್ಟಿದ್ದರು.. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿಮಾಡಲಾಗಿದೆ. ಇಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಆದ್ರೆ ಚಾಮುಂಡಿಬೆಟ್ಟ ನಿವಾಸಿಗಳಿಗೆ, ತುರ್ತು ಸೇವೆಗಳಿಗೆ ಹಾಗೂ ಅಧಿಕೃತ ಅಧಿಕಾರಿಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ.
ಅಷ್ಟಕ್ಕೂ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರಿಗೆ ನಿಷೇಧ ಹಾಕಲು ಕಾರಣವಾದ್ರೂ ಏನು ಅಂತ ನೋಡುವುದಾದರೆ ಅಕ್ಟೋಬರ್ 13 ಚಾಮುಂಡಿಬೆಟ್ಟದಲ್ಲಿ ಮಹಿಷ ದಸರಾ ಆಚರಿಸಲು ಅನುಮತಿ ನೀಡಬೇಕು ಎಂದು ಮಹಿಷ ದಸರಾ ಆಚರಣಾ ಸಮಿತಿ ಪೊಲೀಸರಿಂದ ಅನುಮತಿ ಕೇಳಿತ್ತು. ಆದ್ರೆ, ಪೊಲೀಸರು ಅನುಮತಿ ನೀಡಿರಲಿಲ್ಲ. ಈಗ, ಮಹಿಷ ಉತ್ಸವ ಎಂಬ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡಲಾಗಿದೆ. ಮೈಸೂರಿನ ಟೌನ್ಹಾಲ್ನಲ್ಲಿ ಕಾರ್ಯಕ್ರಮ ನಡೆಯಲಿದೆ.
ದಸರಾ ಹಬ್ಬ ಕಳೆಕಟ್ಟಬೇಕಿದ್ದ ಮೈಸೂರಿನಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರಿಗೆ ನಿಷೇಧ ಹಾಕಿರುವುದರಿಂದ ಭಕ್ತರು ನಿರಾಸೆಗೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:57 am, Fri, 13 October 23