ಮಹಿಷ ದಸರಾ ಹೆಸರಿನಲ್ಲಿ ಚಾಮುಂಡೇಶ್ವರಿಗೆ ಅಪಮಾನ: ಫೇಸ್ಬುಕ್ ಲೈವ್ನಲ್ಲಿ ಸಂಸದ ಪ್ರತಾಪ್ ಸಿಂಹ ಆಕ್ರೋಶ
ಮಹಿಷ ದಸರಾ ಹೆಸರಿನಲ್ಲಿ ಚಾಮುಂಡೇಶ್ವರಿಗೆ ಅಪಮಾನ ಮಾಡುತ್ತಾರೆ. ಈ ಕಾರಣಕ್ಕೆ ನಾನು ಮಹಿಷ ದಸರಾ ವಿರೋಧ ಮಾಡುತ್ತಿದ್ದೇನೆ. ಪ್ರತಿಯೊಬ್ಬರು ಸಹ ಮಹಿಷ ದಸರಾವನ್ನು ವಿರೋಧ ಮಾಡಬೇಕು. ಇಲ್ಲದಿದ್ದರೆ ಚಾಮುಂಡಿ ಮುಂದೆ ಬೇಡಿಕೊಳ್ಳಲು ನೈತಿಕ ಹಕ್ಕು ಇರಲ್ಲ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಫೇಸ್ಬುಕ್ ಲೈವ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು, ಅಕ್ಟೋಬರ್ 12: ಮಹಿಷ ದಸರಾ ಹೆಸರಿನಲ್ಲಿ ಚಾಮುಂಡೇಶ್ವರಿಗೆ ಅಪಮಾನ ಮಾಡುತ್ತಾರೆ. ಈ ಕಾರಣಕ್ಕೆ ನಾನು ಮಹಿಷ ದಸರಾ ವಿರೋಧ ಮಾಡುತ್ತಿದ್ದೇನೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ (pratap simha) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಫೇಸ್ಬುಕ್ ಲೈವ್ನಲ್ಲಿ ಮಾತನಾಡಿರುವ ಅವರು, ಬೆಟ್ಟಕ್ಕೆ ಬಂದು ಮಹಿಷ ಒಳ್ಳೆಯವನು ಎಂದಷ್ಟೇ ಹೇಳಿ ಹೋಗಲ್ಲ. ಚಾಮುಂಡೇಶ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಪ್ರತಿಯೊಬ್ಬರು ಸಹ ಮಹಿಷ ದಸರಾವನ್ನು ವಿರೋಧ ಮಾಡಬೇಕು. ಇಲ್ಲದಿದ್ದರೆ ಚಾಮುಂಡಿ ಮುಂದೆ ಬೇಡಿಕೊಳ್ಳಲು ನೈತಿಕ ಹಕ್ಕು ಇರಲ್ಲ ಎಂದು ಕಿಡಿಕಾರಿದ್ದಾರೆ.
ಮಹಿಷನ ಬಗ್ಗೆ ಯಾವುದೇ ದಾಖಲೆ ಇಲ್ಲ. ಹಿಂದೂ ಧರ್ಮ ಒಡೆಯುವ ಪ್ರಯತ್ನಕ್ಕೆ ಇದೆಲ್ಲವನ್ನು ಮಾಡುತ್ತಿದ್ದಾರೆ. ಈಗ ದಲಿತ ಅಂತ ಬೋರ್ಡ್ ಹಾಕಿಕೊಂಡು ಓಡಾಡುತ್ತಿರುವವರ ಯಾರು ಅಂತನು ಮೈಸೂರಿಗರಿಗೆ ಗೊತ್ತು. ಅಶೋಕ್ ಪುರಂನ ಪ್ರತಿಯೊಬ್ಬರ ಮನೆಯಲ್ಲಿರುವುದು ಚಾಮುಂಡೇಶ್ವರಿ ಫೋಟೋ. ಮಹಿಷಾನ ಫೋಟೋ ಅಲ್ಲ. ದಲಿತರೆ ಚಾಮುಂಡಿ ಹಬ್ಬವನ್ನ ಜಾಸ್ತಿ ಮಾಡುವುದು. ಈಗ ರಾಜಕೀಯಕ್ಕೆ ದಲಿತ ವಿರೋದಿ ಅನ್ನುತ್ತಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ಮಹಿಷ ದಸರಾ ಆಚರಣೆಗೆ ಅನುಮತಿ ನೀಡಿದ ಪೊಲೀಸ್ ಇಲಾಖೆ: ಷರತ್ತು ಅನ್ವಯ
ಮಹಿಷಾ ಯಾವಾಗ ದಲಿತನಾದ. ಮಹಿಷಾ ಬೌದ್ಧ ಬಿಕ್ಕು ಆಗಿದ್ದ ಅಂತ ಹೇಳುತ್ತಾರೆ. ತಾಯಿ ಚಾಮುಂಡಿ ಉಲ್ಲೇಖ ಬರುವುದು ಕೃತ ಯುಗದಲ್ಲಿ. ಬುದ್ದ ಬಂದಿದ್ದು ಕಲಿಯುಗದಲ್ಲಿ. ಅಶೋಕ ಇದ್ದಿದ್ದು ಕ್ರಿ.ಪೂ 3 ನೇ ಶತಮಾನದಲ್ಲಿ. ಇವರ ಹೇಳುವ ವಿಚಾರ ಸಮಯಕ್ಕೆ ತಾಳ ಮೇಳ ಇಲ್ಲ. ಇದೆಲ್ಲ ಕಪೋಲ ಕಲ್ಪಿತ ವಿಚಾರಗಳು ಎಂದು ವಾಗ್ದಾಳಿ ಮಾಡಿದ್ದಾರೆ.
ಹಿಂದೂ ಧರ್ಮ ಒಡೆಯುವ ಪ್ರಯತ್ನಕ್ಕೆ ಇದೆಲ್ಲ ಮಾಡುತ್ತಿದ್ದಾರೆ. ಕೆಲವರು ನನ್ನ ಬಗ್ಗೆ ವಿರೋಧ ಮಾಡುತ್ತಿದ್ದಾರೆ. ಇದೆಲ್ಲ ವೈಯಕ್ತಿಕ ಲಾಭ ನಷ್ಟದಿಂದ ಆಗಿರುವುದು. ನಿಜವಾದ ದಲಿತ ವಿರೋಧಿಗಳು ನೀವುಗಳು. ಲಲಿತ ನಾಯಕ್ರಿಂದ ಉದ್ಘಾಟನೆ ಮಾಡಿಸಲು ಮುಂದಾದ್ರಿ. ಆಕೆಯ ಪುತ್ರ ಅಂಬೇಡ್ಕರ್ ಪುತ್ಥಳಿಗೆ ಮದ್ಯ ಕುಡಿಸಿದ್ದ. ನೀವು ಅಂಬೇಡ್ಕರ್ ವಾದಿಗಳು ಅಂತಿರಾ, ಆದರೆ ಅಂಬೇಡ್ಕರ್ ಪುತ್ಥಳಿಗೆ ಮದ್ಯ ಕುಡಿಸಿದ ತಾಯಿಯಿಂದ ಉದ್ಘಾಟನೆ ಮಾಡಿಸುತ್ತಿದ್ದೀರಿ. ಸುಮನೆ ನನ್ನ ದಲಿತ ವಿರೋಧಿ ಅಂತ ಹೇಳುವುದು ಬೇಡ ಎಂದಿದ್ದಾರೆ.
ಇದನ್ನೂ ಓದಿ: ಮಹಿಷಾ ದಸರಾ ವಿವಾದ: ಸಂಸದ ಪ್ರತಾಪ್ ಸಿಂಹ ವಿರುದ್ಧ ತಿರುಗಿಬಿದ್ದ ಬಿಜೆಪಿ ಎಸ್ಸಿ ಮೋರ್ಚಾ
ಮೈಸೂರಿಗರ ಬಳಿ ಹೋರಾಟದ ಗುಣ ಇಲ್ಲ ಅಂತ ಅಂದುಕೊಳ್ಳಬೇಡಿ. ನಿಮ್ಮ ಮನೆಯಲ್ಲಿ ನಿಮ್ಮ ಹೆಂಡತಿ ಮಹಿಷಾ ಪೋಟೋ ಇಟ್ಟುಕೊಳ್ಳುವುದಕ್ಕೆ ಬಿಡುತ್ತಾರ. ನಿಮ್ಮ ಮನೆಯಲ್ಲೇ ಬೇಕಾದರೆ ಮಹಿಷಾ ದಸರಾ ಮಾಡಿಕೊಳ್ಳಿ. ಬೆಟ್ಟಕ್ಕೆ ಹೋಗಿ ಚಾಮುಂಡಿ ಅಪಮಾನ ಮಾಡಬೇಕು ಅಂತ ನೀವು ಅಲ್ಲಿ ಹೋಗುವುದು. ಕೆಲವರಿಗೆ ಅರ್ಥವಾಗಬೇಕು ಅಂತ ನಿಮ್ಮ ಭಾಷೆಯಲ್ಲಿ ಹೇಳಿರುವುದು. ಇಂತಹವರನ್ನ ವಿರೋಧಿಸದ್ದರೆ ಮುಂದೆ ಇಸ್ರೇಲ್ ಪರಿಸ್ಥಿತಿ ನಿರ್ಮಾಣವಾಗುತ್ತೆ ಎಂದು ಹೇಳಿದ್ದಾರೆ.
ಬೆಟ್ಟಕ್ಕೆ ತನ್ನದೇ ಆದ ಪವಿತ್ರೆತೆಯಿದೆ ಅದನ್ನು ಹಾಳು ಮಾಡಬಾರದು: ಶಾಸಕ ಟಿಎಸ್ ಶ್ರೀವತ್ಸ
ಶಾಸಕ ಟಿಎಸ್ ಶ್ರೀವತ್ಸ ಪ್ರತಿಕ್ರಿಯೆ ನೀಡಿದ್ದು, ಜಿಲ್ಲಾಡಳಿತ ಮಹಿಷ ದಸರಾ ಮತ್ತು ಚಾಮುಂಡಿ ಚಲೋ ಎರಡಕ್ಕೂ ಅನುಮತಿ ಕೊಟ್ಟಿಲ್ಲ. ಮೈಸೂರು ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ಮೇಲೆ ನಂಬಿಕೆ ಇದೆ. ಇದಕ್ಕೆಲ್ಲ ಅವಕಾಶ ಕೊಡುವುದಿಲ್ಲ ಎಂದು. ನಾಳೆ ಒಂದು ವೇಳೆ ಕದ್ದುಮುಚ್ಚಿ ಹೋಗಿ ಪುಷ್ಪಾರ್ಚನೆ ಮಾಡಿ ಬಂದರೆ ಏನು ಮಾಡುವುದಕ್ಕೆ ಆಗುತ್ತೆ ಎಂದು ಪ್ರಶ್ನಿಸಿದ್ದಾರೆ. ನಮಗೆ ಮಹಿಷ ದಸರಾವನ್ನ ಚಾಮುಂಡಿ ಬೆಟ್ಟದ ಮಾಡುವುದಕ್ಕೆ ವಿರೋಧವಿದೆ ಅಷ್ಟೇ. ಬೆಟ್ಟಕ್ಕೆ ತನ್ನದೇ ಆದ ಪಾವಿತ್ರೆತೆ ಇದೆ. ಅದನ್ನು ಹಾಳು ಮಾಡಬಾರದು ಎಂದರು.
ನಾನು ಯಾರ ಒತ್ತಡಕ್ಕೂ ಮಣಿದಿಲ್ಲ. ಪಕ್ಷಕ್ಕಾಗಿ ಕಳೆದ 38 ವರ್ಷ ದುಡಿಯುತ್ತಿದ್ದೇನೆ. ನಾವು ಒಂದು ಸಿದ್ದಾಂತಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಸ್ವತಃ ಸಿಎಂ ಪತ್ನಿಯೇ ಜನ ಸಾಮಾನ್ಯರಂತೆ ಬಂದು ಚಾಮುಂಡಿ ತಾಯಿಯ ದರ್ಶನ ಪಡೆದು ಹೋಗುತ್ತಾರೆ. ಪ್ರಧಾನಿ, ರಾಷ್ಟ್ರಪತಿಗಳು ಬಂದು ಹೋಗಿರುವ ಪವಿತ್ರ ಚಾಮುಂಡಿ ಬೆಟ್ಟ. ಹಾಗಾಗಿ ಅಲ್ಲಿನ ಪಾವಿತ್ರತೆ ಹಾಳು ಮಾಡುವ ಕೆಲಸ ಮಾಡಬಾರದು. ಒಂದು ವೇಳೆ ಜಿಲ್ಲಾಡಳಿತದ ಆದೇಶವನ್ನು ಮೀರಿ ಮಹಿಷಾ ದಸರಾವನ್ನು ಆಚರಣೆ ಮಾಡಿದರೆ, ನಾವು ಮುಂದೆ ಏನು ಮಾಡಬೇಕೆಂದು ಪಕ್ಷದ ಮುಖಂಡರ ಜೊತೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.