Navratri 2024: ಶರನ್ನವರಾತ್ರಿ ಮೊದಲ ದಿನ ‘ಶೈಲಪುತ್ರಿ’ಯ ಆರಾಧನೆ; ಈ ದೇವಿಯ ಹಿನ್ನೆಲೆ ಹಾಗೂ ಮಹತ್ವ

| Updated By: ಅಕ್ಷತಾ ವರ್ಕಾಡಿ

Updated on: Sep 28, 2024 | 6:07 PM

ಶರನ್ನವರಾತ್ರಿ ಮೊದಲ ದಿನ ಶೈಲಪುತ್ರಿಯನ್ನು ಆರಾಧಿಸಲಾಗುತ್ತದೆ. ಶೈಲಪುತ್ರಿ ಅಂದರೆ ಪರ್ವತ ರಾಜನ ಮಗಳು, ಪಾರ್ವತಿ ಎಂದರ್ಥ.ಶೈಲಪುತ್ರಿಯು ವೃಷಭವನ್ನು ಏರಿ ಬರುತ್ತಾಳೆ ಮತ್ತು ಆ ದೇವಿಯ ಎಡಗೈಯಲ್ಲಿ ಕಮಲ, ಬಲಗೈಯಲ್ಲಿ ತ್ರಿಶೂಲ ಇರುತ್ತದೆ.

Navratri 2024: ಶರನ್ನವರಾತ್ರಿ ಮೊದಲ ದಿನ ಶೈಲಪುತ್ರಿಯ ಆರಾಧನೆ; ಈ ದೇವಿಯ ಹಿನ್ನೆಲೆ ಹಾಗೂ ಮಹತ್ವ
Devi Shaila Puthri
Follow us on

ನವರಾತ್ರಿಯಲ್ಲಿ ಆ ಜಗನ್ಮಾತೆಯನ್ನು ಆರಾಧಿಸುವ ಒಂಬತ್ತು ಸ್ವರೂಪಗಳಲ್ಲಿ ಮೊದಲನೆಯದು ಶೈಲಪುತ್ರಿ. ಲೋಕಕ್ಕೆ ಕಂಟಕರಾದಂಥ ರಾಕ್ಷಸರನ್ನು ಸಂಹಾರ ಮಾಡಿದ ಜಗಜ್ಜನನಿಯ ಒಂಬತ್ತು ಸ್ವರೂಪವನ್ನು ನಾವು ಇಲ್ಲಿ ಆರಾಧಿಸುತ್ತೇವೆ. ಮೊದಲ ದಿನ ಸ್ನಾನ ಮಾಡಿದ ನಂತರದಲ್ಲಿ ನಿತ್ಯ ಶುದ್ಧಿ ಮಾಡಿದ ಮೇಲೆ ಮನೆಯ ಈಶಾನ್ಯ ದಿಕ್ಕಿನಲ್ಲಿ ಅಥವಾ ದೇವರ ಮನೆಯಲ್ಲಿ ರಂಗೋಲಿಯಲ್ಲಿ ಅಷ್ಟದಳವನ್ನು ಬರೆದು, ಅದರ ಮೇಲೆ ಕಲಶ ಸ್ಥಾಪನೆ ಮಾಡಬೇಕು. ಆ ಕಲಶದಲ್ಲಿ ಗಂಧ ಸಹಿತ ಶುದ್ಧ ನೀರನ್ನು ತುಂಬಿಸಿ, ದೇವಿ ಆರಾಧನೆ ಮಾಡಬೇಕು.

ಶೈಲಪುತ್ರಿ ಯಾರು?

ಶೈಲ ಅಂದರೆ ಪರ್ವತ ಎಂದರ್ಥ. ಇನ್ನು ಪುತ್ರಿ ಅಂದರೆ ಮಗಳು. ಶೈಲಪುತ್ರಿ ಅಂದರೆ ಪರ್ವತ ರಾಜನ ಮಗಳು, ಪಾರ್ವತಿ ಎಂದರ್ಥ ಆಗುತ್ತದೆ. ಆಕೆ ಹಿಮಾಲಯ ರಾಜನ ಮಗಳು. ಶೈಲಪುತ್ರಿಯು ವೃಷಭವನ್ನು ಏರಿ ಬರುತ್ತಾಳೆ ಮತ್ತು ಆ ದೇವಿಯ ಎಡಗೈಯಲ್ಲಿ ಕಮಲ, ಬಲಗೈಯಲ್ಲಿ ತ್ರಿಶೂಲ ಇರುತ್ತದೆ.

ಇನ್ನು ಪುರಾಣಗಳ ಪ್ರಕಾರ ಒಂದು ಉಲ್ಲೇಖ ಇದೆ. ಅದರಂತೆ, ಮಹಾವಿಷ್ಣುವಿನ ನಾಭಿ ಕಮಲದಲ್ಲಿ ನೆಲೆಸಿದ ಬ್ರಹ್ಮನಿಗೆ ವಿಷ್ಣುವಿನ ಕಿವಿಗಳ ಕಶ್ಮಲದಿಂದ ಉದ್ಭವಿಸುವ ಮಧು ಹಾಗೂ ಕೈಟಭ ಎಂಬ ರಕ್ಕಸರಿಬ್ಬರು ಬಹಳ ತೊಂದರೆ ನೀಡುತ್ತಿರುತ್ತಾರೆ. ಅದರಿಂದಾಗಿ ಸೃಷ್ಟಿ ಕಾರ್ಯದಲ್ಲಿ ಅಡಚಣೆ ಎದುರಿಸುವ ಬ್ರಹ್ಮದೇವ ಈ ಇಬ್ಬರು ರಾಕ್ಷಸರ ಸಂಹಾರಕ್ಕಾಗಿ ಮಹಾವಿಷ್ಣುವನ್ನು ಪ್ರಾರ್ಥಿಸುತ್ತಾನೆ.

ಆದರೆ, ಆ ಸಮಯದಲ್ಲಿ ಮಹಾವಿಷ್ಣು ಯೋಗನಿದ್ರಾವಸ್ಥೆಯಲ್ಲಿ ಇದ್ದುದರಿಂದ ಬ್ರಹ್ಮನ ಮೊರೆ ಆಲಿಸುವುದಿಲ್ಲ. ಆಗ ಬೇರೆ ದಾರಿಯೇ ಕಾಣದ ಬ್ರಹ್ಮ, ಆ ಮಹಾವಿಷ್ಣುವನ್ನು ಆವರಿಸಿರುವ ಯೋಗನಿದ್ರಾ ಸ್ವರೂಪದ ದೇವಿಯನ್ನು ಧ್ಯಾನಿಸಿ, ಸ್ತುತಿ ಮಾಡುತ್ತಾನೆ. ಆಗ ಪ್ರಸನ್ನಳಾಗುವ ದೇವಿಯು ಮಹಾವಿಷ್ಣುವು ಯೋಗನಿದ್ರೆಯಿಂದ ಹೊರಬರುವಂತೆ ಮಾಡಿ, ಅದರೊಂದಿಗೆ ಬ್ರಹ್ಮನಿಗೆ ಸಮಸ್ಯೆ ಮಾಡುತ್ತಿದ್ದ ಮಧು-ಕೈಟಭರ ವಧೆ ಆಗುವಂತೆ ಅನುಗ್ರಹಿಸುತ್ತಾಳೆ. ಆದ್ದರಿಂದ ನವರಾತ್ರಿಯ ಮೊದಲ ದಿನ ಕಲಶದಲ್ಲಿ ಯೋಗನಿದ್ರಾ ಸ್ವರೂಪದ ದೇವಿಯನ್ನು ಧ್ಯಾನಿಸಿ, ಆವಾಹನೆ ಮಾಡಿ ಪೂಜಿಸಬೇಕು. ಈ ದಿನದ ಬಣ್ಣ ಬಿಳಿ. ಇದು ಶಾಂತಿ ಮತ್ತು ನೆಮ್ಮದಿಯ ಸಂಕೇತ ಆಗಿದೆ.

ಇದನ್ನೂ ಓದಿ: ಸ್ವಯಂಭು ಪಾದರಸದಿಂದ ಮಾಡಿದ ಶಿವಲಿಂಗಕ್ಕೆ ಪೂಜೆ ಮಾಡುವುದು ಶ್ರೇಷ್ಠ, ಇದರಿಂದ ಸಿಗುತ್ತೆ ಸಾವಿರ ಪಟ್ಟು ಪುಣ್ಯ – ಪೂಜಿಸುವುದು ಹೇಗೆ?

ಮಧು-ಕೈಟಭ:

ಪುರಾಣಗಳ ಪ್ರಕಾರ ಮಧು- ಕೈಟಭ ಎಂಬುವರು ರಾಕ್ಷಸರಾಗಿದ್ದರೂ ಇದು ಪ್ರತಿ ಮನುಷ್ಯನಲ್ಲಿಯೂ ಇರುವ ಪ್ರಧಾನವಾದ ಎರಡು ದುರ್ಗುಣಗಳು. ಮಧು ಎಂದರೆ ಜೇನು. ಅದಕ್ಕಿರುವ ಗುಣ ಅಂಟು. ನಾವು ಪ್ರಪಂಚದ ಎಲ್ಲ ವಿಷಯ ಭೋಗಗಳಿಗೆ ಅಂಟಿಕೊಂಡಿರುತ್ತೇವೆ. ಕೈಟಭ ಎಂದರೆ ಕೀಟ (ಹುಳುವಿನಂತೆ). ಸೃಷ್ಟಿಯ ನಾಶ ಮಾಡುತ್ತಾ ಇರುತ್ತೇವೆ. ಇವುಗಳನ್ನು ಅರಿತು, ಜಾಗೃತಗೊಳ್ಳಲು ಆಗದೆ ನಿದ್ರಾವಸ್ಥೆಯಲ್ಲಿ ಇರುವ ನಾವು ಶೈಲಪುತ್ರಿ ಸ್ವರೂಪದಿಂದ ಧ್ಯಾನಿಸಿ, ಪೂಜಿಸಿ ಮಾಯೆಯಿಂದ ಮುಕ್ತಗೊಳಿಸುವಂತೆ ಪ್ರಾರ್ಥಿಸಬೇಕು.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 5:24 pm, Sat, 28 September 24