ಶರನ್ನವರಾತ್ರಿಯ ನಾಲ್ಕನೇ ದಿನ ದೇವಿಯ ರೂಪದ ಹೆಸರು ಕೂಷ್ಮಾಂಡಾ ದೇವಿ. ಕುತ್ಸಿತಃ ಉಷ್ಮಾಃ ಕೂಷ್ಮಾಃ ಅಂತರ್ಥ. ಕುತ್ಸಿತಃ ಅಂದರೆ ಸಹಿಸುವುದಕ್ಕೆ ಕಠಿಣವಾದದ್ದು. ಇನ್ನು ಉಷ್ಮಾ ಅಂದರೆ ಸೂಕ್ಷ್ಮ ಲಹರಿಗಳ ಗೊಂದಲ (ಶಬ್ದ). ಮತ್ತೊಂದು ಉಲ್ಲೇಖ ಸಹ ಇದೆ. ತ್ರಿವಿಧತಾಪಯುಕ್ತಃ ಸಂಸಾರಃ ಸ ಅಂಡೇ ಮಾಂಸಪೇಶ್ಯಾಮ್ ಉದರರೂಪಾಯಂ ಯಸಾಃ ಸಾ ಕೂಷ್ಮಾಂಡಾ ಎಂದಿದೆ.
ತ್ರಿವಿಧ ತಾಪ ಅಂದರೆ ಸೃಷ್ಟಿ, ಸ್ಥಿತಿ ಹಾಗೂ ಲಯ. ಇಲ್ಲಿ ಲಯ ಅಂದರೆ ಯಾವುದೇ ನಿಶ್ಚಿತ ಕಾಲ ಎಂಬುದು ಇಲ್ಲದೆ ನಾಶವಾಗುವಂಥದ್ದು. ಈ ಸಂಸಾರ ಅಂದರೆ ಪುನಃ ಪುನಃ ಎಂದಾಗುತ್ತದೆ. ಅಂಡಃ ಎಂಬುದಕ್ಕೆ ವಿಶಿಷ್ಟ ನಿಯಂತ್ರಣದಿಂದ ಯುಕ್ತವಾಗಿರುವ ಕೋಶ. ಯಾರು ಮಾಂಸ, ಜೀವಕೋಶದಿಂದ ಉದರ ಹಾಗೂ ರೂಪ ಇವುಗಳಿಂದ ಯುಕ್ತ ಸಂಪನ್ನರಾಗಿರುತ್ತಾರೋ ಮೇಲೆ ತಿಳಿಸಿದ ಮೂರು ಬಗೆಯ ತಾಪದಿಂದ ಪುನರಾವೃತ್ತಿಯ ಅವಸ್ಥೆ ಕಾರಣಕ್ಕೆ ಮತ್ತೆ ಮತ್ತೆ ಹೋಗುತ್ತಾರೆ. ಈ ಪ್ರಕ್ರಿಯೆಯಿಂದ ಬಿಡುಗಡೆ ಆಗಬೇಕು ಎಂದುಕೊಳ್ಳುವವರಿಗೆ ಯಾರ ಅನುಗ್ರಹ ಬೇಕೋ ಆಕೆಯೇ ಕೂಷ್ಮಾಂಡಾ.
ಜಗಜ್ಜನನಿಯು ತನ್ನ ಮಂದ ಹಾಗೂ ಮಧುರವಾದ ನಗುವಿನಿಂದ ಈ ಅಂಡ, ಅಂದರೆ ಬ್ರಹ್ಮಾಂಡವನ್ನು ಸೃಷ್ಟಿಸುವ ಕಾರಣದಿಂದ ಈಕೆಯನ್ನು ಕೂಷ್ಮಾಂಡಾ ಎನ್ನಲಾಗುತ್ತದೆ. ಸೃಷ್ಟಿಯ ಅಸ್ತಿತ್ವವೇ ಇಲ್ಲದಾಗ ಎಲ್ಲ ಕಡೆಯೂ ಅಂಧಕಾರ ತುಂಬಿತ್ತು. ಆಗ ಇದೇ ದೇವಿಯು ತನ್ನ ಈಶತ್ ಶಕ್ತಿಯಿಂದ ಬ್ರಹ್ಮಾಂಡವನ್ನು ಸೃಷ್ಟಿಸಿದಳು. ಆ ಕಾರಣದಿಂದ ತಾಯಿಯನ್ನು ಆದಿ ಸ್ವರೂಪಾ ಅಥವಾ ಆದಿಶಕ್ತಿ ಎನ್ನಲಾಗುತ್ತದೆ.
ಕೂಷ್ಮಾಂಡಾ ದೇವಿಯ ಶರೀರದ ಕಾಂತಿ, ಪ್ರಭೆಯು ಸೂರ್ಯನಷ್ಟು ದೇದೀಪ್ಯಮಾನವಾಗಿ ಇರುತ್ತದೆ. ಆ ತಾಯಿ ಅದೆಷ್ಟು ತೇಜಸ್ಸಿನಿಂದ ಕೂಡಿದ್ದಾಳೆ ಎಂಬುದನ್ನು ಉದಾಹರಿಸುವುದಕ್ಕೆ ಇದೊಂದು ವಿವರಣೆ ಸಾಕು. ತಾಯಿಯ ತೇಜಸ್ಸು ಹಾಗೂ ಪ್ರಕಾಶದಿಂದಲೇ ಹತ್ತು ದಿಕ್ಕುಗಳೂ ಪ್ರಕಾಶಿಸುತ್ತಿವೆ. ಈ ಬ್ರಹ್ಮಾಂಡದ ಎಲ್ಲ ವಸ್ತು, ಪ್ರಾಣಿಗಳಲ್ಲಿ ಇರುವಂಥ ತೇಜಸ್ಸು ಇವಳದೇ ಛಾಯೆ ಆಗಿದೆ.
ಇದನ್ನೂ ಓದಿ: Navratri 2024 Day 3: ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿ; ಪೂಜಾ ವಿಧಿ ವಿಧಾನ ಮತ್ತು ಮಹತ್ವ
ಎಂಟು ಭುಜಗಳಿರುವ ಕಾರಣಕ್ಕೆ ಈ ದೇವಿಯನ್ನು ಅಷ್ಟಭುಜಾದೇವಿ ಎಂದು ಆರಾಧಿಸಲಾಗುತ್ತದೆ. ದೇವಿಯ ಏಳು ಕೈಗಳಲ್ಲಿ ಕಮಂಡಲ, ಧನುಸ್ಸು, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ ಹಾಗೂ ಗದೆ ಇವೆ. ಈಕೆಯ ವಾಹನ ಸಿಂಹವಾಗಿದೆ. ಕೂಷ್ಮಾಂಡಾ ಅಂದರೆ ಸಂಸ್ಕೃತದಲ್ಲಿ ಕುಂಬಳಕಾಯಿ. ಈ ತಾಯಿಗೆ ಕುಂಬಳಕಾಯಿಯನ್ನು ಬಲಿ ನೀಡುವುದೇ ಹೆಚ್ಚು ಪ್ರಿಯ.
ಯಾರು ಕೂಷ್ಮಾಂಡಾ ದೇವಿಯನ್ನು ಆರಾಧಿಸುತ್ತಾರೋ ಅಂಥವರ ಋಣ, ದಾರಿದ್ರ್ಯ, ರೋಗ, ಶೋಕಗಳು ದೂರವಾಗುತ್ತವೆ. ಆಯುಷ್ಯ, ಯಶಸ್ಸು, ಬಲ ಮತ್ತು ಆರೋಗ್ಯದ ವೃದ್ಧಿ ಆಗುತ್ತದೆ. ಸಂಸಾರ ಬಂಧದಿಂದ ಮುಕ್ತರಾಗಲು, ವ್ಯಾಧಿ- ಬಾಧೆಗಳಿಂದ ದೂರವಾಗಲು ಅನುಗ್ರಹಿಸುತ್ತಾಳೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:21 am, Wed, 2 October 24