ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022 (Mysore Dasara: 2022) ಹಿನ್ನೆಲೆ ಇಂದು ಬೆಳಗ್ಗೆ 9 ಗಂಟೆಗೆ ಗ್ರಾಮೀಣ ದಸರಾಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಲಿದ್ದಾರೆ. ನಿನ್ನೆ ನಡೆಯಬೇಕಿದ್ದ ಗ್ರಾಮೀಣ ದಸರಾಗೆ ಇಂದು ದಾರಿಪುರದ ದೇಗುಲದಲ್ಲಿ ಚಾಲನೆ ದೊರೆಯಲಿದ್ದು, ಸುಮಾರು 2 ಕಿಲೋ ಮೀಟರ್ ಅದ್ಧೂರಿ ಮೆರವಣಿಗೆ ನಡೆಯಲಿದೆ. ಸರ್ಕಾರದ ಯೋಜನೆಗಳ ಸ್ತಬ್ಧಚಿತ್ರ, ಸಾಂಸ್ಕೃತಿಕ ಕಲಾ ತಂಡಗಳು ಭಾಗಿಯಾಗಲಿದ್ದು, ಬೆಳಗ್ಗೆ 10 ಗಂಟೆಗೆ ಜಯಪುರದಲ್ಲಿ ಕಾರ್ಯಕ್ರಮ ಜರುಗಲಿದೆ. ಜೊತೆಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಜಾನುವಾರು ತಪಾಸಣಾ ಶಿಬಿರ ಆಯೋಜನೆ ಮಾಡಲಾಗಿದೆ. ಸಂಸದ ಪ್ರತಾಪ್ ಸಿಂಹ, ಶಾಸಕ ಜಿ. ಟಿ ದೇವೇಗೌಡ ಸೇರಿ ಹಲವರು ಭಾಗಿಯಾಗಲಿದ್ದಾರೆ.
41 ಸ್ತಬ್ದಚಿತ್ರಗಳಿಗೆ ಅವಕಾಶ:
ಈ ಬಾರಿ 41 ಸ್ತಬ್ದಚಿತ್ರಗಳಿಗೆ ಅವಕಾಶ ನೀಡಲಾಗಿದೆ. ಪ್ರತಿ ಜಿಲ್ಲೆಯ ಒಂದು ಸ್ತಬ್ದಚಿತ್ರ. ಸ್ತಬ್ದಚಿತ್ರ ಉಪಸಮಿತಿಯಿಂದ 03, ಮೈಸೂರು ವಿವಿ 01, ಚೆಸ್ಕಾಂ 01, ಸಮಾಜ ಕಲ್ಯಾಣ ಇಲಾಖೆ 01, ಪ್ರವಾಸೋದ್ಯಮ ಇಲಾಖೆ 01, ಲಿಡಕರ್ 01, ಕೌಶಲ್ಯ ಕರ್ನಾಟಕ 01, ಕೆಎಂಎಫ್ 01, ಕಾವೇರಿ ನೀರಾವರಿ ನಿಗಮದ ಒಂದು ಸ್ತಬ್ಧಚಿತ್ರ, ಆಜಾದಿ ಕಾ ಅಮೃತ ಮಹೋತ್ಸವ ಸಾರುವ ಸ್ತಬ್ದಚಿತ್ರ ಸೇರಿ ಹಲವು ಸ್ತಬ್ದಚಿತ್ರಗಳು ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಭಾಗಿಯಾಗಲಿವೆ.
ಮೈಸೂರು ದಸರಾ 2022 ವೀಕ್ಷಣೆಗಾಗಿ ಗೋಲ್ಡ್ ಕಾರ್ಡ್ ವಿತರಣೆ
ಇನ್ನೂ ವಿಶ್ವವಿಖ್ಯಾತ ನಾಡಹಬ್ಬ ಸಾಂಕೃತಿಕ ಐತಿಹ್ಯ ಹೊಂದಿರುವ ಮೈಸೂರು ದಸರಾ ಮಹೋತ್ಸವ-2022 ವೀಕ್ಷಿಸಲು ದೇಶಿ, ವಿದೇಶಿ ಪ್ರವಾಸಿಗಳಿಗೆ ಅನುಕೂಲವಾಗಲೆಂದು ಸರ್ಕಾರ ಗೋಲ್ಡ್ ಕಾರ್ಡ್ (Gold Card) ನೀಡಲು ಮುಂದಾಗಿದೆ. ಈ ಗೋಲ್ಡ್ ಕಾರ್ಡ್ನ್ನು ಆನ್ಲೈನ್ ಮೂಲಕ ಮಾತ್ರ ಖರೀದಿಸಲು ಅವಕಾಶ ನೀಡಲಾಗಿದೆ. ಪ್ರತಿ ಗೋಲ್ಡ್ ಕಾರ್ಡ್ಗೆ 4,999 ರೂಪಾಯಿ ನಿಗದಿ ಮಾಡಲಾಗಿದೆ. ಈ ಗೋಲ್ಡ್ ಕಾರ್ಡ್ನ್ನು www.mysoredasara.gov.in ವೈಬ್ಸೈಟ್ನಲ್ಲಿ ಖರೀದಿಸಬಹುದಾಗಿದೆ. ಒಬ್ಬರು ಒಂದು ಬಾರಿಗೆ ಗರಿಷ್ಠ 2 ಗೋಲ್ಡ್ ಕಾರ್ಡ್ ಖರೀದಿಸಲು ಅವಕಾಶ ನೀಡಲಾಗಿದೆ. ಆನ್ಲೈನ್ ಪಾವತಿ ದೃಢೀಕರಿಸಿದ ನಂತರ ಗೋಲ್ಡ್ ಕಾರ್ಡ್ ನೀಡಲಾಗುತ್ತದೆ.
29-09-2022ರಿಂದ ಕೆಎಸ್‌ಡಿಟಿಸಿ (ಪ್ರವಾಸೋದ್ಯಮ ಇಲಾಖೆ) ಮಯೂರ ಹೋಟೆಲ್ ಹತ್ತಿರ ಗೋಲ್ಡ್ ಕಾರ್ಡ್ನ್ನು ವಿತರಿಸಲಾಗುತ್ತದೆ. ಬೆಳಗ್ಗೆ 11ರಿಂದ ಸಂಜೆ 5.30ರವರೆಗೆ ಗೋಲ್ಡ್ ಕಾರ್ಡ್ ವಿತರಣೆ ಮಾಡಲಾಗುತ್ತದೆ.
ಗೋಲ್ಡ್ ಕಾರ್ಡ್ ಮುಖಾಂತರ ವೀಕ್ಷಿಸಬಹುದಾದ ಸಮಾರಂಭಗಳು
1. ದಸರಾ ಮೆರವಣಿಗೆ ಜಂಬೂಸವಾರಿ ವೀಕ್ಷಣೆಗೆ ಅವಕಾಶ
2. ಬನ್ನಿಮಂಟಪದಲ್ಲಿ ಪಂಜಿನ ಕವಾಯತು ವೀಕ್ಷಣೆಗೆ ಅವಕಾಶ
3. ಪ್ರವಾಸಿ ತಾಣಗಳಿಗೆ ಒಮ್ಮೆ ಮಾತ್ರ ಉಚಿತವಾಗಿ ವೀಕ್ಷಣೆಗೆ ಅವಕಾಶ
4. ಮೈಸೂರು ಅರಮನೆ, ಶ್ರೀ ಚಾಮರಾಜೇಂದ್ರ ಮೃಗಾಲಯ
5. ಚಾಮುಂಡೇಶ್ವರಿ ದೇವಸ್ಥಾನ, ಫಲಪುಷ್ಪ ಪ್ರದರ್ಶನ
6. ದಸರಾ ವಸ್ತು ಪ್ರದರ್ಶನ, ಸೇಂಟ್ ಫಿಲೋಮಿನಾ ಚರ್ಚ್
7. ರೈಲ್ವೆ ಮ್ಯೂಸಿಯಮ್, ಕೆಆರ್ಎಸ್ ಜಲಾಶಯ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.
‘ದಸರಾ ದರ್ಶನ’ KSRTC ಬಸ್ಗಳಿಗೆ ಚಾಲನೆ
‘ದಸರಾ ದರ್ಶನ’ KSRTC ಬಸ್ಗಳಿಗೆ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಚಾಲನೆ ನೀಡಿದರು. 3 ದಿನ ದಸರಾ ದರ್ಶನಕ್ಕೆ ಒಟ್ಟು 81 ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ನಿತ್ಯ ಮೈಸೂರಿನ 1 ತಾಲೂಕಿಗೆ ಮೂರು ಬಸ್ಗಳ ನಿಯೋಜನೆ ಮಾಡಿದ್ದು, 3 ದಿನಗಳಲ್ಲಿ 4,455 ಜನರಿಗೆ ದಸರಾ ತೋರಿಸುವ ನಿರ್ಧರಿಸಲಾಗಿದೆ. 9.30ಕ್ಕೆ ಕೆ.ಎಸ್.ಆರ್.ಟಿ.ಸಿ ಚಾಲನೆ ಕಾರ್ಯಕ್ರಮಕ್ಕೆ ಸಮಯ ನಿಗದಿಯಾಗಿತ್ತು. ಆದರೆ ಉಸ್ತುವಾರಿ ಸಚಿವರಿಗಾಗಿ ಕಾದು ಕಾದು ಶಾಸಕ ಹಾಗೂ ಅಧಿಕಾರಿಗಳು ಸುಸ್ತಾದರು. ವಿಶ್ವ ವಿಖ್ಯಾತ ದಸರಾ ನೋಡಲು ಜಿಲ್ಲಾಡಳಿತ ವಿಶೇಷ ಬಸ್ಗಳ ವ್ಯವಸ್ಥೆ ಮಾಡಿದೆ. ಸ್ಥಳೀಯ ಶಾಸಕ ರಾಮದಾಸ್ ಬಂದು ಒಂದು ಗಂಟೆಯಾದರು ಸಚಿವ ಸ್ಥಳಕ್ಕೆ ಬಂದಿರಲಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:23 am, Thu, 29 September 22